(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಋಗ್ವೇದ ಆಧುನಿಕ ಮತದಂತೆಯೂ ಮಾನವನ ಅತಿ ಪ್ರಾಚೀನ ಚಿಂತನೆ. ಋಗ್ವೇದದ ನಾಸದೀಯ ಸೂಕ್ತದಲ್ಲಿ ಸೃಷ್ಟಿಪೂರ್ವದ ಪರಮಾತ್ಮನ ವರ್ಣನೆ ಬಂದಿರುವದು. ಆ ನಾಸದೀಯ ಸೂಕ್ತದ ತತ್ವವನ್ನು ತಿಳಿಯೋಣ.
ನಾಸದಾಸಿನ್ನೋ ಸದಾ ಸೀತ್ತದಾನೀಂ
ನಾಸೀದ್ರಜೋ ನೋ ವ್ಯೋಮಾ ಪರೋ ಯತ್|
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ
ಕಿಮಾಸೀದ್ ಗಹನಂ ಗಭೀರಮ್||
ಸೃಷ್ಟಿಯ ಆದಿಯಲ್ಲಿ ಇನ್ನೊಂದಿರದೆ ತಾನೇ ತಾನಾಗಿ ಒಬ್ಬನೇ ಒಬ್ಬ ಪರಮಾತ್ಮನಿದ್ದನು.

ಆಗ ವ್ಯಕ್ತವಾಗಿಯೂ ಅವ್ಯಕ್ತವಾಗಿಯೂ ಈ ಜಗತ್ತು ಇರಲಿಲ್ಲ. ಈ ಜಗತ್ತಿನ ಸುಳಿವೂ ಆಗ ಇರಲಿಲ್ಲ. ಸತ್ವ-ರಜ-ತಮೋಗುಣಗಳಲ್ಲಿ ಯಾವ ಗುಣವೂ ಅಲ್ಲಿ ಕಾಣಿಸಿದ್ದಿಲ್ಲ. ಆಕಾಶಾದಿ ಪಂಚಭೂತಗಳೂ ಅಲ್ಲಿ ಇರಲಿಲ್ಲ. ಇನ್ನೂ ಯಾವುದರ ಉತ್ಪತ್ತಿಯೂ ಆಗದಿರುವಾಗ ಒಂದೇ ಒಂದು ಪರಮಾತ್ಮ ತತ್ವವು ತನ್ನ ಸ್ವರೂಪದಲ್ಲಿ ತಾನೇ ಕಿಕ್ಕಿರಿದು ತುಂಬಿರುವಾಗ ಅಲ್ಲಿ ಮತ್ತೊಂದೆಲ್ಲಿತ್ತು? ತನ್ನ ಆನಂದ ಘನಸ್ವರೂಪದಿಂದ ತನ್ನಷ್ಟಕ್ಕೆ ತಾನೇ ಒಬ್ಬ ಪರಮಾತ್ಮನೇ ಇರುವಾಗ ಯಾವುದನ್ನು ಕುರಿತು ಯಾರ ಹಿತಕ್ಕಾಗಿ ಯಾರಿಗೆ ಸುಖವಾಗಬೇಕೆಂದು ಯಾವುದು ತಾನೇ ಏನಾಯಿತು? ಅಲ್ಲಿ ಮಾಯೆಗಾದರೂ ಅವಕಾಶವಿದೆಯೆ? ಅಲ್ಲಿ ಯಾರು ಯಾವುದರಿಂದ ಏತಕ್ಕಾಗಿ ಯಾರನ್ನು ಆವರಿಸುವರು? ಜಗತ್ತೂ ಮತ್ತು ಜಗತ್ಪ್ರಳಯವೂ ಅಲ್ಲಿ ಆಗದಿರುವಾಗ ಜಗತ್ಪ್ರಳಯದಲ್ಲಿರುವ ಆ ಅಗಾಧ ಗಂಭೀರ ಏಕಾರ್ಣವ ಜಲವೂ ಸಹ ಅಲ್ಲಿರಬಹುದೇ?
ನ ಮೃತ್ಯು ರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ಪ್ರಕೇತಂ|
ಆನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂಚನಾಸ||

RELATED ARTICLES  ಯೋಗಿ ಹಾಗೂ ನಿರ್ಮಲಾನಂದರ ಭೇಟಿ ಹೊಸ ಅಧ್ಯಾಯಕ್ಕೆ ಮುನ್ನುಡಿ

ಅಲ್ಲಿ ಆಗ ಮೃತ್ಯುವೂ ಇರಲಿಲ್ಲ; ಅಮೃತತ್ವವೂ ಇರಲಿಲ್ಲ. ರಾತ್ರಿಯೂ ಇದ್ದಿಲ್ಲ. ಹಗಲೂ ಇದ್ದಿಲ್ಲ. ಇವುಗಳನ್ನು ತಿಳಿಯಪಡಿಸುವ ಯಾವ ಸೂರ್ಯ-ಚಂದ್ರಾದಿಗಳೂ ಇದ್ದಿಲ್ಲ. ಆಗ ಇದ್ದದ್ದೆಲ್ಲಾ ಅದೊಂದೇ ಪರಮಾತ್ಮ ತತ್ವವು ತಾನೇತಾನಾಗಿತ್ತು. ಯಾವ ಅನ್ಯ ವಾಯುವಿನ ಶ್ವಾಸೋಚ್ಛ್ವಾಸದಿಂದಲ್ಲ. ಒಂದೇ ಒಂದು ಘನವಾಗಿ ತಂಬಿಕೊಂಡಿತ್ತು. ಆ ಆನಂದಸ್ವರೂಪಕ್ಕಿಂತಲೂ ಹೊರತಾದ ಯಾವುದೊಂದೂ ಆಗ ಇರಲಿಲ್ಲ!

RELATED ARTICLES  ಬದುಕಿಗೆ ಬಣ್ಣ ತುಂಬಿದವರು