ಹಿಂದೆ ತಿಲಕರು ಸ್ವಾತಂತ್ರ್ಯ ಪೂರ್ವದಿ
ರಾಷ್ಟ್ರಜಾಗೃತಿ ಬಿತ್ತೊ ಕಾರ್ಯದಿ
ಸರ್ವಜನರು ಒಟ್ಟುಗೂಡಲು
ಚೌತಿಯ ನೆಪ ಹಿಡಿದರು || ೧||
ದೇಶ ಒಡೆಯುವ ದುಷ್ಟ ಜನರನು
ಮಟ್ಟಹಾಕುವ ಮಹತ್ಕಾರ್ಯದಿ
ವಿಘ್ನನಾಶಕ ಗಣಪನಂದು
ಬೀದಿಗಿಳಿದನು ಹರುಷದಿ ||೨||
ಇಂದು ಜನರು ಮೋಜಿಗೆಂದು
ದೇವಗಣಪನ ಚೌತಿಯೆಂದು
ಕಂಡ ಜನರೊಳು ಸುಲಿಗೆ ಮಾಡುತ
ಹೆಂಡ ಕುಡಿಯುತ ಕುಣಿವರು ||೩||
ಗಣಪನನ್ನು ಹೊತ್ತು ತಿರುಗುತ
ಸಿನೆಮಾ ಹಾಡಿಗೆ ಹೆಜ್ಜೆ ಹಾಕುತ
ಧರ್ಮ ಸಂಸ್ಕೃತಿ ಮರೆಯುತಿರಲು
ಮೂಕನಾದನು ಗಣಪನು ||೪||
ಇದನು ಕಂಡರೆ ತಿಲಕರಾತ್ಮವು
ನೋವನುಣುತ ಅಳದೆ ಇರದು
ಗಣಪ ನೀನೆ ತಿಳಿಯ ಹೇಳು
ಚೌತಿ ಘನತೆಯ ಉಳಿಸಿಕೊ ||೫||
….ಅಶ್ವಿನಿ ಕೋಡಿಬೈಲು