ಲೇಖನ: ಮುರಳಿಮಂಗಲಧರೆ
muralidhar 2
ಮನುಷ್ಯನ ಜೀವನದಲ್ಲಿ ಕಷ್ಟ ಸುಖ ನೋವು ನಲಿವು ಎಲ್ಲವೂ ಇದೆ. ಆದರೆ ಅದಕ್ಕೆ ತಕ್ಕಂತೆ ಮನುಷ್ಯನೂ ನಡೆದುಕೊಂಡು ಶಾಂತಿಯಿಂದ ಜೀವನ ನಡೆಸಿಕೊಂಡು ಹೋದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಕ್ಷಣಿಕವಾದ ಲಾಭಕ್ಕಾಗಿ ತಿಳಿದೂ ತಪ್ಪು ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳುವಂತಾಗಬಾರದು.
ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ? ಈ ಪ್ರಶ್ನೆ ಮನುಷ್ಯನು ತಾನು ತಪ್ಪು ಮಾಡಿದ್ದೇನೆಂದು ಅವನಿಗೆ ಅನ್ನಿಸಿದಾಗ ಮಾತ್ರ ಉಧ್ಬವಿಸುತ್ತದೆ. ಇಲ್ಲದಿದ್ದಲ್ಲಿ ಎಷ್ಟೇ ತಪ್ಪು ಮಾಡಿದ್ದರೂ ಸಹ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಾ ಇರುತ್ತಾನೆ. ಮನುಷ್ಯ ತಪ್ಪು ಮಾಡಿ ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟರೆ ಅಂತಹ ಮನುಷ್ಯನ ಮನಸ್ಸು ಪರಿವರ್ತನೆಯಾಗಿದೆ ಕ್ಷಮೆಗೆ ಅರ್ಹನಾಗಿದ್ದಾನೆ ಎನ್ನುತ್ತಾರೆ. ಆದರೆ ಇದು ಎಲ್ಲಾ ತಪ್ಪುಗಳಿಗೆ ಅನ್ವಯಿಸುವುದಿಲ್ಲ. ಕಂಡು ಅಥವಾ ಕಾಣದೆ ಮಾಡುವ ಕೆಲವು ಸಣ್ಣ ಪುಟ್ಟ ತಪ್ಪುಗಳಿಗೆ ಮಾತ್ರ ಅನ್ವಯಿಸಬಹುದು. ಆದರೆ ದೊಡ್ಡ ತಪ್ಪುಗಳ ಅಥವಾ ಅಪರಾಧಗಳಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗುತ್ತದೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಬಹುದು.

ನಡೆಯುವ ಕಾಲು ಎಡವುದಿಲ್ಲವೇ? ಎಂಬ ಮಾತಿನಖತೆ ಮನುಷ್ಯನಾದವನು ತನ್ನ ಜೀವಿತ ಕಾಲದಲ್ಲಿ ಅನೆಕ ರೀತಿಯ ತಪ್ಪುಗಳನ್ನು ಮಾಡಿರುತ್ತಾನೆ. ಇದರಲ್ಲಿ ಹಲವಾರು ತಪ್ಪುಗಳು ಬೆಳಕಿಗೆ ಬಂದಿರುವುದಿಲ್ಲ. ತಪ್ಪು ಮಾಡದೇ ಇರುವ ಮನುಷ್ಯ ಸಿಗುವುದೇ ಇಲ್ಲ ಎನ್ನಬಹುದು. ಮನುಷ್ಯನು ಅಡಿಗಡಿಗೂ ಮಾಡುವ ತಪ್ಪುಗಳನ್ನು ಹೇಳುತ್ತ ಹೋದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಒಂದು ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಎಲ್ಲರೂ ಒಂದೇ ರೀತಿಯ ತಪ್ಪನ್ನು ಮಾಡುತ್ತಾರೆ ಎಂದು ಹೇಳಲು ಬರುವುದಿಲ್ಲ. ಒಬ್ಬರು ಮಾಡುವ ತಪ್ಪಿಗೂ ಬೇರೆಯವರು ಮಾಡುವ ತಪ್ಪಿಗೂ ಕೆಲವೊಮ್ಮೆ ಸಾಮ್ಯತೆ ಇರುತ್ತದೆ. ಆದರೆ ತಪ್ಪು ಮಾಡಿರುವ ಉದ್ದೇಶ ಮಾತ್ರ ಒಂದೇ ಆಗಿರುತ್ತದೆ. ಉದಾಹರಣೆಗೆ ಒಬ್ಬ ಮನುಷ್ಯ ಅಥವಾ ಬೇರೆ ಕೆಲವರು ಕಳ್ಳತನ ಮಾಡಿದ್ದರೂ ಅದು ಬೇರೆ ರೀತಿಯಲ್ಲಿದ್ದರಬಹುದು ಆದರೆ ಹಣ ಪಡೆಯುವ ಉದ್ದೇಶ ಒಂದೇ ಆಗಿರುತ್ತದೆ. ಆದರೆ ವಿಧಾನಗಳು ನಾನಾ ರೀತಿಯಲ್ಲಿ ಇರುತ್ತದೆ. ಜೀವನದಲ್ಲಿ ತನ್ನ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದಿರುವುದು ಮೊದಲನೇ ತಪ್ಪು. ಈ ತಪ್ಪು ಹಲವರು ರೀತಿಯಲ್ಲಿ ನಡೆಯಬಹುದು. ಆದರೆ ಈ ರೀತಿಯ ತಪ್ಪುಗಳಲ್ಲಿ ಹೆಚ್ಚು ಕಡಿಮೆ ಸಾಮ್ಯತೆ ಇರುತ್ತದೆ. ಕೆಲವರು ಹೆತ್ತವರನ್ನು ಸಾಕಲಾರದೆ ವೃದ್ದಾಶ್ರಮಕ್ಕೆ ಸೇರಿಸಬಹುದು, ಇನ್ನೂ ಕೆಲವರು ಸಮಾಜಕ್ಕೆ ಅಂಜಿ ಹೆತ್ತವರನ್ನು ಮನೆಯಲ್ಲಿಯೇ ಇಟ್ಟುಕೊಂಡು ಊಟ ಬಟ್ಟೆಗೆ ಆರೋಗ್ಯದ ವಿಚಾರದಲ್ಲಿ ಸರಿಯಾಗಿ ನೋಡದೆ ಇರಬಹುದು. ಇನ್ನೂ ಕೆಲವರು ಹೆತ್ತವರಿಗೆ ಮನಸ್ಸಿಲ್ಲದೆ ಊಟ ಬಟ್ಟೆ ಕೊಟ್ಟು ಕಡೇಗಾಲಕ್ಕೆ ಪ್ರೀತಿಯನ್ನು ತೋರಿಸದೆ ತಿರಸ್ಕಾರಭಾವದಿಂದ ನೋಡಬಹುದು. ಅನ್ನ ಬಟ್ಟೆ ಕೊಟ್ಟಿದ್ದೇನೆ ಎಂದು ಉದಾಸೀನ ಮಾಡಿದರೆ ವಯಸ್ಸಾದ ಜೀವಗಳು ವಿಧಿ ಇಲ್ಲದೆ ಜೀವ ಇರುವವರೆಗೂ ಬದುಕಲೇ ಬೇಕೆಂಬ ಅನಿವಾರ್ಯ ಪರಿಸ್ಥಿತಿಯಿಂದ ಬದುಕಬೇಕಾಗುತ್ತದೆ. ದಿನವೂ ದೇವರಲ್ಲಿ ಬೇಗ ಈ ಸಂಸಾರದಿಂದ ಮುಕ್ತಿ ಕೊಡಬಾರದೆ? ಹಾಗೂ ಈ ಹಾಳು ಜೀವ ಎಂದಿಗೆ ಹೋಗುವುದೋ? ಎಂದು ಹಂಬಲಿಸುತ್ತಾ, ಇದ್ದರೆ ಮಕ್ಕಳು ಸಹ ತನ್ನ ಹೆತ್ತವರು ಇನ್ನೂ ಹೋಗಲಿಲ್ಲ ಹೋಗಿದ್ದರೆ ಒಂದು ಜವಾಬ್ದಾರಿ ತಪ್ಪುತ್ತಿತ್ತು ಎಂದು ಮಕ್ಕಳು ಪರಿತಪಿಸುತ್ತಿದ್ದರೆ ಅಂತಹ ಮಕ್ಕಳು ಮಾಡುವುದು ಒಂದೇ ರೀತಿಯ ತಪ್ಪು. ಅದೇ ತನ್ನ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದಿರುವ ತಪ್ಪು. ನೋಡಿದವರಿಗೆ ಎಂತಹ ಮಕ್ಕಳು ಹೆತ್ತವರನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ, ಎಂಬ ಶಹಬ್ಬಾಸ್ಗಿರಿ ಪಡೆಯಬಹುದು. ಆದರೆ ಒಳಹೊಕ್ಕು ನೋಡಿದರೆ ನಿಜಬಣ್ಣ ತಿಳಿಯುತ್ತದೆ. ಇದೆಲ್ಲವೂ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಸಾಯುವ ಕಾಲಕ್ಕೆ ಮಕ್ಕಳು ಪ್ರೀತಿತೋರಲಿಲ್ಲ ಎಂಬ ಒಂದೇ ತಪ್ಪು ಎನಿಸುವುದು. ಇದೇರೀತಿ ಮಕ್ಕಳ ವಿಷಯಕ್ಕೆ ಬಂದರೂ ಸಹ ಮಕ್ಕಳನ್ನು ಸರಿಯಾಗಿ ಸಾಕದೆ ಸರಿಯಾಗಿ ನೋಡಿಕೊಳ್ಳದಿರುವುದೂ ತಪ್ಪಾಗಿರುತ್ತದೆ. ಇವೆಲ್ಲವೂ ಸಹ ವಿಭಿನ್ನ ರೀತಿಯಲ್ಲಿ ಇರಬಹುದು. ಮಕ್ಕಳನ್ನು ಸರಿಯಾಗಿ ಸಾಕದೆ ಅವಕಾಶವಂಚಿತರನ್ನಾಗಿ ಮಾಡಿದರೆ ಹೆತ್ತವರು ಸರಿಯಾಗಿ ಪ್ರೀತಿ ತೋರದೆ ವಂಚಿತರನ್ನಾಗಿ ಮಾಡಿದರೂ ಸರಿಯಾಗಿ ವಿದ್ಯೆ ಕೊಡಿಸದೆ ಮಕ್ಕಳನ್ನು ಹದ್ದುಬಸ್ತಿನಲ್ಲಿಡದೆ ಕೆಟ್ಟ ಚಟಗಳಿಗೆ ಬಲಿಯಾಗಿ ಎಲ್ಲರಿಂದಲೂ ನಿಂದಿಸಿಕೊಳ್ಳುವಂತಾದರೆ ಮಕ್ಕಳನ್ನು ನೋಡಿಕೊಳ್ಳಲಿಲ್ಲ ಎಂಬ ಒಂದೇ ತಪ್ಪು ಮನಗಾಣುತ್ತದೆ. ತಂದೆಯು ಮೊದಲನೇ ಹೆಂಡತಿ ಸತ್ತ ನಂತರ ಎರಡನೇ ವಿವಾಹವಾಗಿ ಆ ಮಲತಾಯಿಯ ಮಕ್ಕಳ ಮೇಲೆ ಸರಿಯಾಗಿ ಪ್ರೀತಿ ತೋರದೆ ಇದ್ದರೆ ಇವೆಲ್ಲವೂ ಸಹ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಹೇಳುತ್ತಾರೆ. ಇಲ್ಲಿಯೂ ಸಹ ಅಪರಾಧ ಒಂದೇ ಆಗಿರುತ್ತದೆ. ಆದರೆ ವಿಧಾನ ಮಾತ್ರ ಬೇರೆಯಾಗಿರುತ್ತದೆ.

ಗಂಡ ಹೆಂಡತಿ ವಿಷಯಕ್ಕೆ ಬಂದಾಗ ಪರಸ್ಪರ ಪ್ರೀತಿ ವಿಶ್ವಾಸ ಅನ್ಯೋನ್ಯತೆಯಿಂದ ಜೀವನ ನಡೆಸಿಕೊಂಡು ಹೋದರೆ ಯಾವ ತಪ್ಪು ಆಗುವುದಿಲ್ಲ. ಆದರೆ ಗಂಡನಾದವನು ತನ್ನಪತನಿಗೆ ದಿನವೂ ಕಿರುಕುಳ ನೀಡಿ ಹೊಡೆದು ಬಡಿದು ತೊಂದರೆ ಕೊಡುವ ಮಂದಿ ಒಂದೆಡೆಯಾದರೆ ಸಂಜೆಯಾದೊಡನೆ ಕುಡಿದು ಬಂದು ಹೆಂಡತಿ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಮಂದಿ ಇದ್ದು, ಅಥವಾ ಇದಕ್ಕೆ ವಿರುದ್ದವಾಗಿ ಹೆಂಡತಿ ತನ್ನ ಗಂಡನನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರೆ ಹೀಗೆಯೇ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರೆ ಇವೆಲ್ಲವೂ ಒಂದೇ ರೀತಿಯ ತಪ್ಪಾಗಿದ್ದು, ಪರಸ್ಪರ ದಂಪತಿಗಳು ಅನ್ಯೋನ್ಯತೆಯಿಂದ ಇರಲಿಲ್ಲವೆಂದು ಹೇಳುತ್ತಾರೆ. ಯಾವ ರೀತಿಯಲ್ಲಿ ತಪ್ಪು ಮಾಡಿದರೂ ಅದು ತಪ್ಪೇ ಆಗಿರುತ್ತದೆ. ಹಸುವಿನ ಸಗಣಿ ಒಂದು ಕಡೆ ಇದ್ದು, ಅದನ್ನು ಇಬ್ಭಾಗ ಮಾಡಿದಾಗ ಅದರ ಗುಣದಲ್ಲಿ ವ್ಯತ್ಯಾಸವಾಗುವುದಿಲ್ಲ. ಎರಡನ್ನೂ ಸಹ ಹಸುವಿನ ಸಗಣಿ ಎಂದೇ ಹೇಳುತ್ತಾರೆ. ಅದೇ ರೀತಿ ಉದ್ದೇಶ ಒಂದೇ ಇದ್ದು, ವಿಧಾನ ಬೇರೆ ಬೇರೆ ಇದ್ದರೆ ಒಂದೇ ರೀತಿಯ ತಪ್ಪು ಮಾಡಿದ್ದಾರೆ ಎಂದು ಹೇಳುತ್ತಾರೆ.
ಹೆತ್ತವರು, ಮಕ್ಕಳು ಮತ್ತು ಪತಿ ಪತ್ನಿಯರು ತಮ್ಮ ತಮ್ಮ ಕರ್ತವ್ಯದಿಂದ ವಿಮುಖರಾದರೆ ಜೀವನದಲ್ಲಿ ಸರಿಪಡಿಸಲಾಗದಂತಹ ತಪ್ಪುಗಳಾಗುತ್ತದೆ. ಇದೇ ರೀತಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಭೋಧನೆ ಮಾಡುವುದರಲ್ಲಿ ನಿರ್ಲಕ್ಷ ತೋರಿದರೆ ವಿದ್ಯಾರ್ಥಿಗಳಿಗೆ ಜೀವನದಲ್ಲಿ ತುಂಬಲಾರದ ನಷ್ಟ ಉಂಟಾಗುತ್ತದೆ. ವಿದ್ಯಾರ್ಥಿಗಳು ಸಹ ಸೋಮಾರಿಗಳಾಗದೆ ಕಠಿಣವಾಗಿ ಆಭ್ಯಸಿಸಿದರೆ ಜೀವನದಲ್ಲಿ ತಮ್ಮ ಗುರಿಯನ್ನು ಸಾಧಿಸಿ ಮುಂದೆ ಬರಬಹುದು. ಇಲ್ಲದಿದ್ದಲ್ಲಿ ತಮ್ಮ ಅಮೂಲ್ಯವಾದ ಜೀವನವೇ ಹಾಳಾಗುವ ಸಂಭವ ಇರುತ್ತದೆ.
ಮನುಷ್ಯ ತನ್ನ ಜೀವನದಲ್ಲಿ ಯಾವ ಕ್ಷೇತ್ರದಲ್ಲಿಯೇ ಇರಲಿ ಆ ಕ್ಷೇತ್ರಗಳಲ್ಲಿ ಕರ್ತವ್ಯ ಲೋಪವೆಸಗಿದರೆ ಇದರ ಜೊತೆಗೆ ಇವರನ್ನು ನಂಬಿಕೊಂಡವರಿಗೂ ನಷ್ಟ ಉಂಟಾಗುತ್ತದೆ. ಕೆಲವೊಮ್ಮೆ ತನಗೆ ಅರಿವಿಲ್ಲದಂತೆ ತಪ್ಪಾಗಬಹುದು. ಇದನ್ನು ಅರಿತ ತಕ್ಷಣ ಸರಿಪಡಿಸಿಕೊಂಡರೆ ಯಾವ ಅಪಾಯಗಳಿಗೂ ಸಿಲುಕುವುದಿಲ್ಲ.

RELATED ARTICLES  ಐಐಟಿ ಹೊರತಾಗಿಯೂ ಬೇರೆ ಜೀವನ ಇದೆ...

ಮನುಷ್ಯ ತನ್ನ ಜೀವನದಲ್ಲಿ ತಿಳಿದೋ ತಿಳಿದದೆಯೋ ಕೆಲವೊಮ್ಮೆ ಪರಿಸ್ಥಿತಿಯ ಶಿಶುವಾಗಿ ತಪ್ಪನ್ನು ಮಾಡಬಹುದು. ಆದರೆ ಮನುಷ್ಯ ತನ್ನ ಜೀವನದಲ್ಲಿ ಮಾಡಿರುವ ತಪ್ಪುಗಳಿಗೆ ಯಾವಾಗ ಪಶ್ಚಾತ್ತಾಪ ಪಡಬಹುದು? ಪಶ್ಚಾತ್ತಾಪಪಟ್ಟು ತನ್ನ ತಪ್ಪನ್ನು ಸರಿಪಡಿಸಿಕೊಂಡು ಬದುಕು ಸಾಗಿಸಿದರೆ ಉತ್ತಮ ಜೀವನ ನಡೆಸಬಹುದು
ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ ಎಂದರೆ ತಾನು ಮಾಡಿದ ತಪ್ಪಿನಿಂದ ತನಗೆ ಅಥವಾ ತನ್ನ ಮಕ್ಕಳಿಗೆ ನಷ್ಟವಾದರೆ ಮಾತ್ರ ಈ ರೀತಿ ಮಾಡಬಾರದಿತ್ತು ಎಂದು ಪಶ್ಚಾತ್ತಾಪ ಪಡುತ್ತಾನೆ. ಅಂದರೆ ತಾನು ಮಾಡಿದ ತಪ್ಪನ್ನು ಸಮರ್ಥಿಸಿಕೊಂಡು, ಬೇರೆ ರೀತಿಯಲ್ಲಿ ಮಾಡಬೇಕಿತ್ತು ಇದರಿಂದ ನನಗೇ ತೊಂದರೆಯಾಯಿತು ಬೇರೆ ರೀತಿಯಲ್ಲಿ ಮಾಡಿದ್ದರೆ ನನಗೆ ತೊಂದರೆಯಾಗುತ್ತಿರಲಿಲ್ಲ ಎಂದು ತನ್ನ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡದೆ ಆ ತಪ್ಪನ್ನೇ ಬೇರೆ ರೀತಿಯಲ್ಲಿ ಮಾಡಬೇಕಿತ್ತು ಎಂದು ಹೇಳುವವರು ಕ್ಷಮೆಗೆ ಅರ್ಹರಾಗುವುದಿಲ್ಲ. ಮನುಷ್ಯ ತಾನು ಮನೆಯನ್ನು ಕಟ್ಟಿಸುವಾಗ ಮರಳು ಕಲ್ಲು ಅಕಸ್ಮಾತ್ ದಾರಿಯಲ್ಲಿ ಹಾಕಿದ್ದು, ಅದನ್ನು ಬೇರೆಯವರು ಎಡವಿ ಬಿದ್ದರೆ ಏನೂ ಅನ್ನಿಸುವುದಿಲ್ಲ. ಬೇರೆ ಕಡೆಯಿಂದ ಹೋಗಬಾರದಿತ್ತೆ ಎಂಬ ಉತ್ತರ ಬರುತ್ತದೆ. ಆದರೆ ತಾನೇ ಅಥವಾ ತನ್ನ ಕುಟುಂಬಸ್ತರು ಬಿದ್ದರೆ ಮಾತ್ರ ಬೇರೆ ಕಡೆ ಹಾಕಿಸಬೇಕಿತ್ತು ಎಂದು ತನ್ನ ತಪ್ಪಿನ ಅರಿವಾಗುತ್ತದೆ. ಇಲ್ಲದಿದ್ದಲ್ಲಿ ಸಾಲು ಸಾಲು ತಪ್ಪಾಗುತ್ತಿದ್ದರೂ ತನ್ನ ಅರಿವಿಗೆ ಬರುವುದಿಲ್ಲ. ಅಕಸ್ಮಾತ್ ಬಂದರೂ ಯೋಚಿಸಲೂ ಹೋಗುವುದಿಲ್ಲ.

ಮನುಷ್ಯ ಯಾವುದಾದರೂ ಒಂದು ಕೆಟ್ಟ ಕೆಲಸ ಮಾಡಲು ಹೊರಟರೆ ಅದರಿಂದ ತೊಂದರೆಗೆ ಸಿಲುಕುತ್ತೇನೆಂದು ತಿಳಿದಿರುತ್ತದೆ. ಮಾಡುತ್ತಿರುವ ಕೆಲಸ ತಪ್ಪು ಎಂದು ತಿಳಿದಿದ್ದರೂ ಸಹ ಅಂತಹ ಕೆಲಸವನ್ನು ಮಾಡಲು ಹೋಗುತ್ತಾನೆ ಅದರಿಂದ ತಾನು ಹೇಗೆ ಕಾನೂನಿನಿಂದ ತಪ್ಪಿಸಿಕೊಳ್ಳಬಹುದೆಂದು ಎಂಬ ದೂರಾಲೋಚನೆ ಮಾಡುತ್ತಾನೆ. ವಿನಃ ಆ ಕೆಲಸವನ್ನು ಮಾಡುವುದು ಬೇಡ ಎಂದೆನಿಸುವುದಿಲ್ಲ. ಏನು ಕೆಟ್ಟ ಕೆಲಸ ಮಾಡಿದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಕಸ್ಮಾತ್ ಸಿಕ್ಕಿಕೊಂಡರೆ ಮಾತ್ರ ಬೇರೆ ರೀತಿಯಲ್ಲಿ ಪ್ರಯತ್ನಿಸಬಹುದಿತ್ತು ಎಂದು ಹೇಳಬಹುದು ಏನು ಮಾಡಿದರೂ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎನಿಸುವುದಿಲ್ಲ. ತಾನು ಮಾಡಿದ ತಪ್ಪಿಗೆ ಶಿಕ್ಷೆಯಾದರೆ, ಶಿಕ್ಷೆ ಕೊಡಿಸಿದವರ ವಿರುದ್ದ ಸೇಡು ತೀರಿಸಿಕೊಳ್ಳಬಹುದು.

ಆದರೆ ತನ್ನ ತಪ್ಪಿನಿಂದ ಬೇರೆಯವರಿಗೆ ತೊಂದರೆಯಾದರೂ ಅಥವಾ ತೊಂದರೆಯಾಗುತ್ತಿದ್ದರೂ ಅದಕ್ಕೆ ತಲೆ ಕೆಡೆಸಿಕೊಳ್ಳುವುದಿಲ್ಲ. ಬೇರೆಯವರು ಬಂದು ತೊಂದರೆಯಾಗುತ್ತಿದೆ ಎಂದು ಹೇಳಿದರೂ ಸಹ ನನ್ನಿಷ್ಟ ನಾನು ಏನು ಬೇಕಾದರೂ ಮಾಡುತ್ತೇನೆ ಎಂಬ ಉದ್ಧಟತನ ತೋರಬಹುದು. ಅದರಲ್ಲೂ ಶ್ರೀಮಂತನಿಂದ ಬಡವನಿಗೆ ತೊಂದರೆಯಾಗುತ್ತಿದ್ದರೆ ಅದು ಕಿವಿಗೆ ಬೀಳುವುದಿಲ್ಲ. ಹೆಚ್ಚಿಗೆ ಕೇಳಿದರೆ ಕೋರ್ಟ್ಗೆ ಹೋಗು ಎಂಬ ಉತ್ತರ ಬರುತ್ತದೆ. ಪಾಪ ಬಡವ ಕೋರ್ಟ್ಗೆ ಹೋಗಿ ಶ್ರೀಮಂತರ ವಿರುದ್ದ ಹೋಗಲು ಸಾಧ್ಯವೇ? ಅಕಸ್ಮಾತ್ ಹೋದರೂ ಸಹ ಅವನನ್ನು ಹೆದರಿಸಿ ಬೆದರಿಸಿ ಕೇಸ್ ವಾಪಸ್ ಪಡೆಯುವಂತೆ ಒತ್ತಾಯ ಮಾಡಬಹುದು.
ಕೆಲವೊಂದು ತಪ್ಪುಗಳು ಕಾನೂನಿಗೆ ವಿರುದ್ದವಾಗಿದೆ ಎಂದು ಗೊತ್ತಿದ್ದರೂ ಸಹ ಅದನ್ನೇ ಮುಚ್ಚುಮರೆ ಯಲ್ಲಿ ಮಾಡಿ ತನ್ನ ಕಾರ್ಯವನ್ನು ಸಾಧಿಸಿಕೊಳ್ಳಬಹುದು. ಉದಾಹರಣೆಗೆ ಚುನಾವಣೆಯಲ್ಲಿ ಹಣ ಹೆಂಡ ನೀಡಬಾರದು ಎಂದು ಹೇಳಿದ್ದರೂ ಸಹ ಯಾರಿಗೂ ತಿಳಿಯದಂತೆ ಹಣವನ್ನು ಮತ್ತು ಹೆಂಡವನ್ನು ಹಂಚಿ ಚುನಾವಣೆಯಲ್ಲಿ ಗೆಲ್ಲಬಹುದು. ಒಟ್ಟಿನಲ್ಲಿ ತನ್ನ ಧ್ಯೇಯ ಈಡೇರಿಕೆಯಾಗಬೇಕು ಹಾಗೂ ಜಯಗಳಿಸಬೇಕು ಎಂಬ ಏಕೈಕ ಉದ್ದೇಶವಿರುತ್ತದೆ. ಇಂತಹ ವಾಮ ಮಾರ್ಗ ಬಿಟ್ಟು ಆಯ್ಕೆಯಾದ ಅವಧಿಯಲ್ಲಿ ಚೆನ್ನಾಗಿ ಕೆಲಸಮಾಡಿ ಜನತೆಯಲ್ಲಿ ವಿಶ್ವಾಸ ಗಳಿಸಿಕೊಂಡಲ್ಲಿ ಮುಂದಿನ ಚುನಾವಣೆಯಲ್ಲಿಯೂ ಜಯ ಗಳಿಸಬಹುದು. ಈ ರೀತಿ ಮಾಡಿದರೆ ಆಯ್ಕೆದಾರರಿಗೂ ಮನಸ್ಸಿನಲ್ಲಿ ಸಂತೋಷ ಇರುತ್ತದೆ. ಒಂದು ರೀತಿಯ ಸಂತಸದ ಜೊತೆಗೆ ಅಭಿಮಾನವೂ ಮೂಡುತ್ತದೆ.

ಮನುಷ್ಯ ಸಹೃದಯನಾಗಿದ್ದಲ್ಲಿ, ಅನಿರೀಕ್ಷಿತವಾದ ತನ್ನ ತಪ್ಪಿನಿಂದ ಬೇರೆಯವರಿಗೆ ತೊಂದರೆಯಾದಲ್ಲಿ ತಕ್ಷಣ ತನ್ನ ತಪ್ಪಿನ ಅರಿವಾಗಿ ಕೂಡಲೇ ನೊಂದವರ ಬಳಿ ಹೋಗಿ ಕ್ಷಮೆ ಯಾಚಿಸಿ ಅವರಿಗೆ ತೊಂದರೆಯಾಗಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾನೆ. ಇಲ್ಲದಿದ್ದಲ್ಲಿ ತನ್ನ ತಪ್ಪಿದ್ದೂ ಸಹ ಉದ್ಧಟತನದಿಂದ ತೊಂದರೆಗೆ ಒಳಗಾದವರನ್ನು ನಿಂದಿಸಬಹುದು. ಕ್ಷಮೆ ಕೇಳುವುದರಿಂದ ತನ್ನ ಕೆಟ್ಟ ಪ್ರತಿಷ್ಠೆಗೆ ಕುಂದುಂಟಾಗುತ್ತದೆ ಎಂದು ಭಾವಿಸುತ್ತಾನೆ. ಇನ್ನೊಬ್ಬರಲ್ಲಿ ಕ್ಷಮೆ ಯಾಚಿಸಿದರೆ ತನ್ನ ಗೌರವ ಹೆಚ್ಚುತ್ತಗದೆ ಎಲ್ಲರ ಪ್ರೀತಿಗೆ ಪಾತ್ರರಾಗಬಹುದು ಎಂದು ತಿಳಿಯುವುದಿಲ್ಲ. ಬದಲಿಗೆ ಇವನಿಂದ ಬೇರೆಯವರಿಗೆ ತೊಂದರೆಯಾಗಿದ್ದರೂ ಸಹ ಇವನೇಕೆ ಅಡ್ಡಬರಬೇಕಿತ್ತು? ಎಂಬ ಮೊಂಡುವಾದವನ್ನು ಮಾಡುತ್ತಾನೆ. ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆಗಳಲ್ಲಿ ಎಲ್ಲರೂ ನಡೆದಾಡಲು ಮುಕ್ತ ಅವಕಾಶ ಇರುತ್ತದೆ. ಇದನ್ನು ಯಾರೂ ಪ್ರಶ್ನಿಸಲು ಬರುವುದಿಲ್ಲ. ಆದರೂ ಒಬ್ಬ ಮನುಷ್ಯ ತನ್ನ ವಾಹನದ ಮೂಲಕ ಅಥವಾ ವೈಯುಕ್ತಿಕವಾಗಿ ತನ್ನ ತಪ್ಪಿನಿಂದ ಬೇರೆಯವರಿಗೆ ಡಿಕ್ಕಿ ಹೊಡೆದು ನಂತರ ತೊಂದರೆಗೆ ಒಳಗಾದವರನ್ನೇ ನಿಂದಿಸಿದರೆ, ತೊಂದರೆಗೆ ಒಳಗಾದವನು ತನ್ನದಲ್ಲದ ತಪ್ಪಿಗೆ ನೋವನ್ನು ಅನುಭವಿಸಬೇಕಾಗುತ್ತದೆ. ತೊಂದರೆ ಮಾಡುವ ವ್ಯಕ್ತಿ ಶ್ರೀಮಂತನಾಗಿದ್ದು, ಅವನಿಗೆ ಹೆಚ್ಚಾಗಿ ಬೆಂಬಲವಿದ್ದೂ ಒಳ್ಳೆಯ ಮನುಷ್ಯನಾಗಿದ್ದಲ್ಲಿ ಬುದ್ದಿಯನ್ನು ಹೇಳಬಹುದು. ಇಲ್ಲದಿದ್ದಲ್ಲಿ ದೊಡ್ಡರೀತಿಯ ಜಗಳವಾಗಿ ಪೋಲೀಸ್ಸ್ಟೇಷನ್ವರೆಗೂ ಹೋಗಬಹುದು. ಒಂದು ಸಣ್ಣ ತಪ್ಪಿಗೆ ತನ್ನ ಒಣಪ್ರತಿಷ್ಠೆಯಿಂದ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಮಾಡಿರುವುದು ಸಣ್ಣ ತಪ್ಪು ಅದು ತನ್ನಿಂದಲೇ ಆಗಿದೆ ಎಂದು ಕ್ಷಮೆ ಕೋರಿ ಮುನ್ನಡೆದರೆ ಅಕಸ್ಮಾತ್ ಬೇರೆ ಕಡೆ ಆ ವ್ಯಕ್ತಿ ಸಿಕ್ಕಿದರೂ ಸಹ ಒಳ್ಳೆಯ ಸ್ನೇಹಿತನಾಗಬಹುದು. ಮನುಷ್ಯನ ಜೀವನದಲ್ಲಿ ಒಂದೊಂದು ಘಟನೆಯೂ ಒಂದೊಂದು ಪಾಠವನ್ನು ಕಲಿಸುತ್ತದೆ.

RELATED ARTICLES  ಮನಸ್ಸಿನ ಏಕಾಗ್ರತೆಯಲ್ಲಿ ಮತ್ತು ಉತ್ಕಟತೆಯಲ್ಲೇ ಎಲ್ಲವೂ ಇದೆ ಎಂದ ಶ್ರೀಧರು

ಜೀವನದಲ್ಲಿ ಕೆಲವು ಅಹಿತಕರ ಘಟನೆಗಳು ಮನುಷ್ಯನ ಮನಸ್ಸಿನಂತೆ ನಡೆಯಬಹುದು, ಎಂದರೆ ಕೆಲವೊಂದು ಮಾತ್ರ ಇವನ ಮನಸ್ಸನ್ನು ಅವಲಂಬಿಸಿರುತ್ತದೆ. ಆದರೆ ಗ್ರಹಚಾರ ಕೆಟ್ಟಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಎಷ್ಟೇ ಮನಸ್ಸನ್ನು ನಿಯಂತ್ರಿಸಿದರೂ ವಿಧಿ ಎಳೆದುಕೊಂಡು ಹೋಗಬಹುದು.
ಮನುಷ್ಯನಿಗೆ ಒಳಮನಸ್ಸು ಹಾಗೂ ಹೊರಮನಸ್ಸು ಎಂಬುದು ಇರುತ್ತದೆ. ಒಬ್ಬ ಮನುಷ್ಯ ಯಾವುದಾದರೂ ಕೆಲಸ ಮಾಡುವಾಗ ಅದು ಕೆಟ್ಟದ್ದು ಇರಲೀ ಅಥವಾ ಒಳ್ಳೆಯದ್ದೇ ಇರಲೀ ಮೊದಲು ಅವನು ಮಾಡುವ ಕೆಲಸದ ಆಗುಹೋಗುಗಳ ಬಗ್ಗೆ ಒಳ ಮನಸ್ಸು ಚಿಂತಿಸುತ್ತದೆ. ಈ ಕೆಲಸ ಮಾಡುವುದರಿಂದ ತನಗೇನು ತೊಂದರೆಯಾಗಬಹುದು? ಇದರಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸಿ, ತೊಂದರೆಯಾಗುತ್ತದೆ ಎಂದು ಕಂಡುಬಂದಾಗ ಆ ಕೆಲಸ ಮಾಡುವುದೇ ಬೇಡ ಎಂದು ಒಳ ಮನಸ್ಸು ಹೇಳುತ್ತದೆ. ಆದರೆ ಭಂಡ ಧೈರ್ಯದಿಂದ ಏನೂ ಆಗುವುದಿಲ್ಲ ಈ ಕೆಲಸ ಮಾಡಣವೆಂದು ಹೊರಮನಸ್ಸು ಹುರಿದುಂಬಿಸುತ್ತದೆ. ಇದರಿಂದ ತೊಂದರೆಯಾದಾಗ, ಒಳ ಮನಸ್ಸು ಹೇಳಿದಂತೆ ಕೇಳಬೇಕಿತ್ತು ಎಂದು ಪರಿತಪಿಸಬಹುದು.
ಮನುಷ್ಯನು ಯಾವುದಾದರೂ ಒಂದು ಕೆಲಸವನ್ನು ಮಾಡಲು ಹೊರಟಾಗ ಅದು ಒಳ್ಳೆಯ ಕೆಲಸವೇ ಆಗಿರಲಿ ತನ್ನ ಒಳಮನಸ್ಸು ಮಾಡುವ ಕೆಲಸದ ಆಗುಹೋಗುಗಳ ಬಗ್ಗೆ ಅದರಿಂದ ಮುಂದೆ ಆಗುವ ಫಲಿತಾಂಶದ ಬಗ್ಗೆ ಒಂದು ಸಲ ಎಚ್ಚರಿಸುತ್ತದೆ. ಆದರೆ ಮನುಷ್ಯನ ಹೊರ ಮನಸ್ಸು, ಇದನ್ನು ಧಿಕ್ಕರಿಸಿ ನಡೆಯುವಮತೆ ಪ್ರೇರೇಪಿಸುತ್ತದೆ. ಅಥವಾ ಬೇರೆಯವರೂ ಸಹ ಎಚ್ಚರಿಸಬಹುದು ಇದೆಲ್ಲವನ್ನೂ ಲೆಕ್ಕಸದೆ ಅಹಂಕಾರದಿಂದ ಮುನ್ನಡೆದರೆ ಅಪಾಯ ಕಟ್ಟಿಟ್ಟ ಬುತ್ತಿ. ಉದಾಹರಣೆಗೆ ಒಬ್ಬನು ತಾನೇ ಸ್ವತಃ ವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದರೆ ಇವನ ವಾಹನವನ್ನು ಮೀರಿಸಿ ಬೇರೆ ವಾಹನ ಮುನ್ನುಗ್ಗಿದರೆ ಆ ವಾಹನವನ್ನು ದಾಟಿ ಮುನ್ನುಗ್ಗಲು ಪ್ರೇರಣೆಯಾಗಬಹುದು. ಆ ವೇಳೆಯಲ್ಲಿ ತನ್ನ ಒಳ ಮನಸ್ಸು, ಹೋಗುತ್ತಿರುವ ವೇಗದಲ್ಲಿಯೇ ಹೋಗೋಣ ಎಂದು ಹೇಳಬಹುದು ಆದರೆ ಹೊರ ಮನಸ್ಸು ವೇಗವಾಗಿ ಹೋಗೋಣ ಎಂದು ಪ್ರೇರೇಪಿಸಿ ಅದರಂತೆ ನಡೆದರೆ ಅಥವ ಪಕ್ಕದಲ್ಲಿ ಕುಳಿತಿರುವವರು ಹುರಿದುಂಬಿಸಿದರೆ ಅಪಾಯಕ್ಕೆ ಸಿಲುಕಬಹುದು. ಯಾವುದೇ ಒಂದು ಒಳ್ಳೆಯ ಕೆಲಸವನ್ನು ಮಾಡುವಾಗ ಆತುರ ಪಡೆದೆ ಒಂದಲ್ಲ ನಾಲ್ಕಾರೂ ಬಾರಿ ಆಗುಹೋಗುಗಳ ಬಗ್ಗೆ ಪರಾಮರ್ಶಿಸಿ ಆ ಕಾರ್ಯವನ್ನು ಕೈಗೊಂಡರೆ ಅಪಾಯದಿಂದ ಪಾರಾಗಬಹುದು. ಆದರೆ ಯಾವುದೇ ಕೆಟ್ಟ ಕೆಲಸಮಾಡಲು ಹವಣಿಸಿ ಅದರ ಬಗ್ಗೆ ಹತ್ತಲ್ಲ ನೂರು ಬಾರಿ ಯೋಚಿಸಿ ಮಾಡಿದರೂ ಮುಂದೆ ಆಗುವ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಟ್ಟ ಕೆಲಸ ಮಾಡುವಾಗ ಸೋತರೆ ಸೋಲಿನ ಜೊತೆಗೆ ಜನಗಳ ನಿಂದನೆ ಎದುರಿಸಬೇಕಾಗುತ್ತದೆ. ಹಣವಂತಾದರೆ ಮುಖತಃ ಹೇಳುವುದಿಲ್ಲ ಪರೋಕ್ಷವಾಗಿ ಹೀಗೆಳೆಯುತ್ತಾರೆ.

ಒಳ್ಳೆಯ ಕೆಲಸ ಮಾಡಿ ಪರಾಜಿತರಾದರೂ ಯಾರೂ ನಿಂದಿಸುವುದಿಲ್ಲ. ಕೆಟ್ಟ ಕೆಲಸ ಮಾಡಲು ಹೋಗಿ ಅದರಲ್ಲಿ ಜಯವನ್ನು ಹೊಂದಿದರೂ ಮಾಡಿರುವ ಕೆಟ್ಟ ಕೆಲಸ ಬೆಳಕಿಗೆ ಬರುವವರೆಗೆ ಅಂದರೆ ಎಲ್ಲರಿಗು ತಿಳಿಯುವವರೆಗೆ ಯಾರೂ ನಿಂದಿಸುವುದಿಲ್ಲ. ಎಲ್ಲರಿಗೂ ತಿಳಿದ ಮೇಲೆ ಜನಗಳ ವಿರೋಧದ ಜೊತೆಗೆ ನಿಂದನೆ ಕೇಳಬೇಕಾಗುತ್ತದೆ.
ಮನುಷ್ಯ ತಾನು ಅರಿಯದೇ ಕೆಲವು ತಪ್ಪುಗಳನ್ನು ಮಾಡುತ್ತಿದ್ದು, ಮಾಡುತ್ತಿರುವ ಕಾರ್ಯವು ತಪ್ಪಾಗಿದೆ ಎಂದು ತಿಳಿದಿದ್ದರೂ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರೆ ಅಂತಹವನಿಗೆ ಕ್ಷಮೆ ಇರುವುದಿಲ್ಲ. ತಾನು ಮಾಡುತ್ತಿರುವ ಕೆಲಸ ತಪ್ಪಾಗಿದೆ ಎಂದು ತಿಳಿದಿದ್ದು, ಅದರಿಂದ ಬೇರೆಯವರಿಗೆ ತೊಂದರೆಯಾಗುತ್ತಿದ್ದರೂ ಸುಮ್ಮನಿದ್ದು, ಯಾವಾಗ ಇವನಿಗೆ ತಿರುಗುಬಾಣವಾಗುತ್ತದೋ ಆಗ ಎಚ್ಚೆತ್ತುಕೊಂಡು ತಪ್ಪನ್ನು ಸರಿಪಡಿಸಿಕೊಳ್ಳಲು ಯತ್ನಿಸಿದರೆ ಕಾಲ ಮಿಂಚಿಹೋಗಿರುತ್ತದೆ. ಎಲ್ಲೋ ಒಂದು ಕಡೆ ಇಟ್ಟ ಬೆಂಕಿ ತನ್ನ ಕಾಲಿನ ಬುಡದಲ್ಲಿ ಬರುವವರೆಗೂ ಸುಮ್ಮನಿದ್ದು, ಅದು ಹತ್ತಿರ ಬಂದಾಗ ಎಚ್ಚೆತ್ತುಕೊಂಡರೆ ಪ್ರಯೋಜನವಿಲ್ಲ. ಏಕೆಂದರೆ ಎಲ್ಲೋ ಇಟ್ಟ ಬೆಂಕಿ ತನ್ನ ಕಾಲಬುಡದಲ್ಲಿ ಬರುವವರೆಗೆ ಎಲ್ಲವನ್ನೂ ಸುಟ್ಟು ಭಸ್ಮಮಾಡಿರುತ್ತದೆ. ಆ ಸಮಯದಲ್ಲಿ ಉಳಿಸಲು ಏನೂ ಉಳಿದಿರುವುದಿಲ್ಲ. ಅದೇರೀತಿ ಮನುಷ್ಯನಿಗೆ ತೊಂದರೆಯಾಗುವವರೆಗೂ ಸುಮ್ಮನಿದ್ದು, ನಂತರ ಸರಿಪಡಿಸಲು ಯತ್ನಿಸಿದರೆ ಯಾವ ಪ್ರಯೋಜನವೂ ಇಲ್ಲ. ಮನುಷ್ಯ ತನಗೆ ತಿಳಿಯದೆ ಅಥವಾ ಯಾರ ಒತ್ತಡಕ್ಕೋ ಮಣಿದು ತಪ್ಪು ಮಾಡಿದ್ದು, ತಕ್ಷಣ ಅರಿತುಕೊಂಡು ಸನ್ಮಾರ್ಗದಲ್ಲಿ ಮುನ್ನಡೆದರೆ ಕ್ಷಮಾರ್ಹವಾಗಿರುತ್ತದೆ. ಅಂತಹ ಮನುಷ್ಯನು ಮಾತ್ರ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಾನೆ. ಯಾವ ತಪ್ಪಾದರೂ ಬೇರೆಯವರಿಗೆ ತೊಂದರೆಯಾದರೆ ಅದು ಕಾನೂನಿಡಿಯಲ್ಲಿ ಅಪರಾಧವಾಗುತ್ತದೆ. ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಾನು ಮಾಡಿದ ತಪ್ಪಿಗೆ ಕಾನೂನಿನಡಿಯಲ್ಲಿ ಶಿಕ್ಷೆಯಾದಾಗ ಪಶ್ಚಾತ್ತಾಪ ಪಡುತ್ತಾನೆ.
ಯಾವ ಕಾರ್ಯವನ್ನು ಮಾಡಿದರೂ ಅದರ ಆಗುಹೋಗುಗಳನ್ನು ಚಿಂತಿಸಿ ತಾನು ಮಾಡುವ ಕಾರ್ಯದಿಂದ ಬೇರೆಯವರಿಗೆ ತೊಂದರೆಯಾಗುತ್ತಿದೆ ಎಂದು ಕಂಡು ಬಂದರೆ ಆ ಕೆಲಸದಿಂದ ಎಷ್ಟೇ ಲಾಭ ಬರುವಂತಿದ್ದರೂ ಆ ಕಾರ್ಯವನ್ನು ಮಾಡಲು ಹೋಗಬಾರದು. ಆಗ ಮನುಷ್ಯತ್ವ ಉಳಿಯುತ್ತದೆ.

ಮನುಷ್ಯ ತಾನು ಸಾಯುವ ಕಡೇಗಾಲದಲ್ಲಿ ಈ ಕಡೆ ಸಾಯಲೂ ಆಗದೆ ಆ ಕಡೆ ಬದುಕಲೂ ಆಗದೆ ನರಳುತ್ತಾ ಮರಣಶಯ್ಯೆಯಲ್ಲಿದ್ದಾಗ ಮಾತ್ರ ತಾನು ಚಿಕ್ಕಂದಿನಿಂದಲೂ ಮಾಡಿದ ಅಪರಾಧಗಳು ಒಂದೊಂದೇ ಕಣ್ಣಮುಂದೆ ಬರುತ್ತಾ ಇರುತ್ತದೆ. ಆಗ ಅಯ್ಯೋ ಈ ರೀತಿ ತಪ್ಪು ಮಾಡಬಾರದಿತ್ತು, ಬೇರೆಯವರಿಗೆ ತೊಂದರೆ ಕೊಟ್ಟಿದ್ದಕ್ಕೆ ನನಗೆ ಈಗ ನರಳುವ ಪರಿಸ್ಥಿತಿ ಬಂದಿದೆ ಎಂಬ ಅಪರಾಧ ಪ್ರಜ್ಞೆ ಕಾಡುತ್ತದೆ. ಆಗ ತನ್ನ ತಪ್ಪಿನ ಅರಿವಾಗಿ ತಾನೇ ಪಶ್ಚಾತ್ತಾಪ ಪಡುತ್ತಾ ತನ್ನ ಹಿತೈಷಿಗಳಿಗೂ ಹೇಳುವ ಪ್ರಯತ್ನವನ್ನು ಮಾಡಿ ತನ್ನ ಹೃದಯದ ಭಾರವನ್ನು ಸ್ವಲ್ಪವಾದರೂ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ.