ಎನ್ ಮುರಳೀಧರ್
ಅಡ್ವೋಕೇಟ್
ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆ

 

ಮಾನವನ ಜೀವನಕ್ಕೂ ಪ್ರಕೃತಿಗೂ ಅವಿನಾವ ಸಂಬಂಧ ಇದೆ, ಇದು ಮೇಲ್ನೋಟಕ್ಕೆ ಕಾಣದಿರಬಹುದು, ಆದರೆ ಪ್ರತಿಯೊಂದು ವಸ್ತುವನ್ನು ಸೂಕ್ಷ್ಮವಾಗಿ ನೋಡಿದಾಗ ಇದರ ಸತ್ಯಾಸತ್ಯತೆ ತಿಳಿಯುತ್ತದೆ. ಹೂವು, ಹಣ್ಣು, ಬೆಳಕು, ಇತ್ಯಾದಿಗಳು ಮಾನವನ ಜೀವನಕ್ಕೆ ಹೇಗೆ ಹೊಂದಿಕೊಂಡಿದೆ ಎಂಬುದನ್ನು ತಿಳಿಯೋಣ. ಮೊದಲಿಗೆ ಹೂವು ಮನುಷ್ಯನಿಗೆ ಯಾವ ರೀತಿಯಾಗಿ ಸಂಬಂಧ ಹೊಂದಿದೆ ಎಂಬ ಬಗ್ಗೆ ತಿಳಿಯೋಣ.
1) ಹೂವಿನ ಪಾವಿತ್ರ್ಯತೆ :
ಹೂವು ಒಂದು ದೇವರು ನೀಡಿರುವ ಪ್ರಕೃತಿಯ ಒಂದು ಸುಂದರ ಕೊಡುಗೆ. ಇದರ ಬಗ್ಗೆ ಹೇಳುವುದಾದರೇ ಹೂವುಗಳನ್ನು ಶುಭ ಅಶುಭ ಎಲ್ಲಾ ಕಾರ್ಯಗಳಲ್ಲಿ ಉಪಯೋಗಿಸುತ್ತೇವೆ. ಹೂವುಗಳು ಎಂದರೆ ಎಲ್ಲರಿಗೂ ಇಷ್ಟ. ಒಂದೊಂದು ಹೂವು ಅದರದೇ ವೈಶಿಷ್ಟ್ಯವನ್ನು ಹೊಂದಿರುತ್ತವೆ. ಗಣೇಶನಿಗೆ ಎಲ್ಲಾ ರೀತಿಯ ಹೂವು ಇಷ್ಟವೆಂದು ಹೇಳುತ್ತಾರೆ. ಅದೇರೀತಿ ಪ್ರತಿಯೊಂದು ಹೂವು ಒಂದೊಂದು ದೇವರಿಗೆ ಇಷ್ಟವೆಂದು ಹೇಳುತ್ತಾರೆ. ಎಲ್ಲಾ ಹೂವುಗಳು ಕೂಡ ದೇವರಿಗೆ ಅರ್ಪಿತವಾಗಲು ಹುಟ್ಟುತ್ತವೆಯೇನೋ ಅನಿಸುತ್ತದೆ. ಹೂವಿನ ಆಯುಷ್ಯ ಕೇವಲ ಒಂದು ದಿನವಾದರೂ ಅದು ಇರುವವರೆಗೂ ಎಲ್ಲರಿಗೂ ಸಂತೋಷವನ್ನು ಉಂಟುಮಾಡುವ ಗುಣವನ್ನು ಹೊಂದಿರುತ್ತದೆ. ಅದೇ ರೀತಿ ಮನುಷ್ಯನಿಗೆ ಹಿಂದಿನ ಕಾಲದಲ್ಲಿ ಮಾಡಿರುವ ಒಂದು ಅಂದಾಜಿನಂತೆ ಸುಮಾರು 100 ವರ್ಷ ಆಯುಷ್ಯವಿರುತ್ತದೆ. ತಮ್ಮ ಜೀವನದಲ್ಲಿ ಯಾವುದಾದರೂ ಒಂದು ರೀತಿಯ ಪರೋಪಕಾರವನ್ನು ಮಾಡಿ ಹೂವಿನಂತೆ ಎಲ್ಲರನ್ನೂ ಸಂತೋಷ ಪಡಿಸುವವರೂ ಇದ್ದಾರೆ ಇದಕ್ಕೆ ವಿರುದ್ದವಾಗಿ ಇರುವವರೂ ಇದ್ದಾರೆ.
ಹೂವು ಮಾನವನ ಜೀವನದಲ್ಲಿ ಅವಿನಾವ ಸಂಭಂದ ಹೊಂದಿದೆ ಎಂದರೆ, ಆಶ್ಚರ್ಯವಾಗಬಹುದು. ಹೂವಿಗೆ ಒಂದೇ ದಿನ ಆಯುಷ್ಯವಾದರೂ ಮನುಷ್ಯನಿಗೆ ಅದರಂತೆ ಬಾಳಿ ಬದುಕಿ ಎಂದು ನೀತಿ ಪಾಠವನ್ನು ಹೇಳುವಂತೆ ಇರುತ್ತದೆ. ಹೂವು ಮೊದಲು ಮೊಗ್ಗಾಗಿ ನಂತರ ಅರಳಿ ಬಾಡಿದಂತೆ, ಮನುಷ್ಯರೂ ಹುಟ್ಟಿ ಬೆಳೆದು, ಸಾಂಸಾರಿಕ ಸುಖ ದುಃಖ ಎಲ್ಲವನ್ನು ಅನುಭವಿಸಿ, ಕಡೆಗೆ ಹೂವು ಬಾಡಿ ಒಣಗಿದಂತೆ ಇವರೂ ಸಹ ಮೃತರಾಗುತ್ತಾರೆ.
ಉಪಯೋಗಿಸುವ ಮೊದಲು ಎಲ್ಲಾ ಹೂವುಗಳು ಪವಿತ್ರವಾಗಿಯೇ ಇರುತ್ತವೆ. ಅವುಗಳನ್ನು ಉಪಯೋಗಿಸುವ ರೀತಿಯಲ್ಲಿ ಅವುಗಳ ಪಾವಿತ್ರ್ಯತೆ ಉಳಿದಿರುತ್ತದೆ. ಅದೇ ರೀತಿ ಮನುಷ್ಯ ಹುಟ್ಟಿದ ತಕ್ಷಣ ಒಳ್ಳೆಯವನಾಗಿರುತ್ತಾನೆ. ಅವನು ಇರುವ ಮನೆತನ, ವಾತಾವರಣ, ಸ್ನೇಹಿತರ ಸಹವಾಸ, ಜೀವನ ಸೈಲಿ, ಎಲ್ಲವೂ ಅವನ ಒಳ್ಳೆಯತನ ಕೆಟ್ಟಗುಣಗಳು ಗೋಚರಿಸುತ್ತದೆ.
ಹೂವನ್ನು ದೇವರ ಪೂಜೆಗೆ ಉಪಯೋಗಿಸಿದಾಗ ಅದು ಬಾಡುವವರೆಗೂ ಪಾವಿತ್ರ್ಯತೆ ಉಳಿದಿದ್ದು ಬಾಡಿದ ನಂತರವೂ ಅದನ್ನು ದೇವರ ಪ್ರಸಾದವೆಂದು ಯಾರೂ ತುಳಿಯದ ಕಡೆ ಹಾಕುತ್ತಾರೆ. ಕೆಲವು ದೇವಸ್ಥಾನಗಳಲ್ಲಿ ಪ್ರಸಾದವೆಂದು ಪಡೆದ ಹೂವನ್ನು ಹೆಂಗಸರು ಕಣ್ಣಿಗೆ ಒತ್ತುಕೊಂಡು ತಲೆಯಲ್ಲಿ ಮುಡಿದು ಕೊಳ್ಳುತ್ತಾರೆ. ಭಕ್ತಾದಿಗಳು ಹೂವನಿಂದ ದೇವರನ್ನು ಪೂಜಿಸಿ, ಅಲಂಕರಿಸಿ ತಮ್ಮ ಭಕ್ತಿಯನ್ನು ದೇವರಿಗೆ ಅರ್ಪಿಸುತ್ತಾರೆ. ದೇವರಿಗೆ ಹೂವಿನ ಅಲಂಕಾರ ಮಾಡಿದಾಗ ನೋಡಿದ ಭಕ್ತರು ಧನ್ಯರಾಗುತ್ತಾರೆ. ಸುಂದರವಾಗಿ ಅಲಂಕಾರ ಮಾಡಿ ದೇವರಿಗೆ ಅರ್ಪಿಸಿದ ಹೂವಿನ ಕಳೆಯೇ ಬೇರೆ ರೀತಿ ಇರುತ್ತದೆ. ದೇವರಿಗೆ ಅರ್ಪಿಸಿದ ಪ್ರತಿಯೊಂದು ಹೂವು ದೇವರ ಪಾದ ಸೇರಿ ಧನ್ಯವಾಗುತ್ತವೆ. ಆ ಧನ್ಯತೆ ನಮಗೂ ಇರಲಿ ಎಂದು ದೇವರಲ್ಲಿ ಬೇಡುವ ಮಂದಿಗೆ ಲೆಕ್ಕವಿಲ್ಲ. ಎಲ್ಲರೂ ಹೂವಿನ ರೀತಿಯಲ್ಲಿ ಭಗವಂತನ ಪಾದ ಸೇರಿದರೆ ಸಾಕೆಂದು ತಮ್ಮ ಜನ್ಮ ಸಾರ್ಥಕವಾಗುವುದೆಂದು ತಿಳಿದಿರುತ್ತಾರೆ. ಆದರೆ ಅಂತಹ ಭಾಗ್ಯ ಯಾರಿಗೆ ಸಿಗುತ್ತೆ. ನಿಶ್ಚಲ ಭಕ್ತಿಯಿಂದ ದೇವರನ್ನು ಸದಾ ನಂಬಿ ದೇವರ ನಾಮ ಸ್ಮರಣೆ ಮಾಡುವ ಕೆಲವು ಮಂದಿಗೆ ಆ ರೀತಿಯ ಸೌಭಾಗ್ಯ ದೊರಕಬಹುದು.
ಯಾವುದಾದರೂ ಸಾರ್ವಜನಿಕ ಸಮಾರಂಭಗಳಲ್ಲಿ ಗಣ್ಯರಿಗೆ ಹಾಕುವ ಹಾರಗಳು ಅವರ ಕೊರಳಿನಲ್ಲಿ ಇರುವಷ್ಟು ಕಾಲ ಮಾತ್ರವೇ ಪವಿತ್ರವಾಗಿರುತ್ತವೆ. ಅದನ್ನು ಯಾರೂ ಪ್ರಸಾದ ಎಂದು ಸ್ವೀಕರಿಸುವುದಿಲ್ಲ. ಅವರ ಮನೆಗಳಲ್ಲಿ ಮಾತ್ರ ಅಲಂಕಾರಿಕ ವಸ್ತುಗಳಿಗೆ ಹಾಗೂ ಅವರು ಉಪಯೋಗಿಸುವ ಕಾರುಗಳಿಗೆ ಹಾಕುತ್ತಾರೆ.ಕೆಲವೊಮ್ಮೆ ಅವರ ಮನೆಯವರೂ ಮುಡಿದುಕೊಳ್ಳಲು ಉಪಯೋಗಿಸ ಬಹುದಷ್ಟೆ.
ಮೂರನೆಯದಾಗಿ, ಮನುಷ್ಯನು ಸತ್ತಾಗ ಉಪಯೋಗಿಸುವ ಹೂವು, ಅಂದರೆ ಮನುಷ್ಯನ ಗೌರವಾರ್ಥ ಅವನ ಮೃತ ಶರೀರದ ಮೇಲೆ ಹಾಕುವ ಹೂವು ಮೃತ ಶರೀರದ ಮೇಲೆ ಇರುವವರೆಗೂ ಪವಿತ್ರವಾಗಿರುತ್ತದೆ. ಅದನ್ನು ತೆಗೆದ ಮೇಲೆ ಯಾರಿಗೂ ಬೇಡವಾದ ವಸ್ತುವಾಗುತ್ತದೆ. ಅಲ್ಲಿಗೆ ಹೂವಿನ ಪಾವಿತ್ರ್ಯತೆ ಸಂಪೂರ್ಣವಾಗಿ ಹೋಗುತ್ತದೆ. ಅದನ್ನು ಯಾರೂ ಸಹ ಕಣ್ಣೆತ್ತಿಯೂ ನೋಡುವುದಿಲ್ಲ. ಸತ್ತವರ ಸ್ವತಃ ತಂದೆ ತಾಯಿ, ಹೆಂಡತಿ ಮಕ್ಕಳಿಗೂ ಸಹ ಬೇಡವಾಗುತ್ತದೆ.
ಮನುಷ್ಯ ಹುಟ್ಟಿದ ಮೇಲೆ ದೇವರ ಮೇಲೆ ಇರುವ ಹೂವಿನಂತೆ ಪಾವಿತ್ರ್ಯತೆ ಹೊಂದಿರಬೇಕು. ಅಂದರೆ ತನ್ನ ಒಳ್ಳೆಯಗುಣದಿಂದ ಮನುಷ್ಯ ಪವಿತ್ರನಾಗುತ್ತಾನೆ. ಅಂಥವರನ್ನು ಎಲ್ಲರೂ ಸತ್ಕರಿಸುತ್ತಾರೆ. ಶವದ ಮೇಲಿನ ಹೂವಿನಂತೆ ಆಗಬಾರದು. ಇದೇ ರೀತಿ ಮನುಷ್ಯರು ದೇವರ ಮೇಲಿನ ಹೂವಿನಂತೆ ತನ್ನ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕಾದರೆ, ಸಮಾಜದಲ್ಲಿ ಜ್ಞಾನಿಯಾಗಿ, ಪರೋಪಕಾರಿಯಾಗಿ, ಸದ್ಗುಣಗಳನ್ನು ಹೊಂದಿ ಘನತೆ, ಗೌರವವನ್ನು ಹೊಂದಿದರೆ ದೇವರ ಮೇಲಿನ ಹೂವಿನಂತೆ ಪವಿತ್ರನಾಗಿರುತ್ತಾನೆ. ಇದನ್ನು ಸಾಧಿಸಲು ಮನುಷ್ಯನಿಗೆ ಬಹಳ ಕಷ್ಟವಾಗಿರುತ್ತದೆ. ನಿಸ್ವಾರ್ಥತೆಯಿಂದ ಜನಗಳ ಕಷ್ಟ ಸುಖಗಳಿಗೆ ಸ್ಪಂದಿಸಿ, ಪರೋಪಕಾರಿಯಾಗಿ, ತನಗೆ ತಿಳಿದಿರುವ ವಿದ್ಯೆಯನ್ನು ಬೇರೆಯವರಿಗೂ ಹೇಳಿಕೊಟ್ಟು, ಧರ್ಮ ಮಾರ್ಗದಲ್ಲಿ ನಡೆದು ಭಕ್ತಿ ಶ್ರದ್ದೆಗಳಿಂದ ದೇವರನ್ನು ಆರಾಧಿಸಿದರೆ, ಎಲ್ಲರೂ ಅಂತಹವರಿಗೆ ಗೌರವವನ್ನು ನೀಡುತ್ತಾರೆ. ಆಗ ಅವರು ದೇವರ ಮೇಲಿನ ಪುಷ್ಪದಂತೆ ಇರಲು ಸಾದ್ಯ. ಮನುಷ್ಯ ಇರುವವರೆಗೂ ಅದೇ ಗುಣಗಳು ಇದ್ದಲ್ಲಿ ಪವಿತ್ರತೆ ಉಳಿದಿರುತ್ತದೆ. ಸತ್ತ ಮೇಲೂ ಅವನನ್ನು ಕೊಂಡಾಡುವ ಜನಗಳಿಗೆ ಕಡಿಮೆ ಏನಿಲ್ಲ. ಅವನು ಸತ್ತರೂ ಅಮರನಾಗಿರುತ್ತಾನೆ.
ಎಲ್ಲಾ ವಿದ್ಯೆ ಐಶ್ವರ್ಯ ಅಂತಸ್ತು ಎಲ್ಲಾ ಸಂಪಾದಿಸಿ, ಸ್ವಾರ್ಥತೆಯಿಂದ ಯಾರಿಗೂ ನೀಡದೆ ತಾನು ಆಯ್ತು ತನ್ನ ಕುಟುಂಬ ಆಯ್ತು ಎಂದುಕೊಂಡು ತನ್ನ ಕುಟುಂಬದವರ ಯೋಗಕ್ಷೇಮವನ್ನು ಮಾತ್ರ ನೋಡಿಕೊಂಡು ಎಂಥಾ ಸಂದರ್ಭದಲ್ಲಿಯೂ ಯಾರಿಗೂ ಉಪಕಾರ ಮಾಡದೆ ಇರುವ ಮನುಷ್ಯರು ಹಾಗೂ ತಾವು ಕಲಿತ ವಿದ್ಯೆಯನ್ನು ಯಾರಿಗೂ ಹೇಳಿಕೊಡದೆ ತನ್ನ ಮಕ್ಕಳಿಗೆ ಮಾತ್ರ ವಿದ್ಯೆಗಳನ್ನು ಹೇಳಿಕೊಡುವ ಮನುಷ್ಯರು ಹಾಗೂ ತಾನು ಸಂಪಾದಿಸಿದ ಹಣವನ್ನು ತನ್ನ ಮಕ್ಕಳಿಗೆ ಮಾತ್ರ ಮೀಸಲಿಟ್ಟಲ್ಲಿ ಅವರು ಕೇವಲ ಗಣ್ಯರಿಗೆ ಹಾಗುವ ಹೂವಿನಂತೆ ಆಗುತ್ತಾರೆ. ಆಗಲೇ ತಿಳಿಸಿದಂತೆ ಗಣ್ಯರಿಗೆ ಹಾಕುವ ಹೂವುಗಳನ್ನು ಅವರು ಮತ್ತು ಅವರ ಕುಟುಂಬದವರು ಮಾತ್ರ ಉಪಯೋಗಿಸುತ್ತಾರೆ. ಕೆಲವರಂತೂ ನಿಮ್ಮ ಕೊರಳಿಗೆ ಹಾಕಿದ ಹೂವನ್ನು ನಾನೇಕೆ ಮುಡಿಯಬೇಕು ಎಂದು ಅದನ್ನೂ ತಿರಸ್ಕರಿಸುತ್ತಾರೆ.
ಅದೇರೀತಿ ವಿದ್ಯೆ ಐಶ್ವರ್ಯ ಅಂತಸ್ತು ಎಲ್ಲಾ ಸಂಪಾದಿಸಿ, ಸ್ವಾರ್ಥತೆಯಿಂದ ಯಾರಿಗೂ ನೀಡದೆ ತನ್ನ ಕುಟುಂಬಕ್ಕೂ ಸರಿಯಾಗಿ ನೀಡದೆ ತನ್ನ ತಾಯಿ ತಂದೆ ಹೆಂಡತಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದೆ ಸರಿಯಾದ ವಿದ್ಯೆಯನ್ನು ನೀಡದೆ ತಾನು ಕಲಿತಿರುವ ವಿದ್ಯೆಯನ್ನೂ ಸಹ ಹೇಳಿಕೊಡದಂತೆ ಇರುವವರು ಶವದ ಮೇಲಿನ ಹೂವಿಗೆ ಸಮ. ಇವರು ಯಾರಿಗೂ ಬೇಡದ ವಸ್ತುವಾಗಿರುತ್ತಾರೆ.
ಯಾರೇ ಆಗಲೀ, ಮೊದಲಿನಿಂದಲೂ ಒಳ್ಳೆಯ ಗುಣಗಳನ್ನು ಕಲಿತು, ಸನ್ಮಾರ್ಗದಲ್ಲಿ ನಡೆಯುತ್ತಾ, ತಮ್ಮಲ್ಲಿರುವ ವಸ್ತುಗಳನ್ನು, ಅಥವಾ ವಿದ್ಯೆಯನ್ನು ಬೇರೆಯವರಿಗೆ ಸಾಧ್ಯವಾದಷ್ಟೂ ನೀಡಿ ಬೇರೆಯವರ ಬಾಳಿನಲ್ಲಿ ಬೆಳಕಾದಲ್ಲಿ ದೇವರು ಅವರಿಗೆ ಒಳ್ಳೆಯದನ್ನು ಮಾಡುವದರಲ್ಲಿ ಸಂಶಯವಿಲ್ಲ.
ಎಲ್ಲರಿಗೂ ವಿದ್ಯೆ ಹೇಳಿಕೊಟ್ಟು, ದಾನಧರ್ಮ ಮಾಡಿದವರನ್ನು ಎಲ್ಲರೂ ಗೌರವಿಸುತ್ತಾರೆ. ಅವರ ಮನೆಗೆ ಮಾತ್ರ ಮೀಸಲಾದರೆ ಯಾರಿಗೂ ಬೇಡವಾಗುತ್ತಾರೆ. ಯಾರಿಗೂ ಏನೂ ಹೇಳಿಕೊಡದೆ ದಾನ ಧರ್ಮ ಮಾಡದೆ ತನ್ನ ಜೀವನವನ್ನು ಸವೆಸುವವರು ಶವದ ಮೇಲಿನ ಹೂವಿನಂತೆ ಯಾರಿಗೂ ಬೇಡವಾಗುತ್ತಾರೆ.
ಅದೇ ರೀತಿ ಮಾನವರು ಹೂವಿನ ಗುಣಗಳನ್ನು ಹೊಂದಿರುತ್ತಾರೆ. ಹೂವಿನ ಸೌಂದರ್ಯವನ್ನು ಹೆಣ್ಣಿಗೂ ಹೋಲಿಸುತ್ತಾರೆ. ಹೂವಿನ ಗುಣವನ್ನು ಹೋಲಿಸುವ ಹೂವೆಂದರೆ, ಗುಲಾಬಿ ಹೂವು. ಈ ಹೂವು ನೋಡಲು ಅಂದವಾಗಿರುತ್ತದೆ. ಆದರೆ ನೇರವಾಗಿ ಮುಟ್ಟಿದರೆ ಅದರ ಮುಳ್ಳು ನಮಗೆ ತಗಲಿ ಗಾಯವಾಗುತ್ತದೆ. ಅದೇ ರೀತಿ ಕೆಲವರು ನೋಡಲು ಅಂದವಾಗಿದ್ದು, ಗುಣಗಳಲ್ಲಿ ಗುಲಾಬಿ ಮುಳ್ಳಿನ ಗುಣಗಳನ್ನು ಹೊಂದಿರುತ್ತಾರೆ.
ತಾವರೆ ಹೂವು, ತಾವರೆ ಹೂವು ಕೆಸರಲ್ಲಿ ಬೆಳೆದರೂ ಎಲ್ಲರೂ ಅದನ್ನು ಇಷ್ಟ ಪಡುವಂತೆ ಕೆಲವರು ಅವರ ಸುತ್ತ ಮುತ್ತ ಕೆಟ್ಟ ಜನಗಳೇ ಆವರಿಸಿದ್ದರೂ ಸಹ ಇವರು ಮಾತ್ರ ಒಳ್ಳೆಯವರಾಗಿಯೇ ಇರುತ್ತಾರೆ. ಕೆಸರಿನಲ್ಲಿರುವ ಕಮಲದಂತೆ ಇರುತ್ತಾರೆ.
ಮಲ್ಲಿಗೆ, ಸಂಪಿಗೆ ಹೂವು ಸುವಾಸನೆ ಬೀರಿ ಎಲ್ಲರನ್ನೂ ಆಕರ್ಷಿಸುವಂತೆ, ಕೆಲವರು ತಮ್ಮ ಗುಣಗಳಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಇನ್ನೂ ಕೆಲವರು ಯಾರಿಗೂ ಬೇಡವಾದ ಬೇಲಿ ಹೂವಿನಂತೆ ಇರುತ್ತಾರೆ. ಇವರು ಗುಣದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಯಾವರೀತಿಯಿಂದಲೂ ಬೇರೆಯವರಿಗೆ ಉಪಕಾರ ಮಾಡುವುದಿಲ್ಲ.
ಆದ್ದರಿಂದ ಯಾವ ರೀತಿ ಹೂವುಗಳು ದೇವರನ್ನು ಅಲಂಕರಿಸುತ್ತವೆಯೋ ಮನುಜರಾದವರು ಹೂವಿನಂತಹ ಭಾವನೆಗಳನ್ನು ಹೊಂದಿ ದೇವರ ಸಾನಿಧ್ಯವನ್ನು ಪಡೆಯಲು ಪ್ರಯತ್ನಿಸಬೇಕು. ಅಂದರೆ ಒಳ್ಳೆಯ ಗುಣಗಳನ್ನು ಹೊಂದಿ ಬಾಳುವಂತರಾಗಬೇಕು ಆಗಲೇ ಜೀವನ ಸಾರ್ಥಕವಾಗುತ್ತದೆ.

RELATED ARTICLES  ಯುಗದ ದಾರ್ಶನಿಕ ಸಂತ ಕವಿ ಕನಕದಾಸ