-ರೇಷ್ಮಾ ಉಮೇಶ
ಶಿಕ್ಷಕರು ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರ
“ತಲ್ಲಣಿಸದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ”
ಎಂದು ಭಕ್ತಿ ಪರವಶರಾಗಿ ಹಾಡಿದ ಕನಕದಾಸರು ಕವಿಯು ಹೌದು, ದಾರ್ಶನಿಕರು ಹೌದು. ತಿಮ್ಮಪ್ಪನಾಯಕನಾಗಿ, ಕನಕಪ್ಪನಾಗಿ, ಕನಕನಾಯಕನಾಗಿ, ಕನಕದಾಸರಾಗಿ ಜೀವನದಲ್ಲಿ ಹಲವು ಘಟ್ಟಗಳನ್ನೇರಿ ಮುಕ್ತವಾಗಿ ಅನುಭವಗಳನ್ನು ಅರ್ಜಿಸಿಕೊಂಡವರು ಕನಕದಾಸರು. ಕನ್ನಡ ಸಾಹಿತ್ಯ ಸಂಸ್ಕøತಿಯಲ್ಲಿ ಚಲನಶೀಲವಾದ ನೆಲೆ ಕಂಡುಕೊಂಡ ವ್ಯಕ್ತಿ. ಐದನೂರು ವರ್ಷಗಳ ಅನಂತರವು ಕೂಡ ನಮ್ಮ ಸಾಮಾಜಿಕ ಬದುಕು, ಅದರ ಒಳಿತು ಕೆಡಕುಗಳ ವಿವೇಚನೆ ಹಾಗೂ ನಮ್ಮನ್ನು ಗಹನವಾದ ಸಾಂಸ್ಕøತಿಕ ಚಿಂತನೆಯತ್ತ ಸಾಗುವಂತೆ ಮಾಡುವ ವಿಸ್ಮಯಕಾರಿ ಬರಹಗಳು ಕನಕದಾಸರು.
16 ನೇ ಶತಮಾನದಲ್ಲಿ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದ ತಿಮ್ಮಪ್ಪನಿಗೆ ತಂದೆಯ ಅಕಾಲಿಕ ಸಾವು ಜವಾಬ್ದಾರಿಯನ್ನು ಹೊರುವಂತೆ ಮಾಡಿತು. ಅನಂತರದ ದಿನಗಳಲ್ಲಿ ಅಮ್ಮನ ಸಾವು, ಮಗನ ಸಾವು, ಮಡದಿಯ ಸಾವು, ಈ ಸಾವುಗಳ ಸರಮಾಲೆಯ ಜೊತೆಗೆ ದಂಡನಾಯಕನಾಗಿದ್ದ ಈತ ಯುದ್ಧವೊಂದರಲ್ಲಿ ಸೋತದ್ದು ಜೀವನವನ್ನು ಜರ್ಜರಿತವನ್ನಾಗಿಸಿತು. ಲೌಕಿಕ ನಶ್ವರತೆ ಕನಕಪ್ಪನಿಗೆ ಬಹುವಾಗಿ ಆಘಾತಕ್ಕೆ ಈಡುಮಾಡಿತು. ಜೀವನ ನಶ್ವರ ಎಂಬ ನಿಲುವಿಗೆ ಬದ್ದನಾದ ಕನಕಪ್ಪನಿಗೆ ಮೋಕ್ಷ ಸಾಧನೆಯತ್ತ ಮನ ಹರಿಯಿತು. ಪರಿಣಾಮ ಪದವಿ, ಅಂತಸ್ತು, ಪುರಸ್ಕಾರ, ಬಂಧು ಬಳಗ ಸರ್ವವನ್ನು ತ್ಯಜಿಸಿ ದಾಸನಾಗಿ ಬಯಲಿನತ್ತ ಹೊರಟರು. ತನ್ನ ಜಿವಿತಾವಧಿಯಲ್ಲಿ ವಿಜಯನಗರ ಸಾಮ್ರಾಜ್ಯದ ಉಚ್ಛ್ರಾಯ ಸ್ಥಿತಿಯೂ, ತದನಂತರ ಅದರ ಪಥನವು ನಾಡಪ್ರೇಮಿ ಕನಕದಾಸರಿಗೆ ಬಹುವಾಗಿ ಕಾಡಿತು.
ವೈಷ್ಣವ ಧರ್ಮ ಪ್ರಾಬಲ್ಯ ಹೊಂದಿದ ಕಾಲಮಾನದಲ್ಲಿ ಕನಕರು ಜ್ಞಾನ ಮಾರ್ಗವನ್ನು ಹುಡುಕಿ ಹೊರಟರು. ಕುರುಬ ಕುಲದಲ್ಲಿ ಹುಟ್ಟಿದ ಕನಕರು ಜ್ಞಾನಿ ಎಂದು ಅರಿತ ಮೇಲೆ ವ್ಯಾಸರಾಯರು ಗÀುರುಗಳಾಗಿ ದೊರೆತರು. ಆದರೆ ತಮ್ಮ ಉಳಿದ ಶಿಷ್ಯರಿಗೆ ಕನಕರ ವ್ಯಕ್ತಿತ್ವವನ್ನು ಪರಿಚಯಿಸುವ ಅನೇಕ ಪ್ರಸಂಗಗಳು ನಡೆದು ಹೋದವು. “’ನಾನು’ ಹೋದರೆ ಸ್ವರ್ಗಕ್ಕೆ ಹೋಗಬಹುದು”, “ಯಾರು ಇಲ್ಲದ ಜಾಗದಲ್ಲಿ ಬಾಳೆಹಣ್ಣು ತಿನ್ನಲಾಗಲಿಲ್ಲ” ಎಂಬುದು, ಹೀಗೆ ಹಲವು.
ಕನಕದಾಸರು ವ್ಯಾಸರಾಯರಿಂದ ಬಿಳ್ಕೊಂಡ ಮೇಲೆ ಎಲ್ಲಿಯೂ ಮಠಸ್ಥರಾಗದೇ, ಒಂದು ಕಡೆ ನಿಲ್ಲದೆ, ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಾ , ಕೀರ್ತನೆಗಳನ್ನು ರಚಿಸುತ್ತಾ ಹಾಡುತ್ತಾ ಸಾಗಿದರು. ಕನಕದಾಸರ ಕಾವ್ಯಗಳು, ಕೀರ್ತನೆಗಳು ಮಾನವೀಯ ನೆಲೆಯಲ್ಲಿ ಪ್ರತಿಸ್ಪಂದಿಸಿದ್ದು , ಮನುಷ್ಯ ಸಮಾಜದೊಂದಿಗೆ ಸ್ಪಂದಿಸುತ್ತ, ಕಾಲಮಾನದೊಟ್ಟಿಗೆ ಬೆಳೆಯುತ್ತಲೆ ಇದೆ. ಭಕ್ತಿಯೆಂಬ ಜೀವತತ್ವದಲ್ಲಿ ಕಾಯಾ ವಾಚಾ ಮನಸಾ ನೆಲೆನಿಂತು ಪರಿಪಕ್ವಗೊಂಡ ಇವರ ವ್ಯಕ್ತಿತ್ವ ನಮಗೆಲ್ಲ ಆದರ್ಶಪ್ರಾಯವಾದುದು.
ಕನಕದಾಸರು ಸಾಮಾಜಿಕ, ಪೌರಾಣಿಕ, ಪಾರಮಾರ್ತಿಕ ಅಂಶಗಳನ್ನೊಳಗೊಂಡ ಸುಮಾರು ಮುನ್ನೂರಕ್ಕೂ ಹೆಚ್ಚು ಕಿರ್ತನೆಗಳನ್ನು ರಚಿಸಿದ್ದರು. ಜೊತೆಗೆ ನಾಲ್ಕು ಅಪರೂಪದ ಕಾವ್ಯ ಕೃತಿಗಳಾದ ಮೋಹನ ತರಂಗಿಣಿ, ಹರಿಭಕ್ತಿ ಸಾರ, ರಾಮ ಧ್ಯಾನ ಚರಿತ ಮತ್ತು ನಳಚರಿತ್ರೆ ಎನ್ನುವ ಮಹಾನ್ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಅರ್ಪಿಸಿದ್ದಾರೆ.
ಹೀಗೆ ಕವಿಯಾಗಿ, ವೀರಕ್ತನಾಗಿ, ಭಕ್ತನಾಗಿ, ದಾಸನಾಗಿ, ದಾರ್ಶನಿಕನಾಗಿ, ಕೀರ್ತನೆಕಾರನಾಗಿ, ಸಂಸ್ಕøತಿಕ ಚಿಂತಕನಾಗಿ ಜನಪದರಲ್ಲಿ ಒಬ್ಬನಾಗಿ ಕನಕದಾಸರು ಕನ್ನಡ ಸಂಸ್ಕøತಿ ಮತ್ತು ಮಾನವ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಹಲವು ವ್ಯಕ್ತಿತ್ವಗಳು ಒಂದೆಡೆ ಸೇರಿ ಧರ್ಮದೊಂದಿಗೆ ಪ್ರವಹಿಸುತ್ತಲೇ ಬರುತ್ತಿವೆ. ಇದೇ ಮಹಾಸಂತಕವಿ ಕನಕದಾಸರ ಅನನ್ಯತೆ, ಶ್ರೇಷ್ಠತೆ ಈ ಕಾರಣದಿಂದಲೇ ಕನಕರು ಕನ್ನಡ ಸಾಂಸ್ಕøತಿಕ ಲೋಕದಲ್ಲಿ ಚಿರಸ್ಥಾಯಿ ಧ್ರುವತಾರೆ.