(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)
ಶ್ರೀರಾಮನ ಆದರ್ಶಭೂತವಾದ ಅಂತರಸ್ಥಿತಿಯು ಈ ಮಾತುಗಳಿಂದ ವ್ಯಕ್ತವಾಗುತ್ತಿದೆ.
ಶ್ರೀರಾಮ – ‘ ಮಾತೇ, ಕೈಕೇಯಿ, ಪಿತ್ರಾಜ್ಞೆಯನ್ನು ಮೀರಿ ಇರಲು ವೈಭವದ ಹುಚ್ಚಿನವನಲ್ಲ. ಐಹಿಕ ಸುಖದ ಯಾವ ಭಾವನೆಯೂ ನನ್ನಲ್ಲಿಲ್ಲ. ಎಂದೆಂದಿಗೂ ಅಚ್ಚಳಿಯದೇ, ಒಂದೇ ಪ್ರಕಾರವಾಗಿರುವ ನಿರವಧಿ ಆತ್ಮಾನಂದದಿಂದ ತೃಪ್ತಿಗೊಂಡಿರುವೆನು. ………….
‘
‘ನ ಚಾಸ್ಯ ಮಹತೀಂ ಲಕ್ಷೀಂ ರಾಜ್ಯನಾಶೋಽಪಕರ್ಷತಿ|
ಲೋಕಕಾಂತಸ್ಯ ಕಾಂತತ್ವಾಚ್ಛೀತರಶ್ಮೀರಿನ ಕ್ಷಪಾ||
ನ ವನಂ ಗಂತುಕಾಮಸ್ಯ ತ್ಯಜತಸ್ಯ ವಸುಂಧರಾಮ್|
ಸರ್ವಲೋಕಾತಿಗಸ್ಯೇವ ಲಕ್ಷತೇ ಚಿತ್ತ ವಿಕ್ರಯಾ||
ಈ ಶ್ಲೋಕಗಳೂ ಸಹ ಇಹಲೋಕದ ವಿಷಯದಲ್ಲಿ ಶ್ರೀರಾಮನ ವೈರಾಗ್ಯ ಮತ್ತು ನಿತ್ಯನಿರ್ವಿಕಾರವಾದ ಆತ್ಮಾನಂದವನ್ನು ಗುರುತಿಸಿ ತಿಳಿಸುವವು.
ಚಂದ್ರನ ಆ ನಿತಾಂತ ಶಾಂತವಾದ ಬೆಳದಿಂಗಳ ರಮಣೀಯ ಶೋಭೆಯನ್ನು ಕುಗ್ಗಿಸಲು ರಾತ್ರಿಗೆ ಶಕ್ಯವಾಗದಂತೆ, ಸಕಲ ಲೋಕಾಭಿರಾಮನಾದ ಶ್ರೀರಾಮಚಂದ್ರನ ಮುಖದ ಆ ಅನುಪಮೇಯ ದಿವ್ಯಕಾಂತಿಯನ್ನು, ಆತ್ಮಶಾಂತಿಯನ್ನು, ಆತ್ಮತೃಪ್ತಿಯನ್ನು ಕುಗ್ಗಿಸಲು ಆ ರಾಜ್ಯಭ್ರಂಶಕ್ಕೆ ಸ್ವಲ್ಪಮಾತ್ರಕ್ಕೂ ಶಕ್ಯವಾಗಲಿಲ್ಲ. …………………….
ಸಕ್ಕರೆಗೆ ಇರುವೆ ಮುತ್ತುವಂತೆ ಅವನು ಹೋದಲ್ಲಿಯೇ ಎಲ್ಲಾ ಜನರೂ ಮುತ್ತುತ್ತಿದ್ದರು. ಆ ತಮ್ಮ ಶುದ್ಧರೂಪದ ಅನಂತ ಆನಂದವನ್ನು ಅವರು ಅವನೆಲ್ಲಿದ್ದಾನೋ ಅಲ್ಲಿ ಹೊಂದುತ್ತಿದ್ದರು.
ತನ್ನ ನಿತ್ಯನಿರ್ವಿಕಲ್ಪವಾದ ಅನಂತ ಆನಂದದಿಂದ ಯಾವದೇ ಕುಂದುಕೊರತೆಯಿಲ್ಲದೇ ಬೆಳಗುತ್ತಿರುವ ಶ್ರೀರಾಮನಿಗೆ ಈ ರಾಜ್ಯಭ್ರಂಶದಿಂದ ಏನುತಾನೇ ಆಗತಕ್ಕುದ್ದಿದೆ? ಸಮುದ್ರಕ್ಕೆ ಯಾವುದೋ ಒಂದು ನೀರಿನ ಬಿಂದು ಸೇರದೇ ಹೋದಲ್ಲಿ ಸಮುದ್ರವು ಎಂತು ಸೊರಗದೋ ಅಂತೆಯೇ ಈ ರಾಜ್ಯಭ್ರಂಶದಿಂದ ಶ್ರೀರಾಮನ ಮುಖವು ಸ್ವಲ್ಪವೂ ಕಳೆಗುಂದಲಿಲ್ಲ.
ಇರುವೆಯ ಶ್ವಾಸಗಳು ಮೇರುಪರ್ವತವನ್ನು ಅಲುಗಾಡಿಸದಂತೆ, ಸುಖ-ದುಃಖಗಳ ಪರಿಸ್ಥಿತಿಯು ಯಾವಾತನ ಚಿತ್ತವನ್ನು ಚಂಚಲಪಡಿಸದೋ ಆತನ ಚಿತ್ತವು ಮೃತವಾದುದ್ದೆಂದು ತಿಳಿಯಬೇಕು.
ಸುಖ-ದುಃಖದ ಈ ಜೀವನ ಪ್ರಯಾಣದಲ್ಲಿ ಪ್ರತಿಯೊಬ್ಬರಿಗೂ ಇಂಥಹ ಆತ್ಮಸ್ಥಿತಿಯ ಆವಶ್ಯಕತೆ ಇದ್ದೇ ಇರುತ್ತದೆ. ಈ ಸ್ಥಿತಿಯಲ್ಲೇ ಇರುವ ಅಭ್ಯಾಸವನ್ನು ಮಾಡುವದೇ ವಿಶ್ವಧರ್ಮವಾಗಿದೆ. ಸನಾತನ ಧರ್ಮದ ಈ ಕೊಡುಗೆಯ ವೈಭವ ಅಪಾರವಾಗಿದೆ.