ಲೇಖನ: ಮುರಳಿ ಮಂಗಲಧರೆ
ಈಗಿನ ಸಮಾಜದ ಸನ್ನಿವೇಶದಲ್ಲಿ ಅನೇಕ ವಿದ್ಯಮಾನಗಳನ್ನು ಕಂಡಾಗ ಇಂಥದೊಂದು ಪ್ರಶ್ನೆ ಎಲ್ಲರ ಮುಂದೆ ಬಂದು ನಿಲ್ಲುತ್ತದೆ.
ನಮ್ಮ ದೇಶ ಅತ್ಯಂತ ಪುರಾತನವಾದ ಸಂಸ್ಕøತಿಯನ್ನು ಹೊಂದಿರುವ ದೇಶ. ನಮ್ಮ ದೇಶದ ಸಂಸ್ಕøತಿಯು ಕರುಣೆ, ಮಮತೆ, ಅನುಕಂಪ, ಪ್ರೀತಿ ವಾತ್ಸಲ್ಯ, ಪರೋಪಕಾರ ತ್ಯಾಗ ಇಂತಹ ಗುಣಗಳ ತಲಹದಿಯ ಮೇಲೆ ನಿಂತಿದೆ. ಇಂತಹ ತಳಹದಿಯೇ ಅಲ್ಲಾಡಿದರೆ ನಮ್ಮ ದೇಶದ ಪರಿಸ್ಥಿತಿ ಏನು ಎಂಬ ಸಮಸ್ಯೆ ಕಾಡುತ್ತದೆ.
ಮಾನವೀಯತೆ ಎಂದರೆ, ಕರುಣೆ, ಮಮತೆ, ಪ್ರೀತಿ ವಾತ್ಸಲ್ಯ, ಪರೋಪಕಾರ, ತ್ಯಾಗ ಗುಣಗಳಿದ್ದಲ್ಲಿ ಅವರನ್ನು ಮನುಷ್ಯರು ಎನ್ನಬಹುದು, ಅದೇ ಮಾನವೀಯತೆಯ ಲಕ್ಷಣ. ಮಾನವೀಯತೆಯೇ ಮನುಷ್ಯನ ಲಕ್ಷಣ. ಮಾನವೀಯತೆ ಇರುವವರನ್ನು ಮನುಷ್ಯರು ಎಂದು ಕರೆಯಬಹುದು. ಆದರೆ ಮಾನವೀಯತೆಯ ಗಂಧವೇ ಗೊತ್ತಿಲ್ಲದವರು ಮನುಷ್ಯರಾಗಿದ್ದರೂ ಅವರು ಮನುಷ್ಯ ರೂಪದ ಮೃಗಗಳು ಎನ್ನಬಹುದು.
ಪ್ರಾಚೀನಕಾಲದಿಂದಲೂ ಮಾನವೀಯತೆಗೆ ಹೆಚ್ಚು ಪ್ರಾತಿನಿದ್ಯ ಕೊಡುತ್ತಾ ಬಂದಿದ್ದಾರೆ. ಮಾನವೀಯತೆಯೇ ಮನುಷ್ಯನ ಜೀವನದ ಬಹುಮುಖ್ಯ ಗುಣ. ಮಾನವೀಯತೆಯೇ ಜೀವನದ ಆಧಾರ. ಅದಿಲ್ಲದೆ ಇದ್ದರೆ ಮನುಷ್ಯ ಇದ್ದಂತೂ ಇಲ್ಲದಂತೆ ಆಗುತ್ತದೆ.
ಮಗು ಹುಟ್ಟಿದಾಗಿನಿಂದಲೂ ದೊಡ್ಡವನಾಗಿ ಸಾಯುವವರೆಗೂ ಮಾನವೀಯತೆ ಗುಣವು ಇರಲೇಬೇಕು, ಇಲ್ಲದಿದ್ದಲ್ಲಿ ಮನುಷ್ಯನಾಗಿ ಹುಟ್ಟಿ ಏನು ಪ್ರಯೋಜನ? ಮಗು ದೊಡ್ಡವನಾಗಿ ಶಾಲೆಗೆ ಸೇರಿದರೆ ಅಲ್ಲಿ ಉಪಾದ್ಯಾಯರುಗಳು, ಮಕ್ಕಳಿಗೆ ಮಾನವೀಯತೆ ಬಗ್ಗೆ ಕಥೆಗಳ ಮುಖಾಂತರ ಕಲಿಸುವುದುಂಟು. ಇನ್ನೂ ಸ್ವಲ್ಪ ದೊಡ್ಡವರಾಗುತ್ತಿದ್ದಂತೆ, ಅವರು ಇರುವ ಪರಿಸರ, ಜೀವನಶೈಲಿಯಿಂದ ಮಾನವೀಯತೆಯು ಮನಸ್ಸಿನಲ್ಲಿ ಬರುತ್ತದೆ. ತಂದೆತಾಯಿಯರು ಅಮಾನವೀಯವಾಗಿ ವರ್ತಿಸುತ್ತಿದ್ದರೆ, ಮಕ್ಕಳು ಅದೇರೀತಿಯಾಗಿ ವರ್ತಿಸುತ್ತಾರೆ. ಜೊತೆಗೆ ಸ್ನೇಹಿತರುಗಳು ಕೆಟ್ಟವರಾದರೆ ಇವರಿಗೂ ರಾಕ್ಷಸ ಗುಣಗಳೇ ಬಂದು ಬಿಡುತ್ತದೆ. ಮಾನವೀಯ ಗುಣಗಳಿಗೆ ಜಾಗವೇ ಇರುವುದಿಲ್ಲ. ಕೃತಯುಗದಲ್ಲಿ ಹಿರಣ್ಯಕಶಿಪು ತನ್ನ ಮಗನು ಓ ನಮೋ ನಾರಾಯಣಾಯ ಎಂದು ಹೇಳಿದ್ದಕ್ಕೆ, ರಾಕ್ಷಸತನ ದಿಂದ ತನ್ನ ಸ್ವಂತ ಮಗನನ್ನೇ ಸಾಯಿಸಲು ಎಷ್ಟು ಕಷ್ಟಪಡುತ್ತಾನೆ. ಕಡೆಗೆ ದೇವರೇ ನರಸಿಂಹರೂಪದಲ್ಲಿ ಬಂದು ಪ್ರಹ್ಲಾದನನ್ನು ರಕ್ಷಿಸಲಿಲ್ಲವೇ? ಅದೇ ರೀತಿ ನಮ್ಮಲ್ಲಿಯೂ ಮಾನವೀಯತೆ ಇದ್ದರೆ ದೇವರೂ ಸಹ ಬಂದು ಸಹಾಯ ಮಾಡಬಲ್ಲ. ಇಲ್ಲದಿದ್ದಲ್ಲಿ ದೇವರೂ ಕೂಡ ನಮ್ಮನ್ನು ಕಾಪಾಡಲಾರ.
ಹಿಂದಿನ ಕಾಲದಿಂದಲೂ ಸಮಾಜದಲ್ಲಿ ಮಾನವೀಯತೆಯು ಬಹಳ ಬೆಲೆಯುಳ್ಳದ್ದಾಗಿದೆ. ಒಂದು ಸಣ್ಣ ಪ್ರಾಣಿ ಕಷ್ಟದಲ್ಲಿ ಸಿಲುಕಿದ್ದರೆ ಅದನ್ನು ಸಹ ರಕ್ಷಿಸುವುದು ಮಾನವೀಯತೆಯ ಗುಣವಾಗಿರುತ್ತದೆ. ಹಲವಾರು ಪ್ರಸಂಗಗಲ್ಲಿ, ಕೆಲವು ಹೆಳ್ಳಿಗಳಲ್ಲಿ, ಕೋಣವು ಹಳ್ಳದಲ್ಲಿ ಬಿದ್ದಾಗ ಅದನ್ನು ಬದುಕಿಸಿದ ಘಟನೆ ನಡೆದಿರುವುದುಂಟು. ಕರಡಿಯು ಎಷ್ಟೇ ಕೆಟ್ಟದಾದರೂ ಅದು ಕಷ್ಟದಲ್ಲಿ ಸಿಲುಕಿದ್ದಾಗ ಅದನ್ನು ಸಹ ರಕ್ಷಿಸಿರುವ ಘಟನೆಗಳು ಸಹ ನಡೆದಿದೆ. ಒಂದು ಆನೆ ಕೆಸರಲ್ಲಿ ಸಿಲುಕಿಕೊಂಡಾಗ ಅದನ್ನೂ ಸಹ ರಕ್ಷಿಸಿ ಅರಣ್ಯಕ್ಕೆ ಕಳುಹಿಸಿರುವ ನಿದರ್ಶನಗಳು ನಮ್ಮ ಕಣ್ಣುಮುಂದೇ ಇದೆ. ಇದೇ ರೀತಿ ಯಾವ ಪ್ರಾಣಿಗಳೇ ಆಗಲಿ, ಅವುಗಳು ಕಷ್ಟದಲ್ಲಿದ್ದಾಗ ಅವುಗಳನ್ನು ರಕ್ಷಿಸುವುದು. ಎಲ್ಲರ ಕರ್ತವ್ಯ.
ದಯವೇ ಧರ್ಮದ ಮೂಲವಯ್ಯ ಎಂದು ಮಹಾನುಭಾವರಾದ ಬಸವಣ್ಣ ನವರು ಹೇಳಿರುವುದು ಎಲ್ಲ ಪ್ರಾಣಿ ಪಕ್ಷಿ ಮನುಷ್ಯರ ಮೇಲೆ ದಯೆ ಹೊಂದಿರಬೇಕೆಂಬ ಸಂದೇಶವನ್ನು ಜಗತ್ತಿಗೇ ನೀಡಿದ್ದಾರೆ.
ನಮ್ಮ ಕರ್ನಾಟಕದ ಅನೇಕ ದೇವಸ್ಥಾನಗಳಲ್ಲಿ, ಮಠಗಳಲ್ಲಿ, ಬರುವ ಭಕ್ತರಿಗೆ ಊಟಕ್ಕೆ ತೊಂದರೆಯಾಗದಂತೆ ಅನ್ನದಾಸೋಹವನ್ನು ಏರ್ಪಡಿಸಿರುತ್ತಾರೆ. ಇದು ಇದು ಮಾನವೀಯತೆಯ ಪ್ರತೀಕವಾಗಿರುತ್ತದೆ. ಧಮ್ಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಾಲಯ, ಕುಕ್ಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಶೃಂಗೇರಿ ಶಾರದಾಂಬ ದೇವಾಲಯ, ಕಟೀಲು, ದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನ, ಗೊರವನಹಳ್ಳಿ ಶ್ರೀಲಕ್ಷ್ಮೀದೇವಸ್ಥಾನ, ಹೀಗೆ ಅನೇಕ ದೇವಸ್ಥಾನಗಳಲ್ಲಿ ಅನ್ನದಾಸೋಹ ವನ್ನು ಏರ್ಪಡಿಸಿ, ಮಾನವೀಯತೆ ಮೆರೆದಿದ್ದಾರೆ. ಅದೇ ರೀತಿ ಪ್ರಸಿದ್ದ ಶ್ರೀ ಸಿದ್ದಗಂಗಾ ಮಠದಲ್ಲಿ ಹಸಿದುಬಂದವರಿಗೆ ಹಾಗೂ ಅಲ್ಲೇ ವಿದ್ಯಾಭ್ಯಾಸ ಮಾಡುವವರಿಗೆ ತ್ರಿವಿದ ದಾಸೋಹವನ್ನು ಏರ್ಪಾಡು ಮಾಡಿ, ನಡೆದಾಡುವ ದೇವರೆಂದೇ ಪ್ರಖ್ಯಾತಿ ಹೊಂದಿರುವ ಶ್ರೀ ಶ್ರೀ ಸಿದ್ದಗಂಗಾ ಮಹಸ್ವಾಮಿಗಳು, ಆದಿಚುಂಚನಗಿರಿ ಮಹಾಸ್ವಾಮಿಗಳು ಸಹ ಇಂತಹ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಮೊನ್ನೆ ಒಂದು ವಾಟಸ್ಪ್ ಸಂದೇಶ ನೋಡಿದೆ. ಅದರಲ್ಲಿ “ಯಾರಿಗೆ ಮಕ್ಕಳನ್ನು ಓದಿಸಲು ಕಷ್ಟವಾಗಿದೆಯೋ ಅಂಥವರು ನಮ್ಮ ಮಠಕ್ಕೆ ಕರೆದುಕೊಂಡು ಬನ್ನಿ” ಎಂಬ ವಾಕ್ಯವನ್ನು ನೋಡಿ ನಿಜಕ್ಕೂ ಬಹಳ ಸಂತೋಷವಾಯಿತು. ಇಂತಹ ಮಹಾಪುರುಷರು ಇದ್ದಾರಲ್ಲಾ ಎನಿಸಿತು. ಇಂತಹ ಮಹಾಪುರುಷರು ಹುಟ್ಟಿದ ನಾಡಲ್ಲಿ ನಾವುಗಳು ಹುಟ್ಟಿರುವ ನಾವೇ ಧನ್ಯರು. ಇವರ ಆಶೀರ್ವಾದ ಸದಾ ಇರಲೆಂದು ಎಲ್ಲರೂ ಆಶಿಸುತ್ತಾರೆ. ಇವರ ಕಾರ್ಯಕ್ಕೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.
ಹಲವಾರು ಸಂದರ್ಭಗಳಲ್ಲಿ ತಮ್ಮಕರುಳ ಕುಡಿ ಅಫಘಾತದಲ್ಲಿ ಮರಣಹೊಂದಿದ್ದರೂ ಸಹ ಬೇರೆಯವರಿಗೆ ಬೆಳಕಾಗಲೀ ಎಂದು ಅವರ ಅಂಗಾಂಗ ಗಳನ್ನು ದಾನಮಾಡಿ ಮಾನವೀಯತೆ ಮೆರೆದಿರುವ ನಿದರ್ಶನ ಉಂಟು. ಕೆಲವು ತಿಂಗಳ ಹಿಂದಿನ ಮಾತು, ಒಬ್ಬ ಯುವಕ ಮೋಟಾರ್ ಬೈಕ್ ಆಕ್ಸಿಡೆಂಟಾಗಿ ಅವನ ಮೆದುಳು ನಿಷ್ಕ್ರಿಯವಾದಾಗ ಅವರ ತಂದೆ ತಾಯಿಗಳು, ಅವನ ಹೃದಯವನ್ನು ತಮಿಳ್ನಾಡಿನಲ್ಲಿರುವ ಒಬ್ಬರಿಗೆ ದಾನಮಾಡಿದ್ದು, ಅದನ್ನು ಒಂದು ಗಂಟೆಯಲ್ಲಿ ತೆಗೆದುಕೊಂಡು ಹೋಗಬೇಕಾದ ಸಂದರ್ಭದಲ್ಲಿ ಎಲ್ಲಾ ಕಡೆ ಸಿಗ್ನಲ್ ಗಳಲ್ಲಿ ಜೀರೋ ಟ್ರಾಫಿಕ್ ಮಾಡಿ ಸರಿಯಾದ ವೇಳೆಗೆ ತೆಗೆದುಕೊಂಡು ಹೋಗಿ ಅಲ್ಲಿಯ ರೋಗಿಯ ಪ್ರಾಣವನ್ನು ರಕ್ಷಿಸಿದ ನಿದರ್ಶನಗಳು ಇವೆ.
ತಾವು ಜೀವಂತ ಇರುವಾಗಲೇ ತಮ್ಮ ಕಣ್ಣುಗಳನ್ನು ದಾನಮಾಡಿದ್ದು ಅವರು ಸತ್ತಮೇಲೆ ಅವರ ಕಣ್ಣುಗಳಿಂದ ಬೇರೆಯವರಿಗೆ ಬೆಳಕಾರುವಂತೆ ಮಾಡಿರುವ ಅನೇಕ ಉದಾಹರಣೆಗಳುಂಟು. ಇದರಲ್ಲಿ ಡಾ. ರಾಜ್ ಕುಮಾರ್ ರವರೇ ಜ್ವಲಂತ ಸಾಕ್ಷಿ. ಅವರು ಬದುಕಿದ್ದಾಗಲೇ ತಮ್ಮ ನೇತ್ರವನ್ನು ದಾನಮಾಡಿದ್ದರು. ಅದಕ್ಕಾಗಿಯೇ ಇವರ ಹೆಸರಿನಲ್ಲಿ ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ನೇತ್ರದಾನದ ಬ್ಯಾಂಕನ್ನು ಸ್ಥಾಪಿಸಿರುತ್ತಾರೆ. ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ ಇಂತಹ ಮಾನವೀಯತೆಯನ್ನು ಮೆರೆದಿರುವ ಅನೇಕ ಘಟನೆಗಳು ನಡೆದಿದ್ದಾಗ್ಯೂ ಸಹ ಕೆಲವೊಮ್ಮೆ ಮಾನವೀಯತೆಯನ್ನು ಮರೆತು ರಾಕ್ಷಸರೀತಿಯಲ್ಲಿ ವರ್ತಿಸುತ್ತಿರುವುದನ್ನು ಕಂಡಿದ್ದೇವೆ.
ಹಲವಾರು ಸಂದರ್ಭಗಳಲ್ಲಿ ರಕ್ತದಾನವನ್ನು ಮಾಡಿ, ಅನೇಕರ ಪ್ರಾಣವನ್ನೂ ಸಹ ಉಳಿಸಿದ್ದಾರೆ, ಉಳಿಸುತ್ತಲೂ ಇದ್ದಾರೆ. ಹೀಗಿರುವಾಗ,
ಮಾನವೀಯತೆ ಎಂಬುದು ಅಂಗಡಿಯಲ್ಲಿ ದೊರಕುವ ವಸ್ತುವಲ್ಲ. ಅದು ಮನುಷ್ಯ ತಾನು ಹುಟ್ಟಿದಂದಿನಿಂದಲೇ ಬರುವುದಿಲ್ಲ, ಅವನು ಹುಟ್ಟಿದ ಮನೆಯ ವಾತಾವರಣ, ತಾನು ಬೆಳೆಯುವ ವಾತಾವರಣದಿಂದ ಬರುತ್ತದೆ. ಕೆಲವು ಮನೆಗಳಲ್ಲಿ ತಂದೆ ತಾಯಿಯರು ಎಷ್ಟೇ ಕೆಟ್ಟವರಿದ್ದರೂ ಒಳ್ಳೆಯ ಮಕ್ಕಳು ಇರುವ ಸಂಸಾರಗಳು ಇರುತ್ತದೆ. ಕೆಲವು ಸಂಸಾರಗಳು ಇದಕ್ಕೆ ವಿರುದ್ದವಾಗಿ ಇರುತ್ತವೆ. ಈ ಗುಣಗಳನ್ನು ಮನೆಯಲ್ಲಿನ ಹಿರಿಯರು, ಗುರುಗಳು ಮಕ್ಕಳಿಗೆ ಹೇಳಿಕೊಡುತ್ತಿದ್ದ ಕಾಲ ಒಂದು ಇತ್ತು. ಈಗಿನ ಕಾಲದ ಜೀವನದ ಶೈಲಿಗೂ ಹಿಂದಿನ ಕಾಲದ ಜೀವನದ ಶೈಲಿಗೂ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತದೆ.
ಹಿಂದಿನ ಕಾಲದಲ್ಲಿ ಒಂದು ಕುಟುಂಬ ಎಂದರೆ, ಸುಮಾರು 20-30 ಜನರು ಇರುತ್ತಿದ್ದರು. ಅದರಲ್ಲಿ ತಾತ ಅಜ್ಜಿ, ಮಕ್ಕಳು,ಮೊಮ್ಮಕ್ಕಳು, ಸೊಸೆಯಂದಿರುಗಳು, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ ಹೀಗೆ ಹಲವಾರು ಸಂಬಂಧಗಳಿಂದ ಕೂಡಿರುವ ಸಂಸಾರವಾಗಿರುತ್ತಿತ್ತು.
ರಾತ್ರಿಯಾದರೆ ಸಾಕು, ತಾತ, ಅಜ್ಜಿಯಂದಿರುಗಳು ತಮ್ಮ ಮೊಮ್ಮಕ್ಕಳಿಗೆ ಪಂಚತಂತ್ರದ ನೀತಿ ಕಥೆಗಳು, ಮಹಾಭಾರತ, ರಾಮಾಯಣದ ಕಥೆಗಳು, ಬಸವಣ್ಣನವರ ವಚನಗಳು, ಸರ್ವಜ್ಞನಪದಗಳು, ಮಂಕುತಿಮ್ಮನ ಕಗ್ಗ, ಹೀಗೆ ಹಲವಾರು ಮಹಾತ್ಮರು ಬರೆದಿರುವಂತಹ ಕಥೆ, ನಾಟಕ, ಪದ್ಯ ಗದ್ಯಗಳನ್ನು ಹೇಳಿ ಮಕ್ಕಳ ಮನಸ್ಸಿನಲ್ಲಿ ಆತ್ಮ ಸ್ಥೈರ್ಯ ತುಂಬಿ, ಜೀವನದಲ್ಲಿ ಹೇಗಿರಬೇಕೆಂಬ ಬಗ್ಗೆ, ನೀತಿ ಪಾಠಗಳನ್ನು ಹೇಳಿಕೊಡುತ್ತಿದ್ದರು, ಮಾನವೀಯತೆ, ಕರುಣೆ, ಮಮತೆ, ಸತ್ಯವನ್ನು ಹೇಳಬೇಕೆಂದು ಸತ್ಯ ಹರಿಶ್ಚಂದ್ರನ ಕಥೆಗಳು, ಮಾತಿಗೆ ತಪ್ಪಬಾರದೆಂಬ ಪುಣ್ಯಕೋಟಿಯ ಕಥೆಗಳು ಹೀಗೆ ಹಲವಾರು ನೀತಿ ಕಥೆಗಳನ್ನು ಮಕ್ಕಳ ಮನಸ್ಸಿಗೆ ನಾಟುವಂತೆ ಹೇಳಿ, ಮಕ್ಕಳಲ್ಲಿ ಪರೋಪಕಾರ ಬುದ್ದಿ, ಕರುಣೆ, ತ್ಯಾಗಕ್ಕೆ ಇರುವ ಬೆಲೆ, ಹೀಗೆ ಅನೇಕ ರಿತಿಯಲ್ಲಿ ಮಕ್ಕಳನ್ನು ತಾಲೀಮು ಮಾಡುತ್ತಿದ್ದರು.
ಅದೇರೀತಿ ಮಕ್ಕಳು ಸಹ ಗುರು ಹಿರಿಯರು ಹೇಳಿದ್ದನ್ನು ಕೇಳಿ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಲು ಶ್ರಮಿಸುತ್ತಿದ್ದರು.
ಹೀಗಿರುವಾಗ ಒಂದು ಸಂಸಾರದಲ್ಲಿ ಕೇವಲ ಮೂರು ನಾಲ್ಕು ಜನ, ಅದರಲ್ಲಿ ತಂದೆ ಕೆಲಸಕ್ಕೆ ಹೋದರೆ, ಕೆಲವು ಸಂಸಾರಗಳಲ್ಲಿ ತಾಯಿಯೂ ಕೆಲಸಕ್ಕೆ ಹೋಗುವುದೂ ಉಂಟು. ಮಕ್ಕಳನ್ನು ಮಕ್ಕಳ ರಕ್ಷಣಾ ಕೇಂದ್ರಗಳಿಗೆ ಸೇರಿಸಿರುತ್ತಾರೆ. ತಂದೆ ತಾಯಿ ಕೆಲಸ ಮುಗಿಸಿ ಬರುವಾಗ ಮಕ್ಕಳನ್ನು ಮನೆಗೆ ಕರೆತರುತ್ತಾರೆ, ಕೆಲಸದಿಂದ ಬಂದಿರುವ ಇಬ್ಬರಿಗೂ ಸುಸ್ತಾಗಿದ್ದು, ಅಡುಗೆ ಕೆಲಸ ಇನ್ನಿತರೆ ಕೆಲಸಗಳಲ್ಲಿ ಅಮ್ಮ ತೊಡಗಿದ್ದರೆ, ಅಪ್ಪನು ಟಿವಿ ನೋಡುತ್ತಾ ಕುಳಿತರೆ ಮಕ್ಕಳಿಗೆ ನೀತಿ ಪಾಠ ಹೇಳುವವರಾರು? ಮಕ್ಕಳ ರಕ್ಷಣಾ ಕೇಂದ್ರದಲ್ಲಿ 30 ರಿಂದ 40 ಮಕ್ಕಳಿದ್ದಲ್ಲಿ, ಎಲ್ಲಾ ಮಕ್ಕಳನ್ನು ಸಮಾಧಾನ ಮಾಡುವುದೇ ಅವರಿಗೆ ದೊಡ್ಡ ಕೆಲಸ ಆಗಿರುತ್ತದೆ.
ಮಕ್ಕಳುಸ್ವಲ್ಪ ದೊಡ್ಡದಾಗಿ ಶಾಲೆಗೆ ಸೇರಿದರಂತೂ ಶಾಲೆಯಲ್ಲಿ ನೀಡುವ ಮನೆ ಕೆಲಸವನ್ನು ಮುಗಿಸುವುದರಲ್ಲೇ ಮಕ್ಕಳಿಗೆ ಸಾಕಾಗಿ ಹೋಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಿಂದಿನ ಕಾಲದಂತೆ, ಬಸವಣ್ಣನವರ ವಚನಗಳು, ಮಹಾಭಾರತ ರಾಮಾಯಣ, ಹೀಗೆ ಹಲವಾರು ನೀತಿಯುತ ಬೋಧನೆಯನ್ನು ಯಾರು ಮಾಡುತ್ತಾರೆ. ಓದಿನ ಜೊತೆಗೆ ಜೀವನದ ಮೌಲ್ಯವನ್ನು ಹೆಚ್ಚಿಸುವಂತಹ ಕಾರ್ಯಗಳನ್ನು ಮಾಡಿದರೆ ತಾನೆ ಮಕ್ಕಳಲ್ಲಿ ಜೀವನದ ಮೌಲ್ಯ ಹೆಚ್ಚುವುದು? ಶಾಲೆಗೆ ಹೋದರೂ ಬರೀ ಕಲಿಕೆ, ಮನೆಯಲ್ಲಿ ಬಂದರೂ ಅದೇ ಪುನರಾವರ್ತನೆಯಾಗುತ್ತದೆ.
ಇನ್ನು ಕೆಲವರ ಮನೆಗಳಲ್ಲಿ, ಬೇರೆಯವರ ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರೆ ಮುಗಿದೇ ಹೋಯಿತು, ಅವರ ಮಕ್ಕಳಿಗೆ ಒತ್ತಡ ಹಾಕಿ ಅವರುಗಳನ್ನು ಪುಸ್ತಕದ ಹುಳುಗಳನ್ನಾಗಿ ಮಾರ್ಪಡಿಸುತ್ತಾರೆ. ಮಕ್ಕಳಿಗೆ ಅಪ್ಪ ಅಮ್ಮನ ಕಂಡರೆ ಭಯ ಉಂಟಾಗುವಂತೆ ಮಾಡುತ್ತಾರೆ. ಅಪ್ಪ ಅಮ್ಮನ ಕಂಡರೆ ಬೈಯ್ಯುತ್ತಾರೆಂಬ ಕಾರಣದಿಂದ ಯಾವಾಗಲು ಪುಸ್ತಕದಲ್ಲಿಯೇ ಮಗ್ನರಾಗಿರುತ್ತಾರೆ. ಪಾಪ ಹುಡುಗರು ಚೆನ್ನಾಗಿಯೇ ಓದುತ್ತಿರುತ್ತಾರೆ, ಅಕಸ್ಮಾತ್ ಕೆಲವು ಮಕ್ಕಳು ದುರದೃಷ್ಟವಶಾತ್ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದರೆ ಅಪ್ಪ ಅಮ್ಮನು ಎಲ್ಲಿ ಬೈಯ್ಯುವರೋ ಎಂಬ ಕಾರಣಕ್ಕೆ ಹೆದರಿ, ಪರೀಕ್ಷೆಯ ಸಮಯದಲ್ಲಿ ಮಂಕು ಕವಿದಂತಾಗಿ, ಅಥವಾ ಪರೀಕ್ಷೆ ಹತ್ತಿರ ಬಂದ ತಕ್ಷಣ ಮೈಯಲ್ಲಿ ಹುಷಾರಿಲ್ಲದೆ ಹೀಗೆ ನಾನಾ ಕಾರಣದಿಂದ ಮಕ್ಕಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುವಂತಾದರೆ, ಮನೆಯಲ್ಲಿ ತಂದೆ ತಾಯಂದಿರುಗಳು ಬೈಯ್ಯುತ್ತಾರೆಂಬ ಭಯದಿಂದ ಅಂಜಿ ಆತ್ಮಹತ್ಯೆಗೆ ಪ್ರಯತ್ನಿಸಿ ಕೆಲವೊಮ್ಮೆ ಕೆಲವು ಮಕ್ಕಳು ಅಸುನೀಗುತ್ತಾರೆ. ಇದಕ್ಕೆಲ್ಲಾ ಯಾರು ಹೊಣೆ? ಆಗ ತಂದೆ ತಾಯಂದರಿಗೆ ಬುದ್ದಿ ಬಂದು ನಾವುಗಳು ಆರೀತಿ ಮಕ್ಕಳಲ್ಲಿ ವರ್ತಿಸಬಾರದಿತ್ತು ಎಂದು ಗೋಳಾಡುತ್ತಿರುತ್ತಾರೆ. ಆಗ ಕಾಲವೇ ಮಿಂಚಿ ಹೋಗಿರುತ್ತದೆ.
ಕೆಲವು ಸಂಸಾರಗಳು ಬಡ ಕುಟುಂಬದಲ್ಲಿ ಬಂದಿದ್ದು, ಅವರ ತಂದೆ ತಾಯಿಗಳಿಗೆ ವರಮಾನ ಕಡಿಮೆ ಇದ್ದು, ಮಕ್ಕಳನ್ನು ಡಾಕ್ಟರೋ ಇಂಜಿನಿಯರೋ ಓದಿಸಬೇಕೆಂಬ ಹಂಬಲಹೊಂದಿ, ಮಕ್ಕಳಲ್ಲಿ ಹೆಚ್ಚು ಅಂಕ ಗಳಿಸಿದರೆ ಈಗಿನ ಕಾಲದಲ್ಲಿ ಬಡವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆ ಕಾಲೇಜುಗಳಲ್ಲಿ ಓದಿಸಲು ಶಕ್ತರಾಗಿರುವುದೇ ಇಲ್ಲ, ಅವರು ಕೇಳುವ ಡೊನೇಷನ್, ಫೀಸು ಇತ್ಯಾದಿಗಳ ವೆಚ್ಚವನ್ನು ಭರಿಸಲಾರದೇ, ಸರ್ಕಾರಿ ಕೋಟಾದಲ್ಲಿ ಉನ್ನತ ವ್ಯಾಸಂಗಕ್ಕೆ ಸೀಟು ಸಿಗುತ್ತದೆ ಎಂದು ಇಲ್ಲದಿದ್ದರೆ ಏನೂ ಪ್ರಯೋಜನ ಇಲ್ಲವೆಂದು ಹೆಚ್ಚು ಹಣ ಖರ್ಚು ಮಾಡಿ ಓದಿಸಲು ಆಗುವುದಿಲ್ಲವೆಂಬ ಕಾರಣವೊಡ್ಡಿ ಮಕ್ಕಳಲ್ಲಿ ಭಯವನ್ನು ತುಂಬಿ, ಇಂಜಿನಿಯರೋ ಅಥವಾ ಡಾಕ್ಟರೋ ಆದರೇನೇ ಪ್ರಪಂಚದಲ್ಲಿ ಬದುಕಲಿಕ್ಕೆ ಆಗುವುದು ಇಲ್ಲದ್ದಿದ್ದಲ್ಲೆ ನಿಷ್ಪ್ರಯೋಜಕ ರಾಗುತ್ತೇವೆಂಬ ತಪ್ಪು ಕಲ್ಪನೆಗಳು ಮಕ್ಕಳಲ್ಲಿ ಬಂದು ಅದಕ್ಕಾಗಿ ಮಕ್ಕಳು ಹಗಲೂ ಇರುಳು ಎನ್ನದೆ ಶಾಲೆಯ ಅಥವಾ ಕಾಲೇಜಿನ ಪಾಠಗಳಲ್ಲಿ ಮಗ್ನರಾದರೆ ಇವರಿಗೆ ಆಟ ಎಂಬುದು ಕನಸಿನ ಮಾತು, ಅಜ್ಜ ಅಜ್ಜಿಯರ ನೀತಿ ಕಥೆಗಳು ಮರೀಚಿಕೆಯಾಗುತ್ತದೆ. ಹೀಗಿರುವಾಗ ಇವರಿಗೆ ಮಾನವೀಯತೆಯ ಪಾಠ ಕಲಿಸುವವರು ಯಾರು? ಇವರಿಗೆ ಮಾನವೀಯತೆ ಏನು ಎಂಬುದೇ ತಿಳಿದಿರುವುದಿಲ್ಲ. ಇಂಥವರೇ ತುಂಬಿ ಹೋಗುವ ಸಮಾಜದಲ್ಲಿ ಮಾನವೀಯತೆ ಎಂದರೆ ಏನು ಎಂಬ ಬಗ್ಗೆ ತಿಳಿಯದೇ ಹೋಗುವುದು ನಿಶ್ಚಿತ.
ಕೆಲವು ಸನ್ನಿವೇಶಗಳಲ್ಲಿ, ಅನೇಕ ತಂದೆ ತಾಯಂದಿರುಗಳು ತಾವಂತೂ ಓದಲಿಲ್ಲ, ಮಕ್ಕಳಾದರೂ ಓದಿ ಬುದ್ದಿವಂತರಾಗಲೀ, ದೊಡ್ಡ ಕೆಲಸಕ್ಕೆ ಸೇರಲಿ ಹಾಗೂ ವಂಶಕ್ಕೆ ದೇಶಕ್ಕೆ ಗೌರವ ತರುವಂಥಹ ಕೆಲಸವನ್ನು ಮಾಡಲಿ ಎಂದು ಕಷ್ಟಪಟ್ಟು ದುಡಿದು ಮಕ್ಕಳನ್ನು ಓದಿಸಲು ಪಟ್ಟಣಕ್ಕೆ ಕಳುಹಿಸುತ್ತಾರೆ. ಇವರ ಊರು ಕಾಲೇಜಿನಿಂದ ಅತಿ ದೂರದಲ್ಲಿದ್ದಲ್ಲಿ, ಮಕ್ಕಳಿಗೆ ತೊಂದರೆಯಾಗದಿರಲಿ ಎಂದು ಅಲ್ಲೇ ಕಾಲೇಜಿನ ಹಾಸ್ಟೆಲ್ ಗೆ ಸೇರಿಸುವುದು ಉಂಟು. ಆದರೆ ಇವರ ಅದೃಷ್ಟ ಚೆನ್ನಾಗಿದ್ದು, ಒಳ್ಳೆಯ ಕಾಲೇಜುಗಳಲ್ಲಿ ಪ್ರವೇಶ ಸಿದ್ದ ನಂತರ ಕಾಲೇಜಿನ ಸಹಪಾಠಿಗಳು ಒಳ್ಳೆಯವರಾದರೇ ಪರವಾಗಿಲ್ಲ. ಅದೂ ಅಲ್ಲದೆ ಇವರ ಹಿರಿಯ ವಿದ್ಯಾರ್ಥಿಗಳು ಒಳ್ಳೆಯವರಾಗಿದ್ದರೆ ಇವರೂ ಒಮದು ಪದವಿಪಡೆದು ಕೆಲಸವನ್ನು ಪಡೆದುಕೊಂಡು ತಮ್ಮ ಜೀವನದ ಗುರಿ ತಲುಪಿ ಜೀವನವನ್ನು ನಡೆಸುತ್ತಾರೆ. ಅದರೆ ಕೆಲವು ಕಾಲೇಜುಗಳಲ್ಲಿ ಹಿರಿಯ ವಿದ್ಯಾರ್ಥಿಗಳು, ಕಿರಿಯ ವಿದ್ಯಾರ್ಥಿಗಳನ್ನು ಕಂಡರೆ ಕೀಟಲೆ ಮಾಡುವುದು ರ್ಯಾಂಗಿಂಗ್ ಮಾಡುವುದು ಅಮಾನವೀಯತೆಯಿಂದ ಅನೇಕ ರೀತಿಯ ಹಿಂಸೆಯನ್ನು ನೀಡಿದರೆ ಇವರು ವಿದ್ಯಾಭ್ಯಾಸವನ್ನು ಮುಂದುವೆರೆಸಲಾಗದೆ ಅರ್ಧಕ್ಕೇ ಕಾಲೇಜನ್ನು ಬಿಟ್ಟಲ್ಲಿ ಇವರ ಕನಸು ನುಚ್ಚು ನೂರಾಗುತ್ತದೆ. ಇದಕ್ಕೆಲ್ಲಾ ಯಾರು ಹೊಣೆ? ಅಧಕ್ಕೇ ಕಾಲೇಜು ಬಿಟ್ಟು ಕೆಲಸವನ್ನು ಮಾಡೋಣವೆಂದರೆ ಯಾರೂ ಸರಿಯದ ಕೆಲಸವನ್ನು ನೀಡುವುದಿಲ್ಲ. ಓದಲೂ ಆಗದೆ ಕೆಲಸಕ್ಕೆ ಸೇರಲೂ ಆಗದೆ ಮಾನಸಿಕ ತೊಳಲಾಟದಿಂದ ಹೊರಬರಲಾರದೆ, ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಾರೆ. ಇವರಲ್ಲಿ ಕೆಲವರು ಆಯಸ್ಸು ಗಟ್ಟಿ ಇದ್ದು, ಬದುಕುಳಿದರೆ ಇನ್ನು ಕೆಲವರು ಅಸುನೀಗುತ್ತಾರೆ. ಮಾನವೀಯತೆಯಿಂದ ಎಲ್ಲರೂ ತಿಳಿದು ಸಂತೋಷದಿಂದ ಓದು ಮುಗಿಸಿ ಕೆಲಸಕ್ಕೆ ಸೇರಿ ತಂದೆ ತಾಯಿಯರನ್ನು ನೋಡಿ ಕೊಳ್ಳಬಹುದು.
ವಿದ್ಯಾರ್ಥಿನಿಯರಿಗೆ ಇನ್ನೊಂದು ರೀತಿಯ ಚಿತ್ರ ಹಿಂಸೆ ಕಾಲೇಜು ಮುಗಿಸಿ ದೊಡ್ಡ ದೊಡ್ಡ ಅವಿಷ್ಕಾರಗಳನ್ನು ಮಾಡಲು ಹೋದರೆ ಅಲ್ಲಿರುವವರಿಂದ ಲೈಂಗಿಕ ಕಿರುಕುಳ ನೀಡುವವರು ಇರಬಹುದು. ತಮ್ಮ ಅಕ್ಕ ತಂಗಿಯರಂತೆ ಇವರುಗಳು ಓದಲು ಬಂದಿರುತ್ತಾರೆ ಇವರಿಗೆ ತೊಂದರೆಯನ್ನು ಏಕೆ ಕೊಡಬೇಕು ಎನ್ನುವ ಭಾವನೆ ಇರುವುದೇ ಇಲ್ಲ. ಅನಾಗರೀಕತೆ, ಅಮಾನವೀಯತೆಯಿಂದ ವರ್ತಿಸಿ ಕೆಲವರ ಜೀವನವನ್ನೇ ಹಾಳು ಮಾಡುವ ಮನಸ್ಸಿರುವವರಿಗೆ ಮಾನವೀಯತೆಯು ಒಂದು ವಿಡಂಬನೆಯಾಗುತ್ತದೆ.
ಮನುಷ್ಯನು ಹುಟ್ಟುವಾಗಲೇ ಮಾನವೀಯತೆಯನ್ನು ಕಲಿತಿರುವುದಿಲ್ಲ. ಮನುಷ್ಯ ತಮ್ಮ ಹುಟ್ಟಿನಿಂದ ಜೀವನದ ಸನ್ನಿವೇಶದಲ್ಲಿ ಮಾನವೀಯತೆ ಎಂಬ ಪ್ರಭಾವವು ಮನೆಗಳಲ್ಲಿ, ಬೀದಿಗಳಲ್ಲಿ, ಕಾಲೇಜುಗಳಲ್ಲಿ, ಶಾಲೆಗಳಲ್ಲಿ, ಕಛೇರಿಗಳಲ್ಲಿ, ಎಲ್ಲರೂ ಪ್ರಯಾಣಿಸುವ ಎಲ್ಲಾ ವಾಹನಗಳಲ್ಲಿ, ಎಲ್ಲಾ ಕಡೆಯಗಳಲ್ಲಿಯೂ ಬೇಕಾಗಿರುವ ಮೌಲ್ಯವೇ ಮಾನವೀಯತೆ. ಮನೆಗಳಲ್ಲಿ ವಯಸ್ಸಾದ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದೇ ಒಂದು ಮಾನವೀಯತೆ, ಕೆಲವು ಮನೆಗಳಲ್ಲಿ ವಯಸ್ಸಾದ ತಂದೆ ತಾಯಿ ಇದ್ದರೆ, ಅವರು ಇವರ ತಲೆ ಮೇಲೆ ಕುಳಿತಂತೆ ಆಡುತ್ತಾರೆ. ಎಂದಿಗೆ ಇವರು ಹೋಗುತ್ತಾರೋ? ಯಾವಾಗ ಇವರಿಂದ ಬಿಡುಗಡೆಯಾಗುತ್ತದೆಯೋ ಎಂದು ಚಿಂತೆಗೆ ಒಳಗಾಗಿರುತ್ತಾರೆ. ತಂದೆ ತಾಯಿಯರು ಇದ್ದರೂ ಅವರನ್ನು ನೋಡಿಕೊಳ್ಳುವ ಮನಸ್ಸಿಲ್ಲದೆ ಅವರುಗಳು ಭಾರವಾಗಿದ್ದಾರೆ ಎಂದು ಬಲವಂತವಾಗಿ ಅವರುಗಳನ್ನು ವೃದ್ದಾಶ್ರಮಕ್ಕೆ ಸೇರಿಸುವ ಉದಾಹರಣೆಗಳು ಸಾಕಷ್ಟು ಇದೆ. ಈ ರೀತಿಯ ಮನೋಭಾವನೆ ಹಿಂದಿನಿಂದಲೂ ಬಂದಿಲ್ಲ, ಹಿಂದಿನ ಕಾಲದಲ್ಲಿ ಅಂದರೆ ಬಹುಷಃ 60-70ವರ್ಷಗಳ ಹಿಂದೆ ಒಟ್ಟು ಕುಟುಂಬವಿದ್ದ ಕಾಲದಲ್ಲಿ ತಾತ ಅಜ್ಜಿಯನ್ನು ಒಳಗೊಂಡಂತೆ ಬಹಳಷ್ಟು ಜನರು ಒಂದೇ ಕುಟುಂಬದಲ್ಲಿ ಅನ್ಯೋನ್ಯವಾಗಿ ವಾಸಮಾಡುತ್ತಿದ್ದರು. ಆಗಿನ ಸಂಸಾರಗಳು ದೊಡ್ಡದಾಗಿದ್ದು ಎಲ್ಲರ ಮನಸ್ಸುಗಳು ದೊಡ್ಡದಾಗಿದ್ದವು. ಕ್ರಮೇಣ ಸಂಸಾರಗಳು ಚಿಕ್ಕದಾಗುತ್ತಾ ಬಂದಂತೆ ಮನಸ್ಸುಗಳು ಚಿಕ್ಕದಾಗುತ್ತಾ ಬಂದವು. ತನ್ನ ಮಕ್ಕಳನ್ನು ಮಗುವಿದ್ದಾಗಿನಿಂದಲೂ ಅವರನ್ನು ಅಕ್ಕರೆಯಿಂದ ಸಾಕಿ, ಸಲಹಿ, ಬೆಳೆಸಿ, ದೊಡ್ಡವರನ್ನಾಗಿ ಮಾಡಿ ಉದ್ಯೋಗ ಕಲ್ಪಿಸಿಕೊಟ್ಟು ತಮ್ಮ ಕಾಲಮೇಲೆ ತಾವು ನಿಲ್ಲುವಂತೆ ಮಾಡಿ, ತಮ್ಮ ಮಕ್ಕಳು ದೊಡ್ಡವರಾಗಿದಾರೆ, ಇನ್ನೇನು ನಮಗೆ ಯೋಚನೆಯಿಲ್ಲ, ಅವರೇ ನಮ್ಮಗಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ ಎಂಬ ಭಾವನೆ ತಂದೆ ತಾಯಿಯವರಲ್ಲಿ ಇರುವುದು ಸಹಜ. ಕೆಲವು ತಂದೆ ತಾಯಿಯರ ಅಪೇಕ್ಷೆಯಂತೆ ಮಕ್ಕಳು ಓದು ಕಲಿತು ಕೆಲಸಕ್ಕೆ ಸೇರಿ ತಂದೆ ತಾಯಿಯರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾ ಬಂದಿರುತ್ತಾರೆ. ಎಲ್ಲಿಯವರೆವಿಗೆ ಎಂದರೆ ಅವರ ವಿವಾಹವಾಗುವವರೆಗೆ ಮಾತ್ರ, ಮಕ್ಕಳಿಗೆ ತಂದೆ ತಾಯಿಯ ಮೇಲೆ ಅಕ್ಕರೆ ಪ್ರೀತಿ ಇರುತ್ತದೆ. ಮಕ್ಕಳಿಗೆ ಒಂದು ವಿವಾಹ ಮಾಡಿ ತಮ್ಮ ಜವಾಬ್ದಾರಿಯನ್ನು ನೀಗಿಸಿಕೊಂಡು ನೆಮ್ಮದಿಯಾಗಿ ಇರೋಣವೆಂದು ಎಲ್ಲಾ ತಂದೆ ತಾಯಂದಿರು ಮಕ್ಕಳ ವಿವಾಹವನ್ನು ಮಾಡಿರುತ್ತಾರೆ. ಅದೃಷ್ಟವಶಾತ್ ಒಳ್ಳೆ ಹುಡುಗಿ ಸಿಕ್ಕರೇನೂ ಪರವಾಗಿಲ್ಲ. ಅದುಬಿಟ್ಟು ಇವರ ಗ್ರಹಚಾರಕ್ಕೆ ಹುಡುಗಿಗೆ ಮಾನವೀಯತೆ ಎಂಬುದು ಇಲ್ಲದಿದ್ದರೆ, ಮುಗಿದೇ ಹೋಯಿತು, ಪ್ರತಿ ದಿನ ಜಗಳ, ಅತ್ತೆ ಮಾವಂದಿರನ್ನು ಸರಿಯಾಗಿ ನೋಡಿಕೊಳ್ಳುವುದೇ ಇಲ್ಲ, ಇವರೇಕೆ ಇಲ್ಲಿ ಇರಬೇಕು, ಇವರು ಬೇರೆ ದಂಡಪಿಂಡ ವಾಗಿದ್ದಾರೆ. ಇವರನ್ನು ವೃದ್ದಾಶ್ರಮಕ್ಕೆ ಸೇರಿಸಬಾರದೆ? ಎಂದು ತನ್ನ ಕೋರಿಕೆ ಸಲ್ಲಿಸುತ್ತಾರೆ. ತನ್ನ ಗಂಡ ಏನೋ ತನ್ನ ಹೆಂಡತಿ ಹೊಸದಾಗಿ ಬಂದಿದ್ದಾಳೆ ನಾಳೆ ಸರಿಯಾಗಬಹುದು, ಎಂದು ಗಂಡನು ಏನಾದರೂ ಉದಾಸೀನ ಮಾಡಿದ ಎಂದರೆ, ಮುಗಿದೇ ಹೋಯಿತು, ತನ್ನ ಗಂಡ ತಾನು ಹೇಳಿದಂತೆ ಕೇಳುವುದಿಲ್ಲ ಎಂದು ತನ್ನ ತವರು ಮನೆಗೆ ಹೋಗಿಬಿಡುತ್ತಾಳೆ, ಅತ್ತೆ ಮಾವ ಇರುವ ತನಕ ನಾನು ಮನೆಗೆ ಬರುವುದಿಲ್ಲ, ನಾನು ಬೇಕು ಎಂದರೆ ಅತ್ತೆ ಮಾವನನ್ನು ವೃದ್ದಾಶ್ರಮಕ್ಕೆ ಸೇರಿಸಿ, ಇಲ್ಲದಿದ್ದರೆ ನನಗೆ ವಿಚ್ಛೇದನ ಕೊಡಿ ಎಂದು ದಂಬಾಲು ಬೀಳುತ್ತಾರೆ. ಆಗ ಮಗನಾದವನು ತಂದೆ ತಾಯಿಯನ್ನೂ ಬಿಡಲಾರ, ಹೆಂಡತಿಯನ್ನೂ ಬಿಡಲಾರ, ಕಡೆಗೆ ತಂದೆ ತಾಯಿಯರೇ ಮಗನಿಗೆ ನಮ್ಮನ್ನು ವೃದ್ದಾಶ್ರಮಕ್ಕೆ ಸೇರಿಸು ನೀನು ಹೆಂಡತಿ ಜೊತೆ ಸುಖವಾಗಿರು ಎಂದು ಹೇಳಿ ತಾವೇ ಬಲವಂತದಿಂದ ವೃದ್ದಾಶ್ರಮಕ್ಕೆ ಸೇರಲು ಇಚ್ಛೆ ವ್ಯಕ್ತಪಡಿಸುತ್ತಾರೆ. ಇನ್ನು ಕೆಲವು ಸಂಸಾರಗಳಲ್ಲಿ, ಬರುವ ಸೊಸೆ ಒಳ್ಳೆಯ ಮನಸ್ಸುಳ್ಳವಳಾಗಿದ್ದರೂ ಕೆಲವರ ಅಮ್ಮಂದಿರುಗಳು, ತಮ್ಮ ಹೆಣ್ಣು ಮಕ್ಕಳಿಗೆ ಬೇರೆ ಇರುವಂತೆ ಹೇಳಿಕೊಡುತ್ತಾರೆ, ಇನ್ನೆಲ್ಲಿ ತಮ್ಮ ಮಗಳು ಅತ್ತೆ ಮಾನವ ಸೇವೆ ಮಾಡಿ ಬಡವಾಗಿಬಿಡುತ್ತಾಳೋ ಎಂದು ಇಲ್ಲಸಲ್ಲದ ಮಾತುಗಳನ್ನು ಹೇಳಿ, ತಂದೆ ತಾಯಿ ಮಗನನ್ನು ಬೇರೆ ಮಾಡಿಸುತ್ತಾರೆ.
ಈಗಿನ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ ಎಂದರೆ ಯಾರೂ ನಂಬುವುದೇ ಇಲ್ಲ, ಮದುವೆಗಾಗಿ ಹೆಣ್ಣನ್ನು ನೋಡಲು ಹೋದರೆ, ಹೆಣ್ಣಿನ ತಂದೆ ತಾಯಂದಿರು ನಮಗೂ ಮುಂದೆ ವಯಸ್ಸಾಗುತ್ತದೆ, ನಾವುಗಳು ಬೇರೆಯವರ ಆಶ್ರಯದಲ್ಲಿ ಬದುಕಬೇಕಾಬಹುದು, ಎಂಬುದನ್ನೇ ಮರೆತು, ಹುಡುಗನ ಕಡೆಯವರನ್ನು ನಿಮ್ಮ ಮನೆಯಲ್ಲಿ ಹಳೇ ಕುರ್ಚಿಗಳು ಇವೆಯೇ? ಎಂದು ಕೇಳುತ್ತಾರೆ, ಕೆಲವರು ರಾಹು ಕೇತುಗಳು ಇವೆಯೇ? ಎನ್ನುತ್ತಾರೆ. ಅಂದರೆ ಇವರರ್ಥದಲ್ಲಿ ಹಳೇ ಕುರ್ಚಿಗಳು ರಾಹು ಕೇತುಗಳು ಎಂದರೆ ಹುಡುಗನ ತಂದೆ ತಾಯಂದಿರುಗಳು ಎಂದರ್ಥ. ಮದುವೆಗೆ ಮುಂಚೆಯೇ ಈ ರೀತಿ ಮನೋಭಾವನೆ ಹೊಂದಿದವರು ಮದುವೆಯಾದ ನಂತರ ಇನ್ನು ಯಾವ ರೀತಿ ಇರಬಹುದು? ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಳೇ ಕುರ್ಚಿಗಳಾಗಲೀ, ರಾಹುಕೇತುಗಳಾಗಲೀ ಇದ್ದಲ್ಲಿ ವರನನ್ನೇ ತಿರಸ್ಕರಿಸಿರುವ ಅನೇಕ ಉದಾಹರಣೆಗಳುಂಟು. ಇನ್ನು ಕೆಲವು ಮನೆಗಳಲ್ಲಿ ಗಂಡಿನ ತಂದೆ ತಾಯಿಯವರನ್ನು ಮದುವೆಯಾದ ನಂತರ ನೀವು ಎಲ್ಲಲಿರುತ್ತೀರಿ? ಎಂದು ಕೇಳಿರುವ ಸಂದರ್ಭಗಳು ಉಂಟು, ಅದಕ್ಕೆ ಗಂಡಿನ ತಂದೆತಾಯಂದಿರುಗಳು ನಾವು ಎಲ್ಲಿ ಇರಬೇಕು? ಸ್ಮಶಾನ ಇದೆಯಲ್ಲಾ ಅಲ್ಲಿ ಇರುತ್ತೇವೆ ಎಂದು ಉತ್ತರಿಸಿರುವ ಉದಾಹರಣೆಗಳು ಉಂಟು. ಇಂತಹ ಮನೋಭಾವನೆ ಬರಲು ಅವರ ತಂದೆ ತಾಯಿಯರೇ ಕಾರಣ, ಅವರು ತಮ್ಮ ಮಕ್ಕಳಿಗೆ ಮೊದಲಿನಿಂದಲೂ ಹಿರಿಯರ ಬಗ್ಗೆ ಗೌರವವನ್ನು ಕಲಿಸಿ, ಹಿರಿಯರನ್ನು ಮಾನವೀಯತೆಯಿಂದ ನೋಡಬೇಕು, ಮಾನವೀಯತೆ ಎಂದರೆ ಏನು? ನೀವು ಎಲ್ಲರನ್ನು ಮಾನವೀಯತೆಯಿಂದ ನೋಡಿದರೆ ನೀವುಗಳು ಮುಂದೆ ವಯಸ್ಸಾದ ಕಾಲಕ್ಕೆ ನಿಮಗೂ ದೇವರು ಸಹಾಯ ಮಾಡುತ್ತಾನೆ ಎಂಬ ಅನೇಕ ಅತ್ಯುತ್ತಮ ಸಲಹೆಗಳನ್ನು ಹೇಳಿದ್ದರೆ ಮಕ್ಕಳು ಒಳ್ಳೆಯ ನಾಗರೀಕತೆಯಿಂದ ಬೆಳೆದು, ಗುರು ಹಿರಿಯರನ್ನು ಕಂಡರೆ ಗೌರವದಿಂದ ಕಾಣುವಂತಾಗುತ್ತಾರೆ. ಇದರಲ್ಲಿ ಗಂಡಿನ ದೌರ್ಬಲ್ಯವೂ ಇರುತ್ತದೆ. ಏಕೆಂದರೆ, ಅವರು ಅಷ್ಟು ಅಮಾನವೀಯತೆಯ ಪ್ರಶ್ನೆಗಳನ್ನು ಕೇಳಿ, ಅಮಾನವೀಯತೆಯಿಂದ ವರ್ತಿಸಿದಾಗಲೂ, ಇವರು ನಿಮ್ಮ ಸಂಬಂಧವೇ ಬೇಡ ಎಂದು ಹೇಳಿ ಬರುವ ಬದಲು, ಹುಡುಗಿಯನ್ನು ನೋಡಿ, ಹುಡುಗಿ ಸ್ವಲ್ಪ ಚೆನ್ನಾಗಿದ್ದರೆ, ಇವಳಿಗಿಂತ ಬೇರೆ ಯಾರೂ ಸ್ಪುರದ್ರೂಪಿ ಹೆಣ್ಣು ನನಗೆ ಸಿಗುವುದಿಲ್ಲ, ಇವಳೇ ಮೇನಕೆ ಅಪ್ಸರೆ ಎಂದು ತಿಳಿದು, ಮದುವೆಯಾಗಿ ಬಿಡೋಣ ನಂತರ ನೋಡೋಣ ಎಂದು ಕೆಲವೊಮ್ಮೆ ಸುಳ್ಳು ಹೇಳಿ, ಮದುವೆಯಾಗಿ, ನಂತರ ಈ ಕಡೆ ಅಪ್ಪ ಅಮ್ಮನನ್ನು ಬಿಡದೆ ಈ ಕಡೆ ಕಟ್ಟಿಕೊಂಡ ಹೆಂಡತಿಯನ್ನು ಬಿಡಲಾಗದೆ, ಕೊನೆಗೆ ತನ್ನ ತಂದೆ ತಾಯಿಯರನ್ನು ವೃದ್ದಾಶ್ರಮಕ್ಕೆ ಸೇರಿಸುವ ಹಲವು ನಿದರ್ಶನಗಳು ಉಂಟು.
ಇನ್ನೂ ಕೆಲವು ಸಂಸಾರಗಳಲ್ಲಿ, ಗಂಡು ಒಳ್ಳೆಯ ಕೆಲಸದಲ್ಲಿದ್ದು, ಅವರಿಗೆ ಅಪ್ಪ ಅಮ್ಮ ಇದ್ದಲ್ಲಿ, ಸಂಬಂಧವನ್ನು ಬಿಡಲಾಗದೆ, ಒಪ್ಪಿ ಮದುವೆಯಾಗಿ, ಮದುವೆಯಾದ ಆರು ತಿಂಗಳೊಳಗೆ ಬೇರೆ ಮನೆ ಮಾಡಿ ಎಂದು ತನ್ನ ಕೋರಿಕೆಯನ್ನು ಗಂಡನಿಗೆ ತಿಳಿಸಿ, ತಂದೆ ತಾಯಿಯಿಂದ ದೂರ ಮಾಡುವುದು ಉಂಟು. ಎಲ್ಲಾ ತಂದೆ ತಾಯಂದಿರುಗಳು ಮಕ್ಕಳು ಬೇಕು, ಮಕ್ಕಳಿಲ್ಲದಿದ್ದರೆ ಮೋಕ್ಷವೇ ಇಲ್ಲ ಎಂದು ತಿಳಿದು, ಹಲವಾರು ವರ್ಷ ಮಕ್ಕಳಾಗದೇ ಇದ್ದಲ್ಲಿ, ಕಂಡ ಕಂಡ ದೇವರಿಗೆ ಹರಕೆಯನ್ನು ಹೊತ್ತು, ಎಲ್ಲರೂ ಹೇಳಿದ ಎಲ್ಲಾ ಪೂಜೆ ಪುನಸ್ಕಾರಗಳನ್ನು ಮಾಡಿ, ಕಡೆಗೆ ಒಂದು ಸಂತಾನ ಪಡೆದು, ಇಂತಹ ಸಂಬಂಧವನ್ನು ಮಾಡಿ ಕಡೆಗೆ ತಂದೆ ತಾಯಿಗಳೇ ಬಲಿಪಶುಗಳಾಗುತ್ತಾರೆ.
ಇನ್ನು ಕೆಲವು ಸಂಸಾರಗಳಲ್ಲಿ ಮಕ್ಕಳಾಗದೇ ಬಂಜೆಯಾದ ಹೆಣ್ಣನ್ನು ಕೆಲವರು ಇವಳು ಬಂಜೆ ಎಂದು ಅಮಾನವೀಯತೆಯಿಂದ ಹೀಯಾಳಿಸಿದಾಗ ಎಷ್ಟೋ ದಂಪತಿಗಳು ಅದೇ ಕೊರಗಿನಿಂದ ಪ್ರಾಣವನ್ನು ಕಳೆದುಕೊಂಡಿರುವುದುಂಟು.
ಮಾನವೀಯತೆ ವರದಕ್ಷಿಣೆ ಎಂಬ ಭೂತದಿಂದ, ಕೆಲವು ಸಂಸಾರಗಳಲ್ಲಿ, ಮದುವೆಯ ಸಮಯದಲ್ಲಿ, ವರದಕ್ಷಿಣೆ ಎಂಬ ರೀತಿಯಲ್ಲಿ ಹೆಣ್ಣಿನ ಕಡೆಯವರು ತಮಗೆ ಶಕ್ತವಾಗಿದ್ದನ್ನು, ಯಾವುದೇ ಲೋಪವಿಲ್ಲದೆ ತನ್ನ ಅಳಿಯನಾದವನಿಗೆ ಕೊಟ್ಟಿರುತ್ತಾರೆ. ಆದರೂ ಕೆಲವರು ಬಹಳ ದುರಾಸೆಯಿಂದ ಇನ್ನೂ ಹೆಚ್ಚಿನ ವರದಕ್ಷಿಣೆ ತರಲಿ ಎಂಬ ಉದ್ದೇಶದಿಂದ ಸೊಸೆಗೆ ಕಿರುಕುಳ ನೀಡಿ, ಅವರು ಸಾಯಲು ಆಗದೆ ಬದುಕಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿ ಕೊನೆಗೆ ಇವರಿಂದ ಸುಲಭವಾದ ದಾರಿ ಆತ್ಮಹತ್ಯೆ ಮಾಡಿಕೊಳ್ಳುವುದು. ಚೆನ್ನಾಗಿ ಬದುಕಿ ಬಾಳಬೇಕಾದ ಎಷ್ಟೋ ಜೀವಗಳು ಈ ವರದಕ್ಷಿಣೆ ಎಂಬ ಭೂತಕ್ಕೆ ಬಲಿಯಾಗಿ, ತಮ್ಮ ಹಸುಕಂದಮ್ಮಗಳನ್ನು ಅನಾಥರನ್ನಾಗಿ ಮಾಡಿಹೋಗುತ್ತಾರೆ. ಪಾಪ ಏನೂ ಅರಿಯದ ಹಸುಕಂದಮ್ಮಗಳು ಅನಾಥರಾಗಿ ಬೇರೆ ಯಾರದ್ದೋ ಮನೆಯಲ್ಲಿ ಬದುಕಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಲು ಗಂಡ ಅತ್ತೆ ಮಾವನೆ ಕಾರಣ ಎಂದು ಸಾಬೀತಾದಲ್ಲಿ, ತಂದೆ ತಾತ ಅಜ್ಜಿಗೆ ಜೈಲೇ ಗತಿ, ಈ ಕಡೆ ಮಕ್ಕಳು ಅನಾಥರಾಗುತ್ತಾರೆ. ಇದಕ್ಕೆ ಯಾರು ಹೊಣೆ. ಮಾನವೀಯತೆಯ ದೃಷ್ಠಿಯಿಂದ ಬೇರೆ ಮನೆಯಿಂದ ಬಂದ ಹೆಣ್ಣು ಮಗುವನ್ನು ಅಂದರೆ ಸೊಸೆಯನ್ನು ಪ್ರೀತಿಯಿಂದ ಕಂಡು, ಹೆಚ್ಚಿನ ವರದಕ್ಷಿಣೆಗೆ ಆಸೆ ಬೀಳದೆ, ಇದ್ದುದರಲ್ಲೇ ಜೀವನ ಮಾಡಿಕೊಂಡು ಹೋಗೋಣ ಎಂದು ಅನ್ಯೋನ್ಯವಾಗಿ ಬಾಳಿದರೆ ಇಂಥ ದಾರುಣ ಸ್ಥಿತಿ ಬರುವುದೇ ಇಲ್ಲ. ಈಗಿನ ಕಾಲದ ಮದುವೆ ಎಂದರೆ ಹಲವಾರು ಲಕ್ಷಗಳು ಖರ್ಚಾಗುತ್ತವೆ. ಹಣವಂತರಾದರೇನೂ ಭಯವಿಲ್ಲ, ಎಷ್ಟು ಲಕ್ಷ ಬೇಕಾದರೂ ತಮ್ಮ ಮಗಳಿಗೆ ಖರ್ಚು ಮಾಡಿ ಮದುವೆ ಮಾಡಿಕಳಿಸುತ್ತಾರೆ. ಆದರೆ, ಹಣವಿಲ್ಲದವರು, ಬೇರೆಯವರ ಮುಲಾಜಿಗೆ ಅಂಜಿ, ಸಾಲ ಸೋಲ ಮಾಡಿ, ಗಂಡಿನಕಡೆಯವರ ದಾಕ್ಷಿಣ್ಯಕ್ಕೋ ಅಥವಾ ಸಮಾಜದಲ್ಲಿ ಎಲ್ಲರಂತೆ ನಾವೂ ಮಗಳ ವಿವಾಹ ಮಾಡಿಕೊಡಬೇಕು ಎಂಬ ಹಂಬಲದಿಂದ ಬಹಳ ಕಷ್ಟ ಪಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ. ಹೀಗಿರುವಾಗ ಇನ್ನೂ ಹೆಚ್ಚಿನ ವರದಕ್ಷಿಣೆ ತರಬೇಕೆಂದು ಬಲವಂತ ಮಾಡಿದರೆ ಏನು ತಾನು ಮಾಡಲು ಸಾಧ್ಯ? ಅಸಹಾಯಕತೆಯಿಂದ ತನ್ನ ಅಮೂಲ್ಯವಾದ ಪ್ರಾಣವನ್ನೇ ತೆಗೆದುಕೊಂಡು ಬಿಡುತ್ತಾರೆ. ಇನ್ನೂ ಕೆಲವೊಮ್ಮೆ ರಕ್ಕಸತನದಿಂದ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುವ ರೀತಿ, ಹಲವಾರು ಕಡೆ ತಿನ್ನುವ ಅನ್ನಕ್ಕೆ ವಿಷ ಹಾಕುವುದು, ನೇಣು ಬಿಗಿಯುವುದು ಹೀಗೆ ಹಲವಾರು ಮಾದರಿಯಲ್ಲಿ, ಮುಂದೆ ಬಾಳಿ ಬೆಳಗುವಂತಹ ಮಕ್ಕಳಿಗೆ ದಾರಿದೀಪವಾಗ ಬೇಕಾಗಿದ್ದ ಅನೇಕ ಅತ್ಯಮೂಲ್ಯವಾದ ಪ್ರಾಣವನ್ನೇ ತೆಗೆದುಬಿಡುತ್ತಾರೆ. ಇವರ ಪ್ರಾಣವು ಮರಳಿ ಬರುವುದು ಸಾಧ್ಯವೇ? ಇದಕ್ಕೆಲ್ಲಾ ಕಾರಣ ಮರೆಯಾಗುತ್ತಿರುವ ಮಾನವೀಯತೆ ಎಂದರೆ ತಪ್ಪಾಗಲಾರದು. ಇಂತಹ ಕಾರ್ಯಕ್ಕೆ ತಂದೆ ತಾಯಿಯರು, ಕುಟುಂಬ ಸದಸ್ಯರುಗಳು ಬೆಂಬಲ ನೀಡಲು ಹಿಂಜರಿಯವುದಿಲ್ಲ. ಈ ರೀತಿಯ ಮನೋಭಾವನೆ ಇರುವಲ್ಲಿ ಮಾನವೀಯತೆಗೆ ಬೆಲೆ ಎಲ್ಲಿ ಇರುತ್ತದೆ?.
ಹಿಂದಿನ ಕಾಲದಲ್ಲಿ ಹೆಂಗಸರು ಅಷ್ಟಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ, ಗಂಡಸರು ಹೊರಗೆ ದುಡಿದುಬಂದರೆ, ಹೆಂಗಸರು ಮನೆಯ ಕೆಲಸವನ್ನು ನೋಡಿಕೊಳ್ಳುವ ಕಾಲ ಅದಾಗಿತ್ತು. ಆದರೆ ಈಗ ಕಾಲ ಸಂಪೂರ್ಣ ಬದಲಾಗಿದೆ. ಹೆಂಗಸರು ಸಹ ಗಂಡಸರಿಗೆ ಸರಿ ಸಮಾನರಾಗಿ ಎಲ್ಲಾ ಕ್ಷೇತ್ರಗಳಲ್ಲೂ ದುಡಿಯುತ್ತಿದ್ದಾರೆ. ಆದರೆ ಕೆಲವು ಇಲಾಖೆ ಕಛೇರಿಗಳಲ್ಲಿ, ಹೆಂಗಸರುಗಳು ತಮ್ಮ ಬಾಸ್ ಅಥವಾ ಸಹ ಉದ್ಯೋಗಿಯೊಂದಿಗೆ ಕೆಲಸದ ಬಗ್ಗೆ ಚರ್ಚಿಸಬೇಕಾದ ಸಂದರ್ಭ ಒದಗಬಹುದು, ಅಥವಾ ಕಛೇರಿ ಕೆಲಸದ ಅವಧಿಗಿಂತ ಹೆಚ್ಚಿನ ಅವಧಿಯಲ್ಲಿ ಕಛೇರಿಯಲ್ಲಿಯೇ ಉಳಿಯಬಹುದು, ಇದೆಲ್ಲಾ ಅವರವರ ಕಛೇರಿ ಇಲಾಖೆಗೆ ಸಂಬಂಧಪಟ್ಟಂತೆ ಇರುತ್ತದೆ. ಇದಕ್ಕೆ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಎಲ್ಲಾ ಮಹಿಳೆಯರಿಗೂ ಇರುತ್ತದೆ. ಆದರೆ ಗಂಡನಾದವನು ತನ್ನ ಹೆಂಡತಿಯು ಈ ರೀತಿಯಾಗಿ ಕೆಲಸ ನಿರ್ವಹಿಸುತ್ತಿದ್ದರೆ ಅವರ ಮೇಲೆ ಶಂಕಿಸುವುದು ತಪ್ಪಾಗುತ್ತದೆ. ಆದರೆ ಇದನ್ನು ತಿಳಿಯದ ಕೆಲವರು ತಮ್ಮ ಹೆಂಡತಿಯರು ಎಷ್ಟೇ ಒಳ್ಳೆಯವರಾಗಿದ್ದರೂ ಸಹ ಅವರ ಶೀಲವನ್ನೇ ಶಂಕಿಸಿ, ಅವರಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿ, ಅವರನ್ನು ಕೆಲಸದಿಂದ ಬಿಡಿಸಿರುವುದುಂಟು. ಇದರಿಂದ ಮಹಿಳೆಯು ಗಂಡನ ಬಲವಂತದಿಂದ ಮನಸ್ಸಿಲ್ಲದೆ ಕೆಲಸವನ್ನು ಬಿಟ್ಟು ಮನೆಯಲ್ಲಿಯೇ ಉಳಿದಿರುವ ಪ್ರಸಂಗಗಳು ಇದ್ದು, ಇದರಿಂದ ತಮ್ಮ ಸ್ವಾವಲಂಬಿ ಜೀವನವನ್ನು ಬಲಿಕೊಟ್ಟವರೂ ಇದ್ದಾರೆ. ಕೆಲಸ ಬಿಟ್ಟರೂ ಹೆಂಡತಿಯರ ಮೇಲಿನ ಅನುಮಾನ ಹೋಗಿರುವುದೇ ಇಲ್ಲ, ಯಾವುದಾದರೂ ತನ್ನ ಹೆಂಡತಿ ಮೊಬೈಲ್ಗೆ ಫೋನು ಬಂದರೆ ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಿ, ಹೆಂಡತಿಯನ್ನು ಹಿಂಸಿಸುವವರೂ ಇದ್ದಾರೆ. ಇದರಿಂದ ಗಂಡನ ತಮ್ಮ ಹಳೆಯ ಚಾಳಿಯಿಂದ ಬಿಡಿಸಿಕೊಳ್ಳಲು ವಿವಾಹ ವಿಚ್ಛೇದನ ಪಡೆದವರೂ ಇರಬಹುದು. ತಾನು ಮಾತ್ರ ಎಲ್ಲರೊಂದಿಗೆ ಸಲುಗೆಯಿಂದ ಮಾತಾಡಿ, ತನಗೆ ಇಷ್ಟ ಬಂದ ರೀತಿಯಲ್ಲಿ ಇರಬಹುದು ಆದರೆ ಹೆಂಡತಿಯಾದವಳಿಗೆ ಮಾತ್ರ ನಿಬಂಧನೆ, ತನ್ನ ಹೆಂಡತಿ ಯಾರ ಜೊತೆಯೂ ಸಲುಗೆಯಿಂದ ಮಾತಾಡುವಂತಿಲ್ಲ. ಹೆಂಡತಿಗೆ ಒಂದು ನ್ಯಾಯ, ಗಂಡನಿಗೆ ಒಂದು ನ್ಯಾಯವೇ? ಹೆಂಡತಿ ಒಳ್ಳೆಯವಳಾಗಿದ್ದರೂ ಸಹ ಗಂಡನ ಅನುಮಾನಕ್ಕೆ ಮನನೊಂದು, ವಿವಾಹ ವಿಚ್ಛೇದನ ಪಡೆಯಲು ಬಯಸುತ್ತಾರೆ. ಕೆಲವರು ಈ ರೀತಿ ವರ್ತಿಸುವ ಗಂಡನನ್ನು ನಂಬುವುದಾದರೂ ಹೇಗೆ? ಇದ್ದ ಕೆಲಸ ಬಿಟ್ಟು ಮನೆಯಲ್ಲಿ ಕುಳಿತರೆ ತನ್ನ ಮುಂದಿನಜೀವನದ ಗತಿ ಏನು ಎಂದು, ತಮ್ಮ ಮನಸ್ಸುಗಳನ್ನು ಗಟ್ಟಿ ಮಾಡಿಕೊಂಡು ತನ್ನ ಗಂಡ ಎಷ್ಟೇ ಕೂಗಾಡಲೀ, ಎಷ್ಟೇ ಹಿಂಸೆ ನೀಡಲಿ ಅದನ್ನೆಲ್ಲಾ ಸಹಿಸಿಕೊಂಡು ಕೆಲಸವನ್ನು ಮಾತ್ರ ಬಿಡದೆ, ಗಂಡನಿಂದ ದೂರವಾಲು ಬಯಸಿ ಒಂಟಿ ಜೀವನ ನಡೆಸುತ್ತಾ ಇದ್ದಾರೆ.
ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಹೇಳುವ ಕೆಲವು ಉಪಾದ್ಯಾಯರುಗಳು ವಿದ್ಯಾರ್ಥಿಗಳನ್ನು ಕರುಣೆ ಇಲ್ಲದೆ ಮನಬಂದಂತೆ ಥಳಿಸುವ ಪ್ರವೃತ್ತಿ ಹೊಂದಿದವರು ಇದ್ದಾರೆ. ಒಂದು ಸಲ ಹೇಳಿದರೆ ಅರ್ಥಮಾಡಿಕೊಳ್ಳುವ ಪ್ರತಿಬಾವಂತ ಮಕ್ಕಳು ಇರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಬಾರಿ ಹೇಳಿಕೊಟ್ಟರೆ ಕಲಿಯುವ ಮಕ್ಕಳು ಸಹ ಇರುತ್ತಾರೆ. ತಾನು ಹೇಳಿದ್ದನ್ನು ಕಲಿಯಲಿಲ್ಲವೆಂದು ತನ್ನ ಮಾನವೀಯತೆಯನ್ನು ಮರೆದತು ಮನಬಂದಂತೆ ಹೊಡೆದರೆ ಮಕ್ಕಳ ಗತಿ ಏನಾಗಬೇಕು? ಒಂದು ಸಲ, ಅಥವಾ ಮಕ್ಕಳಿಗೆ ತಿಳಿಯುವ ತನಕ ಹೇಳಿಕೊಟ್ಟರೆ ಪ್ರಪಂಚವೇನೂ ಮುಳುಗುವುದಿಲ್ಲ. ಒಂದು ಸಲ ಹೇಳಿಕೊಟ್ಟರೆ ಸಾಕು, ಅದರಲ್ಲೇ ಅರ್ಥ ಮಾಡಿಕೊಳ್ಳಲೇ ಬೇಕು ಎಂಬ ನಿಯಮವೇನೂ ಇಲ್ಲವಲ್ಲ, ಒಂದು ಸಲ ಅಲ್ಲದೆ ಹತ್ತಾರು ಬಾರಿ ಹೇಳಿಕೊಡಲಿ, ಮಕ್ಕಳಿಗೆ ಪಾಠ ಅರ್ಥವಾಗುವುದು ಮುಖ್ಯ ಅಷ್ಟೇ. ಆದರೆ ಇದನ್ನು ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗದೆ ಮಕ್ಕಳನ್ನು ದಂಡಿಸುವುದು ಅಮಾನವೀಯತೆಯ ಪರಮಾವದಿ.
ಹೆಂಡತಿ ಅಥವಾ ಸೊಸೆಗೆ ಕಿರುಕುಳ ನೀಡುವುದು ಒಂದು ರೀತಿಯಾದರೆ ಹೆಣ್ಣುಮಗು ಹುಟ್ಟಿದರೆ ಬೇರೊಂದು ರೀತಿಯಲ್ಲಿ ಅಮಾನವೀಯತೆ ತೋರುತ್ತಾರೆ. ನಮ್ಮ ಭಾರತ ದೇಶದಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನ ಗೌರವ ನೀಡಿರುವ ದೇಶ. ಇಂಥಹ ದೇಶದಲ್ಲಿ ಹೆಣ್ಣುಮಗು ಹುಟ್ಟಿದರೆ ಅವರ ಅಮ್ಮನನ್ನು ಹೀಗಳೆಯುವವರೇ ಜಾಸ್ತಿ. ಮೊದಲನೆ ಮಗು ಹೆಣ್ಣಾದರೆ ಆಗಲೇ ಮನೆಯಲ್ಲಿ ಒಂದು ರೀತಿಯ ಮುಜುಗರ ಬೇಸರ ಪಡುತ್ತಾರೆ. ಇದೇ ರೀತಿ, ಹುಟ್ಟುವ ಮಕ್ಕಳೆಲ್ಲಾ ಹೆಣ್ಣಾದರೆ ಮಕ್ಕಳು ಹೆತ್ತವರ ಪಾಡು ಯಾರಿಗೂ ಬೇಡ. ಕೆಲವು ಸಂಸಾರಗಳಲ್ಲಿ ಹುಟ್ಟಿದ ಮಕ್ಕಳು ಹೆಣ್ಣಾಗಿದ್ದರೂ ಬಹಳ ಪ್ರೀತಿಯಿಂದ ಸಾಕಿ ಸಲಹಿದವರೂ ಇದ್ದಾರೆ. ಕೆಲವು ಸಂಸಾರಗಳಲ್ಲಿ ಗಂಡ, ಅತ್ತೆ ಮಾವನ ಬಲವಂತಕ್ಕೆ ಬಡತನ ಇದ್ದರೂ, ಗಂಡು ಸಂತಾನ ಬೇಕೇ ಬೇಕೆಂದು ಹಠ ಹಿಡಿದು, ಐದಾರು ಸಂತಾನಗಳನ್ನು ಪಡೆದಿರುವುದೂ ಉಂಟು. ಎಲ್ಲವೂ ಹೆಣ್ಣಾದಲ್ಲಿ ಇವರ ಗೋಳು ಕೇಳುವವರಾರು? ಅತ್ತೆ ಮಾವನೇ ಇವಳನ್ನು ಹಂಗಿಸುತ್ತಾರೆ. ಹೆಣ್ಣು ಮಕ್ಕಳು ಆಗಲು ಹೆಣ್ಣೊಂದೇ ಕಾರಣ ಎಂಬಂತೆ ಸೊಸೆಯನ್ನೇ ಹೀಯಾಳಿಸುತ್ತಾರೆ. ಇದರಲ್ಲಿ ಗಂಡನದೂ ಸಮಪಾಲು ಇರುತ್ತದೆ ಎಂದು ತಿಳಿದಿರುವುದೇ ಇಲ್ಲ. ಎಲ್ಲಾ ಹೆಣ್ಣು ಮಕ್ಕಳನ್ನೇ ಹೆತ್ತಳೆಂದೂ, ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು, ಕೆಟ್ಟದಾದ ರೀತಿಯಲ್ಲಿ ಸೊಸೆಯನ್ನು ನಡೆಸಿಕೊಳ್ಳುವುದು ಅಮಾನವೀಯತೆಯ ಪರಮಾವಧಿ.
ಈಗಿನ ಪರಿಸ್ಥಿತಿಯಲ್ಲಿ ಬಹುತೇಕ ಮನೆಗಳಲ್ಲಿ ಸಂಸಾರ ಎಂದರೆ ತಂದೆ, ತಾಯಿ ಮಗ ಅಥವಾ ಮಗಳು, ಮೂರು ಅಥವಾ ನಾಲ್ಕು ಜನ ಇರುವ ಕುಟುಂಬಗಳೇ ಆಗಿವೆ. ಅದರಲ್ಲೂ ಗಂಡು ಮಗು ಹುಟ್ಟಿದರೆ ಸಾಕು, ಒಂದೇ ಮಗು ಸಾಕು ಎಂದು ತೀರ್ಮಾನಿಸಿಬಿಡುವವರು, ಇದ್ದಾರೆ. ಏಕೆಂದರೆ ಇನ್ನೊಂದು ಮಗು ಹೆಣ್ಣಾದರೆ ಏನು ಮಾಡುವುದು? ಹೆಣ್ಣು ಮಗುವಾದರೆ ಜವಾಬ್ದಾರಿ ಜಾಸ್ತಿಯಾಗುತ್ತದೆ. ಎಂದು ಭ್ರೂಣ ಹೊಟ್ಟೆಯಲ್ಲಿದ್ದಾಗಲೇ ಮುಂದೆ ಹುಟ್ಟುವ ಮಗು ಹೆಣ್ಣೋ ಗಂಡೋ ಎಂದು ತಿಳಿದು ಹೆಣ್ಣಾದರೆ ಮಾನವೀಯತೆಯನ್ನು ಮರೆತು ಕ್ರೂರತೆಯಿಂದ ಪ್ರಪಂಚಕ್ಕೆ ಕಾಲಿಡುವ ಮೊದಲೇ ಚಿವುಟಿಹಾಕುವವರು ಸಾಕಷ್ಟು ಇರಬಹುದು. ಇದರಿಂದಲೇ ನಮ್ಮ ದೇಶದಲ್ಲಿ ಲಿಂಗ ತಾರತಮ್ಯ ಉಂಟಾಗಿ ಸುಮಾರು ಒಂದು ಅಂದಾಜಿನ ಪ್ರಕಾರ 1000 ಗಂಡು ಮಕ್ಕಳಿಗೆ 900 ಹೆಣ್ಣುಮಕ್ಕಳು ಇವೆ. ಇದು ಇದೇ ರೀತಿ ಮುಂದುವರೆದಲ್ಲಿ ದೇಶದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿ ಲಿಂಗ ತಾರತಮ್ಯ 1000-500ಕ್ಕೆ ಇಳಿಯುವ ಅಪಾಯ ಎದುರಾಗಬಹುದು. ಇದಕ್ಕೆಲ್ಲಾ ಕಾರಣ ಮಾನವೀಯತೆ ಇಲ್ಲದೆ ಹೆಣ್ಣುಮಕ್ಕಳನ್ನು ಗರ್ಭದಲ್ಲಿಯೇ ಕೊನೆಗಾಣಿಸುವುದು.
ಹಿಂದಿನ ಕಾಲದಲ್ಲಿ ಕೆಲವರ ಮನೆಗಳಲ್ಲಿ ಹೆಣ್ಣುಮಕ್ಕಳೇ ಜಾಸ್ತಿ ಇದ್ದು, ಗಂಡು ಸಂತಾನವೇ ಕಾಣದ ಮನೆಗಳು ಇರುತ್ತಿದ್ದವು. ಅವರು ಕಷ್ಟವೋ ಸುಖವೋ ಅಂಬಲಿಯೋ ಗಂಜಿಯೋ ಕುಡಿದು ಜೀವಿಸುತ್ತಿರಲಿಲ್ಲವೇ? ಆಗ 8-10 ಹೆಣ್ಣುಮಕ್ಕಳನ್ನು ಹೊಂದಿಯೂ ಇದ್ದ ಮಾನವೀಯತೆ ಈಗ ಎಲ್ಲಿ ಹೋಗಿದೆ? ಹೆಣ್ಣು ಮಕ್ಕಳು ಹುಟ್ಟಿದರೆ ಮನೆಗೇ ಒಂದು ಲಕ್ಷಣ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಎಷ್ಟು ಆನಂದವಿರುತ್ತದೆ ಎಂದು ಹೆಣ್ಣುಮಕ್ಕಳನ್ನು ಹೊಂದಿರುವ ಸಂಸಾರಗಳಿಗೇ ಗೊತ್ತು.
ಗಂಡನ ಮನೆಯವರ ಕಿರುಕುಳ ಒಂದು ಕಡೆಯಾದರೆ, ಸಮಾಜದಲ್ಲಿನ ಕಿರುಕುಳ ಇನ್ನೊಂದು ಕಡೆ ಎರಡನ್ನೂ ಸಹಿಸಿಕೊಂಡು ಮಹಿಳೆಯರು ಬದುಕುವ ಪರಿಸ್ಥಿತಿ ಇದ್ದರೆ ಯಾರು ತಾನು ನೆಮ್ಮದಿಯಿಂದಿರಲು ಸಾಧ್ಯ? ಇಂತಹವ ಮೇಲೆ ಯಾರಿಗೂ ಕರುಣೆಯೇ ಬರುವುದಿಲ್ಲ. ಹಲವಾರು ವರ್ಷಗಳ ಕಾಲ ಅನ್ಯೋನ್ಯವಾಗಿ ಸಂಸಾರ ಮಾಡಿ ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಮಾನಸಿಕ ಹಿಂಸೆ ನೀಡಿ, ಕಡೆಗೆ ವಿಚ್ಛೇದನ ಎಂಬ ಭ್ರಹ್ಮಾಸ್ತ್ರವನ್ನು ಉಪಯೋಗಿಸುತ್ತಾರೆ. ದುಡಿಯುವ ಮಹಿಳೆಯಾದರೆ, ಇಂಥಹ ಗಂಡನ ಸಹವಾಸವೇ ಬೇಡ ಎಂದು ತಮ್ಮ ಪಾಡಿಗೆ ತಾವು ಸ್ವಾವಲಂಬಿಗಳಾಗಿ ಬದುಕ ಬಹುದು. ಆದರೆ ದುಡಿಯದ ಮಹಿಳೆಯರಿಗೆ ತನ್ನ ತಂದೆ ತಾಯಿಯೇ ಗತಿ, ವಯಸ್ಸಾದ ತಂದೆ ತಾಯಿಯರಿಗೆ ತಮ್ಮ ಮಗಳ ಮೇಲೆ ಪ್ರೀತಿಯೇ ಆದರೆ, ಇವರೂ ಕಷ್ಟದಲ್ಲಿದ್ದು, ಮದುವೆಯಾಗಿ, ಗಂಡನ ತೊರೆದು ಬಂದ ಮಗಳನ್ನು ಸಾಕುವ ಶಕ್ತಿ ಇಲ್ಲದಿದ್ದರೆ, ಇವರನ್ನು ಕೇಳುವವರು ಯಾರೂ ಇರುವುದಿಲ್ಲ. ನನ್ನಂತೆ ನನ್ನ ಹೆಂಡತಿಯೂ ಒಬ್ಬಳು ಮನುಷ್ಯಳು, ಇವಳನ್ನು ಸಲಹುತ್ತೇನೆಂದು ವಿವಾಹವಾಗಿದ್ದೇನೆ, ಇವಳನ್ನು ನನ್ನ ಮಕ್ಕಳನ್ನು ಸಲಹುವುದು ನನ್ನ ಕರ್ತವ್ಯ ಎಂದು ತಿಳಿಯದೆ, ವಿನಾ ಕಾರಣ ತನ್ನ ಹೆಂಡತಿಯ ಮೇಲೆ ಗೂಬೆ ಕೂರಿಸಿ, ಹಲವಾರು ವರ್ಷಗಳಿಂದ ಚೆನ್ನಾಗಿ ನಡೆದುಕೊಂಡು ಬಂದಿದ್ದ ಸಂಸಾರವನ್ನು ತಾನೇ ಕೈಯಾರ ಹಾಳುಮಾಡಲು ಹೊರಟರೆ ಇಂಥವರಿಗೆ ಮಾನವೀಯತೆ ಎಂಬುದು ಇದೆಯೇ ಎನಿಸುತ್ತದೆ. ಕೆಲವು ಮಹಿಳೆಯವರು ಗಂಡನೇ ಸರ್ವಸ್ವ ಎಂದು ನಂಬಿ, ನೀನೇ ಗತಿ, ನಿನ್ನ ಬಿಟ್ಟು ನನಗೆ ಬೇರೆ ಯಾರೂ ಇಲ್ಲ, ನಿನ್ನನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಎಂದು ಗೋಗರೆದು ಕೇಳಿಕೊಂಡರೂ ಕಲ್ಲು ಹೃದಯದ ಗಂಡನಿಗೆ ಇವಳ ಮಾತಿಂದ ಅವನ ಹೃದಯ ಕರಗದೆ ಹೃದಯ ಶೂನ್ಯರಾಗಿ ವರ್ತಿಸುವುದುಂಟು. ಅಮಾನವೀಯತೆಗೆ ಹೆಂಗಸರೇ ಹೆಚ್ಚಾಗಿ ಬಲಿಪಶುಗಳಾಗುತ್ತಾರೆ ಎಂದರೆ ಅತಿಯಶೋಕ್ತಿಯಲ್ಲ ಎನ್ನಿಸುತ್ತದೆ.
ಹೆಂಗಸರಿಗೆ ಒಂದಲ್ಲ ಹಿಂಸೆ ಎನ್ನುವುದು ಎಲ್ಲಾ ಕಡೆಗಳಿಂದಲೂ ಇವರಿಗೆ ಹಿಂಸೆಯೇ ಜಾಸ್ತಿಯಾಗಿದೆ ಎನ್ನಬಹುದು. ಪ್ರತಿಯೊಂದು ಕ್ಷೇತ್ರದಲ್ಲಿ, ಪ್ರತಿಯೊಂದು ಜಾಗದಲ್ಲೂ ಹೆಣ್ಣುಮಕ್ಕಳಿಗೇ ಜಾಸ್ತಿ ಕಿರುಕುಳ, ಹಿಂಸೆ ನೀಡುವುದೇ ಜಾಸ್ತಿಯಾಗಿದೆ ಎನಿಸುತ್ತದೆ. ಮಹಿಳೆಯರಿಗೆ ಆಗುವ ಹಿಂಸೆಗಳನ್ನು ಪಟ್ಟಿ ಮಾಡಿ ಹೇಳಬಹುದು.
ಮನೆಗಳಲ್ಲಿ ವಿನಾಕಾರಣ ಗಂಡನು ನೀಡುವ ಮಾನಸಿಕ ದೈಹಿಕ ಹಿಂಸೆ, ಇದನ್ನು ಹೇಗೋ ತನ್ನ ಗಂಡ ತಾನೆ ನನಗೆ ಹಿಂಸೆ ಕೊಡುವುದು, ಇವತ್ತು ಹಿಂಸೆ ಕೊಡುತ್ತಾನೆ ನಾಳೆ ಪ್ರೀತಿಸುತ್ತಾನೆ ಎಂಬ ಮನೋಭಾವನೆ ಕೆಲವರಲ್ಲಿ ಇದ್ದರೆ, ಕೆಲಸಕ್ಕೆ ಹೋಗುವಾಗ ಅಥವಾ ವಿದ್ಯಾಭ್ಯಾಸಕ್ಕಗಿ ಬಸ್ಸುಗಳಲ್ಲಿ ಪ್ರಯಾಣಮಾಡುವಾಗ ಸಹ ಪ್ರಯಾಣಿಕರು ನೀಡುವ ಹಿಂಸೆ, ಕೆಲವರಿಗೆ ಕಛೇರಿಗಳಲ್ಲಿ ಕೊಡುವ ಮಾನಸಿಕ ಹಾಗೂ ಲೈಂಗಿಕ ಹಿಂಸೆಯನ್ನು ತಡೆದುಕೊಂಡಿರಬೇಕು, ಹೊರಗಡೆ ಬಂದರೆ ಬೀದಿಗಳಲ್ಲಿ, ಅಕಸ್ಮಾತ್ ರಾತ್ರಿಯಾಗಿದ್ದು, ಒಬ್ಬರೇ ಬಸ್ಸಿಗಾಗಿ ಕಾಯುವ ಅಥವಾ ರಸ್ತೆಗಳಲ್ಲಿ ನಡೆದುಕೊಂಡು ಹೋಗುವ ಪ್ರಸಂಗ ಬಂದಾಗ ಅಲ್ಲಿಯೂ ಸಹ ಕೆಲವರು ನೀಡುವ ಲೈಂಗಿಕ ಕಿರುಕುಳ, ಮಕ್ಕಳಿಗೆ ಮಹಿಳೆಯರಿಗೆ ಆಗುತ್ತಿರುವ ಹಿಂಸೆ ನೋಡಿದರೆ ನಿಜವಾಗಿಯೂ ಮಾನವೀಯತೆ ಎಲ್ಲಿದೆ ಎನ್ನಿಸುತ್ತದೆ. ಮದುವೆಯಾಗಿ ಗಂಡನ ಬಿಟ್ಟವರಿಗೆ ಒಂದು ರೀತಿಯ ಹಿಂಸೆಯಾದರೆ, ಅನಿರೀಕ್ಷಿತವಾಗಿ ಚಿಕ್ಕಂದಿನಲ್ಲಿಯೆ ಗಂಡನನ್ನು ಕಳೆದುಕೊಂಡು ಕೆಲಸಕ್ಕೆ ಹೋಗುವ ಮಹಿಳೆಯರನ್ನು ನೋಡುವ ರೀತಿಯೇ ಬೇರೆಯದೇ ಆಗಿರುತ್ತದೆ. ತಾನೂ ಸ್ವಾವಲಂಬಿಯಾಗಿ ಬದುಕಿ ಬಾಳಬೇಕು ತನ್ನ ಮಕ್ಕಳನ್ನು ತಾನು ಸಾಕಬೇಕು ಎಂದು ಮಕ್ಕಳ ಭವಿಷ್ಯಕ್ಕಾಗಿ ದುಡಿಯುವ ಮಹಿಳೆಯರು ಈ ರೀತಿಯ ಎಲ್ಲಾ ಹಿಂಸೆಗಳನ್ನು ಸಹಿಸಿಕೊಂಡು ಜೀವನ ಮಾಡುವ ಅನೇಕ ಪ್ರಸಂಗಗಳು ಬಂದಿರಬಹುದು. ಇದಕ್ಕೆಲ್ಲಾ ಯಾರು ಹೊಣೆ, ಇದನ್ನೆಲ್ಲಾ ನೋಡಿದರೆ ಮಾನವೀಯತೆಯು ಎಲ್ಲಿ ಮರೆಯಾಗುತ್ತಿದೆ ಎನಿಸುವುದಿಲ್ಲವೇ? ಕೆಲವು ಬಾರಿ ಮಹಿಳೆಯರದ್ದೂ ತಪ್ಪಿರಬಹುದು, ಏಕೆಂದರೆ, ಎಲ್ಲ ಗಂಡನೂ ಒಂದೇ ತರಹ ಇರುವುದಿಲ್ಲ. ಹೆಂಡತಿಯರನ್ನು ತನ್ನ ಪ್ರಾಣಕ್ಕಿಂತ ಪ್ರೀತಿಸುವ ಅದೆಷ್ಟೋ ಗಂಡು ಹೃದಯಗಳು ಪ್ರಪಂಚದಲ್ಲಿ ಇದೆ. ಆದರೆ ಇವರ ಪ್ರೀತಿಗೆ ಕೊಳ್ಳಿ ಇಟ್ಟು, ಬೇರೆಯವರ ಸಹವಾಸ ಮಾಡುವವರೂ ಇದ್ದಾರೆ, ಆಗ ಗಂಡನೂ ಬಲಿಪಶು ವಾಗುತ್ತಾನೆ. ಆದರೆ ಇದು ಅಪರೂಪ ಎನ್ನಬಹುದು.
ಮಕ್ಕಳು ತಿಳಿದೋ ತಿಳಿದದೆಯೋ, ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಅಥವಾ ತಾನು ಕೆಲಸಕ್ಕೆ ಹೋಗುವ ಕಛೇರಿಗಳಲ್ಲಿ, ಅನ್ಯ ಜಾತಿಯವರನ್ನು ಪ್ರೀತಿಸಿ ವಿವಾಹವಾಗಲು ಬಯಸಿದರೆ, ಇದಕ್ಕೆ ತಂದೆ ತಾಯಿಯರು ಸುತರಾಂ ಒಪ್ಪುವುದೇ ಇಲ್ಲ, ಕೇವಲ ಬೆರಳಣಿಕೆಯಷ್ಟು ಜನ ಮಾತ್ರ ಇಂಥ ಸಂಬಂಧಕ್ಕೆ ಒಪ್ಪಿಗೆ ನೀಡಿ ತಮ್ಮಮಕ್ಕಳು ಸುಖವಾಗಿರಲೆಂದು ವಿವಾಹಕ್ಕೆ ಒಪ್ಪಿಗೆ ನೀಡುತ್ತಾರೆ. ಕೆಲವರಂತೂ ಮಕ್ಕಳ ಬಾಳು ಏನಾದರೂ ಚಿಂತೆಯಿಲ್ಲ, ಅನ್ಯ ಜಾತಿಯವರು ನಮ್ಮ ಮನೆಗೆ ಸೊಸೆ ಅಥವಾ ಅಳಿಯ ಆಗಬಾರದೆಂದು ಅದನ್ನು ತಪ್ಪಿಸಲು ನಾನಾ ವಿಧವಾದ ಕಸರತ್ತನ್ನು ಮಾಡುತ್ತಾರೆ. ಕೆಲವು ಸನ್ನಿವೇಶಗಳಲ್ಲಿ ತಮ್ಮ ಮಕ್ಕಳನ್ನೇ ಬಲಿಕೊಡುವ ಮಂದಿಯೂ ಇದ್ದಾರೆ.
ನಮ್ಮ ಈಗಿನ ಸಮಾಜದಲ್ಲಿ ಮಾನವೀಯತೆ ಯಾವ ರೀತಿ ಮರೆಯಾಗುತ್ತಿದೆ ಅಥವಾ ಬಲಿಯಾಗುತ್ತಿದೆ ಎಂದರೆ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ತಿಳಿಯಬಹುದು. ಇದಕ್ಕೆ ಮುಖ್ಯ ಕಾರಣ, ಶರವೇಗವಾಗಿ ಬೆಳೆಯುತ್ತಿರುವ ಪ್ರಪಂಚ, ಅದಕ್ಕೆ ತಕ್ಕಂತೆ ಆಧುನಿಕತೆ, ಯಾಂತ್ರೀಕೃತ ಜೀವನ, ಜೀವನದ ಮೌಲ್ಯಗಳ ತಿಳುವಳಿಕೆ ಇಲ್ಲದಿರುವುದು ಒಂದು ಮುಖವಾದರೆ ಪೆಡಂಭೂತವಾಗಿ ಬೆಳೆದಿರುವ, ಭ್ರಷ್ಟಾಚಾರ, ಸ್ವಾರ್ಥ, ಅಧಿಕಾರ ದಾಹ, ದುರಾಸೆ, ಇನ್ನೊಂದು ಮುಖ ಗೋಚರಿಸುತ್ತದೆ. ಇವುಗಳಿಂದ ಇಂದು ದೇಶದಲ್ಲಿ ಮಾನವೀಯತೆಯ ಮೌಲ್ಯ ಕುಸಿಯುತ್ತಾ, ಮಾನವೀಯತೆಯು ಮರೆಯಾಗುತ್ತಿದೆಯೇನೋ ಎಂದು ಭಾಸವಾಗುತ್ತದೆ.
ಮಾನವೀಯತೆಯನ್ನು ಎಷ್ಟೋ ಜನ ಮರೆತುಬಿಟ್ಟಿದ್ದಾರೇನೋ ಎನಿಸುತ್ತದೆ. ಕೆಲವರಲ್ಲಿ ಅಂದರೆ ಬಹುತೇಕ ಜನಗಳಲ್ಲಿ ಮಾತ್ರ ಮಾನವೀಯತೆಯು ಉಳಿದಿದೆ ಮಾನವೀಯತೆ ಪೂರ್ಣ ಮರೆಯಾಗಿದೆ ಎಂದೇನೂ ಇಲ್ಲ. ಇದಕ್ಕೆ ಕಾರಣ ಅವರುಗಳು ಮಾನವೀಯತೆಯ ನೆಲೆಗಟ್ಟಿನಲ್ಲಿ ಬೆಳೆದು ಬಂದಿರುವ ಹಿರಿಯ ನಾಗರೀಕರು ಇನ್ನೂ ಉಳಿದಿರುವುದೇ ಬಹುಮುಖ್ಯ ಕಾರಣ. ಅವರುಗಳು ಇಂದಿಗೂ ತಮ್ಮ ಮಕ್ಕಳಿಗೆ ಮಾನವೀಯತೆಯ ಬಗ್ಗೆ ನೀಡುತ್ತಿರುವ ನೀತಿ ಪಾಠ. ಆದ್ದರಿಂದಲೇ ಬಹುತೇಕ ಜನಗಳಲ್ಲಿ ಮಾನವೀಯತೆ ಎಂಬುದು ಇನ್ನೂ ಮನೆಮಾಡಿದೆ. ಆದರೆ ಇದೇ ರೀತಿ ಮುಂದುವರೆದರೆ ಮಾನವೀಯತೆ ಎಲ್ಲರ ಮನಸ್ಸಿನಿಂದ ಮರೆಯಾಗಬಹುದು.
ಮೊದಲು ನಾನೂ ಕ್ಷೇಮ, ನೀನೂ ಕ್ಷೇಮ, ನಾನೂ ಕ್ಷೇಮವಾಗಿದ್ದೇನೆ ನನ್ನಂತೆ ನೀನೂ ಕ್ಷೇಮವಾಗಿರು, ನೀನು ಬದುಕು ಮತ್ತೊಬ್ಬರನ್ನು ಬದುಕಿಸು, ಅಂದರೆ ನಮ್ಮ ರಾಷ್ಟ್ರಕವಿ ಕುವೆಂಪುರವರ ಸಂದೇಶದಂತೆ ಮೊದಲು ಮಾನವನಾಗು ಎಂದರೆ ಮಾನವೀಯತೆಯನ್ನು ಮೈಗೂಡಿಸಿಕೋ ಎಂಬರ್ಥದಲ್ಲಿ ಸಂದೇಶವನ್ನು ನೀಡಿರುವ ಆ ಮಹಾನುಭಾವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಜವಾಗಿಯೂ ಜೀವನ ಸಾರ್ಥಕವಾಗುತ್ತದೆ. ಆದರೆ ಇತ್ತೀಚಿನ ವಿದ್ಯಮಾನಗಳಲ್ಲಿ ಎಲ್ಲವೂ ತಳಕೆಳಕಾಗಿದೆ ಎಂದು ಎನಿಸುತ್ತದೆ.
ಮಾನವೀಯತೆ ಮರೆಯಾಗಲು ಇನ್ನೊಂದು ಕಾರಣ ಮದ್ಯಪಾನ ಸೇವನೆ. ಮನುಷ್ಯ ಒಳ್ಳೆಯವನೇ ಆಗಿರುತ್ತಾನೆ, ಆದರೆ ಆ ಮದ್ಯಪಾನ ಹೊಟ್ಟೆಗೆ ಸೇರಿದಾಗ ಮಾತ್ರ ಕೆಲವರು ತಾವು ತಾವಾಗಿಯೇ ಇರುವುದಿಲ್ಲ. ಮದ್ಯಪಾನ ಮಾಡಿದಾಗ ತಾವು ಏನು ಮಾಡುತ್ತಿದ್ದೇವೆಂಬ ಜ್ಞಾನವಿಲ್ಲದೆ, ಮನೆಯವರನು ಹಿಂಸಿಸುವುದು, ಮದ್ಯಪಾನ ಮಾಡಲು ಕಾಸು ನೀಡಲಿಲ್ಲ ಎಂದು ಹೆಂಡತಿಯನ್ನು ಹೊಡೆಯುವುದು, ತಂದೆ ತಾಯಿಯರ ಮೇಲೆ ಅಮಾನುಷವಾಗಿ ಹಲ್ಲೆ ಮಾಡುವುದು, ಗಂಡನು ಕೂಲಿ ಮಾಡಿ ತಾನು ಕುಡಿಯಲಿಕ್ಕೆ ಎಷ್ಟು ಬೇಕೋ ಅಷ್ಟು ಹಣವನ್ನು ಇಟ್ಟುಕೊಂಡು ಉಳಿದಿದ್ದನ್ನು ಹೆಂಡತಿಯ ಕೈಗೆ ನೀಡಿ, ಇಷ್ಟೇ ಹಣ ಇರುವುದು ಏನಾದರೂ ಮಾಡಿಕೋ ಎಂದು ಹಣ ನೀಡಿದಾಗ, ಬುದ್ದಿವಂತಳಾದ ಹೆಂಡತಿ ಅದರಲ್ಲಿಯೇ ಸಂಸಾರವನ್ನು ತೂಗಿಸಿಕೊಂಡು ಅಲ್ಪ ಸ್ವಲ್ಪ ಹಣವನ್ನು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಅಥವಾ ಖಾಯಿಲೆ ಬಂದರೆ ಔಷದಿಕೊಡಿಸುವುದಕ್ಕಾಗಲೀ ಕೂಡಿಟ್ಟುಕೊಂಡಿದ್ದರೆ ಅದನ್ನು ಗಂಡನು ನೋಡಿ, ತನಗೆ ಕುಡಿಯಲಿಕ್ಕೆ ಕಾಸು ಇಲ್ಲದಾಗ ಬಲವಂತವಾಗಿ ಹೆಂಡತಿಯಿಂದ ಅದನ್ನು ಕಿತ್ತುಕೊಂಡು ತಾನು ಕುಡಿದು ಬಂದು, ಮನೆಯಲ್ಲಿ ಬಂದು ಒಂದು ಮೂಲೆ ಕಡೆ ಬಿದ್ದುಕೊಂಡರೆ, ಹೆಂಡತಿಯಾದವಳಿಗೆ ಏನನ್ನಿಸಬೇಡ? ಗಂಡನ ಈ ವರ್ತನೆಯಿಂದ ಅದೆಷ್ಟೋ ಹೆಣ್ಣುಮಕ್ಕಳು ರೋಸಿಹೋಗಿದ್ದಾರೆ, ಜೀವನವೇ ಬೇಡ ಎಂಬ ನಿರ್ಧಾರಕ್ಕೆ ಬಂದು ತಮ್ಮ ಮಕ್ಕಳ ಜೊತೆಗೆ ತಾವೂ ಆತ್ಮಹತ್ಯೆ ಮಾಡಿಕೊಂಡಿರುವವರಿದ್ದಾರೆ. ಇದರಿಂದ ಇವನೂ ಮನನೊಂದು ಕುಡಿಯುವದನ್ನು ಜಾಸ್ತಿ ಮಾಡಿಕೊಂಡು ತನ್ನ ಜೀವನವನ್ನೂ ಬಲಿ ನೀಡುತ್ತಾನೆ, ಕೆಲವರ ಮನೆಯಲ್ಲಿ ತಂದೆಯು ಕುಡಿಯುತ್ತಿದ್ದರೆ ಮಕ್ಕಳು ಅಪ್ಪನನ್ನೇ ಅನುಸರಿಸುವವರು ಇದ್ದಾರೆ, ಇದರಿಂದ ಕುಡಿತ ಎನ್ನುವುದು ವಂಶಪಾರಂಪರಿಕವಾಗಿ ಬರುವಂತ ಚಟವಾಗಿಬಿಡುವ ಅಪಾಯ ಇರುತ್ತದೆ. ತಂದೆಯು ಮಕ್ಕಳಿಗೆ ಒಳ್ಳೆಯದನ್ನು ಹೇಳಿಕೊಟ್ಟರೆ ಮಕ್ಕಳು ಅದನ್ನೇ ಮುಂದುವರೆಸುತ್ತಾರೆ, ಅದರೆ ತಂದೆಯೇ ಕೆಟ್ಟದ್ದನ್ನು ಮಾಡುತ್ತಿದ್ದರೆ ಮಕ್ಕಳು ಅದನ್ನೇ ಕಲಿತು, ಸಮಾಜದಲ್ಲಿ ಕೆಟ್ಟವರೆನಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಇವರು ದೊಡ್ಡವರಾದ ಮೇಲೆ ಮಾನವೀಯತೆ ಏನೆಂಬುದೇ ತಿಳಿದಿರುವುದಿಲ್ಲದಂತೆ ಆಗುತ್ತದೆ. ಇದರಿಂದ ಅನಾಹುತಗಳು ಏನು ಬೇಕಾದರೂ ಆಗಬಹುದು. ತಾನು ಕುಡಿದು ಸರಿಯಾದ ಜ್ಞಾನವಿಲ್ಲದಿದ್ದಾಗ, ಬೇರೊಬ್ಬ ಕಷ್ಟದಲ್ಲಿ ಇರುವುದು ಇವನಿಗೆ ಹೇಗೆ ತಾನೆ ತಿಳಿಯಲು ಸಾಧ್ಯ? ಇವನು ಹೇಗೆ ತಾನೆ ಅವರ ಕಷ್ಟಗಳನ್ನು ನಿವಾರಿಸುತ್ತಾನೆ? ಮಾನವೀಯತೆಯು ಅಲ್ಲಿಯೂ ಮರೆಯಾಗುವ ಸನ್ನಿವೇಶಗಳು ಉಂಟಾಗಬಹುದು. ಇವನು ಒಳ್ಳೆಯವನೇ ಆಗಿದ್ದರೂ ಸಹ ಕುಡಿದ ಮತ್ತಿನಲ್ಲಿ ಏನೂ ತಿಳಿಯದೆ ಮತ್ತು ಇಳಿದ ನಂತರ ಇನ್ನೊಬ್ಬರ ಕಷ್ಟ ಅರಿವಾದರೆ ಏನು ಪ್ರಯೋಜನ? ಎಲ್ಲಾ ಮುಗಿದುಹೋದ ಮೇಲೆ ಎಚ್ಚರವಾದರೆ ಉಪಯೋಗವೇ ಇಲ್ಲ, ಊರು ಹೋದ ಮೇಲೆ ಕೋಟೆ ಬಾಗಿಲು ಹಾಕಿದರು ಎಂದು ಅಗುತ್ತದೆ. ನಂತರ ಪಶ್ಚಾತ್ತಾಪ ಪಟ್ಟರೆ ಯಾವುದೇ ಉಪಯೋಗವಿಲ್ಲ.
ರೈತರ ವಿಚಾರಕ್ಕೆ ಬಂದರೆ, ನಮಗೆ ರೈತರೇ ಅನ್ನದಾತರು, ಅವರು ಎಲ್ಲರಿಗೂ ಆಹಾರವಾಗಲೀ ಎಂದು ಬೆಳೆಯನ್ನು ಬೆಳೆಯಲು ಬ್ಯಾಂಕಿನಿಂದ ಸಾಲವನ್ನು ಮಾಡಿರುತ್ತಾರೆ, ಮಳೆ ಬರದೆ ಬೆಳೆ ನಾಶವಾಗುವುದು, ಬಾವಿ ತೋಡಿಸಲು ನೀರೇ ಬಾರದೆ ಇರುವುದು ಇದರಿಂದ ಅವರ ಜೀವನವೇ ಉಡುಗಿ ಹೋಗುತ್ತದೆ. ಇದರಿಂದ ಬಹಳ ಬೇಸರಗೊಂಡು ತಾವು ಮಾಡಿರುವ ಸಾಲವನ್ನು ತೀರಿಸಲಾಗದೆ ಪಾಪ ಅವರೇ ಆತ್ಮಹತ್ಯೆಗೆ ಶರಣಾಗಿರುವ ಅನೇಕ ಪ್ರಸಂಗಗಳು ಇವೆ. ಇದಕ್ಕೆ ಯಾರನ್ನೂ ದೂಷಿಸುವಂತಿಲ್ಲ, ಏಕೆಂದರೆ, ಸಾಲವನ್ನು ಕೇಳಿದಾಗ ಸಾಲವನ್ನು ಕೊಡುವುದು ತಪ್ಪಲ್ಲ, ಬೆಳೆ ಬೆಳೆಯಲು ಹೋದಾಗ ಮಳೆ ಕೈಕೊಟ್ಟು ಬೆಳೆ ನಾಶವಾದರೆ ಅದು ರೈತನ ತಪ್ಪಲ್ಲ, ಬಾವಿತೋಡಿದಾಗ ನೀರೇ ಬರದೇ ಇದ್ದರೆ ಅದೂ ಸಹ ರೈತನ ತಪ್ಪಲ್ಲ. ಹೀಗಿರುವಾಗ ಮಾನವೀಯತೆ ದೃಷ್ಠಿಯಿಂದ ಸಾಲ ತೀರಿಸಲು ಆಗದೆ ಇರುವ ರೈತರ ಸಾಲವನ್ನು ಮನ್ನಾ ಮಾಡಿದರೆ ಅದೆಷ್ಟೋ ರೈತರ ಜೀವಗಳು ಉಳಿಯುತ್ತದೆ.
ನಮ್ಮ ದೇಶವನ್ನು ಕಾಯುತ್ತಿರುವ ನಮ್ಮ ದೇಶದ ಸೈನಿಕರುಗಳು, ಇವರುಗಳು ಹಗಲು ರಾತ್ರಿ, ಮಳೆ ಛಳಿ ಬಿಸಿಲು ಎನ್ನದೆ ಸದಾ ಕಾಲವು ಗಡಿಯನ್ನು ಕಾಯುತ್ತಲೇ ಇರಬೇಕು, ಸ್ವಲ್ಪ ಯಾಮಾರಿದರೂ ಉಗ್ರರು ಬಂದು ಎರಗುವುದನ್ನು ನಾವುಗಳು ನೋಡುತ್ತಲೇ ಇದ್ದೇವೆ. ಮಾನವೀಯತೆ ಇಲ್ಲದೆ ದೇಶವು ನಮ್ಮ ಸೈನಿಕರನ್ನು ಹುತಾತ್ಮರಾಗುವಂತೆ ಮಾಡುತ್ತಿದೆ. ಆ ದೇಶಕ್ಕೆ ಮಾನವೀಯತೆಯೇ ಗೊತ್ತಿಲ್ಲ ಎನಿಸುತ್ತದೆ. ಇಂಥವರನ್ನು ಬಗ್ಗು ಬಡಿದು ನಮ್ಮ ದೇಶದ ಸೈನಿಕರ ಪ್ರಾಣ ರಕ್ಷಣೆಯನ್ನು ಮಾಡಬೇಕಿದೆ.
ಈಗಿನ ಸನ್ನಿವೇಶದಲ್ಲಿ ಹಣದ ಮುಂದೆ ಮಾನವೀಯತೆಯ ಮೌಲ್ಯಕ್ಕೆ ಬೆಲೆಯೇ ಇಲ್ಲದಂತೆ ಆಗಿದೆ. ಮಾನವೀಯತೆ ಇದ್ದಲ್ಲಿ ಹಣವೇನೂ ಬರುವುದಿಲ್ಲ, ಹಣ ಇದ್ದಲ್ಲಿ ಏನೂ ಬೇಕಾದರೂ ಮಾಡಬಹುದೆಂದು ತಿಳಿದು, ಹಣಕ್ಕೇ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಮಾನವೀಯತೆಯನ್ನು ಮರೆತೇ ಬಿಡುತ್ತಾರೆ.
ಸಾರ್ವಜನಿಕ ಜೀವನಕ್ಕೆ ಬಂದರೆ, ಈಗ ಮೊಬೈಲ್ ಕಾಲ, ಮೊಬೈಲ್ ಇಲ್ಲದ ಮನುಷ್ಯರೇ ಇಲ್ಲವೇನೋ ಎನಿಸುತ್ತದೆ. ಇದರ ಜೊತೆಗೆ ಫೇಸ್ ಬುಕ್, ವಾಟ್ಸಪ್ಗಳು ಯುವಕರುಗಳು, ಎಲ್ಲಾ ಕಾಲದಲ್ಲಿಯೂ ಇದರಲ್ಲಿಯೇ ಆಟವನ್ನು ಆಡುತ್ತಾ ಪ್ರಪಂಚದ ಆಗುಹೋಗುಗಳನ್ನೇ ಗಣನೆಗೆ ತೆಗೆದುಕೊಳ್ಳುವುದಿಲ್ಲ. ದೇಶದಲ್ಲಿ, ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು, ಇವರಿಗೆ ಮೊಬೈಲ್ ಇದ್ದರೆ ಅದೇ ಸರ್ವಸ್ವವಾಗಿ ಬಿಟ್ಟಿದೆ. ಮಾನವೀಯತೆಗೆ ಬೆಲೆಯೇ ಇಲ್ಲದಂತೆ ಆಗಿದೆ. ಇದಕ್ಕೆ ಉದಾಹರಣೆ, ಮೊನ್ನೆತಾನೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟಿ. ಬೇಗೂರು ಹತ್ತಿರ ನಡೆದ ಅಪಘಾತವೇ ಸಾಕ್ಷಿ, ಪಾಪ ಹರೀಶ್ ಎಂಬ ಯುವಕನು ಸಂಚರಿಸುತ್ತಿದ್ದ, ಮೋಟಾರ್ಬೈಕ್ಗೆ ಅಪಘಾತವಾಗಿ, ಅವನ ಶರೀರ ಎರಡು ತುಂಡಾಗಿ ಬಿದ್ದಿದ್ದು, ಸಹಾಯಕ್ಕಾಗಿ ಎಷ್ಟೇ ಅಂಗಲಾಚಿದರೂ ಯಾರೂ ಹೋಗದೆ ಸಾವನ್ನಪ್ಪಿದ ಘಟನೆ ನಿಜಕ್ಕೂ ಹೃದಯ ವಿದ್ರಾವಕವಾಗಿತ್ತು.
ಇದೇರೀತಿ ಹುಣಸೂರು ರಸ್ತೆಯಲ್ಲಿಯೂಸಹ ಎತ್ತಿನ ಗಾಡಿಗೆ ಅಪಘಾತವಾಗಿ ಅದರಲ್ಲಿದ್ದ ಜನ ಬೀದಿಯಲ್ಲಿ ಬಿದ್ದು, ಗೋಳಾಡುತ್ತಿದ್ದರೂ ಯಾರೂ ಸಹಾಯ ಮಾಡದೆ ಇದ್ದು, ಅವರು ಅಲ್ಲೇ ಅಸುನೀಗಿರುವುದು ಮಾನವೀಯತೆಯು ಮರೆಯಾಗುತ್ತಿರುವುದಕ್ಕೆ ಸಾಕ್ಷಿ.
ದಿನಾಂಕ 14-6-2017ರಂದು ಟಿ.ವಿ ಮಾದ್ಯಮಗಳಲ್ಲಿ ಬಿತ್ತರವಾದ ಉತ್ತರ ಪ್ರದೇಶದಲ್ಲಿ ನಡೆದ ಘಟನೆ ನಿಜವಾಗಿಯೂ ಮನಕಲಕುವಂತಹದು, ಪಾಪ ಬಡವ ತನ್ನಹತ್ತು ತಿಂಗಳ ಮಗುವನ್ನು ಬದುಕಿಸಿಕೊಳ್ಳಲಾರದೆ, ಆ ಮಗು ಮೃತಪಟ್ಟ ನಂತರ ಆಸ್ಪತ್ರೆಯ ಸಿಬ್ಬಂದಿ ಮಗುವನ್ನು ಸಾಗಿಸಲು ಆಂಬುಲೆನ್ಸ್ ನೀಡದ ಕಾರಣ, ಪಾಪ ಆ ತಂದೆಯು ತನ್ನ ಮಗುವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಒಂದೇಕೈಯಲ್ಲಿ ಸೈಕಲ್ಲನ್ನು ತುಳಿಯುತ್ತಾ, ಮಗುವಿನ ಪಾರ್ಥಿವ ಶರೀರವನ್ನು ಮನೆಗೆ ಸಾಗಿಸಿದ ಘಟನೆ ಎಂಥವರಿಗೂ ಮನ ಕಲುಕುವಂತೆ ಮಾಡುತ್ತದೆ.
ಕೋಲಾರದಲ್ಲಿ ಒಬ್ಬ ವೃದ್ದನು ಕಾಲುಜಾರಿ ನೀರಿಗೆ ಬಿದ್ದು, ಸಹಾಯಕ್ಕಾಗಿ ಗೋಗರೆದರೂ ಯಾರೂ ಸಹಾಯಕ್ಕೆ ಹೋಗದೆ ಅವರೂ ಸಹ ಮೃತಪಟ್ಟಿರುವ ಘಟನೆ ನಡೆದಿದೆ. ಹೀಗೆ ಒಂದಲ್ಲಾ ಅನೇಕ ರೀತಿಯಲ್ಲಿ ಅಪಘಾತವಾದಾಗ, ಅಪಘಾತದಲ್ಲಿ ಗಾಯಗೊಂಡವರು ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ಸಹಾಯ ಮಾಡದೆ ಅಲ್ಲೇ ಜೀವ ಬಿಟ್ಟ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಇದನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಾರೆಯೇ ವಿನಃ ಸಹಾಯ ಮಾಡಲು ಹೋಗುವುದಿಲ್ಲ. ನಮಗೇಕೆ? ಏನಾದರೂ ಆಗಲಿ ಎಂದು ತಮ್ಮ ಪಾಡಿಗೆ ನೋಡಿಕೊಂಡು ಹೋಗುತ್ತಾರೆ. ಇದನ್ನೇನಾ ಸಮಾಜ ಗುರುಹಿರಿಯರು, ತಂದೆ ತಾಯಿಗಳು ಅವರಿಗೆ ಕಲಿಸಿಕೊಟ್ಟಂತಹ ಮಾನವೀಯತೆಯ ಪಾಠ ಎನಿಸುತ್ತದೆ.
ಇನ್ನೂ ಹಲವಾರು ನಿದರ್ಶನಗಳು, ಬೇರೆಯದೇ ರೀತಿಯಲ್ಲಿದೆ, ಛತ್ತಿಸ್ಗಡ್, ಮದ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯಗಳಲ್ಲಿ ತಮ್ಮ ಸಂಬಂಧಿಕರುಗಳು ಸತ್ತರೆ ಆಂಬುಲೆನ್ಸ್ಗಳನ್ನು ಆಸ್ಪತ್ರೆಯವರು ನೀಡದೆ ತಮ್ಮ ಹೆಗಲಮೇಲೋ, ಸೈಕಲ್ ಮೇಲೆ ಸಾಗಿಸಿರುವ ಪ್ರಸಂಗಗಳು ನಡಯುತ್ತಲೇ ಇರುತ್ತವೆ. ಇದಕ್ಕೆ ಕೊನೆ ಯಾವಾಗ?
ಈಗಿನ ಕುಟುಂಬಗಳು ಕಿರಿದಾದಂತೆ, ಇತ್ತೀಚಿನ ಅವಿಷ್ಕಾರಗಳಿಂದ ಪ್ರಪಂಚವೇ ಕಿರಿದಾಗುತ್ತಾ ಬಂದಿರುವಂತೆ ಭಾಸವಾಗುತ್ತದೆ. ಅದರಂತೆ ಮನಸ್ಸುಗಳು ಸಹ ಕಿರಿದಾಗುತ್ತಾ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ.
ಈ ದೇಶದಲ್ಲಿ “ಯತ್ರ ನಾರ್ಯಂತು ಪೂಜ್ಯಂತೆ ರಮಂತೇ ತತ್ರ ದೇವತಾಃ” ಎಂದು ನಮ್ಮ ಹಿರಿಯರುಗಳು ಹೇಳಿದ್ದು ಅದೇರೀತಿ ಮಹಿಳೆಯರಿಗೆ ಗೌರವವನ್ನು ಕೊಡುತ್ತಾ ಬಂದಿರುವ ಸಮಾಜ ನಮ್ಮದು. ಈಗ ಮಹಿಳೆಯರ ಮೇಲೆ ದೌರ್ಜನ್ಯ ಅತ್ಯಾಚಾರದಂತ ಪ್ರಸಂಗಗಳು ನಡೆಯುತ್ತಾ ಇರುತ್ತದೆ. ಎಳೆಮಕ್ಕಳು, ವಯಸ್ಕರು, ವಯಸ್ಸಾದ ಹೆಂಗಸರು ಎಂಬ ಬೇದಭಾವವೇ ಇಲ್ಲವೆನ್ನುವಂತೆ, ದಿನ ನಿತ್ಯ ಅವರುಗಳ ಮೇಲೆ ಅತ್ಯಾಚಾರ ನಡೆಯುವುದು, ಟಿ.ವಿ ಮಾದ್ಯಮಗಳಿಂದ ತಿಳಿಯುತ್ತದೆ. ಇದನ್ನು ತಪ್ಪಿಸಲು ಅದೆಷ್ಟೋ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಇದನ್ನು ತಪ್ಪಿಸಲು ಸಾಧ್ಯವೇ ಆಗುತ್ತಿಲ್ಲವೇನೋ ಎನಿಸುತ್ತದೆ. ಇದಕ್ಕೆ ಮುಖ್ಯ ಕಾರಣ, ಮರೆಯಾಗುತ್ತಿರುವ ಮಾನವೀಯತೆ. ಇನ್ನೊಂದು ಕಾರಣ ಹಿಂದಿನ ಸಂಸಾರಗಳಲ್ಲಿ ಅಣ್ಣ ತಂಗಿ, ಅಕ್ಕ ತಮ್ಮ ಬಾಂದವ್ಯಗಳು ಇದ್ದು, ಅಣ್ಣ ತಂಗಿ ಪ್ರೀತಿ ಸಂಬಂಧಗಳನ್ನು ಎಲ್ಲರೂ ಅರ್ಥ ಮಾಡಿಕೊಂಡಿರುತ್ತಿದ್ದರು. ಆಗ ತನ್ನ ಅಕ್ಕ ತಂಗಿಗೆ ಏನಾದರೂ ನೋವಾದರೆ, ತನಗೂ ನೋವಾದಂತೆ ಭಾಸವಾಗುತ್ತಿದ್ದ ಕಾಲ ಇತ್ತು. ಈಗ ಕೆಲವು ಮನೆಯಲ್ಲಿ ಹುಟ್ಟುವುದು ಒಬ್ಬರೇ, ಇವರ ಹಿಂದೆ ಮುಂದೆ ಯಾರೂ ಅಕ್ಕ ತಂಗಿಯರು ಇರುವುದಿಲ್ಲ. ಹೀಗಿದ್ದಲ್ಲಿ, ಇವರಿಗೆ ಅಕ್ಕ ತಂಗಿ ಅಣ್ಣ ತಮ್ಮನ ಪವಿತ್ರವಾದ ಸಂಬಂಧಗಳು ಹೇಗೆ ಅರ್ಥವಾಗುತ್ತದೆ. ಅಕ್ಕ ತಂಗಿ ಇದ್ದವರಿಗೆ ಬೇರೆಯವರ ಹೆಣ್ಣುಮಕ್ಕಳನ್ನು ನೋಡಿದರೆ ತಮ್ಮ ಅಕ್ಕ ತಂಗಿಯರು ಇದ್ದಂತೆ ಎಂದುಕೊಳ್ಳುತ್ತಾರೆ. ಅಕ್ಕ ತಂಗಿಯರೇ ಇಲ್ಲದ ಮೇಲೆ ಇವರಿಗೆ ಬೇರೆಯವರನ್ನು ಕಂಡರೆ ಅಕ್ಕ ತಂಗಿ ಎನ್ನಿಸುವುದೇ ಇಲ್ಲವೆಂದು ತೋರುತ್ತದೆ. ತನಗೆ ಗಾಯ ಆದರೆ ಅದರ ನೋವು ತಿಳಿಯುತ್ತದೆ. ಬೇರೆಯವರಿಗೆ ಗಾಯವಾದರೆ ಅದರ ನೋವು ತಿಳಿಯುವುದಿಲ್ಲ ಎನ್ನುವ ರೀತಿಯಲ್ಲಿ ಇರುತ್ತದೆ.
ಮಹಿಳೆಯರು ಗಂಡಸರಂತೆ ಬದುಕಬೇಕು, ಅವರು ಗಂಡಸರಿಗ ಸರಿ ಸಮಾನರು, ಅವರಿಗೂ ತಂದೆ ತಾಯಿ, ಗಂಡ ಮಕ್ಕಳು ಇದ್ದು, ಅವರಿಗೂ ಜೀವನವಿದೆ ಎಂದು ತಿಳಿಯುವುದೇ ಇಲ್ಲ. ಹೆಣ್ಣು ಎಂದರೆ ಕೆಲವರು ಭೋಗದ ವಸ್ತು ಎಂದು ತಿಳಿದು, ಕ್ಷಣಿಕ ಸುಖಕ್ಕಾಗಿ ತಮ್ಮ ಮನುಷ್ಯತ್ವವನ್ನೇ ಮರೆತು ಮೃಗಗಳಂತೆ, ರಾಕ್ಷಸರಂತೆ ಅವರ ಮೇಲೆ ಎರಗಿ, ತಮ್ಮ ಆಸೆಯನ್ನು ತೀರಿಸಿಕೊಳ್ಳುವವರು ಇದ್ದಾರೆ. ಇವರಿಗೆ ಅಕ್ಕನೋ ತಂಗಿಯೋ ಇದ್ದಿದ್ದರೆ, ಎಲ್ಲರನ್ನು ಇವರು ಕೆಟ್ಟ ದೃಷ್ಠಿಯಿಂದ ನೋಡುವುದು ಸ್ವಲ್ಪವಾದರೂ ಕಡಿಮೆಯಾಗುತ್ತಿತ್ತು. ಇಂತಹ ಲೈಂಗಿಕ ದೌರ್ಜನ್ಯ ಎಸಗುವ ಇವರಿಗೆ ಮಾನವೀಯತೆ ಯಾದರೂ ಎಲ್ಲಿಂದ ಬರಬೇಕು?
ಮಹಾತ್ಮ ಗಾಂಧೀಜಿಯವರು ಅಹಿಂಸೆ ಮಾರ್ಗವನ್ನು ಅನುಸರಿಸಿ, ದೇಶಕ್ಕೆ ಸ್ವಾತಂತ್ರ್ಯ ಬರಲು ಕಾರಣರಾದರು. ಅಹಿಂಸೆಯಿಂದ ಪಡೆದ ಸ್ವಾತಂತ್ರ್ಯ ದೇಶದಲ್ಲಿ ಈಗ ಹಿಂಸೆಯೇ ರಾರಾಜಿಸುತ್ತಿದೆ. ಅಹಿಂಸಾ ಪರಮೋಧರ್ಮಃ ಎಂದು ಸಾರಿದ ಭಗವಾನ್ ಬುದ್ದರವರ ಸಂದೇಶ ಇಂದಿಗೂ ಪ್ರಸ್ತುತ ಅದರೆ ಇದನ್ನು ಅನುಸರಿಸುವವರು ಬಹಳ ಕಡಿಮೆ ಜನಗಳು ಎಂದು ಹೇಳಬಹುದು. ಇದೇ ರೀತಿ ಸಣ್ಣ ಪುಟ್ಟ ವಿಷಯಗಳಿಗೂ ಕೆಲವೊಮ್ಮೆ ಮಾನವೀಯತೆಯನ್ನು ಮರೆಯುತ್ತಾರೆ. ಅದು ಜಾಣಮರೆವೋ ಅಥವಾ ಉದ್ದೇಶ ಪೂರ್ವಕವಾಗಿ ಮಾಡುತ್ತಾರೋ ಅಥವಾ ಗೊತ್ತಿಲ್ಲದೆಯೇ ಮಾಡುತ್ತಾರೋ? ಯಾವುದೂ ಗೊತ್ತಾಗುವುದಿಲ್ಲ. ಉದಾಹರಣೆಗೆ ನಾವು ಎಷ್ಟೋ ಸಲ ಪ್ರಯಾಣಿಸುವಾಗ ನೋಡಿದ್ದೇವೆ. ಬಸ್ಸಿನಲ್ಲಿ ಯುವಕರು ಸೀಟಿನಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದು, ಅಕಸ್ಮಾತ್ ಯಾರಾದರೂ ವಯಸ್ಸಾದವರು ಬಂದರೆ ಸೀಟು ಬಿಡಬೇಕೆನ್ನುವ ಮಾನವೀಯತೆ ಕೆಲವರಲ್ಲಿ ಇರುವುದಿಲ್ಲ. ಅದಕ್ಕಾಗಿಯೇ ಎಲ್ಲಾ ಬಸ್ಸುಗಳಲ್ಲಿ ಹಿರಿಯ ನಾಗರೀಕರಿಗೆ ಎಂದು ನಾಮಫಲಕಗಳನ್ನು ಹಾಕಿದ್ದರೂ ಅದರಲ್ಲಿಯೇ ಕುಳಿತುಕೊಂಡು ಪ್ರಯಾಣ ಮಾಡುತ್ತಿದ್ದು, ಹಿರಿಯರು ಬಂದಾಗ ಅವರಿಗೆ ಮೀಸಲಿರಿಸಿದ ಜಾಗವನ್ನು ಬಿಡಬೇಕೆನ್ನುವ ಮಾನವೀಯತೆ ಇರುವುದೇ ಇಲ್ಲ. ಇದು ಸಣ್ಣ ವಿಷಯವಾದರೂ ಮಾನವೀಯತೆ ವಿಷಯ ಬಂದಾಗ, ಅವರಲ್ಲಿ ಮಾನವೀಯತೆಯ ಕೊರತೆ ಕಾಣುತ್ತದೆ.
ಅದೇರೀತಿ ಕಂಕುಳಲ್ಲಿ ಮಕ್ಕಳನ್ನು ಎತ್ತಿಕೊಂಡು ಬರುವ ಮಹಿಳೆಯರಿಗೂ ಸಹ ಮಹಿಳೆಯರೇ ಸೀಟು ಬಿಟ್ಟು ಕೊಡುವುದಿಲ್ಲ. ಮಕ್ಕಳು ಅಳುತ್ತಿದ್ದರೂ ಅದನ್ನು ನೋಡಿಕೊಂಡು ತಮ್ಮ ಪಾಡಿಗೆ ತಾವು ಕುಳಿತು ಪ್ರಯಾಣ ಮಾಡುತ್ತಿರುತ್ತಾರೆ. ಇದು ಒಬ್ಬರು ಹೇಳಿಕೊಡುವಂತಹ ಗುಣಗಳಲ್ಲ, ತಾನಾಗಿಯೇ ಬರಬೇಕು ಇದು ಚಿಕ್ಕಂದಿನಲ್ಲಿ ಕಲಿತಿದ್ದರೆ ಬರಬಹುದು ಇಲ್ಲದಿದ್ದಲ್ಲಿ ಎಲ್ಲಿಂದ ಬರುತ್ತದೆ.
ಭಾರತ ದೇಶದಲ್ಲಿ ಕ್ರಿಕೆಟ್ ಆಟವು ಎಲ್ಲರ ಮನಗೆದ್ದಿರುವ ಕ್ರೀಡೆ. ಹಿಂದಿನ ಕಾಲದಲ್ಲಿ ಟಿ.ವಿ ಇಲ್ಲದ ಕಾಲದಲ್ಲಿ, ರೇಡಿಯೋ ವಿವರಣೆಯನ್ನು ಎಷ್ಟು ಚೆನ್ನಾಗಿ ಹೇಳುತ್ತಿದ್ದರು, ಅದನ್ನು ಕೇಳುವುದೆಂದರೆ ಅದೆಷ್ಟೋ ಸಂತೋಷ ಸಿಗುತ್ತಿತತು. ಕಾಲ ಬದಲಾದ ಹಾಗೆ, ಹೊಸ ಹೊಸ ಅವಿಷ್ಕಾರಗಳಿಂದ ತನ್ನ ಕೈಯಲ್ಲಿಯೇ ಇರುವ ಮೊಬೈಲ್ಗಳಲ್ಲಿ ಕ್ರಿಕೆಟ್ ಆಟವನ್ನು ನೋಡಬಹುದು. ಬರೀ ಕ್ರಿಕೆಟ್ ನೋಡಿದರೆ ಏನು ತೊಂದರೆ ಇರುವುದಿಲ್ಲ. ಆದರೆ, ಈಗ ಇದರಲ್ಲಿ ಹಣವೇ ಮುಖ್ಯವಾಗುತ್ತದೆ ವಿನಃ ಮಾವವೀಯತೆಗೆ ಬೆಲೆಯೇ ಇಲ್ಲದಂತಾಗಿದೆ. ಕ್ರಿಕೆಟ್ ಬೆಟ್ಟಂಗ್ ಪೆಡಂಭೂತವಾಗಿ ಬಿಟ್ಟಿದೆ. ಇದರಿಂದ ಎಷ್ಟು ಸಂಸಾರಗಳು ಹಾಳಾಗುತ್ತವೆಯೋ ಗೊತ್ತೇ ಆಗುವುದಿಲ್ಲ. ಎಷ್ಟು ಸದಸ್ಯರುಗಳನ್ನು ಕಳೆದುಕೊಳ್ಳುತ್ತಾರೋ ದೇವರಿಗೇ ಗೊತ್ತು. ಇವರಿಗೆ ಹಣವೇ ಮುಖ್ಯ ಜೀವಕ್ಕೆ ಬೆಲೆಯೇ ಇರುವುದಿಲ್ಲ. ಬೆಟ್ಟಂಗ್ ಹಣ ನೀಡದಿದ್ದರೆ ಇವರ ಜೀವವನ್ನೇ ತೆಗೆಯುವ ಮಟ್ಟಕ್ಕೆ ಹೋಗುತ್ತಾರೆ. ದ್ವೇಷದಿಂದ ಮಾನವೀಯತೆಗೆ ಕೊಡಲಿಪೆಟ್ಟು ಬೀಳುತ್ತದೆ. ದ್ವೇಷವಿದ್ದಲ್ಲಿ ಮಾನವೀಯತೆಗೆ ಬೆಲೆಯೇ ಇರುವುದಿಲ್ಲ. ಅಲ್ಲಿ ದ್ವೇಷ ಮಾತ್ರ ಗೆಲ್ಲುತ್ತದೆ. ಯಾರಿಗಾದರೂ ಬೇರೊಬ್ಬರ ಮೇಲೆ ದ್ವೇಷಉಂಟಾದಲ್ಲಿ ಅವನನ್ನು ಮುಗಿಸುವ ತನಕ ಬಿಡುವುದೇ ಇಲ್ಲ. ನನ್ನಂತೆ ಅವನ ಜೀವ ಅಮೂಲ್ಯವಾದದ್ದು, ಒಂದು ಸಲ ಜೀವ ಹೋದರೆ, ಪುನಃ ಬರುವುದೇ ಇಲ್ಲ, ನನ್ನಂತೆ ಅವನೂ ಬದುಕಲಿ ಎಂಬ ಮನೋಭಾವನೆ ದ್ವೇಷ ಹೊಂದಿದವರ ಮನದಲ್ಲಿ ಇರುವುದೇ ಇಲ್ಲ. ಏನದರೂ ಮಾಡಿ ಅವನನ್ನು ಮುಗಿಸಲೇ ಬೇಕು, ಎಂದು ಅವನ ಸಾವಿಗಾಗಿ ಹಲವಾರು ಉಪಾಯಗಳನ್ನು ಮಾಡುತ್ತಲೇ ಇರುತ್ತಾರೆ. ಇದರಿಂದ ಸಫಲತೆಯನ್ನೂ ಹೊಂದುತ್ತಾರೆ. ಇಲ್ಲಿ ಕ್ರೌರ್ಯ ಗೆಲ್ಲುತ್ತದೆ. ಮಾನವೀಯತೆ ಸೋತು ಸಾಯುತ್ತದೆ.
ವಿದ್ಯಾವಂತರಾದ ತಕ್ಷಣ ಮಾನವೀಯತೆಯನ್ನು ಹೊಂದಿರುತ್ತಾರೆ ಎಂದು ತಿಳಿದರೆ ತಪ್ಪಾಗುತ್ತದೆ. ಆಸ್ಪತ್ರೆಗಳಲ್ಲಿ ನಡೆಯುವ ಕೆಲವು ಘಟನೆಗಳನ್ನು ನೋಡಿದರೆ ಹಾಗೆ ಅನ್ನಿಸುತ್ತದೆ. ಖಾಸಗಿ ಆಸ್ಪತ್ರೆಗಳು ಒಂದು ರೀತಿಯಾದರೆ ಸರ್ಕಾರಿ ಆಸ್ಪತ್ರೆಗಳು ಬೇರೊಂದು ರೀತಿಯಲ್ಲಿರುತ್ತವೆ. ಹಣವಿದ್ದವನಿಗೇ ಖಾಸಗಿ ಆಸ್ಪತ್ರೆ ಇಲ್ಲದಿದ್ದರೆ ಸರ್ಕಾರಿ ಆಸ್ಪತ್ರೆಯೇ ಗತಿ. ಅವನಿಗೆ ಎಂಥಹ ದೊಡ್ಡ ಖಾಯಿಲೆ ಬಂದಿದ್ದರೂ ಸಹ ಅವನು ತನ್ನ ಊರಿನ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು, ಅವರು ಕೊಟ್ಟ ಔಷದಿಗಳನ್ನೆ ತೆಗೆದುಕೊಳ್ಳಬೇಕು. ಅಕಸ್ಮಾತ್ ಬದುಕುಳಿದರೆ ಅವನ ಅದೃಷ್ಟ ಚೆನ್ನಾಗಿದೆ ಎಂದರ್ಥ. ಈ ಕಡೆ ಖಾಸಗಿ ಆಸ್ಪತ್ರೆಗಳು ಹಣ ದುಡಿಯುವ ಮಿಷನ್ಗಳಾಗಿವೆ. ಇವರಿಗೆ ಮಾನವೀಯತೆಗಿಂತ ಹಣವೇ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಉದಾಸೀನತೆಗೋ ಅಥವಾ ಬೇರೆಯ ಕಾರಣಕ್ಕೋ ಬಡ ರೋಗಿಗಳು ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಖಾಸಗಿ ಆಸ್ಪತ್ರೆಗಳನ್ನು ಮೀರಿಸುವಂತಹ ಸೌಕರ್ಯಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಿದರೆ, ಎಲ್ಲರೂ ಸರ್ಕಾರಿ ಆಸ್ಪತ್ರೆ ಎಂದು ಹೀಗಳೆಯುವುದೇ ಇಲ್ಲ. ಕೇವಲ ಬಡವರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ ಎಂಬಂತೆ ಆಗಿದೆ.
ಇದು ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಮೇಲ್ಕಂಡಂತೆ ಬಡವರಿಗೆ ಸರ್ಕಾರಿ ಶಾಲೆ ಕಾಲೇಜುಗಳು, ಹಣವಿದ್ದವರಿಗೆ ಖಾಸಗಿ ಶಾಲೆ ಕಾಲೇಜುಗಳು ಎಂಬಂತೆ ಆಗಿದೆ. ಖಾಸಗಿಯವರು ಕೇಳುವ ಡೊನೇಷನ್, ಫೀಸನ್ನು ಬಡವರು ಎಲ್ಲಿಂದ ತಂದು ಕಟ್ಟುತ್ತಾರೆ? ಇವರಿಗೆ ಸರ್ಕಾರದ ಶಾಲೆ ಕಾಲೇಜುಗಳೇ ಗತಿ. ಬಡವ ತಾನು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಿದರೂ ಅದೆಷ್ಟೋ ಮಕ್ಕಳು, ಖಾಸಗಿ ಶಾಲೆಗಿಂತ ಮೀರಿ, ಪರೀಕ್ಷೆಯಲ್ಲಿ ಅಂಕಗಳನ್ನು ಪಡೆಯುತ್ತಾರೆ. ಅದಕ್ಕೆ ಸರ್ಕಾರವು ಬಡವರಿಗೂ ಖಾಸಗಿ ಶಾಲೆಗಳಲ್ಲಿ ಪ್ರವೇಶ ಸಿಗಲಿ ಎಂಬ ಉದ್ದೇಶದಿಂದ ಆರ್.ಟಿ.ಇ ಎಂಬ ಕಾಯಿದೆಯನ್ನು ಜಾರಿಗೆ ತಂದಿದೆ ಇದರಿಂದ ಕೆಲವು ಬಡ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಗಳು ದೊರಕುವಂತೆ ಆಗಿದೆ. ಇದನ್ನು ಜಾರಿಗೆ ತಂದಿರುವ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲೇಬೇಕು.
ತಾನು ಮಾತ್ರ ಬದುಕಬೇಕು, ಬೇರೊಬ್ಬರು ಬದುಕಿದ್ದರೆ ಸಹಿಸದೆ ಇರುವವರೂ ಇದ್ದಾರೆ ಅವರಿಗೆ ಇಲ್ಲದೆ ಕಿರುಕುಳ ನೀಡಿ ಅವರ ನೆಮ್ಮದಿಯನ್ನೇ ಹಾಳು ಮಾಡುವವರೂ ಇರಬಹುದು.
ಹೇಗಾದರೂ ಮಾಡಿ ಹಣ ಸಂಪಾದನೆಯೊಂದೇ ನನ್ನ ಗುರಿ ಎಂಬ ಏಕೈಕ ಉದ್ದೇಶದಿಂದ ಮೋಸ, ವಂಚನೆ, ಮಾಡಿದರೂ ಪರವಾಗಿಲ್ಲ ತಾನು ಮಾತ್ರ ಧನಿಕನಾಗಬೇಕು ಎಂದು ಹಣ ಸಂಪಾದಿಸುವವರು ಕಡಿಮೆ ಏನಿಲ್ಲ. ಅನೇಕ ರೀತಿಯಾಗಿ ಮೋಸ ಮಾಡುವುದನ್ನು ಕಲಿತು, ಅದನ್ನು ಎಲ್ಲರ ಮೇಲೂ ಪ್ರಯೋಗಿಸುವವರೂ ಇದ್ದಾರೆ, ಇದರಿಂದ ಅಡಿಗಡಿಗೂ ಮೋಸಗಾರರಿಂದ ಹೋಗುವ ಜನಗಳೇ ಜಾಸ್ತಿ.
ಮುಗ್ದ ಜನಗಳಿಗೆ ಹೆಚ್ಚಿನ ಬಡ್ಡಿ ಆಮಿಷ ತೋರಿಸಿ, ಕೆಲವರು ತಮ್ಮಮಕ್ಕಳ ಭವಿಷ್ಯಕ್ಕಾಗಿ ಕೂಡಿಟ್ಟ ಹಣವನ್ನು ಪಡೆಯಲು ನಯವಾಗಿ ಮಾತನಾಡಿ, ಅವರನ್ನು ನಂಬಿಸಿ ಬಲವಂತವಾಗಿ ಹಣವನ್ನು ಕಿತ್ತುಕೊಂಡು ಅವರಿಗೆ ಹಣವನ್ನು ಕೊಡದೆ ವಂಚನೆ ಮಾಡಿ, ಪಂಗನಾಮ ಹಾಕುವವರಿಗೆ ಮಾನವೀಯತೆಯ ಪಾಠ ಹೇಳಿದರೆ ಅರ್ಥವಾಗುತ್ತದೆಯೇ?
ಕೆಲಸ ಕೊಡಿಸುತ್ತೇನೆಂದು ಹೇಳಿ ಅಮಾಯಕರಿಂದ ಹಣವನ್ನು ಪಡೆದು ಅವರಿಗೆ ಮೋಸ ಮಾಡುವವರು ಒಂದು ಕಡೆಯಾದರೆ, ಮುಗ್ದ ಹುಡುಗಿಯರು ಸಿಕ್ಕಿದ್ದಲ್ಲಿ ಕೆಲಸ ಕೊಡಿಸುತ್ತೇವೆಂದು ನಂಬಿಸಿ ಅವರನ್ನು ಎಲ್ಲಾ ರೀತಿಯಲ್ಲಿಯೂ ಬಳಸಿಕೊಂಡು, ಅವರಿಗೆ ಕೈಕೊಟ್ಟು ಹೋಗುವ ಮಂದಿ ಇನ್ನೊಂದು ಕಡೆ ಇದ್ದಾರೆ, ಇದೂ ಸಾಲದೆಂಬಂತೆ ಮಹಿಳೆಯರು ಒಡವೆಗಳನ್ನು ಹಾಕಿಕೊಂಡು ಹೋಗುವುದೇ ಒಂದು ದೊಡ್ಡ ತಪ್ಪು ಎನ್ನುವಂತೆ ಅವರ ಕುತ್ತಿಗೆಗೆ ಕೈಹಾಕಿ ಮಾಂಗಲ್ಯ ಸರಗಳನ್ನೇ ಎಗರಿಸುವ ಮಂದಿ ಮತ್ತೊಂದು ಕಡೆ, ಮಾಂಗಲ್ಯದ ಬೆಲೆ ಏನೆಂದು ಗೊತ್ತಿರದ ತಮ್ಮ ವೈಯುಕ್ತಿಕ ಜೀವನಕ್ಕಾಗಿ ಇಂಥ ಕೃತ್ಯಗಳನ್ನು ಎಸಗುವ ಮಂದಿಗೆ ಮಾನವೀಯತೆ ಎಂದರೆ ತಿಳಿದಿರುವುದೆ ಇಲ್ಲ. ತನ್ನ ಗಂಡ ವಿವಾಹದಲ್ಲಿ ಕಟ್ಟಿದ್ದ ಪವಿತ್ರವಾದ ಮಾಂಗಲ್ಯವನ್ನು ಯಾರೋ ಕಿಡಿಗೇಡಿಗಳು ಕಿತ್ತುಕೊಂಡು ಹೋದರೆ, ಆ ಮಹಿಳೆಯ ಮನಸ್ಥಿತಿ ಹೇಗಿರಬೇಡ? ಒಂದು ಸಲ ಮಾಂಗಲ್ಯವನ್ನು ಕಟ್ಟಿದರೆ ಅದಕ್ಕೆ ಇರುವ ಬೆಲೆ ಮದುವೆಯಾದ ಹೆಣ್ಣುಮಕ್ಕಳಿಗೆ ಗೊತ್ತು. ಮಾಂಗಲ್ಯದ ಪಾವಿತ್ರ್ಯತೆಯನ್ನೇ ಅರಿಯದ ಇವರು ಮಾನವೀಯತೆಯನ್ನು ಹೇಗೆ ಅರಿತಾರು? ಹಣಕಾಸು ಸಂಸ್ಥೆಗಳಿಗೆ ತಾನು ಸಿಕ್ಕಿಬೀಲುತ್ತೇನೆಂಬ ಅರಿವೇ ಇಲ್ಲದೆ ಮೋಸ ಮಾಡಲು ಹೋಗಿ, ಕಡೆಗೆ ಸಿಕ್ಕಿ ಹಾಕಿಕೊಳ್ಳುವವರಿಗೆ ಮನೆಯಲ್ಲಿ ಇವರನ್ನೇ ನಂಬಿರುವ ತಂದೆ ತಾಯಿ, ಹೆಂಡತಿ, ಮಕ್ಕಳ ಪಾಡೇನು ಎಂಬುದರ ಅರಿವೇ ಇಲ್ಲದೆ ಇಂಥಹ ಕುಕೃತ್ಯ ನಡೆಸುವ ಇವರು ಸಾಧಿಸುವುದಾದರೂ ಏನನ್ನು? ಇವರು ನಿಷ್ಠೆಯಿಂದ ಮಾನವೀಯತೆಯಿಂದ ದುಡಿದು ಬಂದಂತಹ ಹಣದಿಂದ ಕಷ್ಟವೋ ಸುಖವೋ. ಅಂಬಲಿಯೋ ಗಂಜಿಯೋ ಕುಡಿದು, ಮರ್ಯಾದೆಯಿಂದ ಜೀವನ ನಡೆಸುವ ಬದಲು, ದಿಡೀರ್ ಶ್ರೀಮಂತನಾಗಬೇಕೆಂಬ ಏಕೈಕ ಆಸೆಯಿಂದ ಅಥವಾ ಬೇರೊಬ್ಬರ ಒತ್ತಡದಿಂದ, ಈ ರೀತಿ ಕುಕೃತ್ಯಗಳನ್ನು ಎಸಗಿ ತನ್ನ ಕೆಲಸವೂ ಹೋಗಿ, ಮರ್ಯಾದೆಯೂ ಮಣ್ಣುಪಾಲಾಗಿ, ಅದೆಷ್ಟೋ ವರ್ಷಗಳಿಂದ ಅವರ ತಾತ, ಅಪ್ಪಂದಿರುಗಳು ಸಂಪಾದಿಸಿಕೊಂಡು ಬಂದಿದ್ದ ಗೌರವವನ್ನು ಸಹ ಬೀದಿ ಪಾಲು ಮಾಡುವ ಇವರಿಂದ ಮಾನವೀಯತೆಯು ಮರೆಯಾಗುತ್ತಿರುವುದಿಲ್ಲವೆ?
ಮಾನವೀಯತೆಯ ವಿರುದ್ದ ಪದ ಕ್ರೂರತೆ, ಮಾನವೀಯತೆ ಎಷ್ಟು ಒಳ್ಳೆಯದೋ ಕ್ರೂರತೆ ಅಷ್ಟೇ ಕೆಟ್ಟದ್ದೂ ಕೂಡ ಆದರೂ, ಕ್ರೂರತೆಗೇ ಮಣೆ ಹಾಕುವವರು ಇದ್ದಾರೆ. ಕ್ರೂರತೆಯು ತುಂಬಿರುವ ಮನಸ್ಸಿನಲ್ಲಿ ಮಾನವೀಯತೆಗೆ ಜಾಗ ಎಲ್ಲಿ ಇರುತ್ತದೆ. ಯಾರ ಮಾತಿಗೂ ಬೆಲೆ ಇಲ್ಲ, ಕ್ರೂರ ಜೀವಿಯೂ ಒಂದೇ ಕ್ರೂರಿಯಾದ ಮನುಷ್ಯನೂ ಒಂದೇ. ಕ್ರೂರ ಪ್ರಾಣಿಗಳು ಯಾವರೀತಿಯಾಗಿ ತನ್ನ ಆಹಾಋವನ್ನು ಸಂಪಾದನೆ ಮಾಡಲು ಬೇರೆ ಪ್ರಾಣಿಗಳ ಮೇಲೆ ಎರಗುತ್ತವೆಯೋ ಅದೇ ರೀತಿ, ಕ್ರೂರಿಯಾದವನು ತನ್ನ ಜೀವನ ನಡೆಸಲು ಬೇರೆ ಮನುಷ್ಯನ ಮೇಲೆ ಕ್ರೂರ ತನದಿಂದ ಎರಗುತ್ತಾನೆ. ಪ್ರಾಣಿಗಳಾದರೋ ಅದು ದೈವ ಸೃಷ್ಠಿ, ಅದರ ಸ್ವಭಾವವೇ ಹಾಗೇ? ಚಿಕ್ಕ ಪ್ರಾಣಿಗಳನ್ನು ತಿಂದು ದೊಡ್ಡ ಪ್ರಾಣಿಗಳು ಬದುಕುವುದೇ ಪ್ರಕೃತಿ ನಿಯಮ. ಆದರೆ ಮನುಷ್ಯನಿಗೆ ಬುದ್ದಿ ಇದ್ದೂ ಕ್ರೂರ ಪ್ರಾಣಿಗಳಂತಾದರೆ, ಇದೇನು ಪೃಕೃತಿ ನಿಯಮೇವೇನು ಅಲ್ಲವಲ್ಲ. ಮನುಷ್ಯ ಮನಸ್ಸು ಮಾಡಿದರೆ ಹೇಗೆ ಬೇಕಾದರೂ ಇನ್ನೊಬ್ಬರಿಗೆ ತೊಂದರೆ ಕೊಡದೆ ಒಳ್ಳೆಯ ರೀತಿಯಲ್ಲಿ ಜೀವಿಸಬಹುದು. ಕ್ರೂರತೆಯಿಂದ ಸಂಪಾದಿಸಿದ್ದು ಅವನ ಕಣ್ಣು ಮುಂದೆಯೇ ನಾಶವಾಗುತ್ತದೆ. ಅದೇರೀತಿ ಮನುಷ್ಯನೂ ನಾಶವಾಗುತ್ತಾನೆ. ಆದರೆ ಪ್ರೀತಿಯಿಂದ ಸಂಪಾದನೆ ಮಾಡಿರುವ ಸಂಪತ್ತು ಯಾವತ್ತೂ ನಾಶವಾಗುವುದಿಲ್ಲ.
ಕ್ರೂರತೆ ಎಷ್ಟು ಭಯಂಕರ? ಎಷ್ಟು ಅಮಾನವೀಯತೆ ಎಂದರೆ, ಕೆಲವೊಮ್ಮೆ ಮಕ್ಕಳನ್ನು ಶಿಕ್ಷಿಸುವ ರೀತಿ, ಅತ್ತೆ ಸೊಸೆಯನ್ನು ಶಿಕ್ಷಿಸುವ ರೀತಿ, ಗಂಡ ಹೆಂಡತಿಯನ್ನು ಶಿಕ್ಷಿಸುವು ರೀತಿ, ಒಬ್ಬರು ಬೇರೊಬ್ಬರನ್ನು ಶಿಕ್ಷಿಸುವ ರೀತಿ, ಹೀಗೆ ಅನೇಕ ರೀತಿಯ ಹಿಂಸೆಗಳನ್ನು ಬಣ್ಣಿಸಲು ಅಸಾಧ್ಯವಾಗಿದೆ. ಇವರಲ್ಲಿ ಮಾನವೀಯತೆಯು ಇದೆಯೇ? ಎಂಬುದು ಪ್ರಶ್ನಾರ್ಥಕವಾಗಿದೆ. ನಮಗೆ ಟಿ.ವಿ ಮಾದ್ಯಮಗಳಿಂದ ಎಲ್ಲರ ಅರಿವಿಗೆ ಬರುತ್ತಿವೆ. ಇಲ್ಲದಿದ್ದಲ್ಲಿ ಯಾರಿಗೂ ತಿಳಿಯುತ್ತಲೇ ಇರಲಿಲ್ಲವೇನೋ? ಒಬ್ಬರನ್ನು ನಡು ರಸ್ತೆಯಲ್ಲಿಯೇ ಕೊಂದು ಹಾಕುವುದು, ನೆರೆ ರಾಷ್ಟ್ರದವರು ನಮ್ಮ ಸೈನಿಕರನ್ನು ಮೋಸದಿಂದ ಕೊಂದು ಅವರ ಅಂಗಾಂಗವನ್ನು ಕತ್ತರಿಸಿ ಅತಿ ಕ್ರೂರರೀತಿಯಲ್ಲಿ ವರ್ತಿಸುವುದನ್ನು ನೋಡಿದರೆ ಆ ರಾಷ್ಟ್ರಗಳಲ್ಲಿ ಮಾನವೀಯತೆ ಎಂಬುದರೆ ಅರ್ಥವೇ ಗೊತ್ತಿಲ್ಲ ಎನಿಸುತ್ತದೆ. ಇಂಥಹ ಅನಾಗರೀಕ ಅಮಾನವೀಯ ದೇಶಗಳು ಇದ್ದಲ್ಲಿ ಮಾನವೀಯತೆಗೆ ಬೆಲೆ ಎಲ್ಲಿ ಇರುತ್ತದೆ.
ಸಿನಿಮಾ ಮತ್ತು ದೂರರ್ಶನಗಳು ಪ್ರಭಲವಾದ ಮಾದ್ಯಮ, ಇವುಗಳು ಹಳ್ಳಿಯಿಂದ ದಿಲ್ಲಿವರೆವಿಗೆ ಕ್ಷಣ ಮಾತ್ರದಲ್ಲಿ ವಿಷಯಗಳನ್ನು ಪ್ರಸಾರ ಮಾಡುತ್ತವೆ. ಇವುಗಳಿಂದ ಯುವ ಸಮೂಹ ಬಲುಬೇಗ ಆಕರ್ಷಿತರಾಗಿಬಿಡುತ್ತಾರೆ. ಮಾನವೀಯತೆಯು ಮರೆಯಾಗಿ ಕ್ರೂರತೆಯು ಮನುಷ್ಯರಲ್ಲಿ ಮನೆ ಮಾಡಲು ಒಂದು ರೀತಿಯಲ್ಲಿ ಸಿನಿಮಾ ಕಾರಣ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಕೆಲವು ಸಿನಿಮಾಗಳಲ್ಲಿ, ಹಿಂಸೆ ಕ್ರೌರ್ಯವನ್ನೇ ವೈಭವೀಕರಿಸಿ ತೋರಿಸಿದಾಗ ಅದನ್ನು ನೋಡುವವರ ಮನಸ್ಸಿನಲ್ಲಿ ಕ್ರೂರತೆ ಮತ್ತು ದ್ವೇಷಗಳೇ ತುಂಬುವಂತೆ ಆಗುತ್ತದೆ. ಸಿನಿಮಾಗಳಲ್ಲಿ ವೈಭವೀಕರಿಸುವ ಕ್ರೂರತೆಯು ಬಹಳ ಬೇಗ ಜನಗಳಲ್ಲಿ ಪ್ರಭಾವ ಬೀರುತ್ತವೆ. ಇತ್ತೀಚಿನ ಸಿನಿಮಾಗಳಲ್ಲಿ ಕ್ರೂರತೆ, ದ್ವೇಷಗಳೇ ಮೂಲ ಕಥೆಯನ್ನಾಗಿರುತ್ತವೆ. ಇದರಿಂದ ಮನುಷ್ಯನಲ್ಲಿ ಮಾನವೀಯತೆಯು ಮರೆಯಾಗಿ ಕ್ರೂರತೆಯೇ ಮನದಲ್ಲಿ ಮೂಡುತ್ತದೆ. ಸಿನಿಮಾ ನೋಡಿ ಅಲ್ಲಿಗೆ ಬಿಡುವ ಬದಲು ಕೆಲವರು ಅದನ್ನೇ ಅನುಕರಿಸುತ್ತಾರೆ. ಇವುಗಳ ಮುಂದೆ ಸಜ್ಜನಿಕೆ, ಅಹಿಂಸೆ, ಮಾನವೀಯತೆಗಳು ಪೇಲವವಾಗುತ್ತವೆ. ಈ ಗುಣಗಳಿಗೆ ಬೆಲೆಯೇ ಇಲ್ಲದಂತೆ ಆಗಿಹೋಗುತ್ತದೆ.
ಇನ್ನು ದೂರದರ್ಶನಗಳ ಅನೇಕ ಚಾನಲ್ಗಳಲ್ಲಿ ತೋರಿಸುವ ಧಾರಾವಾಹಿಗಳು ಇದಕ್ಕಿಂತ ಭಿನ್ನವಾಗಿಲ್ಲ. ಗಂಡ ಹೆಂಡತಿ, ತಂದೆ ತಾಯಿ ಬಂದು ಬಳಗಗಳಲ್ಲಿ ವಿಷಬೀಜ ಬಿತ್ತುವಂತೆ ಮಾಡುವ ರೀತಿ ಇರುತ್ತದೆ. ಮನುಷ್ಯ ಎಷ್ಟೇ ಒಳ್ಳೆಯವರಾಗಿದ್ದರೂ ಇವುಗಳನ್ನು ನೋಡಿ, ಕೆಟ್ಟವರಾಗಬಹುದು.
ಇಂಥಹ ಕ್ರೌರ್ಯ, ಹಿಂಸೆ ಮತ್ತು ದ್ವೇಷದ ಕಥಾವಸ್ತುಗಳನ್ನು ಹೊಂದಿರುವ ಈ ರೀತಿಯ ಸಿನಿಮಾ ಧಾರಾವಾಹಿಗಳನ್ನು ನೋಡಿ ನಿಜ ಜೀವನದಲ್ಲಿ ಅದನ್ನೇ ಪ್ರಯೋಗ ಮಾಡಲು ಹೋಗುವವರು ಕಡೆಗೆ ಸೋತು ಪಶ್ಚಾತ್ತಾಪ ಪಡುತ್ತಾರೆ. ಅವರಿಗೆ ಬುದ್ದಿ ಬರುವ ವೇಳೆಗೆ ಕಾಲ ಮಿಂಚಿಹೋಗಿ ಆಗ ಬಾರದ್ದು ಆಗಿ ಹೋಗಿರುತ್ತದೆ. ಸಿನಿಮಾ ದೂರದರ್ಶನಗಳ ಕಥೆಗಳಲ್ಲಿ ನಡೆಯುವುದೇ ಬೇರೆ ನಿಜ ಜೀವನವೇ ಬೇರೆ ಎಂದು ಅರಿತುಕೊಳ್ಳುವುದೇ ಇಲ್ಲ. ಅದರಂತೆ ಎಲ್ಲರನ್ನು ಹಿಂಸಿಸಿ, ತಾನೂ ಬದುಕಲಾರದೆ ಇನ್ನೊಬ್ಬರನ್ನೂ ಬದುಕಿಸಲಾರದ ಸ್ಥಿತಿಗೆ ಬಂದು ತಲುಪುತ್ತದೆ.
ಮನುಷ್ಯರ ಮೇಲೆಯೇ ಮಾನವೀಯತೆ ತೋರುವಂತಹ ಮನಗಳು ಕಡಿಮೆಯಾಗುತ್ತಿರುವ ಸನ್ನಿವೇಶಗಳಲ್ಲಿ, ಇನ್ನೂ ಪ್ರಾಣಿಗಳ ಮೇಲೆ ಇನ್ನು ಯಾವ ರೀತಿ ಕರುಣೆ ಅನುಕಂಪ ಇರುತ್ತದೆ. ಉದಾಹರಣೆಗೆ, ಮೊದಲು ಹಳ್ಳಿಗಳಲ್ಲಿ ನಾಟಿ ಕೋಳಿಗಳನ್ನು ಮಾತ್ರ ಸಾಕುತ್ತಿದ್ದರು. ಆ ಕೋಳಿಗಳಿಗೆ ಬಂಧನ ಎನ್ನುವುದೇ ಇರಲಿಲ್ಲ. ತಮ್ಮ ಪಾಡಿಗೆ ತಾನು ಎಲ್ಲೆಂದರಲ್ಲಿ ಕೋ. ಕೋ ಕೋ ಎಂದು ಆಹಾರಗಳನ್ನು ಹುಡುಕುತ್ತಾ, ಸ್ವತಂತ್ರವಾಗಿ ತಿರುಗಾಡುತ್ತಾ ಇರುತ್ತಿದ್ದವು. ಆ ಕೋಲಿಗಳೇ ಬೆಳಿಗ್ಗೆ ಆಗಿದೆ ಏಳಿ ಎಂದು ಎಲ್ಲರನ್ನೂ ಎಬ್ಬಿಸುವಂತಹ ಕಾಲ ಒಂದಿತ್ತು. ಆದರೆ ಈಗಿನ ಚಿತ್ರಣವೇ ಬೇರೆಯಾಗಿದೆ. ನಾಟಿ ಕೋಳಿಗಳ ಬದಲು ಫಾರಂ ಕೋಳಿಗಳು ಬಂದು ಮಾರ್ಕೆಟ್ಗಳಲ್ಲಿ ತಮ್ಮ ಸ್ಥಾನಗಳನ್ನು ಪಡೆದಿವೆ. ಅದು ಯಾವರೀತಿ ಎಂದರೆ, ಹಸಿ ತರಕಾರಿಗಳನ್ನಾದರೂ ಎಲ್ಲಿ ಬಾಡಿ ಹೋಗುತ್ತದೋ ಎಂದು ಹುಷಾರಾಗಿ ಮೂಟೆಳಲ್ಲಿ ತುಂಬಿ ಅದನ್ನು ಲಾರಿಗಳಲ್ಲಿ ಹಾಕಿ ಅದನ್ನು ಮಾರ್ಕೆಟ್ಗೆ ತಂದು ಇಳಿಸುವಾಗಲೂ ಸ್ವಲ್ಪ ಹುಷಾರಿನಿಂದಲೇ ಇಳಿಸುತ್ತಾರೆ. ಆದರೆ ಪಾಪ ಈ ಫಾರಂ ಕೋಳಿಗಳ ಪಾಡು ಹಸಿ ತರಕಾರಿಗಳಿಗಿಂತಲೂ ಕಡೆಯಾಗಿದೆ. ಅವುಗಳನ್ನು ವ್ಯಾನ್ಗಳಿಗೆ ತುಂಬುವ ರೀತಿ, ಅವುಗಳನ್ನು ಒಂದು ಕಬ್ಬಿಣದ ಬಾಕ್ಸ್ ನೊಳಗೆ ತುಂಬಿ ಅದು ಹಿಂಸೆಯನ್ನು ತಾಳಲಾರದೆ ಕಿರಿಚುತ್ತಾ ಇದ್ದರೂ ಅದನ್ನು ಲೆಕ್ಕಿಸದೆ ಅವುಗಳಿಗೆ ಜೀವವೇ ಇಲ್ಲವೇನೋ ಎಂಬಂತೆ ಅವುಗಳನ್ನು ಸಾಗಿಸುವುದನ್ನು ನೋಡಿದರೆ ಮಾನವೀಯತೆಯು ಎಲ್ಲಿ ಮರೆಯಾಗುತ್ತಿದೆ ಎನಿಸುತ್ತದೆ.
ಮನುಷ್ಯನಿಗೆ ಆಸೆ ಇರುವುದು ಸಹಜ ಆದರೆ ದುರಾಸೆ ಒಳ್ಳೆಯದಲ್ಲ ಹಾಗೆಯೇ ತನ್ನ ಪಾಲಿಗೆ ಏನೇಬಂದರೂ ಅದನ್ನೇ ಪ್ರಿತಿಯಿಂದ ಸ್ವೀಕರಿಸುವಂತಹ ಮನೋಭಾವನೆ ಇದ್ದರೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದಂತೆ ಆಗುತ್ತದೆ. ಮೊದಲಿನ ದಿನಗಳಲ್ಲಿ, ಎಷ್ಟೇ ಜನ ಮಕ್ಕಳಿದ್ದರೂ ಎಲ್ಲರೂ ಸಮನಾಗಿ ಆಸ್ತಿಗಳನ್ನು ವಿಭಾಗ ಮಾಡಿಕೊಂಡು ಅನ್ಯೋನ್ಯವಾಗಿ ಸಂತೋಷವಾಗಿ ಇರುತ್ತಿದ್ದರು, ಅದರಲ್ಲೂ ದೊಡ್ಡ ಮಗನಿಗೆ ಜ್ಯೇಷ್ಟಭಾಗ ಎಂದು ಸ್ವಲ್ಪ ಜಾಸ್ತಿಯೇ ಆಸ್ತಿಯನ್ನು ಬಿಟ್ಟುಕೊಡುತ್ತಿದ್ದರು. ಈಗ ಕೇವಲ ಹಣ ಆಸ್ತಿಗಾಗಿ ಮಾನವೀಯತೆಯನ್ನೇ ಮರೆತು ಅಮಾನವೀಯವಾಗಿ ವರ್ತಿಸುವವರು ಇದ್ದಾರೆ. ಒಂದು ಕುಟುಂಬದಲ್ಲಿ ಇಬ್ಬರು ಮೂರು ಜನ ಅಣ್ಣತಮ್ಮಂದಿರುಗಳು ಇದ್ದರೆ, ಆಸ್ತಿಗಳಲ್ಲಿ ಭಾಗ ಮಾಡಿಕೊಡಬೇಕೆಂಬ ಕೆಟ್ಟ ಮನೋಭಾವನೆಯಿಂದ ಕೇವಲ ಆಸ್ತಿಗಾಗಿ, ತಮ್ಮ ಸ್ವಂತ ಸಂಬಂಧಿಕರನ್ನೇ, ಅದರಲ್ಲೂ ತನ್ನ ಸ್ವಂತ ತಂದೆ, ತಾಯಿ, ಅಣ್ಣ, ತಮ್ಮ, ತಂಗಿ ಅಕ್ಕ ಎಂದು ನೋಡದೆ ಆಸ್ತಿ ನನಗೆ ಬಂದರೆ ಸಾಕು ಎಂದು ಅವರನ್ನೇ ಕೊನೆಗಾಣಿಸಿ, ಅವರ ಆಸ್ತಿಗಳನ್ನು ಪಡೆಯುವ ಹುನ್ನಾರ ನಡೆದೇ ಇದೆ. ಇದೆಲ್ಲಾ ಬಹುಷಃ ಸಿನಿಮಾ ಟಿವಿಗಳ ಪ್ರಭಾವವೇ ಇರಬೇಕು. ಟಿ.ವಿ ಸಿನಿಮಾಗಳನ್ನು ನೋಡಿ ಅದರಲ್ಲಿರುವ ಕೆಟ್ಟ ಅಂಶಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು, ಅದರಂತೆ ನಿಜ ಜೀವನದಲ್ಲಿಯೂ ಮಾಡಲು ಹೋಗುವ ಮಂದಿ ಇದ್ದಾರೆ. ಸಿನಿಮಾ ಟಿವಿಗಳಲ್ಲಿ ತೋರಿಸುವ ಒಳ್ಳೆಯ ವಿದ್ಯಮಾನಗಳನ್ನು ಬಿಟ್ಟು ಕೆಟ್ಟ ವಿದ್ಯಮಾನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಮಾನವೀಯವಾರಾಗುತ್ತಾರೆ.
ಇನ್ನು ಮನುಷ್ಯನ ಸ್ವಾರ್ಥಕ್ಕೆ ಬಂದರೆ, ಅದನ್ನು ಎಷ್ಟು ಬೇಕಾದರೂ ಹೇಳಬಹುದು ಅದಕ್ಕೆ ಕೊನೆ ಮೊದಲಿಲ್ಲ. ನಿಶ್ವಾರ್ಥತೆ ಇಂದ ಮಾಡುವ ಕೆಲಸಗಳು ಯಾವುದೂ ಇಲ್ಲವೇನೋ ಎನಿಸುತ್ತದೆ. ಎಲ್ಲದರಲ್ಲಿಯೂ ಸ್ವಾರ್ಥವೇ ತುಂಬಿ ಹೋಗಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಾಡಿನಲ್ಲಿ ಇರುವ ಲಕ್ಷಾಂತರ ಮರಗಳನ್ನು ಅಮಾನವೀಯತೆಯಿಂದ ಕಡಿದು ಹಾಕಿದ್ದು, ಇದರಿಂದ ಹಸಿರು ಕಾಡು ಹೋಗಿ ಕಾಂಕ್ರೀಟ್ ಕಾಡು ಆಗಿದೆ. ಈಗ ಕಾಡಿನಲ್ಲಿ ಇರುವ ಪ್ರಾಣಿಗಳಿಗೆ ಆಹಾರವೇ ಇಲ್ಲದಂತಾಗಿ ಆಹಾರವನ್ನು ಹುಡುಕಿಕೊಂಡು ಊರಿನೊಳಗೆ ಬರುವುದು ಸಾಮಾನ್ಯವಾಗಿಬಿಟ್ಟಿದೆ. ಹಳ್ಳಿಗಳಲ್ಲಿ ಜನಗಳು ಸಾಕಿರುವ ದನಕರುಗಳು, ಕುರಿ ಮೇಕೆಗಳನ್ನು ಕೊಂದು ಹಾಕಿ ತಮ್ಮ ಆಹಾರಗಳನ್ನು ಅವುಗಳು ಸಂಪಾದಿಸಿಕೊಳ್ಳುವ ಕಾಲ ಬಂದಿದೆ. ಇದಕ್ಕೆಲ್ಲಾ ಕಾರಣ ಮಾನವನ ಸ್ವಾರ್ಥ ಮನೋಭಾವ ಹಾಗೂ ಅಮಾನವೀಯ ನಡೆವಳಿಕೆ ಎನ್ನಬಹುದು.
ಇನ್ನು ಮನುಷ್ಯನ ಆಹಾರದ ವಿಚಾರಕ್ಕೆ ಬಂದರೆ, ಹಿಂದಿನ ಕಾಲದಲ್ಲಿ ಹಣಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದರೋ ಅನ್ನಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡುತ್ತಿದ್ದರು. ಅನ್ನವೇ ಪರಬ್ರಹ್ಮ ಸ್ವರೂಪ, ಅನ್ನವೇ ತಾಯಿ ಅನ್ನಪೂರ್ಣೇಶ್ವ್ವರಿ ಅನ್ನವನ್ನು ಎಸೆದರೆ ತಾಯಿ ಅನ್ನಪೂರ್ಣೇಶ್ವರಿಗೆ ಕೋಪ ಬರುತ್ತದೆ ಇನ್ನು ಮುಂದೆ ಅನ್ನ ಸಿವುದಿಲ್ಲ ಎಂದು ಹೇಳಿ ಮಕ್ಕಳಿಗೆ ಅನ್ನವನ್ನು ಎಸೆಯಬಾರದೆಂದು ಎಷ್ಟು ಬೇಕೋ ಅಷ್ಟನ್ನು ಹಾಕಿಸಿಕೋ ಜಾಸ್ತಿ ಹಾಕಿಸಿಕೊಂಡು ಎಸೆಯಬೇಡ ಎಂದು ತಾಕೀತು ಮಾಡುತ್ತಿದ್ದರು. ಆದರೆ ಈಗ
ಮನೆಗಳಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಇದರ ಅರಿವೇ ಇರುವುದಿಲ್ಲ. ರೈತರು ಹೊಲಗದ್ದೆಗಳಲ್ಲಿ ದುಡಿದು ಬೆಳೆಯನ್ನು ಬೆಳೆದು ಅದನ್ನು ಪಟ್ಟಣದ ಮಂದಿಗೆ ತಂದು ಹಾಕುತ್ತಾರೆ. ರೈತರು ಎಷ್ಟು ಕಷ್ಟಪಟ್ಟು ದುಡಿಯುತ್ತಾರೆ. ಪ್ರತಿಯೊಂದು ಅನ್ನದ ಅಗುಳಿನಲ್ಲಿಯೂ ಬೆಲೆ ಕಟ್ಟದಾಗದಂತಹ ರೈತರ ಕಷ್ಟ ಅದರಲ್ಲಿ ಅಡಗಿರುತ್ತದೆ ಎಂಬ ಗಮನವೇ ಇರುವುದಿಲ್ಲ. ಮದುವೆಯಂಥ ಬೇರೆ ಬೇರೆ ಅನೇಕ ಸಾರ್ವಜನಿಕ ಸಮಾರಂಭಗಳಲ್ಲಿ, ಊಟ ಮಾಡುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಅನ್ನಕ್ಕೆ ಬೆಲೆಯೇ ಇಲ್ಲದಂತೆ ಆಗಿದೆ. ಎಲೆಯ ಮೇಲೆ ಹಾಕಿಸಿಕೊಳ್ಳುವುದು ಅದರಲ್ಲಿ ಎರಡು ಮೂರು ತುತ್ತು ತಿಂದು ಎಲ್ಲವನ್ನೂ ಎಸೆಯುವುದು. ಒಂದು ತುತ್ತು ಅನ್ನಕ್ಕೂ ಪರಿತಪಿಸುವ ಮಂದಿಗೆ ಅನ್ನವನ್ನು ನೀಡಿ ಹಸಿವನ್ನು ಹೋಗಲಾಡಿಸುವ ಬದಲು ಕೊಟ್ಟ ಅನ್ನವನ್ನು ಯಾರಿಗೂ ಉಪಯೋಗ ವಿಲ್ಲದಂತೆ ಎಸೆಯುವುದು ಮಾನವೀಯತೆಯೂ ಅಲ್ಲ, ಮನುಷ್ಯನ ಗುಣವೂ ಅಲ್ಲವೆಂದೇ ಹೇಳಬಹುದು. ಆದರೆ ಅನ್ನದ ಮಹತ್ವ ತಿಳಿದಿರುವ ಮಂದಿಯು ಸರಿಯಾಗಿ ಊಟವನ್ನು ಮಾಡುತ್ತಿದ್ದರೆ ಅದನ್ನು ನೋಡೊ ಅಪಹಾಸ್ಯಮಾಡುವವರು ಕಡಿಮೆ ಏನಿಲ್ಲ. ತಮಗೆ ಎಷ್ಟು ಬೇಕೋ ಅಷ್ಟನ್ನು ಹಾಕಿಸಿಕೊಂಡು ತಿಂದು ಉಳಿದಿದ್ದನ್ನು ಹಸಿದವರಿಗೆ ನೀಡಿದರೆ, ಅವರ ಹಸಿವೂ ನೀಗುತ್ತದೆ. ಆದರೆ ಅಮಾನವೀಯತೆಯಿಂದ ತಿನ್ನುವ ಆಹಾರವನ್ನು ಎಸೆಯುವ ಮಂದಿ ಇರುವಾಗ ಮಾನವೀಯತೆಯು ಮರೆಯಾಗುತ್ತಿದೆ ಎನ್ನಿಸುವುದಿಲ್ಲವೇ?
ಪ್ರಪಂಚವು ಬೆಳೆದಂತೆ, ಅನೇಕ ಅವಿಷ್ಕಾರಗಳಾಗಿ, ಅಂಗೈಯಲ್ಲೇ ಪ್ರಪಂಚದ ಆಗು ಹೋಗುಗಳನ್ನು ತಿಳಿಯುವಷ್ಟರ ಮಟ್ಟಿಗೆ ವಿಜ್ಞಾನ ಬೆಳೆದು ನಿಂತಿದೆ. ಅದನ್ನು ಸದುಪಯೋಗಿಸಿಕೊಳ್ಳಬೇಕೇ ವಿನಃ ಅದನ್ನು ದುರ್ಬಳಕೆ ಮಾಡಿಕೊಂಡರೆ ಯಾರಿಗೂ ಲಾಭವಿಲ್ಲ. ಮೊಬೈಲ್, ಫೇಸ್ ಬುಕ್, ವಾಟ್ಸಪ್, ಟ್ವಿಟ್ಟರ್ ಹೀಗೆ ಅನೇಕ ರೀತಿಯ ಸಂದೇಶ ರವಾನಿಸುವ ಅಸ್ತ್ರಗಳು ಜನರ ಕೈಯಲ್ಲೇ ಬಂದು ಬಿಟ್ಟಿದೆ. ಕ್ಷಣ ಮಾತ್ರದಲ್ಲಿ ತಾವು ಅನಿಸಿಕೊಂಡಿದ್ದನ್ನು ಬೇರೆಯವರಿಗೆ ಕಳುಹಸಬಹುದು, ಬೇರೆಯವರಿಂದ ಪಡೆಯಲು ಬಹುದು. ಇದರಿಂದ ಅದೆಷ್ಟೋ ಮಂದಿ ಮೊಬೈಲ್ ಫೋನುಗಳನ್ನು ಬಿಟ್ಟಿರುವುದೇ ಇಲ್ಲ ಯಾವಾಗಲು ಅದರಲ್ಲೇ ಮುಳುಗಿ ಬಹುಪಾಲು ಜೀವನವನ್ನು ಕಳೆಯುತ್ತಾರೆ. ಯಾವಾಗಲೂ ಇದರಲ್ಲಿಯೇ ಮುಳುಗಿರುವವರಿಗೆ ಮಾನವೀಯತೆಯ ಬಗ್ಗೆ ಏನಾದರೂ ಹೇಳಲು ಹೋದರೆ ಇವರ ಕೇಳುವಷ್ಟು ವ್ಯವಧಾನವೇ ಇರುವುದಿಲ್ಲ. ನಿನ್ನ ಉಪದೇಶ ನೀನೆ ಇಟ್ಟಿಕೋ ನನಗೇನು ಅದರಿಂದ ಅವಶ್ಯಕತೆ ಇಲ್ಲ. ಎಂದು ಹೇಳಿ ಹೊರಟು ಹೋಗುತ್ತಾರೆ.
ಮಾನವೀಯತೆಗೆ ವಿದ್ಯಾವಂತ-ಅವಿದ್ಯಾವಂತ, ಬಡವ-ಬಲ್ಲಿದ ಜಾತಿ-ಧರ್ಮ ಯಾವುದೂ ಅಡ್ಡಿಬರುವುದಿಲ್ಲ. ಯಾವ ಜಾತಿಯವರೇ ಆಗಲೀ, ಧರ್ಮದವರೇ ಆಗಲಿ, ಮಾನವೀಯತೆ ಮೆರೆದವರೇ ಶ್ರೇಷ್ಠರಾಗುತ್ತಾರೆ. ಮಾನವೀಯತೆ ಇಲ್ಲದ ವಿದ್ಯಾವಂತ ನಾಗಲೀ ಹಣವಂತನಾಗಲೀ, ಯಾವ ಜಾತಿಯವರಾಗಲೀ ಯಾರೂ ಶ್ರೇಷ್ಠರಲ್ಲ.
ಹಸಿದವರಿಗೆ ಅನ್ನ ನೀಡುವುದು, ಬಾಯಾರಿದವರಿಗೆ ಕುಡಿಯಲು ನೀರು ಕೊಡುವುದು, ನೆರಳು ಅರಸಿ ಬಂದವರಿಗೆ ಆಶ್ರಯ ನೀಡುವುದು ಇವೆಲ್ಲವೂ ಮಾನವೀಯತೆಯ ಲಕ್ಷಣಗಳು. ಮಾನವೀಯತೆ ಇರುವುದರಿಂದಲೇ ಮಾನವ ಅಥವಾ ಮನುಷ್ಯ ಎಂದೆನಿಸುಕೊಳ್ಳುತ್ತಾನೆ. ಮನುಷ್ಯತ್ವ ಎಂದರೆ ಮಾನವೀಯತೆ ಅದೇ ಇಲ್ಲದಿದ್ದರೆ ಮನುಷ್ಯನಾಗಲು ಹೇಗೆ ತಾನೆ ಸಾಧ್ಯ? ಪ್ರಾಣಿಗಳು ಬದುಕುತ್ತವೆ ಅಂತೆಯೇ ಮನುಷ್ಯನು ಬದುಕುತ್ತಾನೆ. ಪ್ರಾಣಿಗೂ ಮನುಷ್ಯನಿಗೂ ಏನೂ ವ್ಯತ್ಯಾಸವೇ ಇರುವುದಿಲ್ಲ. ನಮ್ಮ ನಡೆವಳಿಕೆಗಳಿಂದ ಇನ್ನೊಬ್ಬರನ್ನು ನೋಯಿಸದೆ ನಮ್ಮಂತೆಯೇ ಅವರ ಬದುಕು ಎಂದು ತಿಳಿದು ಜೀವಿಸುವ ಮಂದಿಗೆ ಮಾನವೀಯತೆ ಎಂದರೆ ಏನು ಎಂದು ಅರ್ಥವಾಗುತ್ತದೆ. ಇದಕ್ಕೆ ವಿರುದ್ದವಾದ ನಡೆವಳಿಕೆ ಇರುವವರಿಗೆ ಮಾನವೀಯತೆಯ ಮೌಲ್ಯ ತಿಳಿದಿರುವ ಬಗೆ ಹೇಗೆ? ಇದನ್ನು ತಿಳಿಯಲು ಅವರು ಇಚ್ಛಿಸುವುದಿಲ್ಲ.
ಒಟ್ಟಿನಲ್ಲಿ ನಾವು ನೋಡುತ್ತಿರುವ ಈಗಿನ ಸನ್ನಿವೇಶಗಳಲ್ಲಿ ದಿನನಿತ್ಯ ನಡೆಯುವ ವಿದ್ಯಮಾನಗಳಿಂದ “ಮರೆಯಾಗುತ್ತಿದೆಯಾ ಮಾನವೀಯತೆ” ಎಂಬುದಾಗಿ ಎಲ್ಲರಿಗೂ ಅನಿಸದೇ ಇರದು. ಮರೆಯಾಗುತ್ತಿರುವ ಮಾನವತೆಯನ್ನು ಪುನಃಶ್ಚೇತನಗೊಳಿಸಬೇಕು. ಇದನ್ನು ಮಾಡುವವರು ಯಾರು? ಇದು ಅಷ್ಟು ಸುಲಭದ ಮಾತಲ್ಲ. ಅಡಿಗಡಿಗೂ ಮಾನವೀಯತೆ ಮರೆಯಾಗುತ್ತಿರುವ ಈ ಸನ್ನಿವೇಶಗಳಲ್ಲಿ ಇದನ್ನು ಪುನಃಶ್ಚೇತನ ಗೊಳಿಸಿ ಪುನಃ ಬಸವಣ್ಣನವರು, ಭಗವಾನ್ ಬುದ್ದರಂಥವರು ಹುಟ್ಟಿಬಂದರೆ ಆಗಬಹುದೇನೋ? ಇದು ಹೀಗೇ ಮುಂದುವರೆದರೆ ಎಲ್ಲಿಗೆ ಹೋಗಿ ಮುಟ್ಟುತ್ತದೋ ಯಾರಿಗೂ ತಿಳಿಯುವುದಿಲ್ಲ.