ನಿದ್ದೆ ಹೋಗಿದ್ದೇವೆ ನಾವು
ನೆಮ್ಮದಿಯಲ್ಲಿ
ಕಟ್ಟುತ್ತಲಿರುವಿರಿ ಸಿಮೆಂಟ್
ಇಟ್ಟಿಗೆಗಳಿಲ್ಲದ ಗೋಡೆಯ
ದೇಶ ಕಾಯುವ ರಕ್ಷಣಾ ಪಡೆಯ
ಹಸಿವು ನಿದ್ದೆಗಳು ಲೆಕ್ಕಕ್ಕಿಲ್ಲ
ಬಂದು ಬಾಂಧವರ ಸುಳಿವುಗಳಿಲ್ಲ
ತಾಯ ನೆಲದ ಅಭಿಮಾನ ಕಂಗಳಲ್ಲಿ
ನಿಂತ ನೆಲವನ್ನೆ ನುಂಗುತಿಹ
ತಿಮಿಂಗಲುಗಳಿಲ್ಲಿ
ಭರತ ಖಂಡದ ಹೆಮ್ಮೆಯ ಪುತ್ರರು
ನಿಮಗಿಲ್ಲ ಬಿಗುಮಾನ
ರಕ್ತದ ಕಣ ಕಣದಲ್ಲಿಹುದು
ಬರೀ ಸ್ವಾಭಿಮಾನ
ಬೆಂಕಿ ಹಚ್ಚಬಾರದು
ಕುದಿವ ಕೆಂಡವಾಗಬಾರದು
ಶಾಂತಿ ಮಂತ್ರವನ್ನಷ್ಟೇ ಸಾರಬೇಕು
ಎಲ್ಲಿಯವರೆಗೆ
ಎದೆಮೇಲೆ ನಿಂತು
ಭೂಗರ್ಭದಲಿ ನಿಮ್ಮ ಹೂಳುವವರೆಗೆ
ಸೌಹಾರ್ದತೆ ಮೆರೆಯುವೆವು
ಪ್ರೀತಿ ಹಂಚುವ ಮನಸ್ಸುಗಳಿಗೆ
ಸಿಂಹ ಸ್ವಪ್ನವಾಗುವೆವು
ಕೆಣಕಿದ ಜೀವಿಗಳಿಗೆ
ನಿದ್ದೆ ಹೋಗುವೆವು ನಾವು ನೆಮ್ಮದಿಯಲಿ.
ರೇಷ್ಮಾ ಉಮೇಶ ಭಟ್ಕಳ
ಶಿಕ್ಷಕರು ಶ್ರೀವಲಿ ಪ್ರೌಢಶಾಲೆ ಚಿತ್ರಾಪುರ