(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)
ಭರತನೆಂದರೆ ಭ್ರಾತೃಪ್ರೇಮದ ಆದರ್ಶಮೂರ್ತಿಯೇ ಸರಿ. ಆತನು ಸಸೈನ್ಯನಾಗಿ ಬರುವದನ್ನು ಕಂಡು ತಪ್ಪುಭಾವನೆಯಿಂದ ಲಕ್ಷ್ಮಣನು ಸಿಟ್ಟಿಗೆದ್ದನು. ಯುದ್ಧಸನ್ನಾಹ ಮಾಡುತ್ತಿದ್ದ ಲಕ್ಷ್ಮಣನನ್ನು ಕಂಡು ಶ್ರೀರಾಮನು ಹೇಳಿದ ಮಾತನ್ನು ನೋಡೋಣ.
ಕಿಮತ್ರ ಧನುಷಾಕಾರ್ಯಮಸಿನಾ ವಾ ಸಚರ್ಮಣಾ|
ಮಹೇಶ್ವಾಸೇ ಮಹಾಪ್ರಾಜ್ಞೇ ಭರತೇ ಸ್ವಯಮಾಗತೇ||
ನೇಯಂ ಮಮ ಮಹೀ ಸೌಮ್ಯ ದುರ್ಲಭಾ ಸಾಗರಾಂಬರಾ|
ನ ಹೀಚ್ಛೇಯಮಧರ್ಮೇಣ ಶಕ್ರತ್ವಮಪಿ ಲಕ್ಷ್ಮಣ||
‘ಭ್ರಾತೃಪ್ರೇಮದಿಂದ ತಾನಾಗಿ ಬರುತ್ತಿರುವ ಅತಿ ಪ್ರಾಜ್ಞನಾದ ಈ ಭರತನ ವಿಷಯದಲ್ಲಿ ಧನುರ್ಬಾಣಾದಿ ಆಯುಧಗಳ ಪ್ರಯೋಗವೇನಿದೆ ಲಕ್ಷ್ಮಣಾ? ಆ ಅಪವಾದಿಂದ ಕೂಡಿದ ರಾಜ್ಯವು ಯಾರಿಗೆ ಬೇಕು?
ನಾನು ಮನಸ್ಸುಮಾಡಿದರೆ ಇಡೀ ಪೃಥ್ವಿಯನ್ನೇ ಹಸ್ತಗತಮಾಡಿಕೊಳ್ಳುವದೂ ಒಂದು ಮಹಾ ದೊಡ್ಡ ಕೆಲಸವೇ? ಆದರೆ ಮಗೂ, ಅನ್ಯಾಯದಿಂದ ಇಂದ್ರನ ಪಟ್ಟವೂ ಸಹ ನನಗೆ ಬೇಡವೆನಿಸುವಾಗ ಈ ಒಂದು ಲೋಕದ ಸಾಮ್ರಾಜ್ಯದ ಮಾತೇನು?.
ಲಕ್ಷ್ಮಣಾ! ನನ್ನಂತೆ ಭರತನಿಗೂ ಸಾಮ್ರಾಜ್ಯದ ಸುಖಾಪೇಕ್ಷೆಯಿಲ್ಲ. ಭರತನ ಪರಿಚಯವು ನಿನಗಿಲ್ಲವೇನೋ? ಈವರೆಗೂ ಆತನು ಯಾವುದಾದರೂ ಒಂದು ಅಪ್ರಿಯವಾದುದನ್ನು ಮಾಡಿರುವದುಂಟೇ?’
ಛತ್ರ-ಚಾಮರಾದಿಗಳಿಂದ ರಹಿತನಾಗಿ ಬಂದ ಪ್ರೀತಿಯ ಭರತನನ್ನು ಕಂಡು ಅಕ್ಕರೆಯಿಂದ ಆತನ ಯೋಗಕ್ಷೇಮವನ್ನು ವಿಚಾರಿಸಿದನು. ರಾಜನ ಧರ್ಮ, ಅಮಾತ್ಯರ-ಅಧಿಕಾರಿಗಳ ನಿಯುಕ್ತಿ-ನಿಯೋಜನೆ, ಕಾರ್ಯಾಲೋಚನೆ, ಕಾರ್ಯ ಪದ್ಧತಿ ಇವುಗಳನ್ನು ಹಿತವಚನಗಳಿಂದ ತಿಳಿಸಿ, ಸಂತೈಸಿದನು. ಅಯೋಧ್ಯಾಕಾಂಡ ನೂರನೇ ಸರ್ಗವು ರಾಜ್ಯಸೂತ್ರವನ್ನು ಹೇಗೆ ನಡೆಯಿಸುವುದೆಂಬುದರ ಪಾಠವೇ ಆಗಿದೆ. ಶ್ರೀರಾಮನ ಮುಖದಿಂದ, ಈ ಸಂದರ್ಭದಲ್ಲಿ ಬಂದ ನುಡಿಗಳಿಂದ, ಸಮಾಜ ಮತ್ತು ಸುರಾಜ್ಯ ವ್ಯವಸ್ಥೆಯ ದರ್ಶನವು ಆಗಬಹುದಾಗಿದೆ.
ಆದಾಗ್ಯೂ, ‘ತಮೇವಂ ದುಃಖಿತಂ ಪ್ರೇಕ್ಷ್ಯ,’, ಭರತನು ಇನ್ನೂ ದುಃಖಿತನಾಗಿರುವದನ್ನು ಕಂಡ ಶ್ರೀರಾಮನು, ಭರತನ ದುಃಖವನ್ನು ಪರಿಹರಿಸಲು, ಸಂತೈಸಲು ಹೇಳಿದ ಮಾತುಗಳು,
ನಾತ್ಮನಃ ಕಾಮಕಾರೋಽಸ್ತಿ ಪುರುಷೋಽಯಮನೀಶ್ವರಃ|
ಇತಶ್ಚೇತರತಶ್ಚೈನಂ ನಂ ಕೃತಾಂತ ಪರಿಕರ್ಷತಿ||
ರಾಮನ ಈ ಮಾತುಗಳನ್ನು ಕೇಳಿ, ಆಲೋಚಿಸಿ, ಅಳವಡಿಸಿಕೊಂಡರೆ ನಮ್ಮ ದುಃಖವನ್ನೂ ಇವು ಪರಿಹರಿಸುವೆಂಬುದರಲ್ಲಿ ಸಂದೇಹವಿಲ್ಲ. ಇದನ್ನು ಮುಂದೆ ನೋಡೋಣ.