(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಒಬ್ಬನೇಹುಟ್ಟಿ ಒಬ್ಬನೇ ಸಾಯುವದೆಂದಾದಮೇಲೆ ಯಾರಿಂದ ಏನು ಆಗತಕ್ಕದ್ದಿದೆ? ತಾಯಿ, ತಂದೆ, ಬಂಧು-ಬಳಗ, ಗುರು, ದೇವರು ಎಂದು ದಾಕ್ಷಿಣ್ಯ ಇಟ್ಟುಕೊಂಡಾದರೂ ಏನು ಪ್ರಯೋಜನ? ಯಾರಿಗೆ ಯಾರು?
ರಾಜ್ಯಸುಖವನ್ನು ಬಿಟ್ಟು ಪಿತ್ರಾಜ್ಞೆ ಎಂದು ನಿನ್ನಂತೆ ಇಂಥ ವನವಾಸದ ಕಷ್ಟವನ್ನು ಅನುಭವಿಸುವವನು ಬರೇ ಹುಚ್ಚನೇ ಸರಿ. ತಂದೆ-ತಾಯಿಗಳ ವಚನವನ್ನು ಸತ್ಯ ಮಾಡಬೇಕು, ಆಜ್ಞೆಯನ್ನು ಪರಿಪಾಲಿಸಬೇಕು ಎಂಬ ಹುಚ್ಚು ತಲೆಯಲ್ಲಿಟ್ಟುಕೊಂಡು ಸುಮ್ಮನೇ ದುಃಖವನ್ನನುಭವಿಸುವದು ಒಂದು ಮರುಳಲ್ಲವೇ?

ಪ್ರವಾಸ ಮಾಡುವಾಗ ಎಲ್ಲೋ ಒಂದು ಕಡೆ ಧರ್ಮಶಾಲೆಯಲ್ಲಿ ಉಳಿದಾಗ ಅಲ್ಲಿ ಗಂಟುಬಿದ್ದ ಜನರಲ್ಲಿ ಒಂದು ರಾತ್ರಿ ಕಳೆದು ಬೆಳಗಾಗುವಾಗ ಅವರ ಸಂಬಂಧವನ್ನು ತೊರೆದು ಹೇಗೆ ಹೊರಟುಹೋಗುವನೋ ಅಂತೆಯೇ ಪ್ರಾಯ ಬಂದಮೇಲೆ ‘ಇದು ತಾಯಿ-ತಂದೆಗಳ ವಚನ, ಇದು ಅವರ ಆಜ್ಞೆ, ಇದು ಅವರ ಮನೆ, ಇದು ಅವರ ಸ್ವತ್ತು’ ಈ ಎಲ್ಲ ಭಾವನೆಗಳನ್ನು ಬಿಟ್ಟುಬಿಡಬೇಕು. ಮಗನಿಗೆ ಪ್ರಾಯ ಬಂದಮೇಲೆ ಆ ಎಲ್ಲ ಸ್ವತ್ತು ಮಗನಿಗೆ ಸಂಬಂಧಪಟ್ಟಿದ್ದು.
ಎಲ್ಲ ವೈಭವಗಳಿಂದ ಸಮೃದ್ಧವಾದ ಅಯೋಧ್ಯೆಯ ಪಟ್ಟವನ್ನು ಮಾಡಿಕೊಂಡು ಸ್ವರ್ಗದಲ್ಲಿರುವ ಇಂದ್ರನ ಪರಿ ಆನಂದದಿಂದಿರು. ನಿನಗೀಗ ದಶರಥನ ಯಾವ ಸಂಬಂಧವೂ ಇಲ್ಲ. ಅವನು ಬೇರೆ; ನೀನು ಬೇರೆ. ಅವನು ಮರಣಹೊಂದಿ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋದನು. ಮರಣದ ನಂತರ ಅವನೇ ಇಲ್ಲವೆಂದಾದ ಮೇಲೆ ಅವನ ಸಂಬಂಧವೆಲ್ಲುಳಿಯಿತು?

RELATED ARTICLES  ಮದುವೆ ಮನೆಯಲ್ಲಿ ವಧು ವರರು ಗನ್ ಹಿಡಿದರು : ಮುಂದೆ ನಡೆದಿದ್ದು ಅನಾಹುತ.

ಪಂಚಭೂತಗಳಿಂದ ಆದ ದೇಹ ಪಂಚಭೂತಗಳಲ್ಲಿ ಸೇರಿಹೋದ ಮೇಲೆ ಸತ್ತವನು ಉಳಿಯುವನೆಂಬ ಮಾತಿಗೆ ಅರ್ಥವಿದೆಯೇ? ಹೀಗೆ, ಆತನೇ ಇಲ್ಲದಿರುವಲ್ಲಿ ಆತನು ತನ್ನ ಮಡದಿಗೆ ಕೊಟ್ಟ ವಚನದ ಪಾಲನೆಯನ್ನು ನೀನು ಮಾಡದಿದ್ದರೆ ನರಕವಾಗುವದೆಂತು?
ಜನ್ಮಕ್ಕೆ ತಾಯಿ-ತಂದೆಗಳೇ ಕಾರಣವಾಗಿರುವಾಗ ಅವರ ಮಾತನ್ನು ಹೇಗೆ ತಾನೇ ಮೀರುವದು ಎಂದೆನ್ನುವೆಯಾ? ರಜ-ತೇಜಸ್ಸಿನ ಮಿಶ್ರಣದಿಂದಲೇ ಗರ್ಭದಲ್ಲಿ ಜನ್ಮವಾಗುವುದಲ್ಲವೇ? ಇದಕ್ಕೆ ಕಾಮವಷ್ಟೇ ಹೇತು.

ಮುಂದೆ ಯಾವುದೋ ಮಹತ್ತರ ಸುಖ ಸಿಗುವದು, ಅದಕ್ಕೆ ಧರ್ಮಾಚರಣೆಯೇ ಮುಖ್ಯ ಇತ್ಯಾದಿ ಭಾವನೆ ಮಾಡಿಕೊಂಡು, ಅದರ ಆಶೆಯಿಂದ ತಾನಾಗಿ ಒದಗಿ ಬಂದ ಸುಖವನ್ನು ತೊರೆದು, ವ್ಯರ್ಥವಾಗಿ ದುಃಖವನ್ನು ಅನುಭವಿಸುತ್ತ ವ್ಯರ್ಥವಾಗಿ ಸಾಯುವದರಿಂದೇನು ಪ್ರಯೋಜನ? ಇರುವಾಗಲೇ ಸುಖವನ್ನು ಅನುಭವಿಸದವರು ಸತ್ತಮೇಲೆ ಎಂತಹ ಸುಖವನ್ನು ಅನುಭವಿಸುವರು? ಅಂತವರಿಗೆ ಇರುವಾಗಲೂ ದುಃಖವೇ; ಸತ್ತರೂ ದುಃಖವೇ!
ಇನ್ನು ಧರ್ಮಶಾಸ್ತ್ರದಲ್ಲಿ ಹೇಳಿದ್ದು ಎಂದಾದರೆ, ಅದರಲ್ಲಿಯ ಶ್ರಾದ್ಧಕರ್ಮದ ಉದಾಹರಣೆಯನ್ನು ಆಲೋಚಿಸಿದರೇ ಸಾಕು. ಮರಣಪಟ್ಟಮೇಲೆ ಅವನೇ ಉಳಿಯನು ಎಂದಾಗುವಲ್ಲಿ, ಆತನಿಗೆ ಸಿಗಬೇಕೆಂದು ಇಲ್ಲಿ ಬ್ರಾಹ್ಮಣರಿಗೆ ಊಟಹಾಕುವದರಲ್ಲಿ ಏನು ಅರ್ಥವಿದೆ? ತಂದೆಗೂ ಮುಟ್ಟದೇಹೋಗುವದೆಂದಾದ ಮೇಲೆ ಬ್ರಾಹ್ಮಣರನ್ನು ಉಣಿಸಿ ತನ್ನ ಅನ್ನ ವ್ಯರ್ಥ ಖರ್ಚುಮಾಡುವದೆಂದರೆ, ಇದು ಯಾವ ವ್ಯವಹಾರ ಚಾತುರ್ಯ?

RELATED ARTICLES  ಕೆರೆಯ ನೀರನು ಕೆರೆಗೆ ಚೆಲ್ಲು

ಈ ಧರ್ಮಶಾಸ್ತ್ರದ ಮಾತುಗಳನ್ನು ಕಟ್ಟಿಕೊಂಡು ಏನು ಮಾಡುತ್ತೀಯೆ? ಈ ಎಲ್ಲ ದಾನ-ಮಾನಾದಿಗಳ ವಿಧಾನಗಳ, ಧರ್ಮಶಾಸ್ತ್ರವೆಲ್ಲಾ ತಮ್ಮ ಜೀವನವು ಸುಖವಾಗಬೇಕೆಂದು ಬ್ರಾಹ್ಮಣರೇ ಮಾಡಿಟ್ಟಿದ್ದು. ಇದನ್ನೆಲ್ಲ ಕಟ್ಟಿಕೊಂಡರೆ ಪ್ರಯೋಜನವಿಲ್ಲ. ಪ್ರತ್ಯಕ್ಷವಾಗಿ ಇಲ್ಲಿ ಸಿಗುವ ಸುಖವನ್ನು ಬಿಟ್ಟು, ಏನೋ ಈ ಕಷ್ಟವನ್ನನುಭವಿಸಿದರೆ ಮುಂದೆ ಸುಖವು ಸಿಗುವದೆದು ಭಾವಿಸುವದು ಬೇಡ.
ನಡೆ! ಅಯೋಧ್ಯೆಗೆ ಬಂದು ಸುಖವಾಗಿ ರಾಜ್ಯವನ್ನಾಳು!