ಮೊನ್ನೆ ಒಬ್ಬ ವಿದ್ಯಾರ್ಥಿ ಬಂದು ಸರ್ ಗೋವುಗಳ ಉದರದಲ್ಲಿ ಮುಕ್ಕೋಟಿ ದೇವರು ಇರುತ್ತಾರಂತೆ ಅದರೆ ಕೆಲವರು ಅದನ್ನು ಸಾಯಿಸಿ ತಿನ್ನುತ್ತಾರಲ್ಲ ? ಹಾಗಾದರೆ ಅವರು ದೇವರನ್ನೇ ಕೊಂದು ತಿನ್ನುತ್ತಾರೆ ಅಂದಹಾಗೆ ಆಗುತ್ತದೆಯಲ್ಲವೆ ? ದೇವರು ಅವಿನಾಶಿ ಅಂತಾದರೆ ಅವನ ನಾಶ ಹೇಗೆ ಸಾಧ್ಯ ಎಂದು ಬುದ್ಧಿಜೀವಿಯ ಹಾಗೆ ಪ್ರಶ್ನೆಗಳ ಸುರಿಮಳೆ ಸುರಿಸತೊಡಗಿದ. ಅವನ ಕುತೂಹಲ ತಣಿಸುವ ನಿಟ್ಟಿನಲ್ಲಿ ಸಮಪರ್ಕ ಉತ್ತರ ನೀಡಿ ಸಮಾಧಾನ ಪಡಿಸುವ ಹೊಣೆ ನನ್ನದಾಗಿತ್ತು.ನೋಡು ತಮ್ಮಾ,, ಗೋವಿನಲ್ಲಿ ಮುಕ್ಕೋಟಿ ದೇವರಿದ್ದಾರೋ ಇಲ್ಲವೋ ಆದರೆ ಮುಕ್ಕೋಟಿ ದೇವರುಗಳೂ ಕೂಡ ಗೋವನ್ನು ಗೌರವಿಸಲೇ ಬೇಕಾದ ಮಹತ್ತರವಾದ ಅಂಶ ಗೋವಿನಲ್ಲಿದೆ. ಗೋವು ಭಾರತದ ಮಣ್ಣಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ.
ಹೊರದೇಶದವರ ನಂಬಿಕೆ ಏನಿದೆಯೋ ಗೊತ್ತಿಲ್ಲ ಆದರೆ ನಮ್ಮ ದೇಶದ ಮಟ್ಟಿಗೆ ಗೋವನ್ನು ಹತ್ಯೆಗಯ್ಯುವುದು ಯಾವುದೇ ನೆಲೆಯಲ್ಲಿಯೂ ಸಮಂಜಸ ಅನಿಸುವುದಿಲ್ಲ ಕೇವಲ ಒಂದು ಧರ್ಮದವರಿಗೆ ಗೋವು ಪೂಜನೀಯ ಆಗಿರಬಹುದು ಉಳಿದ ಧರ್ಮದವರಿಗೂ ಗೋವು ಗೌರವನೀಯವಾಗಿದೆ. ಮಾಂಸದಾಸೆಗಾಗಿ ಕೆಲವರು ಅವುಗಳನ್ನು ಕೊಂದರೆ ಮತ್ತೆ ಕೆಲವರು ಮನುಜ ಮತದ ಮೇಲಿನ ಈರ್ಷೆಗಾಗಿ ಅವುಗಳ ಮರಣಮೃದಂಗ ಬಾರಿಸಿ ವಿಕೃತ ಆನಂದವನ್ನು ಅನುಭವಿಸುತ್ತಿದ್ದಾರೆ. ಗೋವು ಈ ನೆಲದ ಆಸ್ತಿ ಹಾಗೂ ನಂಬಿಕೆ ಇದಕ್ಕೆ ಯಾರೂ ಹೊರತಾಗಿ ಇರಬಾರದು.
ಪುರಾಣ ಕಾಲದಲ್ಲಿ ಒಬ್ಬ ವ್ಯಕ್ತಿಯ ಶ್ರೀಮಂತಿಕೆಯು ಆತನು ಹೊಂದಿರುವ ಧನ ಕನಕ ಗಳಿಗಿಂತಲೂ ಆತನ ಬಳಿ ಇರುವ ಗೋ ಸಂಪತ್ತಿನ ಸಂಖ್ಯೆಯ ಆಧಾರದಮೇಲೆ ಅಳೆಯಲ್ಪಡುತ್ತಿತ್ತಂತೆ.
ಭಾರತ ಕೃಷಿ ಪ್ರಧಾನ ರಾಷ್ಟ್ರ .ಇಂದು ಆಧುನಿಕತೆ ಭರಾಟೆಯಲ್ಲಿ ಕೃಷಿ ಕ್ಷೇತ್ರ ಕಳೆದುಹೋಗುತ್ತಿದೆ.ಕಡ್ಡಾಯ ಸಾರ್ವತ್ರಿಕ ಶಿಕ್ಷಣದ ದೆಸೆಯಿಂದ ಎಲ್ಲರೂ ಓದು ಬರಹ ಬಲ್ಲ ವಿದ್ಯಾವಂತರಾಗಿದ್ದಾರೆ! ಆದರೆ ಕುರಿತೋದಯೂ ಕಾವ್ಯ ಪ್ರಯೋಗಿಸಬಲ್ಲ ಮತಿಯನ್ನು ಕಳೆದು ಕೊಂಡು ಕುಳಿತೋದಿ ಉರುಹೊಡೆದಂಕ ಗಳಿಸಬಲ್ಲ ಪ್ರವೀಣರಾಗಿದ್ದೇವೆ.ಕಲಿತಷ್ಟು ಕತ್ತಿನ ಪಟ್ಟಿ ಬೆಳ್ಳಗಾಗುತ್ತಿದೆ.ಬೆವರು ಮೈಯ ಸಂಗವ ಬಿಟ್ಟು ಹೊರಬರಲು ನಿರಾಕರಿಸುತ್ತಿದ್ದೆ.ಹೀಗಿರುವಾಗ ತಮ್ಮ ಮಗು ಚೆನ್ನಾಗಿ ಓದಿ ವೈದ್ಯನೋ ಇಂಜಿನಿಯರೋ ಆಗಲಿ ಎಂದು ಆಶಿಸಬೇಕೆಂದೇ ಸಕಲರೂ ಬಯಸುತ್ತಾರೆ ವಿನಹ ಕಚ್ಚೆಕಟ್ಟಿ ಕೆಸರಿಗಿಳಿವ ಕೃಷಿ ರತ್ನ ಆಗಲಿ ಎಂದರೆ ಆ ದಿನವೇ ಹೀಗಂದವರನ್ನು ತಮ್ಮ ವಿರೋಧಿಗಳ ಸಾಲಿನಲ್ಲಿ ಸೇರಿಸುತ್ತಾರೆ.
ಯಾರಿಗೆ ಗೊತ್ತು ಕಾಲಚಕ್ರದ ಮಹಿಮೆ ಮುಂದೊಂದು ದಿನ ರೈತಾಪಿ ಮಾಡುವ ವ್ಯಕ್ತಿಗೇ ರತ್ನಗಂಬಳಿ ಹಾಸುವ ದಿನ ಬರಬಹುದೇನೋ. ಕೃಷಿಕ್ಷೇತ್ರದಲ್ಲಿ ರಾಸಾಯನಿಕ ಗೊಬ್ಬರ .ಆಧುನಿಕ ಯಂತ್ರೋಪಕರಣಗಳ ಭರಾಟೆಯ ನಡುವೆ ದನಗಳು ಕಳೆದು ಹೋಗುತ್ತಿವೆ.ಕೆಲವೆಡೆ ಅಂತೂ ಇದ್ದ ಅಷ್ಟಿಷ್ಟೂ ದನಗಳು ರಾತ್ರಿ ಬೆಳಗಾಗುವುದರೊಳಗೆ ಕಳೆದು ಹೋಗಹತ್ತಿವೆ.ಸಾಕಿದವರ ಹಾಗೂ ಆಳುವವರ ಅಸಡ್ಡೆತನಕೆ ಮೂಕ ಪ್ರಾಣಿ ಗೋವಿನ ಮಾರಣಹೋಮ ನಡೆಯುತ್ತಿದೆ. “ಎತ್ತು ಹೊಗೆ ಬಿಡುವುದಿಲ್ಲ ಟ್ರಾಕ್ಟರ್ ಸಗಣಿ ಹಾಕುವುದಿಲ್ಲ” ಎಂಬ ಹಿರಿಯರಾಡಿದ ಮಾತು ಮರೆತ ನಾವು ದನಗಳಿಂದ ದೂರ ಆಗಿದ್ದೇವೆ.
ಭಾರತದ ಮಣ್ಣ ಕಣಕಣದಲ್ಲೂ ಶೆಗಣಿ ಗಂಜಲಗಳು ಮಿಶ್ರಿತವಾಗಿದ್ದರೆ ಭೂಮಿಗೆ ಬಿದ್ದ ಬೀಜಗಳೆಲ್ಲವೂ ಹುಸಿಯಾಗದೇ ಅಂಕುರಿಸುತ್ತಿದ್ದವು.ಇಂದು ಎದೆಗೆ ಬಿದ್ದ ಅಕ್ಷರಗಳು ಹೃದಯಹೀನತೆಯನ್ನು ಉಂಟುಮಾಡುವಲ್ಲಿ ಸಫಲ ಆಗಿರುವ ಪರಿಣಾಮ ಎಲ್ಲೆಡೆಯಲ್ಲೂ ಬರಡು ,ಬಂಜೆತನವನ್ನು ಕಾಣುವಂತಾಗಿದೆ.
ಒಮ್ಮೆ ಯೋಚಿಸಿ ಮನೆಯ ಮುಂದೆ ಬೆಳೆಸಿದ ಸಣ್ಣ ಹೂವಿನ ಗಿಡದ ಬುಡಕ್ಕೆ ಒಂದು ಹಿಡಿ ಸಗಣಿ ಹಾಕಿದರೆ ಅದು ಸೊಕ್ಕಿ ಬೆಳವ ಬಗೆಯನ್ನು !
ಅದೇ ಭಾರತದ ತುಂಬೆಲ್ಲ ಗೋ ಸಂತತಿ ಸಮೃದ್ಧವಾಗಿದ್ದರೆ ಅದು ವಿಸರ್ಜಿಸುವ ಸೆಗಣಿ ಮೂತ್ರಗಳಿಂದ ಭೂಮಿ ಸದಾ ತಂಪಾಗಿ ಫಲವತ್ತಾಗಿದ್ದರೆ.ಎಷ್ಟು ಬೆಳೆಯ ಬಹುದಾಗಿತ್ತು? ಹಾಲು ಮೊಸರು ಬೆಣ್ಣೆ ತುಪ್ಪಗಳ ಸಂಪತ್ತು ಯಾವಪರಿ ಇರುತ್ತಿತ್ತು ?
ಈ ನೆಲದ ಗಂಧ ಗಾಳಿ ಎಷ್ಟು ತಂಪ ಸೂಸುತ್ತಿತ್ತು? ಇದರ ಹಿತ ಎಲ್ಲ ಜಾತಿ ಮತಗಳಿಗೂ ಆಗುತ್ತಿಲ್ಲವೆ ? ಇಂದು ಪರಿಸ್ಥತಿ ಎಲ್ಲಿಗೆ ಬಂದು ನಿಂತಿದೆಯೆಂದರೆ
ಹಿಂದೆ ಕನಿಷ್ಠ ಎಂಟು ಆಕಳು ಎರಡು ಎಮ್ಮೆಗಳಿಂದ ತುಂಬಿ ತುಳುಕುವ ಮನೆಯ ಕೊಟ್ಟಿಗೆಗೆ ಕಾಲಿಟ್ಟರೆ ಸೋತು ಸುಣ್ಣವಾದ ಹಾಳು ಹಂಪಿಯ ವಿಜಯನಗರ ಸಾಮ್ರಾಜ್ಯದ ನೆನಪಾಗುತ್ತದೆ. ಮನೆಯೊಳಗಿದ್ದ ಕಡುಗೋಲು ಮಕ್ಕಳ ಆಟಿಕೆಯಾಗಿ ಬದಲಾಗಿ ಮೊಸರು ಮಡಿಕೆ ಅಂಗಳದ ಕಟ್ಟೆಯಮೇಲೆ ಇಟ್ಟಗಿಡದ ಕುಂಡವಾಗಿ ರೂಪಾಂತರಗೊಂಡಿದೆ.
ಸೆಗಣಿ ಸಾರಿಸಿದ ಘಮ್ಮನೆ ಕಂಪೀವ ಮಣ್ಣಿನ ಅಂಗಳ ರೆಸಾರ್ಟ ಸೇರಿ ಲಕ್ಷಾಂತರ ಹಣಗಳಿಸಲು ಪ್ರಾರಂಭಿಸಿದರೆ ಮನೆಯಂಗಳಕ್ಕೆ ಗ್ರಾನೈಟ್ ಬಂದು ವಕ್ಕರಿಸಿ ಮನೆಯ ಹಿರಿರ,ಪುಟಾಣಿ ಕಂದಮ್ಮಗಳ ಕಾಲು ಕೈಗಳಿಗೆ ಬ್ಯಾಂಡೇಜ್ ಸುತ್ತಿಸುವಲ್ಲಿ ಸಫಲವಾಗಿದೆ.
ಮುಂಜಾನೆ ಮನೆಯ ಸುತ್ತ ಚುಮಕಿಸುವ ಗೋಮಯಗಳ ಸ್ಥಾನದಲ್ಲಿ ಸುಂದರ ಡೆಟಾಯಲ್ ಡಬ್ಬಗಳು ರಾರಾಜಿಸುತ್ತಿವೆ.
ಇವೆಲ್ಲವೂ ಆಗಲು ಕಾರಣ ನಮ್ಮ ಪಾಲಿಗೆ ಎಲ್ಲವೂ ಆಗಿದ್ದ ಗೋವುಗಳನ್ನು ನಾವು ಇಲ್ಲವಾಗಿಸಿಕೊಂಡ ಪರಿಣಾಮ.ಮೂವತ್ತು ನಲವತ್ತು ವರುರುಷಗಳ ಹಿಂದೆ ಮನೆಯಲ್ಲಿ ಹೊಸ ಆಕಳು ,ಹೊಸ ಎಮ್ಮೆ ತರುವುದೆಂದರೆ ಹೆಮ್ಮೆಯ, ಸಂಭ್ರಮದ ಕ್ಷಣಗಳಾಗಿದ್ದವು .ಇಂದು ಕಾರು ಬೈಕುಗಳನ್ನು ಬದಲಿಸುವಾಗ ಆಗುವ ಹಿತಾನುಭವ ಹಿಂದೆ ಸಾಕುಪ್ರಾಣಿಗಳನ್ನು ಖರೀದಿಸುವಾಗ ಆಗುತ್ತಿತ್ತು. ಬದಲಾದ ಸನ್ನಿವೇಶದಲ್ಲಿ ನಿರ್ಜೀವ ವಸ್ತುಗಳಿಗೆ ಮೌಲ್ಯ ವರ್ಧನೆಯಾಗಿ ಆತ್ಮವಿಲ್ಲದ ಜೀವಗಳನ್ನು ಹೊತ್ತು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಗೋವನ್ನು ಪ್ರತಿಪಾದಿಸುವವ ಗೋವಿಂದ ನಾಗುವ ಬದಲು ಕೋಮುವಾದಿ ಆಗತ್ತಿದ್ದಾನೆ.
ಏನೇ ಆದರೂ ತಲೆಗೆ ಸುರಿದುಕೊಂಡ ನೀರು ಪಾದಕ್ಕೆ ಬಂದೇ ಬರಬೇಕು.ಕಾಮಧೇನುವ ಕಳೆದುಕೊಂಡರೆ ಹೋಮಿಸಿ ಹೋಗುವುದು ಬದುಕು! ನನ್ನ ಮಾತು ಮುಂದುವರಿಯುತ್ತಿತ್ತು ಆಕಳ ಕತೆ ಕೇಳಲು ಬಂದ ಹುಡುಗನ ಬಾಯಲ್ಲಿ ಆಕಳಿಕೆ ಬರಲು ಪ್ರಾರಂಭವಾಯಿತು .ಬರ್ತೇನೆ ಸರ್ ” ಮಮ್ಮಿ ಶಾಪಿಂದ ಮಿಲ್ಕ ಪೌಡರ್ ತರಲು ಹೇಳಿದ್ದಾರೆ ಲೇಟಾಯ್ತು ಅಂತ ಅಚ್ಚ ಕನ್ನಡದ ನುಡಿಗಳನ್ನು ಸಿಡಿಸಿ ಮುನ್ನಡೆದ .
ಬಾಲಕನ ಪುಟ್ಟಪಾದಗಳು ಮೂಡಿಸಿದ ಹೆಜ್ಜೆಗುರುತುಗಳಲ್ಲಿ ದನಗಳ ಗೊರಸಿನ ಪ್ರತಿಬಿಂಬ ಗೋಚರಿಸಿ ಅವು ನನ್ನನ್ನು ವ್ಯಂಗ್ಯವಾಗಿ ನೋಡಿ ನಕ್ಕಂತೆ ಭಾಸವಾಗುತ್ತಿತ್ತು.
ಚಿದಾನಂದ ಭಂಡಾರಿ ಕಾಗಾಲ.
ಶಿಕ್ಷಕರು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕಮಟಾ.
ಮೊ 8970612257..