ಕಣ್ಕೊಸರದ ಕೆಸರಿನಡಿಯಲಿ
ನಿಷ್ಕೃಷ್ಟ ನೈದಿಲೆಗಳೆದುರು
ಬಸ್ ಸ್ಟ್ಯಾಂಡ್ ನ ನವೀನತೆಗೆ ಮೆರುಗು ನೀಡುತ್ತಾ
ಬರುವ ನಾಳೆಗಳಿಗೆ ಶುಭ ಹಾರೈಸಿ
ಬಿಸಿಲ ಬೇಗೆಗೂ ಬೆವರದೆ
ಆ ಕೊಬ್ಬಿದ ನೇಸರನ ಮೈಬೆವರು ಕೀಳುತ್ತಾ
ಮಾಂಸದಂಧೆಗೂ ಒಲಿಯದೆ
ಕೈಕೊಟ್ಟ ಕಟುಕನ ಹುರುಳು ನೋಡುತಾ
ಸದಾ ಕನಸುಗಳ ಕಂತು ಕಟ್ಟಿ
ನೊಂದು ಬಂದವರ ಪಾಪ ವಿನಾಶಿನಿಯಾಗಿ
ಜೋಡುಗಳಿಗೆ ಚಿಕಿತ್ಸೆ ಹೊಲೆದು ಹೊದಿಸಲು
ಅಕ್ಕ ಹಾಕಿದ್ದಾಳೊಂದು ಚರ್ಮದಂಗಡಿ
ಮುಗ್ಧ ಮಗಳಂತೂ ಈಗ ತಾನೆ ಎದೆಹಾಲ ಬಿಟ್ಟಿರಬಹುದು
ಅಂಬೆಗಾಲಿಡುತ್ತಾ ಅಮ್ಮಾ ಅಮ್ಮಾ ಎಂದು ತೊದಲಿಸುತ್ತಿದ್ದಾಳೆ
ಪಾಪ ಅವಳಿಗೇನು ಗೊತ್ತು ಇದು ಪಾಪಿಗಳ ಜಗತ್ತೆಂದು
ಆದರೂ,ಅಕ್ಕನ ಧೈರ್ಯ ಮೆಚ್ಚುವಂತದ್ದು
ಒಬ್ಬೊಂಟಿಯಾಗಿ ಸಿಡಿಯುತಿರುವ ಹೆಮ್ಮರ ಅವಳು
ಕುತೂಹಲದಿ ಕಂದಮ್ಮಳು ಅಮ್ಮ ತೀಡಲು ತಂದಿರುವ
ಆಯುಧಗಳ ಆಟಿಕೆ ಸಾಮಾನುಗಳಂತೆ ಸವಿಯುತ್ತಿದ್ದಾಳೆ
ಮಗಳಿಗೆ ಅಚ್ಚರಿಯಾಗಬಾರದೆಂದು ಅಕ್ಕನು
ವರುಣನ ವಶಳಾದವಳಂತೆ ಕಂಬನಿಯ
ರಂಧ್ರಾರ್ಜಿತ ಸೆರಗಿಗೆ ಅರ್ಚನೆ ಮಾಡುತ್ತಿದ್ದಾಳೆ
ಆ ಬಿಡಿಗಾಸಲ್ಲೇ ಬದುಕ ಕಟ್ಟಿಕೊಳ್ಳುವೆನೆಂದು
ತನ್ನ ಬಂಗಾರ ಹಿಡಿದ ಆಟಿಕೆಗಳ ಕಂಡು
ಅಕ್ಕ ಮರುಗುತಾಳೆ
ಆ ದೈವವ ಗೋಗರೆಯುತಾಳೆ
ಪರಿಪರಿಯಾಗಿ ಪರದಾಡುತಾಳೆ
ಗರಿಗೂಡ ಕಟ್ಟಲು
ನಾಳೆ ನನ್ನ ಮಗಳಿಗೆ ಇವೆಂದೂ
ಕಣ್ಣಿಗೆ ಬೀಳದಿರಲೆಂದು
ಸುಖದ ಸುಪ್ಪತ್ತಿನಲ್ಲಿ ತೇಲಿಸಿ
ಅವಳ ಬದುಕ ಅಸನು ಮಾಡೆಂದು…
– ಕ.ಗಂ.ಶಶಿಕುಮಾರ್ (ಕವಿವರ್ಮ)
ರಾಮನಗರ ಜಿಲ್ಲೆ