“ಎಲ್ಲಿ ಒಳಗೊಂದು ಹೊರಗೊಂದು ಇದೆಯೋ ಅಲ್ಲಿ ಅಧರ್ಮ,
ಒಳಗೂ ಒಂದೇ ಹೊರಗೂ ಒಂದೇ ಅದೇ ಧರ್ಮ”
ನಮ್ಮ ನಡೆ-ನುಡಿ ನೇರವಾಗಿರಬೇಕು, ಒಳಗೊಂದು-ಹೊರಗೊಂದು ಆಗಬಾರದು. ಧರ್ಮಮಾರ್ಗದಲ್ಲಿ ಮುನ್ನಡೆಯಬೇಕು ಎಂದರೆ ನಾವು ಮಾಯೆಯ ಪಾಶಕ್ಕೆ ಒಳಗಾಗಬಾರದು. ಮಾಯೆಯೆಂದರೆ ಅದು ಒಳಗೆ ಭಯಂಕರ ಹೊರಗೆ ಮನೋಹರ. ಪಾಪ ಮಾಡಿದರೆ ಪ್ರಜ್ಞೆ ಕಡಿಮೆಯಾಗುತ್ತದೆ. ಪ್ರಜ್ಞೆ ನಾಶವಾದಾಗ ಮತ್ತಷ್ಟು ಪಾಪ ಮಾಡುತ್ತೇವೆ. ಇದೊಂದು ವಿಷವರ್ತುಲವಿದ್ದಂತೆ. ಈ ವಿಷವರ್ತುಲದಲ್ಲಿ ಸಿಗಬಾರದೆಂದರೆ ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕು. ಮನಸ್ಸು ಎಂಬುದು ಕಲ್ಪವೃಕ್ಷವಿದ್ದಂತೆ, ಮನದಲ್ಲಿ ಏನನ್ನು ಕಲ್ಪಿಸುತ್ತೇವೆಯೋ ಅದು ಆಗುತ್ತದೆ. ಅಂಗಾಂಗವನ್ನು ಅಂತರಂಗಕ್ಕೆ ತಕ್ಕಂತೆ ಮಾರ್ಪಡಿಸುವುದು ಪ್ರಕೃತಿಯ ಸ್ವಭಾವ. ಹಾಗಾಗಿ ಮನಸ್ಸನ್ನು ಚೆನ್ನಾಗಿಟ್ಟುಕೊಳ್ಳಬೇಕು. ಮನಸ್ಸನ್ನು ಹಾಳು ಮಾಡಲು ನಮ್ಮ ಸುತ್ತ-ಮುತ್ತ ಅನೇಕ ಪ್ರಯತ್ನಗಳು ನಡೆಯುತ್ತಿರುತ್ತವೆ.
‘ಹಂಡೆ ಹಾಲು ಹಾಳು ಮಾಡಲು ಹುಂಡು ಹುಳಿ ಸಾಕು’ ಎಂಬಂತೆ ಧರ್ಮವನ್ನು ನಾಶ ಮಾಡಲು ಅಧರ್ಮಿಗಳು ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ ನಾವು ಎಂತಹ ಸನ್ನಿವೇಶದಲ್ಲಿಯೂ ಕುಗ್ಗಬಾರದು, ಗಾಬರಿಯಾಗಬಾರದು, ಎಲ್ಲದಕ್ಕೂ ಗಡುವಿದೆ, ಚಕ್ರ ತಿರುಗುತ್ತಿರುತ್ತದೆ. ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಧರ್ಮಮಾರ್ಗದಲ್ಲಿ ಸಾಗೋಣ, ಸಂತೋಷವನ್ನು ಸಮಾಜಕ್ಕೆ ಹಂಚೋಣ.