(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಪ್ರತಿಯೊಂದೂ ಸೃಷ್ಟಿಕಾರ್ಯ ನಿಯಮಾಧೀನ. ಸೂರ್ಯ, ಚಂದ್ರ, ಅಗ್ನಿ, ವಾಯು ಅನಂತ ಶಕ್ತಿಯುತರಾಗಿದ್ದಾರೆ. ಆದರೆ ಅವರೆಲ್ಲರೂ ನಿಯಮಕ್ಕೆ ಆಧೀನರು. ಶೂನ್ಯದಿಂದ ಜಗತ್ತುಂಟಾಯಿತು ಎಂದರೆ ಈ ‘ನಿಯಮ’ವನ್ನು ಯಾರು ವಿಧಿಸಿದರು? ಆ ಶೂನ್ಯವೇ ನಿಯಮಗಳನ್ನು ಕಲ್ಪಿಸಿ ಸೃಷ್ಟಿಯನ್ನು ಸೃಷ್ಟಿಸಿತು ಮತ್ತು ಅದನ್ನು ಆಳುತ್ತದೆ ಎಂದರೆ ಅದು ಶೂನ್ಯವೇ ಆಗಲಿಲ್ಲ. ಶೂನ್ಯವೆಂದರೆ ಏನೂ ಇಲ್ಲವೆಂದರ್ಥ. ಅದರಿಂದ ನಿಯಮಬದ್ಧವಾದ ಸೃಷ್ಟಿಯುಂಟಾಗಿದೆ ಎನ್ನುವದು ಅಸಂಭವದ ಮಾತು.


ಆದ್ದರಿಂದ ಈ ನಿಯಮದ ಹಿಂದೆ ಒಂದು ‘ಸಂಕಲ್ಪ’ ಇದೆ ಎಂದೇ ಹೇಳಬೇಕಾಗುತ್ತದೆ. ‘ಸಂಕಲ್ಪ’ ಮಾಡಲು ಒಂದು ‘ಚೈತನ್ಯ’ ಇರಲೇಬೇಕು ಮತ್ತು ಅದು ಜ್ಞಾನದಿಂದ ಕೂಡಿರಬೇಕು. ಚೈತನ್ಯಕ್ಕಷ್ಟೇ ಕಾರ್ಯಕ್ಷಮತೆ ಇದೆಯೇ ಹೊರತು ಅಚೇತನ ಪದಾರ್ಥಗಳಿಗೆ ಕಾರ್ಯಕ್ಷಮತೆ ಇಲ್ಲ.
ಇನ್ನು ಏನೂ ಇಲ್ಲದಿರುವ ‘ಸುಷುಪ್ತಿ’ಯಿಂದ ಈ ‘ಜಾಗ್ರತ್’ ಉಂಟಾಗಿಲ್ಲವೇ ಎಂದು ಹೇಳುವದೂ ಕೂಡ ಅನುಭವಕ್ಕೆ ವಿರುದ್ಧವಾಗಿದೆ. ‘ಸುಷುಪ್ತಿಯಲ್ಲಿ ಏನೂ ಇರಲಿಲ್ಲ’ ಎಂದು ಹೇಳುವಾಗ, ಈ ‘ಏನಿಲ್ಲದ’ ಅನುಭವವನನ್ನು ಅನುಭವಿಸುವವನು ಒಬ್ಬನು ಇದ್ದೇ ಇದ್ದನು ಎಂದಾಗುವದಲ್ಲವೇ? ಪದಾರ್ಥವನ್ನು ಕಾಣದೇ ಪದಾರ್ಥದ ಅನುಭವವಾಗುವದಿಲ್ಲ. ‘ಸುಷುಪ್ತಿಯಲ್ಲಿ ಏನೂ ಇರಲಿಲ್ಲ’ ಎನ್ನುವ ಯಥಾರ್ಥವನ್ನು ನೋಡುವವನು -ಅವನು- ಅಲ್ಲಿ ಇರಲೇ ಬೇಕಾಗುತ್ತದೆ. ಆ ‘ಅವನ’ ಸಂಕಲ್ಪದಿಂದಲೇ ಸುಷುಪ್ತಿಯಿಂದ ಜಾಗ್ರತ್ ಉಂಟಾಗುತ್ತದೆ ಎಂದು ಸಿದ್ಧವಾಗುತ್ತದೆ.

RELATED ARTICLES  ನಿಂದಕರು


ಹೀಗಾಗಿ, ಇಂಥ ಸಂಕಲ್ಪ ಶಕ್ತಿಯುಳ್ಳ ಚೈತನ್ಯಸ್ವರೂಪನಾದ ಎಂದರೆ ಜ್ಞಾನಸ್ವರೂಪನಾದ ಮತ್ತು ಆನಂದಸ್ವರೂಪನೂ ಆದ ಪರಮಾತ್ಮನ ನಿಯಮದಿಂದಲೇ ಸೃಷ್ಟಿಯುಂಟಾಗಿದೆ ಎಂದು ಒಪ್ಪಲೇಬೇಕಾಗುತ್ತದೆ. ಆದ್ದರಿಂದ ಶ್ರುತಿಯು ಪರಮಾತ್ಮನು ಸಚ್ಚಿದಾನಂದ ಸ್ವರೂಪನೆಂದು ಹೇಳಿದೆ.
ಇಂಥ ಸರ್ವಶಕ್ತನಾದ ಪರಮಾತ್ಮನು ಇಲ್ಲವೇ ಇಲ್ಲವೆಂದು ಹೇಳುವದು ಹೇಗೆ? ಹೇಳಿದರೆ ಕೇಳಿ ನಂಬುವದು ಹೇಗೆ?

RELATED ARTICLES  ನಿಮ್ಮ ತಾಪ ಶಮನವಾಗಲಿ! ಎಲ್ಲರೂ ಸುಖಿಗಳಾಗಲಿ! (ಸದ್ಗುರು ಶ್ರೀಧರ ಸಂದೇಶ)