ಹೌದು, ಈ ಹೋರಾಟವು ಪಾಕಿಸ್ತಾನದ ವಿರುದ್ಧ ನಾಲ್ಕನೇ ನೇರ, ಸಶಸ್ತ್ರ ಸಂಘರ್ಷವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನೊಳಗೆ ನುಸುಳಿದವರು ನಮ್ಮ ಸೈನಿಕರಲ್ಲ ಎನ್ನುತ್ತಲೇ ಇದ್ದ ಪಾಕಿಸ್ತಾನವು, ಸದ್ದಿಲ್ಲದೆ ಭಾರತದ ಗಡಿಯೊಳಕ್ಕೆ ಉಗ್ರಗಾಮಿಗಳ ಸೋಗಿನಲ್ಲಿ ಒಳಗೆ ನುಗ್ಗಿತ್ತು.
1999ರ ಫೆಬ್ರವರಿ ತಿಂಗಳಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಐತಿಹಾಸಿಕ ಲಾಹೋರ್ ಬಸ್ ಯಾತ್ರೆಯ ಮೂಲಕ ಪಾಕಿಸ್ತಾನಕ್ಕೆ ತೆರಳಿ, ಅಲ್ಲಿನ ಪ್ರಧಾನಿ ನವಾಜ್ ಶರೀಫ್ ಅವರಿಗೆ ಭಾರತಕ್ಕೆ ಆಹ್ವಾನ ನೀಡಿದ್ದರಲ್ಲದೆ, ಲಾಹೋರ್ ಘೋಷಣೆಗೆ ಸಹಿ ಹಾಕಿದ್ದರು. ಕಾಶ್ಮೀರ ಬಿಕ್ಕಟ್ಟಿಗೆ ಶಾಂತಿಯುತವಾದ ದ್ವಿಪಕ್ಷೀಯ ಪರಿಹಾರ ಕಂಡುಕೊಳ್ಳುವ ಘೋಷಣೆಯಾಗಿತ್ತದು.
ಆದರೆ, ಅವರು ಭಾರತಕ್ಕೆ ವಾಪಸ್ ಬಂದಿದ್ದೇ ತಡ, ಬೆನ್ನಿಗೇ ಚೂರಿ ಇರಿದ ಪಾಕಿಸ್ತಾನವು, ಗಡಿ ನಿಯಂತ್ರಣ ರೇಖೆಯೊಳಗೆ ತನ್ನ ಸೈನಿಕರನ್ನು ನುಗ್ಗಿಸಿತು. ಮಾಮೂಲಿ ಗುಂಡಿನ ಚಕಮಕಿ, ಉಗ್ರರ ಒಳನುಸುಳುವಿಕೆ ಎಂದು ಅರಿತಿದ್ದ ಭಾರತೀಯ ಸೇನೆಗೆ, ಕೊನೆಗೆ ಇದು ಪಾಕಿಸ್ತಾನ ಸೇನೆಯ ಅತಿಕ್ರಮಣ ಎಂದು ಅರಿವಾದಾಗ, ಪೂರ್ಣ ಪ್ರಮಾಣದಲ್ಲಿ ಸೈನಿಕರು ದೇಶರಕ್ಷಣೆಗೆ ನಿಂತರು. ಇದೆಲ್ಲ ದುಸ್ಸಾಹಸದ ಹಿಂದಿದ್ದದ್ದು ಅಂದಿನ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಪರ್ವೇಜ್ ಮುಷರ್ರಫ್ ಎಂಬ ಧೂರ್ತ. ಆತ 1998ರ ಅಕ್ಟೋಬರ್ ತಿಂಗಳಲ್ಲಿ ಪಾಕ್ ಸೇನೆಯ ನೊಗವನ್ನು ತನ್ನ ಕೈಗೆ ತೆಗೆದುಕೊಂಡಂದಿನಿಂದ ಭಾರತದ ಮೇಲೆ ಆಕ್ರಮಣಕ್ಕೆ ಯೋಜನೆ ರೂಪಿಸುತ್ತಲೇ ಇದ್ದ. “ಆಪರೇಶನ್ ಬದ್ರ್” ಎಂಬ ದುಸ್ಸಾಹಸಕ್ಕೆ ಕೈಹಚ್ಚಿದ ಪಾಕಿಸ್ತಾನವು ಕಾಶ್ಮೀರ ಕಣಿವೆಯಿಂದ ಲಡಾಖ್ ಅನ್ನು ಬೇರ್ಪಡಿಸಿ, ಸಿಯಾಚಿನ್ ಗ್ಲೇಷಿಯರ್ ಅನ್ನು ವಶಪಡಿಸಿಕೊಳ್ಳುವ ಯೋಜನೆ ರೂಪಿಸಿತು.
ಕಾಶ್ಮೀರದಲ್ಲಿ ಆಗ ಮೈ ಗಡ್ಡೆಕಟ್ಟುವಷ್ಟು ಚಳಿಯ ಸಮಯ. ಸುಮಾರು ಮೈನಸ್ 48 ಡಿಗ್ರಿವರೆಗೂ ಒಮ್ಮೊಮ್ಮೆ ಶೈತ್ಯವು ತಲುಪುತ್ತದೆ. 1971ರ ಶಿಮ್ಲಾ ಒಪ್ಪಂದದ ಅನುಸಾರ, ಉಭಯ ರಾಷ್ಟ್ರಗಳೂ ಗಡಿ ನಿಯಂತ್ರಣ ರೇಖೆಯ ಗುಂಟ, ಮಾನವೀಯ ನೆಲೆಯಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳುವುದು ಸಂಪ್ರದಾಯ. ಆದರೆ, ಇದನ್ನೇ ಭಾರತದ ಒಳಗೆ ನುಗ್ಗಲು ಅವಕಾಶವಾಗಿ ಮಾಡಿಕೊಂಡ ಪಾಕಿಸ್ತಾನವು, ವಿಪರೀತ ಪರಿಸ್ಥಿತಿಯ ದುರ್ಲಾಭ ಪಡೆದು ಉಗ್ರರನ್ನೂ, ಸೈನಿಕರನ್ನೂ ಕಾರ್ಗಿಲ್ ವಲಯದ 160 ಕಿ.ಮೀ. ಗಡಿ ನಿಯಂತ್ರಣ ರೇಖೆಯೆಲ್ಲೆಡೆ ಒಳಗೆ ತಳ್ಳಿತು.
ಗನ್ನುಗಳು, ಗ್ರೆನೇಡುಗಳು, ವಿಮಾನವನ್ನೂ ಹೊಡೆದುರುಳಿಸಬಲ್ಲ ಅತ್ಯಾಧುನಿಕ ಆಯುಧಗಳಿಂದೊಡಗೂಡಿದ ಪಾಕಿ ಸೈನಿಕರು ಒಳ ನುಗ್ಗುತ್ತಿರುವುದು ಭಾರತೀಯ ಸೇನೆಯ ಗಮನಕ್ಕೆ ಬಂದಾಕ್ಷಣ, ವಾಜಪೇಯಿ ಸರಕಾರವು ‘ಆಪರೇಶನ್ ವಿಜಯ್’ ಕಾರ್ಯಾಚರಣೆ ಆರಂಭಿಸಿಯೇಬಿಟ್ಟಿತು. ಪಾಕ್ ಅತಿಕ್ರಮಿಸಿಕೊಂಡಿರುವ ಪ್ರತಿಯೊಂದು ಇಂಚು ನೆಲವನ್ನೂ ವಾಪಸ್ ಪಡೆದುಕೊಳ್ಳುವಂತೆ ವಾಜಪೇಯಿ ಆದೇಶಿಸಿದರು.
1999ರ ಜೂನ್ 7ರಂದು ವಾಜಪೇಯಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಐತಿಹಾಸಿಕ ಭಾಷಣ – “ನಮ್ಮ ಸೇನಾಪಡೆಗಳ ಮೇಲೆ ನನಗೆ ಪೂರ್ತಿ ವಿಶ್ವಾಸವಿದೆ. ನಮ್ಮ ಸೈನಿಕರು ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ, ಬೇರೆ ಯಾರು ಕೂಡ ಮುಂದೆಂದಿಗೂ ಇಂತಹಾ ದುಸ್ಸಾಹಸಕ್ಕೆ ಇಳಿಯದಂತೆ ಮಾಡುತ್ತಾರೆ”. ಇದರಿಂದ ಪ್ರೇರಿತರಾದ ಸೈನಿಕರು ಪಾಕಿಸ್ತಾನಿ ಸೇನೆಯು ಕುಯ್ಯೋ… ಮುರ್ಯೋ,… ಎಂದು ಕೂಗಾಡುತ್ತಾ, ದಯವಿಟ್ಟು ಭಾರತದ ಪ್ರಹಾರವನ್ನು ನಿಲ್ಲಿಸಿ ಎಂದು ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಕಾಲು ಹಿಡಿಯುವಲ್ಲಿವರೆಗೆ ತಲುಪಿತ್ತು.
20 ಸಾವಿರ ಮಂದಿ ಭೂಸೇನಾ ಪಡೆ ಯೋಧರು, 10 ಸಾವಿರ ಮಂದಿ ವಾಯು ಸೇನೆ, ಪ್ಯಾರಾ ಮಿಲಿಟರಿ ಪಡೆಯವರು ಗಡಿಯಲ್ಲಿ ಟೊಂಕ ಕಟ್ಟಿದರು. ಮೈನಸ್ 15 ಡಿಗ್ರಿ ಕೊರೆಯುವ ಚಳಿಯಲ್ಲಿ, ಸಮುದ್ರ ಮಟ್ಟಕ್ಕಿಂತ 16 ಸಾವಿರ ಅಡಿ ಎತ್ತರದ ಯುದ್ಧ ಭೂಮಿಯಲ್ಲಿ ಭಾರತೀಯ ಸೈನಿಕರು ಮೆರೆದಾಡಿದರು. ಶತ್ರುಗಳ ರುಂಡ ಚೆಂಡಾಡಿದರು. ವಾಯುಸೇನೆಯು ಭೂಸೇನಾ ಪಡೆಗಳಿಗೆ “ಆಪರೇಶನ್ ಸಫೇದ್ ಸಾಗರ್” ಮೂಲಕ ಬೆಂಬಲ ನೀಡುತ್ತಾ, ಉಗ್ರರು ಮತ್ತು ಪಾಕ್ ಸೈನಿಕರತ್ತ ಬಾಂಬ್ ಸುರಿಮಳೆಗರೆಯುತ್ತಿದ್ದರೆ, ಸೈನಿಕರು ಕೆಳಗೆ ವೀರಾವೇಶದಿಂದ ಹೋರಾಡಿದರು. ಈ ಯುದ್ಧದ ವಿಶೇಷತೆಯೆಂದರೆ, ಭಾರತವು ತನ್ನ ನೆಲದಲ್ಲೇ ಹೋರಾಡಿತೇ ಹೊರತು, ಎಂದಿಗೂ ಗಡಿ ನಿಯಂತ್ರಣ ರೇಖೆ ದಾಟಿ ಹೋಗಲಿಲ್ಲ. ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಮಾನ್ಯತೆ ನೀಡಿತ್ತು ಅದು. ಈ ಮೂಲಕ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಹೋರಾಟದಲ್ಲಿ ಮೇಲುಗೈ ಪಡೆಯಲು ಕೂಡ ಭಾರತಕ್ಕೆ ಸಾಧ್ಯವಾಯಿತು. ಪಾಕಿಸ್ತಾನವು ಸೋತು ಸುಣ್ಣವಾಯಿತು. ತಲೆ ತಗ್ಗಿಸಿತು. ಭಾರತದ ಒತ್ತಡ ತಾಳಲಾರದೆ ನವಾಜ್ ಶರೀಫ್ ಅವರಂತೂ ವಾಷಿಂಗ್ಟನ್‌ಗೆ ಧಾವಿಸಿ ಬಿಲ್ ಕ್ಲಿಂಟನ್ ಕಾಲು ಹಿಡಿಯುವುದು ಬಾಕಿ – ದಯವಿಟ್ಟು ಹೇಗಾದರೂ ಮಾಡಿ ಯುದ್ಧ ನಿಲ್ಲಿಸಿ ಅಂತ ಗೋಗರೆಯಬೇಕಾಯಿತು.
199ರ ಜುಲೈ 4ರಂದು ಕ್ಲಿಂಟನ್-ಶರೀಫ್ ಭೇಟಿಯಾದಾಗ, ಕ್ಲಿಂಟನ್ ಅಂತೂ ಪಾಕಿಗೆ ಬೆನ್ನು ಹಾಕಿಬಿಟ್ಟರು. ಪಾಕ್ ಸೈನಿಕರನ್ನು ಮೊದಲು ಭಾರತೀಯ ಭಾಗದಿಂದ ವಾಪಸ್ ಕರೆಸಿಕೊಳ್ಳಿ ಅಂತ ಸೂಚಿಸಿದಾಗ, ಶರೀಫ್ ಹತಾಶರಾಗಿದ್ದರು. ಯಾಕೆಂದರೆ, ಎಲ್ಲವೂ ಮುಷರಫ್ ಕೈಯಲ್ಲಿತ್ತು. ಅಷ್ಟು ಹೊತ್ತಿಗೆ ಅದಾಗಲೇ ಭಾರತದ ವೀರ ಯೋಧರು ಶೇ.80 ಭಾಗವನ್ನೂ ಮರಳಿ ಪಡೆದಿದ್ದರು. ಕೊನೆಯಲ್ಲಿ ಜುಲೈ 26ರಂದು ಕಾರ್ಗಿಲ್‌ನ ಕೊನೆಯ ಠಾಣೆಯನ್ನು ಭಾರತೀಯ ಸೇನೆ ವಶಪಡಿಸಿಕೊಂಡು ಗೆಲುವು ಘೋಷಿಸಿತು. ಅದುವೇ ಕಾರ್ಗಿಲ್ ವಿಜಯ ದಿವಸ. ಭಾರತವು ಯುದ್ಧದಲ್ಲಿ ಗೆಲುವು ಸಾಧಿಸಿ ತನ್ನ ಸೇನಾ ತಾಕತ್ತು ತೋರಿಸಿತಾದರೂ, ಅದಾಗಲೇ ತನ್ನ 527 ಮಂದಿ ವೀರಪುತ್ರರನ್ನು ಕಳೆದುಕೊಂಡಿತ್ತು. ಈ ದಿನ ಈ ಹುತಾತ್ಮ ವೀರರನ್ನು ಸ್ಮರಿಸೋಣ.
ಮಹ-ಮಹಾನ್ ನಾಯಕರ ಜನ್ಮ ದಿನಕ್ಕೋ, ಪುಣ್ಯ ತಿಥಿಗೋ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪತ್ರಿಕೆಗಳಲ್ಲಿ ಜಾಹೀರಾತು ರಾರಾಜಿಸುತ್ತಿರುತ್ತದೆ. ಪ್ರತಿಯೊಂದು ಸಚಿವಾಲಯವೂ ನಮ್ಮ ಮಾಜಿ ಪ್ರಧಾನಿಗಳ ಸೇವೆಯನ್ನು ನೆನಪಿಸುತ್ತದೆ. ಆದರೆ, ಗಡಿ ಕಾಯುತ್ತಾ, ಪ್ರಾಣತ್ಯಾಗ ಮಾಡಿದ ನಮ್ಮ ವೀರ ಯೋಧರನ್ನು ನೆನಪಿಸಿಕೊಳ್ಳಲು ನಮಗೆ ಪುರುಸೊತ್ತಿಲ್ಲ. ಯಾಕೆಂದರೆ, ನಾವೆಲ್ಲರೂ ಈಗ “ಭ್ರಷ್ಟಾಚಾರದ ವಿರುದ್ಧ” ಹೋರಾಡುತ್ತಿದ್ದೇವಲ್ಲಾ? ದೇಶ ಕಾಯ್ದ ಸಮರ ವೀರರಿಗಿದೋ ಸಾಸಿರ ಸಾಸಿರ ನಮನಗಳು. ಅದೇ ರೀತಿ, ದೇಶಕ್ಕೇ ಮುಳುವಾಗುತ್ತಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡುವ ವೀರ ಯೋಧರೂ ನಾವಾಗೋಣ. ಅಲ್ಲವೇ?
ಸಂಗ್ರಹ ಲೇಖನ.ಬರೆದವರಿಗೆ ಅಭಿವಂದನೆ.