Home Health ಮಂಗನ ಕಾಯಿಲೆಯ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ: ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕುರಿತಾದ ಲೇಖನ.

ಮಂಗನ ಕಾಯಿಲೆಯ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ: ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕುರಿತಾದ ಲೇಖನ.

ಇತ್ತೀಚಿನ ದಿನಗಳಲ್ಲಿ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಕಾಯಿಲೆ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಸ್.ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಿರುವ ಮಂಗನ ಕಾಯಿಲೆ ಜನರ ಬದುಕಿನಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಆರಂಭದಲ್ಲಿ ಕಾಡಿನಲ್ಲಿರುವ ಮಂಗಗಳಿಗೆ ಕಾಣಿಸಿಕೊಳ್ಳುವ ರೋಗ ತದನಂತರದಲ್ಲಿ ಮನುಷ್ಯ ಸಂಕುಲಕ್ಕೆ ಹರಡಿಕೊಂಡು ಉಗ್ರ ಸ್ವರೂಪವನ್ನು ತೋರಿಸುತ್ತಿದೆ.

ಏನಿದು ಮಂಗನ ಕಾಯಿಲೆ?
ಇದನ್ನು ಕ್ಯಾಸನೂರು ಫಾರೆಸ್ಟ್ ಡಿಸಿಸ್ ಅಥವಾ ಕ್ಯಾಸನೂರು ಕಾಡಿನ ಕಾಯಿಲೆ ಎಂದು ಸಹ ಕರೆಯುತ್ತಾರೆ. ಏಕೆಂದರೆ ಸಾವಿರ 1957 ರಲ್ಲಿ ಶಿವಮೊಗ್ಗದ ಕ್ಯಾಸನೂರು ಎಂಬಲ್ಲಿ ಈ ರೋಗ ಮೊದಲ ಬಾರಿ ಪತ್ತೆಯಾಯಿತು. ಆ ಕಾರಣಕ್ಕಾಗಿ ಇದನ್ನು ಕ್ಯಾಸನೂರು ಫಾರೆಸ್ಟ್ ಡಿಸಿಸ್ ಎಂದು ಕರೆಯುತ್ತಾರೆ. ಆರಂಭದಲ್ಲಿ ಮಂಗಗಳಿಗೆ ಕಾಣಿಸಿಕೊಂಡು ಮಂಗಗಳು ಸಾವನ್ನಪ್ಪುತ್ತವೆ. ತದನಂತರ ವೈರಾಣುವಿನಿಂದ ರೋಗಗಳು ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ. ಆ ಕಾರಣಕ್ಕಾಗಿ ಇದನ್ನು ಮಂಗನ ಕಾಯಿಲೆ ಅಂತಲೂ ಕರೆಯುತ್ತಾರೆ.

ಯಾವ ಪ್ರದೇಶದಲ್ಲಿ ಈ ಸಮಸ್ಯೆ ಹೆಚ್ಚು?
ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಹಾಗೂ ಸಾಗರ ತಾಲೂಕಿನ ಕೆಲವು ಕಡೆ ಕಂಡು ಬಂದ ಈ ರೋಗ ಚಿಕ್ಕಮಗಳೂರು, ಉತ್ತರ ಕನ್ನಡ,ದಕ್ಷಿಣ ಕನ್ನಡದಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ.ಪ್ರತಿವರ್ಷದ ಚಳಿಗಾಲದ ಅಂತ್ಯದ ಸಮಯದಲ್ಲಿ ಹಾಗೂ ಬೇಸಿಗೆಯ ಆರಂಭದ ಸಮಯದಲ್ಲಿ ಈ ರೋಗಗಳ ಸಾಧ್ಯತೆ ಹೆಚ್ಚಿರುತ್ತದೆ ಅಂದರೆ ಈ ರೋಗಗಳ ಹರಡುವಿಕೆ ಈ ಸಮಯದಲ್ಲಿ ಹೆಚ್ಚು.


ಹರಡುವಿಕೆ ಹೇಗಿರುತ್ತದೆ?
ಮೂಲತ: ಪ್ರಾಣಿಗಳಲ್ಲಿ ಕಂಡುಬರುವ ಈ ಕಾಯಿಲೆಯು ಸೈಬೀರಿಯಾ ಮೂಲದ ಪಕ್ಷಿಗಳಿಂದ ಈ ದೇಶಕ್ಕೆ ಬಂದಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಕಾಡಿನಲ್ಲಿ ವಾಸಿಸುವ ಬಾನೆಟ್ ಜಾತಿಯ ಮಂಗಗಳು ಹಾಗೂ ಮುಸ್ಯ ಪ್ರಾಣಿಗಳಿಗೆ ಈ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.ಈ ಪ್ರಾಣಿಗಳಲ್ಲಿರುವ ರೋಗಕಾರಕ ವೈರಸ್ ಗಳು(ಫ್ಲೇವಿ ವೈರಸ್) ಉಣ್ಣೆಗಳ ಅಥವಾ ಉಣುಗಿನ ಮುಖಾಂತರ ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹರಡುತ್ತದೆ. ಹೀಗೆ ಸೋಂಕು ತಗಲಿ ಸಾವನ್ನಪ್ಪಿದ ಮಂಗಗಳಿಂದ ಹೊರಬರುವ ರೋಗಗ್ರಸ್ತ ಉಣ್ಣೆಗಳು ಮಾನವನಿಗೆ ಕಚ್ಚುವುದರಿಂದ ಆಕಸ್ಮಿಕವಾಗಿ ಈ ಸೋಂಕು ಮಾನವನಿಗೆ ತಲುಪುತ್ತದೆ. ಆದರೆ ಈ ರೋಗ ಮಾನವನಿಂದ ಮಾನವನಿಗೆ ಹರಡುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ಪಿಡುಗು ಹೆಚ್ಚಾಗಿ ಕಂಡುಬರುವುದು ಜನವರಿಯಿಂದ ಜೂನ್ ತಿಂಗಳ ಅವಧಿಯಲ್ಲಿ ಅಂದರೆ ಈ ಸಮಯದಲ್ಲಿ ಉಣ್ಣೆಗಳ ಸಂತತಿ ವಿಪರೀತವಾಗಿ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಕಟ್ಟಿಗೆಗಾಗಿ ಅಥವಾ ಜಾನುವಾರುಗಳ ಮೇವಿಗಾಗಿ ಕಾಡಿಗೆ ತೆರಳುವ ಮನುಷ್ಯರಲ್ಲಿ ಈ ಉಣ್ಣೆ ಕಚ್ಚುವುದರಿಂದ ಈ ರೋಗ ಹರಡುತ್ತದೆ.

ರೋಗದ ಗುಣ ಲಕ್ಷಣಗಳೇನು?
ಉಣ್ಣೆ ಅಥವಾ ಉಣುಗಿನ ಕಡಿತದಿಂದ ವೈರಸ್ಗಳು ದೇಹ ಸೇರಿದ ಒಂದು ವಾರದ ನಂತರ ಈ ರೋಗದ ಗುಣಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೋಗದ ಗುಣ ಲಕ್ಷಣ ಗಳೆಂದರೆ,


ಅಸಾಧ್ಯ ಎನಿಸುವಂತಹ ಮೈ ಕೈ ನೋವು.
ವಿಪರೀತವಾದ ಜ್ವರ
ಸಹಿಸಿಕೊಳ್ಳಲಾರದಂತಹ ತಲೆನೋವು.
ನರ ದೌರ್ಬಲ್ಯ.
ದೇಹದ ಶಕ್ತಿ ಕುಂದುವುದು.
ವಸಡು ಮೂಗು ಹಾಗೂ ಕರುಳಿನಲ್ಲಿ ರಕ್ತಸ್ರಾವ.
ವಾಂತಿ
ಮಾಂಸ ಖಂಡಗಳಲ್ಲಿ ಮತ್ತು ಗಂಟುಗಳಲ್ಲಿ ನೋವು.
ಆಹಾರದ ಮೇಲೆ ಇಚ್ಛೆ ಇಲ್ಲದಿರುವುದು ಹಾಗೂ ಮಲಮೂತ್ರದಲ್ಲಿ ತೊಂದರೆ.
ಮೆದುಳಿನಲ್ಲಿನ ಉರಿಯೂತದಿಂದ ಮಂಪರು ಬರುವುದು ಪ್ರಜ್ಞೆ ನಾಶವಾಗುವುದು ಇನ್ನು ಮುಂತಾದ ತೊಂದರೆಗಳು ಕಾಣಿಸಬಹುದು.
ಈ ಸಮಯದಲ್ಲಿ ರೋಗಿಯ ಸ್ಥಿತಿ ಗಂಭೀರವಾಗಿದ್ದು ಸರಿಯಾದ ಚಿಕಿತ್ಸೆ ಕ್ರಮದಿಂದ 90% ಕ್ಕೂ ಹೆಚ್ಚು ಜನರು ಯಶಸ್ವಿಯಾಗಿ ಗುಣಮುಖರಾಗುತ್ತಾರೆ.

ಮುಂಜಾಗ್ರತೆ ಹಾಗೂ ನಿಯಂತ್ರಣ ಹೇಗೆ?
ಉಣ್ಣೆಹುಳುಗಳ ನಿಯಂತ್ರಣ: ಕಾಯಿಲೆಯು ವ್ಯಾಪಕವಾಗಿ ಕಾಣಿಸಿಕೊಂಡ ಸ್ಥಳಗಳಲ್ಲಿ ಉಣ್ಣೆನಾಶಕ ಔಷಧಗಳನ್ನು ಸಿಂಪಡಿಸಬೇಕು. ಮಂಗಗಳು ಮೃತಪಟ್ಟ ಸ್ಥಳದ ಸುತ್ತಲೂ ತೀವ್ರಗತಿಯಲ್ಲಿ ಔಷಧವನ್ನು ಸಿಂಪಡಿಸಬೇಕು. ಮೃತ ಪಟ್ಟ ಮಂಗಗಳು ದೊರೆತ ಸ್ಥಳದ ಸುತ್ತಲೂ ಸುಮಾರು ಐವತ್ತು ಮೀಟರ್ ದೂರದವರೆಗೆ ಈ ಸಿಂಪಣೆ ಮಾಡಬೇಕು. ಉಣ್ಣೆನಾಶಕಗಳಾದ ಕಾರ್ಬೋರಿಲ್, (carboryl) ಫೆಂತಿಯಾನ್ (Fenthion) ಮತ್ತು ಪ್ರೊಪೊಕ್ಸರ್ (Propoxur) – ಇಂಥವನ್ನು  ಹೆಕ್ಟೇರಿಗೆ ಸುಮಾರು 2.25 ಕೆ.ಜಿ.ಯಷ್ಟು ಸಿಂಪಡಿಸಬೇಕು.


ಜಾನುವಾರುಗಳ ಓಡಾಟದ ನಿಯಂತ್ರಣ: ಇಂತಹ ಪ್ರದೇಶಗಳಲ್ಲಿ ಜಾನುವಾರುಗಳನ್ನು ಕಾಡುಗಳಲ್ಲಿ ಮೇಯಲು ಬಿಡುವುದನ್ನು ನಿಷೇಧಿಸಬೇಕು. ಉಣ್ಣೆಹುಳುಗಳು ಜಾನುವಾರುಗಳ ದೇಹದ ಮೇಲೆೆ

ಆಶ್ರಯ ಪಡೆಯುವುದರಿಂದ ಅವುಗಳನ್ನು ಆದಷ್ಟು ಮನೆಯಲ್ಲಿಯೇ ಮೇವು ಒದಗಿಸಿ ನೋಡಿಕೊಳ್ಳಬೇಕು. ಜಾನುವಾರುಗಳಿಗೂ ಉಣ್ಣೆಗಳಿಂದ ರಕ್ಷಣೆಯನ್ನು ಒದಗಿಸಬೇಕು.

ಕೆ.ಎಫ್.ಡಿ. ನಿರೋಧಕ ಲಸಿಕೆ
ಮಂಗ, ಮನುಷ್ಯ ಹಾಗೂ ಉಣ್ಣೆ – ಈ ಮೂರರಿಂದ ಪಡೆದ ರಕ್ತದ ಮಾದರಿಯಲ್ಲಿ ವೈರಾಣುವಿನ ಅಂಶ ಕಂಡು ಬಂದಂತಹ ಪ್ರದೇಶ ಹಾಗೂ ಅಲ್ಲಿಂದ ಐದು ಕಿಲೋಮೀಟರ್ ಸುತ್ತಲಿನ ಪ್ರದೇಶಗಳನ್ನು ಮಂಗನ ಕಾಯಿಲೆ ಅಪಾಯವಿರುವ ಪ್ರದೇಶಗಳು ಎಂದು ಗುರುತಿಸಲಾಗುತ್ತದೆ. ಈ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಕೆ. ಎಫ್. ಡಿ. ಲಸಿಕೆಯನ್ನು ಹಾಕಲಾಗುತ್ತದೆ. ಸಾಮಾನ್ಯವಾಗಿ ಏಳರಿಂದ ಅರವತ್ತೈದು ವರ್ಷ ವಯೋಮಾನದ ಎಲ್ಲ ಸ್ತ್ರೀ–ಪುರುಷರಿಗೆ ಈ ಲಸಿಕೆಯನ್ನು ಹಾಕಲಾಗುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿಯೇ ಈ ಲಸಿಕೆಯನ್ನು ಹಾಕಿಸಿಕೊಳ್ಳುವುದು ಹೆಚ್ಚು ಸೂಕ್ತ. ಮೊದಲೆರಡು ಚುಚ್ಚುಮದ್ದುಗಳನ್ನು ಒಂದು ತಿಂಗಳಿನ ಅಂತರದಲ್ಲಿ ಹಾಕಿಸಿಕೊಳ್ಳಬೇಕು. ನಂತರದ ಹೆಚ್ಚುವರಿ ಚುಚ್ಚುಮದ್ದುಗಳನ್ನು ಆರು ತಿಂಗಳ ಬಳಿಕ, ಒಂದು ವರ್ಷದ ಬಳಿಕ, ನಂತರ ವರ್ಷಕ್ಕೊಂದಂತೆ ಐದು ವರ್ಷಗಳವರೆಗೆ ಹಾಕಿಸಿಕೊಳ್ಳಬೇಕು.
ಶರೀರಕ್ಕೆ ಉಣ್ಣೆ ನಿವಾರಕಗಳ ಲೇಪನ: ಆರೋಗ್ಯ ಇಲಾಖೆಯು ಅಪಾಯ ಪ್ರದೇಶದ ಜನರಿಗೆ ಉಚಿತವಾಗಿ ಉಣ್ಣೆನಿವಾರಕ ಔಷಧಗಳನ್ನು (ಡೈಮಿಥೈಲ್ ಫ್ತ್ಯಾಲೇಟ್‍ DMP) ಪೂರೈಸುತ್ತದೆ. ಹೊಲಗದ್ದೆಗಳಿಗೆ ಕೆಲಸಕ್ಕೆ ಹೋಗುವ ಮೊದಲು ಈ ಔಷಧವನ್ನು ಕೈ ಕಾಲುಗಳಿಗೆ ಲೇಪಿಸಿಕೊಳ್ಳಬೇಕು.
ದಿನನಿತ್ಯ ಎರಡು ಬಾರಿ ಬಿಸಿ ನೀರಿನ ಸ್ನಾನ ಮತ್ತು ಕೈ ಕಾಲನ್ನು ಹೊರಗಡೆಯಿಂದ ಬಂದ ತಕ್ಷಣ ಚೆನ್ನಾಗಿ ತೊಳೆದುಕೊಳ್ಳಬೇಕು.
ತರಕಾರಿಗಳನ್ನು ಚೆನ್ನಾಗಿ ತೊಳೆದು ಬಳಸಬೇಕು. ಪ್ರತಿನಿತ್ಯ 3 ರಿಂದ 4 ಲಿ ಚೆನ್ನಾಗಿ ಕುದಿಸಿದ ನೀರಿನ ಬಳಕೆ ಸೂಕ್ತ.
ಪ್ರತಿನಿತ್ಯ ಕ್ರಮ ಬದ್ಧ ಆಹಾರ,ಯೋಗಾಸನ, ಪ್ರಣಾಯಾಮದ ಅಭ್ಯಾಸದಿಂದ ರೋಗನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚುತ್ತದೆ.

-ಡಾ.ನಾಗರಾಜ ಭಟ್, ಕುಮಟಾ
[email protected]