(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)
‘ಸೋsಹಮಸ್ಮೀತ್ಯಗ್ರೇ ವ್ಯಾಹರತ್ತತೋsಹಂ ನಾಮಾ ಭವತ್|’
ಮೊದಲು ‘ನಾನು’ ಎಂಬ ‘ಅರಿವು’ ಉಂಟಾಯಿತು.
ಆಮೇಲೆ ‘ಏಕೋsಹಂ ಬಹುಸ್ಯಾಮ್’ ‘ನಾನೊಬ್ಬನೇ ಬಹುರೂಪನಾಗಿರುತೇ್ತನೆ’ ಎಂಬ ಪರಮಾತ್ಮನ ಸಂಕಲ್ಪ ಉಂಟಾಯಿತು. ಈ ಪರಮಾತ್ಮನ ಸಂಕಲ್ಪವೂ ಕೂಡ ‘ನಾನು’ ಎಂಬ ‘ಅರಿವು’ ಇಲ್ಲದಿದ್ದಲ್ಲಿ ಉಂಟಾಗುತ್ತಿದ್ದಿಲ್ಲ.
ಪರಮಾತ್ಮನ ಈ ಸಂಕಲ್ಪದಿಂದ ಶಕ್ತಿ ಸು್ಪರಣೆಯಾಯಿತು.
ಅದಾದ ಬಳಿಕ ಮನಸ್ಸು, ಇಂದ್ರಿಯ, ದೇವತೆಗಳು, ಅಖಿಲ ಜಗತ್ತು, ಇವೆಲ್ಲ ಆದವು.
ಹೀಗಾಗಿ, ಸೃಷ್ಟಿಗಿಂತ ಮೊದಲು ಈ ‘ನಾನು’ ಎಂಬ ‘ಅರಿವು’ ಹುಟ್ಟದಿದ್ದರೆ ಈ ಜಗತೇ್ತ ಇರುತ್ತಿರಲಿಲ್ಲ.
‘ಯಾರು ನೀನು?’ ಎಂಬ ಪ್ರಶ್ನೆಗೆ ‘ನಾನು’ ಎಂಬ ಉತ್ತರವಿಲ್ಲದಿದ್ದರೆ ‘ನನ್ನ ಮನಸ್ಸು’, ನನ್ನ ದೇಹ’ ಮುಂತಾದ್ದು ಯಾವುದೂ ಇರುತ್ತಿರಲಿಲ್ಲ.
ಹೊರಗಿನ ದೃಶ್ಯದಿಂದ ‘ನಾನು’ ಎಂಬ ‘ಅರಿವು’ ಹುಟ್ಟಲಾರದು. ಆದರೆ, ‘ಅರಿವಿ’ದ್ದಾಗ ಮಾತ್ರ ಹೊರಗಿನ ದೃಶ್ಯದ ಜ್ಞಾನವಾಗುವದು.
ಪ್ರತಿಯೊಬ್ಬರಲ್ಲಿ ‘ನಾನೆಂಬ’ ನಿಜದ ‘ಅರಿವು’ಇದೇ್ದ ಇರುವದು. ಈ ‘ಅರಿವ’ನ್ನು ಬಿಟ್ಟಿರಲು ಯಾರಿಗೆ ತಾನೇ ಸಾಧ್ಯ? ‘ನಾನೆಂಬ ಅರಿವಿ’ನಲ್ಲಿಯೇ ಈ ಜಗದಾನುಭವವಾಗುವದು. ಆದುದರಿಂದ ಈ ಎಲ್ಲ ಚರಾಚರ ವಿಶ್ವವು ಒಂದು ‘ನಾನೆಂಬ ಅರಿವಿ’ನಲೇ್ಲ ಪ್ರತಿಬಿಂಬಿಸಿರುವದು. ‘ನಾನೆಂಬ ಅರಿವಿ’ನಲ್ಲಿ ಕಂಡಿದ್ದೆಲ್ಲವೂ ‘ನಾನೆಂಬ ಅರಿವೇ’ ಆಗಿರುವದು.
ಸಂಕಲ್ಪದಿಂದ ಬಹುವಾಗಿ ತೋರುವ ಈ ವಿಶ್ವವು ನಿಸ್ಸಂಕಲ್ಪದಲ್ಲಿ ‘ನಾನೆಂಬ ಅರಿವೊಂದೇ’ ಆಗಿ ಇರುವದು.
ಹಲವು ಕೊಡಗಳ ನೀರು ಸೇರಿದರೂ ನೀರೆಲ್ಲಾ ಒಂದೇ ಆಗುವಂತೆ ಎಲ್ಲಾ ದೇಹದಲ್ಲಿ ಇರುವ ‘ನಾನೆಂಬ ಅರಿವು’ ಒಟ್ಟು ಸೇರಿಸುವಲ್ಲಿ ಅದು ತಾನೇ ಒಂದೇ ಇರುವದು.
ಮನಸ್ಸು, ಇಂದ್ರಿಯಗಳು, ದೇವತೆಗಳು, ಜಗತ್ತು, ಶರೀರ, ಹೊರಗಿನ ಎಲ್ಲಾ ವಸ್ತುಗಳು ಇವಕ್ಕೆಲ್ಲಾ ‘ನಾನೆಂಬ ಅರಿವೇ’ ಆಧಾರ. ಅದಿಲ್ಲದಿದ್ದರೆ ಇದಾವುದೂ ಇಲ್ಲ.
ಪರಮಾತ್ಮನ ಈ ‘ನಾನು’ ಎಂಬ ಅನುಭವವೇ ಸಕಲ ಜಗತ್ತಿನಲ್ಲಿಯೂ, ಪ್ರಾಣಿಗಳಲ್ಲಿಯೂ, ಸರ್ವಮಾನವ ದೇಹದಲ್ಲಿಯೂ ತುಂಬಿರುವದರಿಂದಲೇ ಭಗವಂತನು ಸರ್ವಾಶ್ರಯನೂ, ಸರ್ವವ್ಯಾಪಿಯೂ, ಸರ್ವಾಧಾರನೂ, ಸರ್ವಸಮರ್ಥನೂ ಆಗಿ ಸರ್ವತ್ರ ಸ್ವಯಂ ಸಿದ್ಧನಾಗಿರುತ್ತಾನೆ.