ಸಂಘಟನೆಯಲ್ಲಿ ಶಕ್ತಿ ಇದೆ. ಇದು ಎಲ್ಲರಿಗೂ ಅನುಭವ ವೇಧ್ಯ. ಆದರೆ ಸಂಘಟಿಸುವ ಕಾರ್ಯ ಅದು ಸುಲಭವಲ್ಲ. ವಿಭಿನ್ನ ಮನಸ್ಥಿತಿಯ ವಿಭಿನ್ನ ಆಚಾರ-ವಿಚಾರದ, ವಿಭಿನ್ನ ನಡೆ-ನುಡಿಯ ವ್ಯಕ್ತಿಗಳನ್ನು ಪರಸ್ಪರ ಬೆಸೆಯುವುದೆಂದರೆ ಅದೊಂದು ಭಗೀರಥ ಪ್ರಯತ್ನ.
‘ಆದರೆ ಒಟ್ಟಾಗುವ ಪ್ರವೃತ್ತಿ ಬಂದರೆ ಅದ್ಭುತ ಬದಲಾವಣೆ ಸಾಧ್ಯ’ ಎಲ್ಲೇ ಇದ್ದರೂ ಹೇಗೇ ಇದ್ದರೂ ನಮ್ಮತನವನ್ನು ಬಿಡದೇ ಸಂಘಟಿತರಾಗಿದ್ದರೆ ಆಪತ್ತುಗಳನ್ನು ಸುಲಭವಾಗಿ ಎದುರಿಸಬಹುದು. ಒಬ್ಬ ವ್ಯಕ್ತಿ ಪ್ರತ್ಯೇಕವಾಗಿ ನಿಂತರೆ ಅದು ಸಂಘಟನೆಯಲ್ಲ. ರಂಗೋಲಿ ರಚಿಸುವಾಗ ಇದ್ದ ಬಿಂದುಗಳು ರಂಗೋಲಿ ಪೂರ್ಣವಾದ ಮೇಲೆ ಒಂದೇ ಆಗಿರುವಂತೆ ಎಲ್ಲರೂ ಒಟ್ಟಿಗಿದ್ದರೆ ಅದು ಸಂಘಟನೆ. ಕಾಲ ಕೆಲವು ಬಾರಿ ನಮಗೆ ಅನುಕೂಲವಾದರೆ ಕೆಲವು ಬಾರಿ ಪ್ರತಿಕೂಲವಾಗಿರುತ್ತದೆ. ಅಂತಃಸತ್ವವನ್ನು ಉಳಿಸಿಕೊಂಡಿದ್ದರೆ ನಾವು ಹೊರಗಿನ ಆಪತ್ತಿನ ಜೊತೆ ಒಳಗಿನ ಆಪತ್ತನ್ನು ಎದುರಿಸಬಹುದು. ಸ್ವಾರ್ಥ ರಹಿತವಾದ ಮನೋಭಾವ, ಸಮಾಜಮುಖಿ ಚಿಂತನೆಯುಳ್ಳವರು ಮಾತ್ರ ಉತ್ತಮ ಸಂಘಟನೆಯನ್ನು ರೂಪಿಸಲು ಸಾಧ್ಯ.