ಮುಂದುವರಿದ ಭಾಗ -1:
ಗಂಡ ಹೆಂಡತಿ ವಿಷಯಕ್ಕೆ ಬಂದಾಗ ಪರಸ್ಪರ ಪ್ರೀತಿ ವಿಶ್ವಾಸ ಅನ್ಯೋನ್ಯತೆಯಿಂದ ಜೀವನ ನಡೆಸಿಕೊಂಡು ಹೋದರೆ ಯಾವ ತಪ್ಪು ಆಗುವುದಿಲ್ಲ. ಆದರೆ ಗಂಡನಾದವನು ತನ್ನ ಪತ್ನಿಗೆ ದಿನವೂ ಕಿರುಕುಳ ನೀಡಿ ಹೊಡೆದು ಬಡಿದು ತೊಂದರೆ ಕೊಡುವ ಮಂದಿ ಒಂದೆಡೆಯಾದರೆ, ಸಂಜೆಯಾದೊಡನೆ ಕುಡಿದು ಬಂದು ಹೆಂಡತಿ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಮಂದಿ ಇದ್ದು, ಅಥವಾ ಇದಕ್ಕೆ ವಿರುದ್ದವಾಗಿ ಹೆಂಡತಿ ತನ್ನ ಗಂಡನನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರೆ ಹೀಗೆಯೇ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರೆ ಇವೆಲ್ಲವೂ ಒಂದೇ ರೀತಿಯ ತಪ್ಪಾಗಿದ್ದು, ಪರಸ್ಪರ ದಂಪತಿಗಳು ಅನ್ಯೋನ್ಯತೆಯಿಂದ ಇರಲಿಲ್ಲವೆಂದು ಹೇಳುತ್ತಾರೆ.
ಯಾವ ರೀತಿಯಲ್ಲಿ ತಪ್ಪು ಮಾಡಿದರೂ ಅದು ತಪ್ಪೇ ಆಗಿರುತ್ತದೆ. ಹಸುವಿನ ಸಗಣಿ ಒಂದು ಕಡೆ ಇದ್ದು, ಅದನ್ನು ಇಬ್ಭಾಗ ಮಾಡಿದಾಗ ಅದರ ಗುಣದಲ್ಲಿ ವ್ಯತ್ಯಾಸವಾಗುವುದಿಲ್ಲ. ಎರಡನ್ನೂ ಸಹ ಹಸುವಿನ ಸಗಣಿ ಎಂದೇ ಹೇಳುತ್ತಾರೆ. ಅದೇ ರೀತಿ ಉದ್ದೇಶ ಒಂದೇ ಇದ್ದು, ವಿಧಾನ ಬೇರೆ ಬೇರೆ ಇದ್ದರೆ ಒಂದೇ ರೀತಿಯ ತಪ್ಪು ಮಾಡಿ ದ್ದಾರೆ ಎಂದು ಹೇಳುತ್ತಾರೆ. ಹೆತ್ತವರು, ಮಕ್ಕಳು ಮತ್ತು ಪತಿ ಪತ್ನಿಯರು ತಮ್ಮ ತಮ್ಮ ಕರ್ತವ್ಯದಿಂದ ವಿಮುಖರಾದರೆ ಜೀವನದಲ್ಲಿ ಸರಿಪಡಿಸಲಾಗದಂತಹ ತಪ್ಪುಗಳಾಗುತ್ತದೆ. ಇದೇ ರೀತಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಭೋಧನೆ ಮಾಡುವುದರಲ್ಲಿ ನಿರ್ಲಕ್ಷ ತೋರಿದರೆ ವಿದ್ಯಾರ್ಥಿಗಳಿಗೆ ಜೀವನದಲ್ಲಿ ತುಂಬಲಾರದ ನಷ್ಟ ಉಂಟಾಗುತ್ತದೆ. ವಿದ್ಯಾರ್ಥಿಗಳು ಸಹ ಸೋಮಾರಿಗಳಾಗದೆ ಕಠಿಣವಾಗಿ ಆಭ್ಯಸಿಸಿದರೆ ಜೀವನದಲ್ಲಿ ತಮ್ಮ ಗುರಿಯನ್ನು ಸಾಧಿಸಿ ಮುಂದೆ ಬರಬಹುದು. ಇಲ್ಲದಿದ್ದಲ್ಲಿ ತಮ್ಮ ಅಮೂಲ್ಯವಾದ ಜೀವನವೇ ಹಾಳಾಗುವ ಸಂಭವ ಇರುತ್ತದೆ.
ಮನುಷ್ಯ ತನ್ನ ಜೀವನದಲ್ಲಿ ಯಾವ ಕ್ಷೇತ್ರದಲ್ಲಿಯೇ ಇರಲಿ ಆ ಕ್ಷೇತ್ರಗಳಲ್ಲಿ ಕರ್ತವ್ಯ ಲೋಪವೆಸಗಿದರೆ ಇದರ ಜೊತೆಗೆ ಇವರನ್ನು ನಂಬಿಕೊಂಡವರಿಗೂ ನಷ್ಟ ಉಂಟಾಗುತ್ತದೆ. ಕೆಲವೊಮ್ಮೆ ತನಗೆ ಅರಿವಿಲ್ಲದಂತೆ ತಪ್ಪಾಗಬಹುದು. ಇದನ್ನು ಅರಿತ ತಕ್ಷಣ ಸರಿಪಡಿಸಿಕೊಂಡರೆ ಯಾವ ಅಪಾಯಗಳಿಗೂ ಸಿಲುಕುವುದಿಲ್ಲ.
ಮನುಷ್ಯ ತನ್ನ ಜೀವನದಲ್ಲಿ ತಿಳಿದೋ ತಿಳಿದದೆಯೋ ಕೆಲವೊಮ್ಮೆ ಪರಿಸ್ಥಿತಿಯ ಶಿಶುವಾಗಿ ತಪ್ಪನ್ನು ಮಾಡಬಹುದು. ಆದರೆ ಮನುಷ್ಯ ತನ್ನ ಜೀವನದಲ್ಲಿ ಮಾಡಿರುವ ತಪ್ಪುಗಳಿಗೆ ಯಾವಾಗ ಪಶ್ಚಾತ್ತಾಪ ಪಡಬಹುದು? ಪಶ್ಚಾತ್ತಾಪಪಟ್ಟು ತನ್ನ ತಪ್ಪನ್ನು ಸರಿಪಡಿಸಿಕೊಂಡು ಬದುಕು ಸಾಗಿಸಿದರೆ ಉತ್ತಮ ಜೀವನ ನಡೆಸಬಹುದು
ಮುಂದುವರಿಯುವುದು……..