ವಿನಾಯಕ ಬ್ರಹ್ಮೂರು

ಎರಡು ಹೃದಯಗಳ ಪಿಸುಮಾತು ಪ್ರೀತಿ. ಮಾತಿಲ್ಲದೇ ಎರಡು ಹೃದಯಗಳ ಬೆಸೆಯುವಿಕೆ ಸ್ನೇಹ. ಪ್ರತಿಯೊಬ್ಬರ ಬದುಕಿನಲ್ಲಿಯೂ ಸ್ನೇಹದ ಅನುಭವ ಒಂದು ಹಿತವಾದ ಕಥನವಾಗಿ ಅಚ್ಚೊತ್ತಿರುತ್ತದೆ. ಯಾಕೆಂದರೆ ಸ್ನೇಹವೆಂದರೆ ಅಚಲ ನಂಬಿಕೆ, ಅರಿವಿಲ್ಲದೆಯೇ ಧೈರ್ಯವಾಗುವ ಶಕ್ತಿ. ಸ್ನೇಹದ ಬಗ್ಗೆ ಹೇಳ ಹೊರಟರೆ ಕಣ್ಣಳತೆ ದೂರದಲ್ಲಿ ಮುಗಿದು ತೀರುವುದಲ್ಲ. ಅದೊಂದು ಕಡಲು. ಆದರೆ ನನಗಿಂದು ವಿಭಿನ್ನವಾದ ಭಿನ್ನಚೇತನರ ಬದುಕಿನ ಕಥೆ ಹಾಗೂ ಇಡೀ ಸಮಾಜಕ್ಕೆ ಮಾದರಿಯೆನಿಸಬಲ್ಲ ಹಾದಿಯ ಆಯ್ಕೆ ಹಾಗೂ ಪ್ರಕೃತಿ ಮೇಲೆ ಪ್ರಭಾವ ಬೀರಿದ ಅವರ ಸ್ನೇಹದ ಬಗ್ಗೆ ಹೇಳುವ ಮನಸ್ಸಾಗ್ತಿದೆ.
ಒಬ್ಬ ಕಣ್ಣುಗಳನ್ನ ಕಳೆದುಕೊಂಡವ. ಇನ್ನೊಬ್ಬ ಕೈಗಳೇ ಇಲ್ಲದವ.. ಒಂಥರಾ ಬೇರೆ ಬೇರೆ ಟ್ರ್ಯಾಕು ಅನ್ನಬಹುದು. ಆಕಸ್ಮಿಕವಾಗಿ ಆಗುವ ಇವರಿಬ್ಬರ ಭೇಟಿಯು ಮೇಲ್ದರ್ಜೆಗೇರಲು ಜಾಸ್ತಿ ಸಮಯ ತಗೊಳ್ಳದೇ ದೋಸ್ತಿಯಾಗಿಬಿಟ್ಟಿತ್ತು. ತನಗೆ ಕೈಗಳಿಲ್ಲ. ಆತನಿಗೆ ಕಣ್ಣುಗಳೇ ಇಲ್ಲ. ಇಂಥ ಸಂದರ್ಭದಲ್ಲಿ ದೋಸ್ತಿಯಿದ್ದರೂ ಏನೂ ಮಾಡಲಿಕ್ಕಾಗದು ಅನಿಸುತ್ತೆ ಒಂದ್ ಕಡೆ ಅಲ್ವಾ? ಆದ್ರೆ ಇಬ್ಬರೂ ಒಂದು ನಿರ್ಧಾರ ಮಾಡ್ತಾರೆ. ಎಲ್ಲಾ ವೈಫಲ್ಯಗಳನ್ನ ಮೀರಿ ನಿಂತು ಅಂದು ತೆಗೆದುಕೊಂಡ ನಿರ್ಧಾರ ಈಗ ವಿಶ್ವವೇ ಅವರತ್ತ ತಿರುಗಿ ನೋಡುವಂತೆ ಮಾಡಿದೆ.


ಈ ಜೋಡಿ ಎಲ್ಲರಂತಲ್ಲ, ಭಿನ್ನರು. ಆದ್ರೂನು ಇವ್ರು ಎಲ್ಲರಂತೆ ಬದುಕ್ತಾರೆ.
ಅದಕ್ಕೂ ಮಿಗಿಲಾಗಿ ಕುಚುಕು ಗೆಳೆಯರು. ಒಬ್ಬರನ್ನ ಬಿಟ್ಟು ಮತ್ತೊಬ್ಬರಿರಲ್ಲ. ಕಣ ್ಣಲ್ಲದವನಿಗೆ ಕೈಯಿಲ್ಲದವನು ಸಹಾಯ ಮಾಡ್ತಾನೆ. ಕೈಯಿಲ್ಲದವನಿಗೆ ಕಣ ್ಣಲ್ಲದವನು ಜೊತೆಯಾಗ್ತಾನೆ. ಸದ್ಯ ಇಡೀ ವಿಶ್ವಕ್ಕೇ ಇವ್ರು ರೋಲ್‍ಮಾಡೆಲ್‍ಗಳು. ಯಾರಿವ್ರು? ಎಲ್ಲಿಯವ್ರು? ಅನ್ನೋ ಕುತೂಹಲ ನಿಮಗೆ ಇಷ್ಟರಲ್ಲಾಗಲೇ ಮೂಡಿರುತ್ತೆ. ಇಬ್ರೂ ಕೂಡ ಚೀನಾ ದೇಶದ ಪ್ರಜೆಗಳು. ಇಬ್ಬರಿಗೂ 55 ವರ್ಷ. ವಯಸ್ಸು, ಮನಸ್ಸು ಎರಡೂ ಒಂದೇ ಥರ. ಅಂಗವೈಕಲ್ಯವೆಂದು ಸುಮ್ಮನೆ ಕುಳಿತವರಲ್ಲ. ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡಿದವರಲ್ಲ. ಸ್ವಾಭಿಮಾನದ ಬದುಕ ಹುಡುಕಿ ಹೊರಟವರು.
ಓರ್ವ ಜಿಯಾ ಹೆಕ್ಸಿಯಾ. ದೃಷ್ಟಿದೋಷದಿಂದ ಬಳಲ್ತಿರೋ ವ್ಯಕ್ತಿ. 37 ವರ್ಷದಲ್ಲಿದ್ದಾಗ ಬಂದೆರಗಿದ ಆಘಾತ ಬದುಕಿನ ಚಿತ್ರಣವನ್ನೇ ಬದಲಾಯಿಸಿಬಿಟ್ಟಿದೆ. 2001ರಲ್ಲಿ ಅಂದ್ರೆ 18 ವರ್ಷದ ಹಿಂದೆ ನಡೆದ ಅಪಘಾತವೊಂದ್ರಲ್ಲಿ ಈತ ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದ.


ವಿಶೇಷ ಏನಪ್ಪಾ ಅಂದ್ರೆ ಈತ ಯಾವತ್ತು ದೃಷ್ಟಿಯನ್ನ ಕಳೆದುಕೊಂಡನೋ ಆವತ್ತೇ ಬದುಕಲ್ಲಿ ನಿಜವಾದ ಬೆಳಕನ್ನ ಕಂಡಿದ್ದು. ಬದುಕಿಗೊಂದುಅರ್ಥ ಕಲ್ಪಿಸಿಕೊಳ್ಳುವ ಮಾರ್ಗ ಹುಡುಕಿದ್ದು ಕಣ್ಣನ್ನ ಕಳೆದುಕೊಂಡ ಮೇಲೆಯೇ ಅಂದ್ರೆ ಅಚ್ಚರಿಯಾಗುತ್ತದೆ.
ಇನ್ನೋರ್ವ ಜಿಯಾ ವೆಂಖಿ. ಕೈಗಳಿಲ್ಲದಿದ್ರೂ ಶ್ರಮಜೀವಿಯಾಗಿಯೇ ಬದುಕನ್ನ ಕಂಡುಕೊಂಡಿದ್ದಾರೆ. ಬುದ್ಧಿ ಬರುವ ಮೊದಲೇ ದುರಂತಕ್ಕೀಡಾಗ್ತಾರೆ. ಮೂರನೇ ವರ್ಷದಲ್ಲಿದ್ದಾಗ ಅಪಘಾತದಲ್ಲಿ ಎರಡೂ ಕೈ ಕಳೆದುಕೊಂಡಿದ್ದಾರೆ. ಕೈಗಳಿಲ್ಲದೇ ಇದ್ರೂ ಪರಾವಲಂಬಿಯಾಗದೇ ಹಾಗೋ ಹೀಗೋ ಜೀವನವನ್ನ ತಳ್ಕೊಂಡು ಬರ್ತಾರೆ. ಎಲ್ಲೆಲ್ಲೋ ಇದ್ದೋರು ಹೇಗೆ ಒಂದಾದ್ರು? ಈ ಥರ ಕುಚುಕು ಗೆಳೆಯರಾಗಿದ್ದು ಹೇಗೆ? ಅನ್ನೋದೇ ಇಂಟರೆಸ್ಟಿಂಗ್ ವಿಚಾರ.

RELATED ARTICLES  ಸಾಂತ್ವನ ಹೇಳಲು ಸಮಯ ಇಲ್ಲವೇ?


2001ರಲ್ಲಿ ಅಚಾನಕ್ ಭೇಟಿ : ವೆಂಖಿ ಹಾಗೂ ಹೆಕ್ಸಿಯಾ ಕೆಲಸ ಹುಡ್ಕೊಂಡು ಹೊರಟ ವ್ಯಕ್ತಿಗಳು. 2001ರಲ್ಲಿ ಅಚಾನಕ್ಕಾಗಿ ಭೇಟಿಯಾಗಿದ್ರು. ಆ ಭೇಟಿ ಸ್ನೇಹಕ್ಕೆ ತಿರುಗಿತು. ಆದ್ರೆ ಜೀವನೋಪಾಯಕ್ಕೆ ಏನಾದ್ರೂ ಮಾಡ್ಬೇಕಲ್ಲ ಅನ್ನೋ ಚಿಂತೆ ಇವರಲ್ಲಿರೋ ಕೊರತೆಗಿಂತ ಹೆಚ್ಚಾಗಿ ಕಾಡ್ತಾನೇಇತ್ತು. ಈ ಸಂದರ್ಭದಲ್ಲಿ ಇಬ್ಬರೂ ಸೇರಿ ಒಂದುತೀರ್ಮಾನಕ್ಕೆ ಬಂದುಬಿಟ್ರು. ಆ ತೀರ್ಮಾನ ಈಗ ಇವ್ರ ಬದುಕನ್ನೇ ಬದಲಾಯಿಸಿಬಿಟ್ಟಿದೆ.
ಕುಚುಕು ಗೆಳೆಯರ ಹಸಿರು ಕ್ರಾಂತಿ : ಈ ಭಿನ್ನಚೇತನರು ನಿತ್ಯ ದಿನಚರಿಯನ್ನ ಮಾಡ್ಕೊಳ್ಳೋದೇ ಕಷ್ಟ, ಇನ್ನು ಹಸಿರು ಕ್ರಾಂತಿ ಸಾಧ್ಯವಾ ಅನ್ನೋ ಪ್ರಶ್ನೆ ಇಲ್ಲಿ ಮೂಗು ತೂರಿಸುತ್ತೆ. ಆದ್ರೆ ಛಲ, ದೃಢತೆ, ಸ್ಥಿರತೆ ಅನ್ನೋದು ಇದ್ರೆ ಎಂತಹ ಸಾಧನೆಯನ್ನೂ ಮಾಡಬಹುದು ಅನ್ನೋದಕ್ಕೆ ಇವರಿಗಿಂತ ದೊಡ್ಡ ಉದಾಹರಣೆ ಮತ್ತೊಂದಿಲ್ಲ. ಯಾಕೆಂದ್ರೆ ಚೀನಾದ ಯೆಲಿ ವಿಲೇಜ್ ಬಳಿ ಹಸಿರು ಕ್ರಾಂತಿ ಮಾಡೋಕೆ ಇವ್ರು ಮುಂದಾಗ್ತಾರೆ.


ಗಿಡಗಳನ್ನ ನೆಟ್ಟು ಬೆಳೆಸುವತ್ತ ಗಮನ ನೀಡ್ತಾರೆ.. ಇಲ್ಲಿನ ಬಂಜರು ಭೂಮಿ ಹಸಿರು ಹಸಿರಾಗಿ ಕಂಗೊಳಿಸುವಂತೆ ಮಾಡ್ಬೇಕು ಅನ್ನೋ ನಿರ್ಧಾರ ತಳೆದುಬಿಡ್ತಾರೆ. ಆದ್ರೆ ಆವತ್ತು ಶುರು ಮಾಡಿದ ಈ ಕೆಲಸ ತಮ್ಮ ಬದುಕನ್ನ ಬದಲಾಯಿಸುತ್ತೆ ಅನ್ನೋದು ಇವರಿಗೆ ಆಗ ಗೊತ್ತಿರಲಿಲ್ಲ.
ಚೀನಾದ ಯೆಲಿ ವಿಲೇಜ್ ಬಳಿ 8 ಎಕರೆ ಭೂಮಿಯನ್ನ ಸರ್ಕಾರದಿಂದ ಗುತ್ತಿಗೆ ಪಡ್ಕೊಂಡು ಆ ಬಂಜರು ಭೂಮಿಯಲ್ಲಿ ಸಸಿಗಳನ್ನ ನೆಟ್ಟು ಪೋಷಿಸತೊಡಗಿದರು. ಆದ್ರೆ ಇವರಿರೋ ಸ್ಥಿತಿಲಿ ಇಂತಹ ಹಾರ್ಡ್‍ವರ್ಕ್ ಮಾಡಿದ್ದಾರೆ ಅಂದ್ರೆ ಕಾನ್ಫಿಡೆನ್ಸ್ ಅನ್ನೋದು ನಮ್ಮಿಂದ ಏನೇನು ಮಾಡಿಸ್ಬೋದು ಅಲ್ವೇನ್ರಿ.. ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಎದ್ದು ಸೈಟ್‍ಗೆ ಬರ್ತಿದ್ರು. ಬರುವಾಗ ನದಿಯನ್ನ (ಹಳ್ಳವನ್ನ) ದಾಟಿಕೊಂಡು ಬರಬೇಕಿತ್ತು. ನದಿ ದಾಟುವಾಗ ಆ ಒಂದು ದೃಶ್ಯವೇ ಬೆಸ್ಟ್ ಫ್ರೆಂಡ್ಶಿಪ್ ಹೇಗಿರುತ್ತೆ ಅನ್ನೋದನ್ನ ಜಗತ್ತಿಗೆ ಸಾರುವಂತಿರ್ತಿತ್ತು. ಕುರುಡನಾಗಿದ್ದ ಹೆಕ್ಸಿಯಾನನ್ನ ವೆಂಖಿ ತಮ್ಮ ಭುಜದ ಮೇಲೆ ಎತ್ಕೊಂಡು ನದಿಯನ್ನ ದಾಟುತ್ತಿದ್ರು. ವ್ಹಾವ್.. ಎಂತಹ ಅನ್ಯೋನ್ಯತೆರೀ.. ಸ್ವಾರ್ಥಕ್ಕಾಗಿ ಹೊಡೆದಾಡಿಕೊಳ್ಳುವ ಎಷ್ಟೋ ಸಂಬಂಧಿಕರನ್ನ, ಸ್ನೇಹಿತರನ್ನ ನೋಡುವಾಗ ಇವರಲ್ಲಿನ ಬಾಂಧವ್ಯ ಎಂತದ್ದೂರೀ ಅಂತ ಒಮ್ಮೆ ನಿಟ್ಟುಸಿರು ಹೊರ ಹೋದರೆ ನೀವು ಆ ದೃಶ್ಯವನ್ನು ಕಲ್ಪಿಸಿಕೊಂಡಿದ್ದಕ್ಕೂ ಸಾರ್ಥಕವೆನಿಸುತ್ತದೆ.

RELATED ARTICLES  ಮಕ್ಕಳ ಬದುಕಿಗೆ ಸೋಪಾನವಾಗಿ..


ಇನ್ನು ಗಿಡಗಳನ್ನ ನೆಡುವಾಗ ಇಬ್ಬರ ಅಂಡಸ್ರ್ಟಾಂಡಿಗ್ ಹೇಗಿರತ್ತೆ ಗೊತ್ತಾ? ವೆಂಖಿ ತಮ್ಮ ಭುಜ ಹಾಗೂ ಕತ್ತನ್ನ ಬಳಸಿಯೇ ನೆಲವನ್ನ ಅಗಿತಾರೆ. ಹೆಕ್ಸಿಯಾ ಆ ಮಣ್ಣನ್ನ ತೆಗಿತಾರೆ. ವೆಂಕಿ ಕಾಲಿನಿಂದ ಸಸಿಯನ್ನೆತ್ತಿ ಕೊಡ್ತಾರೆ. ಹೆಕ್ಸಿಯಾ ಆ ಸಸಿಯನ್ನ ನೆಡ್ತಾರೆ. ಇವರಿಗ್ಯಾಕೆ ಇವೆಲ್ಲಾ ಬೇಕಿತ್ತಾ? ಅಂಗಾಂಗಗಳು ಇಲ್ಲಾಂದ್ರೆ ಕೆಲಸ ಮಾಡೋಕೆ ಹೋಗಬಾರದು ಅನ್ನೋ ಮನೋಭಾವ ಹಲವರಲ್ಲಿ ಅಂದು ಬಂದಿರಬಹುದು. ಆದರೆ ತಮ್ಮ ಬದುಕು ನಿರರ್ಥಕ ಎನಿಸಿಕೊಳ್ಬಾರ್ದು, ಸಮಾಜಕ್ಕೆ ನಮ್ಮಿಂದ ಏನಾದ್ರೂ ಪ್ರಯೋಜನವಾಗ್ಬೇಕು ಅನ್ನೋ ಅವರ ಚಿಂತನೆ ಮುಂದೆ ನಮ್ಮದೆಲ್ಲಾ ಶೂನ್ಯ ಎನಿಸಿಬಿಡುತ್ತೆ.
10000 ಗಿಡಗಳನ್ನ ಬೆಳೆಸಿದ್ರು ಗ್ರೀನ್ ಸೋಲ್ಜರ್ಸ್..! :
2002ರಲ್ಲಿ ಶುರುವಾದ ಚೀನಿ ಗೆಳೆಯರ ಕಸರತ್ತು ಈಗ ಒಂದು ಹೊಸ ರೂಪವನ್ನ ಪಡ್ಕೊಂಡಿದೆ. ಪರಿಸರ ಕಾಳಜಿ, ಪರಿಸರ ಪ್ರೇಮಇವರಿಬ್ರನ್ನ ಹೊಸ ದಿಕ್ಕಿನೆಡೆ ಕರೆದೊಯ್ದಿದೆ. 17 ವರ್ಷದ ಜರ್ನಿಯಲ್ಲಿ ಅಸಾಧಾರಣವೆನ್ನುವಂತ ಸಾಧನೆ ಮಾಡಿ ಎತ್ತರದ ಸ್ಥಾನಕ್ಕೇರಿದ್ದಾರೆ. ಯೆಲಿ ಗ್ರಾಮದಲ್ಲಿ ಇವರು ಗುತ್ತಿಗೆ ತೆಗೆದುಕೊಂಡ ವಿಸ್ತಾರ ಭೂಮಿಯಲ್ಲಿ ಇದುವರೆಗೆ 10000 ಗಿಡಗಳನ್ನ ಬೆಳೆಸಿ ಮರವನ್ನಾಗಿ ಮಾಡಿದ್ದಾರೆ. ಕೈ ಕಾಲು ನೆಟ್ಟಗಿರೋರೆ ಇವೆಲ್ಲಾ ನಮಗ್ಯಾಕೆ ಅಂತ ತಿರಸ್ಕಾರ ಮಾಡ್ತಿರುವಾಗ ಅಂಗವೈಫಲ್ಯ ಕಾಡ್ತಿದ್ರೂ ಗಿಡಗಳನ್ನ ಮರವಾಗಿ ಬೆಳೆಸಿ ಪೋಷಿಸ್ತಾ ಬಂದಿದ್ದಾರೆ. ಈ ಸಾಧನೆಗೆ ಇವರು ತೆಗೆದುಕೊಂಡಿದ್ದು ಬರೋಬ್ಬರಿ 17 ವರ್ಷ. ಬಂಜರು ಭೂಮಿ ಈಗ ಹಸಿರು ವನದಂತೆ ಶೋಭಿಸ್ತಿದೆ.
ತನಗೆ ಕಣ್ಣಾದವನಿಗೆ ಕೈಗಳಾಗುವ ಮೂಲಕ ಸ್ನೇಹದಲ್ಲಿರುವ ಶಕ್ತಿ, ಸಾಮಥ್ರ್ಯ ಎಂಥದ್ದು ಎನ್ನುವುದನ್ನ ಸಾಬೀತು ಮಾಡಿದ್ದಾರೆ. ಇಲ್ಲಿ ಮಾನವೀಯತೆಯ ದರ್ಶನವಾಗಿದೆ. ಪರಿಸರ ಕಾಳಜಿಯ ಸಂದೇಶ ಪಸರಿಸಿದೆ. ಇವರ ಪರಿಸರ ಪ್ರೇಮಕ್ಕೆ ಜಗತ್ತು ತಲೆ ಬಾಗಿದೆ. ಚೀನಿ ಗೆಳೆಯರ ಮಹತ್ಕಾರ್ಯವನ್ನ ಮೆಚ್ಚಿಕೊಂಡಿರುವ ವೈದ್ಯರ ತಂಡವೊಂದು ಹೆಕ್ಸಿಯಾಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿ ದೃಷ್ಟಿಯನ್ನ ಮರಳಿಸುವ ಭರವಸೆ ನೀಡಿದ್ದಾರೆ. ಇವರ ಆದರ್ಶ ಕೆಲಸಗಳು ಇಲ್ಲಿನ ಜನಗಳ ಮೇಲೆ ಅಪಾರ ಪರಿಣಾಮವನ್ನ ಬೀರುತ್ತಿದೆ.
ನÁವು ದೈಹಿಕವಾಗಿ ಸೊರಗಿದ್ದೇವೆ. ಆದ್ರೆ ಮಾನಸಿಕವಾಗಿ ಬಹಳವೇ ಖುಷಿಯಾಗಿದ್ದೇವೆ ಅಂತ ಈ ಭಿನ್ನ ಚೇತನರು ಹೇಳ್ತಾರೆ. ಬದುಕಲ್ಲಿ ಎಲ್ಲಾ ಕಳಕೊಂಡವರು ಸಮಾಜಕ್ಕೆ ಎಲ್ಲವನ್ನ ಕೊಟ್ಟಿರುವುದಿದ್ಯಲ್ಲ, ಇದಕ್ಕಿಂತ ದೊಡ್ಡ ಸಂಗತಿ ಇನ್ಯಾವುದಿದೆ? ಎಲ್ಲಾ ಇದ್ದರೂ ಜೀವನವನ್ನ ವ್ಯರ್ಥ ಮಾಡಿಕೊಳ್ಳುವವರು ಈ ಗೆಳೆಯರಿಂದ ಕಲಿಯೋದು ತುಂಬಾನೇಇದೆ.