(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಇದೊಂದು ವಿಚಿತ್ರ ಪ್ರಶ್ನೆ! ಕೆಲವರು ಬಹಿರಂಗವಾಗಿ ಹೇಳಬಹುದು. ಇನ್ನು ಕೆಲವರು ಅಂತರಂಗದಲ್ಲೇ ಸಂಶಯ ಪಡಬಹುದು.

‘ಎಲ್ಲಿಯ ದೇವರು? ಎಲ್ಲಿಯ ಧರ್ಮ? ಎಲ್ಲಿಯ ಸ್ವರ್ಗ? ಎಲ್ಲಿಯ ನರಕ? ಇವೆಲ್ಲ ಬರೇ ಕಲ್ಪನೆಗಳು. ಇದ್ದಾಗ ಅನುಭವಿಸಿದಷ್ಟು ನಮ್ಮದು. ಕಣ್ಣಿಗೆ ಕಾಣದ ಯಾವುದೋ ವಿಚಾರಗಳನ್ನು ಕಟ್ಟಿಕೊಂಡು, ಪ್ರತ್ಯಕ್ಷ ಕಾಣಿಸುವ ಸುಖವನ್ನು ಬಿಡುವದು ಹೇಗೆ?’ ಎನ್ನುವವರೂ ಇರಬಹುದು.
‘ಎಲ್ಲವೂ ಸುಳ್ಳು. ಕೈಲಾಗದವರ ಬೆದರುಗುಂಡು’ ಎನ್ನುವ ಪಾಖಂಡಿಗಳೂ ಇರಬಹುದು.

ಹಾಗೆ ನೋಡಿದರೆ ಹೆಚ್ಚಾಗಿ ದುರ್ಮಾರ್ಗಿಗಳೇ ಇಂಥ ನಾಸ್ತಿಕ ವಿಚಾರಗಳಿಗೆ ಒಳಗಾಗುವದು ಸ್ವಾಭಾವಿಕ. ಏಕೆಂದರೆ ದೇವರು-ಧರ್ಮ ಇವನ್ನೆಲ್ಲ ಸ್ಮರಿಸಿಕೊಂಡರೆ ಅವರ ಸ್ವೇಚ್ಛಾಚಾರ ಪೃವೃತ್ತಿಗೆ ತಡೆಯುಂಟಾಗುತ್ತದೆ.
ಆದರೆ ಇಂಥ ಜನ ವಿರಳ. ದೇವರು ಇದ್ದಾನೆ ಎನ್ನುವವರೇ ಹೆಚ್ಚಿದ್ದಾರೆ.

RELATED ARTICLES  ಮಾಜಿ ಶಾಸಕ, ಸಹಕಾರಿ ಧುರೀಣ ಎಲ್.ಟಿ.ತಿಮ್ಮಪ್ಪ ಹೆಗಡೆ ಇನ್ನಿಲ್ಲ.

ನನ್ನ ಮುಂದೆ ಇಲ್ಲಿ ಆಸ್ತಿಕರೇ ಹೆಚ್ಚು. ನಾಸ್ತಿಕರು ಇದ್ದರೂ ಇರಬಹುದು. ಏಕಿರಬಾರದು? ಇರಲಿ.
ಆಸ್ತಿಕರಿಗೆ ಈ ಪ್ರಶ್ನೆಯನ್ನು ಕೇಳಿ ನಗು ಬರಬಹುದು. ದೇವರನ್ನು ನಂಬಿದ ಕೆಲವರಿಗೆ ಜಿಗುಪ್ಸೆ, ಕೋಪವೂ ಬರಬಹುದು. ಕೆಲವರಿಗೆ ಸ್ವಾಮಿಗಳಿಂದ ಯಾವ ಉತ್ತರ ಹೇಗೆ ಬರುವದೆಂಬ ಕುತೂಹಲವೂ ಉಂಟಾದೀತು!
ನಾಸ್ತಿಕರಿಗೆ ಇವರು ತಮ್ಮ ವಿಚಾರವನ್ನು ಅದೆಂತು ಮಂಡಿಸಲಿರುವರು ಅಂದುಕೊಂಡು ಒಂದು ರೀತಿ ಅನಾದರ ತೋರಿದರೂ ತೋರಬಹುದು.

ಅಂತೂ ಆಸ್ತಿಕರಿಗೂ ನಾಸ್ತಿಕರಿಗೂ ಕೂಡಿಯೇ ಈ ಪ್ರಶ್ನೆಯ ವಿವೇಚನೆ ಅವಶ್ಯ ಮತ್ತು ಈ ಪ್ರಶ್ನೆಯ ನಿರ್ಧಾರವಾಗುವದು ಇಬ್ಬರಿಗೂ ಲಾಭಕರ, ಹಿತಕರ!

ನಾಸ್ತಿಕವಾದವನ್ನು ತುಸು ನೋಡೋಣ. ‘ಸೃಷ್ಟಿಯು ತನ್ನಿಂದ ತಾನೇ ಹುಟ್ಟಿತು. ತನ್ನಷ್ಟಕ್ಕೆ ತಾನೇ ಸಾಗುತ್ತದೆ. ಲಯ ಹೊಂದುತ್ತದೆ. ಅವಕ್ಕೆ ಯಾವ ಶಕ್ತಿಯೂ ಬೇಕಿಲ್ಲ. ಜಗತ್ತು ಹುಟ್ಟುವದಕ್ಕಿಂತ ಮೊದಲು ಏನೂ ಇರಲಿಲ್ಲ. ಶೂನ್ಯಸ್ಥಿತಿಯಿಂದ ಜಗತ್ತು ತಾನಾಗಿಯೇ ಉಂಟಾಯಿತು. ಇದು, ‘ಸರ್ವವೂ ಶೂನ್ಯವಾಗಿರುವ ನಿದ್ರಾಸ್ಥಿತಿಯಿಂದ ತಾನೇ ತಾನಾಗಿ ಎಚ್ಚರವಾದಂತೆ’ ಎಂದು ಅವರ ಮಂಡನೆ.
ಈ ವಾದ ಸರಿಯಲ್ಲ. ಏಕೆಂದರೆ ಇಲ್ಲಿ ಎಲ್ಲ ಸೃಷ್ಟಿಕಾರ್ಯಗಳೂ ನಿಯಮಕ್ಕೆ ಅಧೀನವಾಗಿಯೇ ನಡೆಯುತ್ತಿವೆಯಲ್ಲ? ಶೂನ್ಯವಾದ ಆಕಾಶದಿಂದ ವಸ್ತುಗಳು ಹುಟ್ಟುತ್ತ ಹೋದರೆ ಆಕಾಶವೇ ಉಳಿಯಲಿಕ್ಕಿಲ್ಲ! ಹಾಗಾಗದೇ ಕೆಲವೊಂದು ವ್ಯವಸ್ಥೆಯಿಂದಲೇ ಸೃಷ್ಟಿಯ ಉತ್ಪತ್ತಿಯಾಗಿದೆ ಮತ್ತು ಸೃಷ್ಟಿಕಾರ್ಯ ವ್ಯವಸ್ಥೆಯಿಂದಲೇ ನಡೆಯುತ್ತಿದೆ. ಕೇವಲ ಸ್ವಪ್ರೇರಣೆಯಿಂದಲೇ ಇಲ್ಲಿ ಯಾವುದೂ ಆಗುವದಿಲ್ಲ! ಎಂದ ಬಳಿಕ ಶೂನ್ಯದಿಂದ ಜಗತ್ತುಂಟಾಯಿತು ಎಂದು ಹೇಳುವದು ಹೇಗೆ?
ಈ ವಿಚಾರ ಮುಂದೆ ಮತ್ತೂ ನೋಡೋಣ.

RELATED ARTICLES  ಭ್ರಮಾತ್ಮಕ ಸುಖದ ಬಲೆಯಿಂದ ಬಿಡುಗಡೆ ವಿವೇಕದಿಂದ ಮಾತ್ರ!(‘ಶ್ರೀಧರಾಮೃತ ವಚನಮಾಲೆ’).