(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)
ನಿನ್ನಲ್ಲಿರುವ ಆತ್ಮನೇ ನನ್ನಲ್ಲೂ ಇದ್ದಾನೆ; ಎಲ್ಲರಲ್ಲಿಯೂ ಇದ್ದಾನೆ. ಆದರೆ ‘ನೀನು, ನಾನು, ಅವನು’ ಎಂಬುದು ಮಾತ್ರ ಆತ್ಮನೂ ಅಲ್ಲ; ಪರಮಾತ್ಮನೂ ಅಲ್ಲ! ಅದೇ ಮಾಯೆ, ಮಿಥ್ಯೆ, ಅವಿದ್ಯೆ!
‘ನೀನು’ ಯಾರೆಂಬುದನ್ನು ತಿಳಿದುಕೊ. ಸಾಧನ, ಸತ್ಕರ್ಮ, ಭಕ್ತಿಯಿಂದಲೂ, ಗುರುಮುಖದಿಂದಲೂ ಅರಿತುಕೊ.ಆಗ ನಿನಗೆ ಆತ್ಮಜ್ಞಾನವಾಗುವದು. ಪರಮಾತ್ಮನ ದರ್ಶನವಾಗುವದು. ‘ನಾನು-ನೀನು’ ಎನ್ನುವ ಭೇದಭಾವ ಅಳಿಯುವದು.
ಪ್ರತಿಯೊಂದು ದೇಹದಲ್ಲಿಯೂ ಅಡಗಿರುವ ‘ನಾನು’ ಎಂಬುದು ಏನು ಎಂಬುದನ್ನು ತಿಳಿಸುವದೇ ಆಧ್ಯಾತ್ಮಿಕ ವಿಚಾರ; ಆತ್ಮವಿವೇಕ.
ತಾನೇತಾನಾಗಿ ಬೆಳಗುವ ದಿವ್ಯಜ್ಞಾನರೂಪದ ಪರಮಾತ್ಮನು ಹಮ್ಮಿದ ವಿಲಾಸವೇ ಜಗತ್ತಿನ ವ್ಯಾಪಾರಗಳು.
ಸಮುದ್ರದಲ್ಲಿ ಮೇಲೆ ಕಾಣುವ ತೆರೆ-ನೊರೆಗಳು ಅಸಂಖ್ಯ. ಆದರೆ ಅದರೊಳಗಿರುವ ನೀರು ನೀರೇ. ಪರಮಾತ್ಮನ ಸೃಷ್ಟಿಯಲ್ಲಿರುವ ಭಿನ್ನತ್ವಗಳೆಲ್ಲವೂ ಆ ಸಚ್ಚಿದಾನಂದ ಸ್ವರೂಪದ ಮೇಲಣ ತೆರೆ-ನೊರೆಗಳೆಂದು ತಿಳಿದಿರಬೇಕು. ಇದೇ ಆತ್ಮಜ್ಞಾನ. ಇದನ್ನು ತಿಳಿದವನೇ ಆತ್ಮಜ್ಞಾನಿ.
ಪ್ರಪಂಚನಾಟಕದಲ್ಲಿ ಅನೇಕ ಪಾತ್ರಗಳು, ಅನೇಕ ರಸಗಳು. ಈ ಎಲ್ಲ ನಾಟಕವು ಮುಗಿದ ಬಳಿಕ ಉಳಿಯುವದು ಒಂದೇ ಒಂದು. ‘ನಾನು’ ಎಂಬ ಅರಿವು, ಪರಮಾತ್ಮ, ಸಚ್ಚಿದಾನಂದಸ್ವರೂಪ!