(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ದೇಹದಲ್ಲಿರುವ ‘ನಾನು’ ಎಂಬ ಅರಿವು ದೇಹ, ಪ್ರಾಣ, ಮನ, ಬುದ್ಧಿಗಳಿಗೆ ಸಂಬಂಧಿಸಿಲ್ಲ. ಈ ಶುದ್ಧ ‘ನಾನು’ ಕೇವಲ ಸತ್, ಚಿತ್, ಆನಂದ ರೂಪದಲ್ಲಿದೆ.
ಅವಿದ್ಯೆಯಿಂದಾದ ವಿಷಯವಾಸನೆಯೇ ಪ್ರಾಣ, ಮನ ಇತ್ಯಾದಿಗಳಿಂದೊಡಗೂಡಿದ ದೇಹಕ್ಕೆ ಕಾರಣ. ‘ವಿಷಯದಿಂದ ಸುಖಾನುಭವ’ ಎಂಬ ಭ್ರಮೆ ಇರುವವರೆಗೆ ಒಂದು ದೇಹವು ಬಿದ್ದರೂ, ಆ ವಾಸನೆ ಬೇರೆ ದೇಹವನ್ನು ಧರಿಸುವದು. ಆದಾಗ್ಯೂ, ಎಷ್ಟೇ ಜನ್ಮಗಳಾಗಲೀ ‘ನಾನು’ ಎಂಬ ಅರಿವು, ಆ ಸಚ್ಚಿದಾನಂದ ರೂಪ ತಾನೇ ತಾನಾಗಿ ಇದ್ದೇ ಇರುವದು.

ಯಾವಾಗ, ಈ ಸಚ್ಚಿದಾನಂದ ರೂಪವೇ ‘ತಾನು’ ಎಂಬ ಜ್ಞಾನ ಆಗುತ್ತದೆಯೋ ತತ್ ಕ್ಷಣ ಈ ಜನ್ಮ-ಮರಣ ಸುಳಿ ತಪ್ಪಿ ಪರಮಾತ್ಮ ಸಾಯುಜ್ಯ ಮುಕ್ತಿಯಾಗುವದೆಂದು ಶ್ರುತಿ ಹೇಳುತ್ತದೆ. ಅವಿದ್ಯೆ ತನ್ನ ಪ್ರಾಪಂಚಿಕ ವಾಸನೆಯ ಸಮೇತ ನಷ್ಟವಾದಾಗ ಇದು ಸಹಜವಾಗಿ ಆಗುತ್ತದೆ.
ಶ್ರುತಿ-ಶಾಸ್ತ್ರಗಳ ಮಾತು ಹಿತವಾದುದು. ಅದರಲ್ಲಿ ಹೇಳಿರುವ ಗ್ರಾಹ್ಯಾಗ್ರಾಹ್ಯದ, ತ್ಯಾಗಾತ್ಯಾಗದ ವಿಚಾರವನ್ನು ಅನುಸರಿಸಬೇಕು. ಶ್ರುತಿ-ಸ್ಮೃತಿಗಳಿಂದ ವಿಧಿಸಿದ ಧರ್ಮವನ್ನನುಸರಿಸಿದಾಗ ಈ ಲೋಕದಲ್ಲೂ ಚೆನ್ನಾಗಿ ಬಾಳಿ-ಬದುಕಿ, ದೇಹಾಂತ್ಯದಲ್ಲಿ ಪರಮಾತ್ಮನ ಅನಂತ ಆನಂದಸ್ವರೂಪದಲ್ಲಿ ಏಕನಾಗಿ ಮೋಕ್ಷಪಡೆಯುವನು.
ಋತಂ ತಪಃ ಸತ್ಯಂ ತಪಃ ಶ್ರುತಂ ತಪಃ ಶಾಂತಂ ತಪೋದಮಸ್ತಪಃ ಶಮಸ್ತಪೋ ದಾನಂ ತಪೋ ಯಜ್ಞಂ ತಪೋ ಭೂರ್ಭುವಸ್ಸುವರ್ಬ್ರಹ್ಮೈ ತದುಪಾಸ್ಯೈ ತತ್ತಪಃ ||
ಪಾರಮಾರ್ಥಿಕ, ವ್ಯಾವಹಾರಿಕ ಸತ್ಯವನ್ನೇ ನುಡಿಯುವದು, ಗುರುಮುಖದಿಂದ ಶ್ರವಣ ಮಾಡುವದು, ಎಂತಹ ಪ್ರಸಂಗದಲ್ಲಿಯೂ ಶಾಂತನಾಗಿರುವದು, ದೇಹೇಂದ್ರಿಯ-ಮನ ನಿಗ್ರಹಮಾಡುವದು, ಸತ್ಪಾತ್ರದಲ್ಲಿ ಯಥಾಶಕ್ತಿ ದಾನಮಾಡುವದು, ಹೋಮ-ಹವನಾದಿ ಮಾಡುವದು(ದೇವಪೂಜೆ, ಜನರಲ್ಲಿ ಐಕ್ಯಭಾವವುಂಟುಮಾಡುವದು), ಸಚ್ಚಿದಾನಂದಾತ್ಮಕ ಬ್ರಹ್ಮಸ್ವರೂಪದ ಉಪಾಸನೆ ನಡೆಸುವದು, ಇವೆಲ್ಲಾ ತಪಸ್ಸೇ ಸರಿ.

RELATED ARTICLES  ತಮ್ಮದೆಂದು ಒಪ್ಪಿಕೊಂಡದನ್ನು ಕಾದುಕೊಳ್ಳಬೇಕು ಎಂದರು ಶ್ರೀಧರರು.

‘ಪ್ರಪಂಚಾ ಪ್ರವರ್ತಕಂ ಲಯೋನ್ಮುಖೀಕರಣಂ ಸಾಧನಮ್’ ಭ್ರಾಮಕ ಪ್ರಪಂಚದ ಕಡೆಗೆ ಪ್ರವೃತ್ತವಾಗಗೊಡದೆ ಅದನ್ನು ಕಾರಣದ ಸತತ ವಿಚಾರದಿಂದ ನಿಷ್ಪ್ರಪಂಚ ಬ್ರಹ್ಮಸ್ವರೂಪದಲ್ಲಿ, ಆ ನಿರತಿಶಯಾನಂದದಲ್ಲಿ ಲಯಿಸುತ್ತಾ ಇರುವದೇ ಮೋಕ್ಷದ ಒಂದು ಸಾಧನೆ.
ಎಲ್ಲಾ ಸಾಧನೆ-ತಪಸ್ಸುಗಳನ್ನು ಹೇಳಿ, ಕಟ್ಟಕಡೆಯಲ್ಲಿ ತ್ಯಾಗವೇ ಎಲ್ಲದರಲ್ಲಿಯೂ ಶ್ರೇಷ್ಟವಾದುದೆಂದು ಯಜುರ್ವೇದದ ಅರಣ್ಯಕದಲ್ಲಿ ನಿರ್ಧರಿಸಿ ಹೇಳಿರುವರು.
‘ನ ಕರ್ಮಣಾ ನ ಪ್ರಜಯಾ……………….ವಿಶಂತಿ’

RELATED ARTICLES  ನೋವಿನಿಂದ ಸಾವು - ಸಾವಿನಿಂದ ನೋವು

‘ಕರ್ಮದಿಂದಲೂ, ಪ್ರಜೋತ್ಪತ್ತಿಯಿಂದಲೂ, ಸಂಪತ್ತಿನಿಂದಲೂ ಮೋಕ್ಷವನ್ನು ಪಡೆಯದೇ ತ್ಯಾಗವೊಂದರಿಂದಲೇ ಮೋಕ್ಷವನ್ನು ಪಡೆದರು.’ ಎನ್ನುತ್ತದೆ ಶ್ರುತಿ!

ಆನಂದಘನ ಪರಮಾತ್ಮ ಸ್ವರೂಪವು ಸ್ವತಃ ಪೂರ್ಣವಾಗಿರುವದು. ಆ ಸ್ವತಃ ಪೂರ್ಣವಾಗಿರುವಂತಹ ಕಾರಣಕ್ಕೆ ಕಾರ್ಯದಿಂದ ಯಾವ ಪ್ರಯೋಜನವೂ ತೋರದು. ಆ ಕಾರಣರೂಪವಾದ ಆನಂದದ ಪ್ರಾಪ್ತಿಗಾಗಿ ‘ನಿಷ್ಪ್ರಯೋಜಕ ಆನಂದಸಾಧಕ ಕಾರ್ಯ’ದ ತ್ಯಾಗವೇ ನಿಜ ಆನಂದ ಪ್ರಾಪ್ತಿಯ ಮುಖ್ಯ ಸಾಧನವಾಗುವದು.
ಒಬ್ಬ ಪರಮಾತ್ಮನೇ ಎಲ್ಲರಲ್ಲಿರುವನು! ಆತನಿಂದಲೇ ಈ ಎಲ್ಲ ಆಯಿತು!