ಎನ್. ಮುರಳೀಧರ್
ಅಡ್ವೋಕೇಟ್
ಮೊಬೈಲ್: 9902772278

 

ಕನ್ನಡಿಯು ಎಲ್ಲರೂ ತಿಳಿದಂತೆ ಒಂದು ಜಡವಸ್ತು. ಇದರಿಂದ ನಾವೇನು ತಿಳಿಯುವುದಿದೆ ಎಂದುಕೊಂಡರೆ ಏನೂ ಅನ್ನಿಸುವುದಿಲ್ಲ, ಆದರೆ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಈ ಜಡವಸ್ತು ನಮ್ಮ ಜೀವನಕ್ಕೆ ಯಾವ ರೀತಿ ಸಂಬಂಧಹೊಂದಿದೆ ಎಂಬುದು ತಿಳಿಯುತ್ತದೆ.
ಕನ್ನಡಿಯು ಎಲ್ಲರಿಗೂ ಬೇಕಾಗಿರುವ ವಸ್ತು. ಎಲ್ಲರೂ ತಮ್ಮ ಪ್ರತಿಬಿಂಬವನ್ನು ನೋಡಿಕೊಳ್ಳಲು ಉಪಯೋಗಿಸುವುದು ಎಲ್ಲರೂ ತಿಳಿದ ವಿಷಯ. ಬೆಳಿಗ್ಗೆ ಎದ್ದು ಸ್ನಾನಮಾಡಿ ಬಟ್ಟೆ ಹಾಕಿಕೊಂಡು ತಲೆ ಬಾಚಿಕೊಳ್ಳಲು ಕನ್ನಡಿಯ ಮುಂದೆ ನಿಂತು ಪ್ರತಿಬಿಂಬ ನೋಡಲೇ ಬೇಕು. ಕನ್ನಡಿ ಇಲ್ಲದಿದ್ದಲ್ಲಿ ಬೇರೆ ಯಾವುದೇ ಕೆಲಸವೂ ತೋಚುವುದಿಲ್ಲ. ಬಟ್ಟೆ ಹಾಕಿಕೊಂಡು ಕನ್ನಡಿಯ ಮುಂದೆ ನಿಂತು ಪ್ರತಿಬಿಂಬವನ್ನು ಒಂದು ಸಲ ನೋಡಿಕೊಂಡರೆ ಎಲ್ಲರಿಗೂ ಒಂದು ರೀತಿಯ ಸಮಾಧಾನ. ಬೇರೆಯವರು, ಚೆನ್ನಾಗಿ ಬಟ್ಟೆ ಹಾಕಿಕೊಂಡಿದ್ದೀಯಾ ಒಳ್ಳೆ ರಾಜಕುಮಾರನಂತೆ ಇದ್ದೀಯಾ ಎಂದು ಎಷ್ಟೇ ಹೇಳಿದರೂ ತೃಪ್ತಿಯಾಗುವುದಿಲ್ಲ. ಕನ್ನಡಿಯ ಮುಂದೆ ನಿಂತು ಒಂದು ಸಲ ನೈಜ ಸ್ವರೂಪವನ್ನು ನೋಡಿಕೊಂಡು ಸ್ವಲ್ಪ ತಲೆ ಬಾಚಿಕೊಂಡು, ಬಟ್ಟೆಯನ್ನು ಸರಿಪಡಿಸಿ ಕೊಂಡಾಗಲೇ ಸಮಾಧಾನವಾಗುವುದು. ಕನ್ನಡಿಯು ಮನುಷ್ಯನ ನೈಜ ಪ್ರತಿಬಿಂಬವನ್ನು ತೋರಿಸುತ್ತದೆ. ಮನುಷ್ಯ ಇರುವಂತೆಯೇ ಬಾಹ್ಯ ಪ್ರತಿಬಿಂಬವನ್ನು ತೋರಿಸುತ್ತದೆ.
ಆದರೆ ಇಲ್ಲಿ ಸಮಾಜವೂ ಕೂಡ ಒಂದು ರೀತಿಯ ಕನ್ನಡಿ ಇದ್ದಹಾಗೆ ಎಂದು ಹೇಳಿದರೆ ಯಾರೂ ನಂಬುವುದೇ ಇಲ್ಲ. ಇದೇನಪ್ಪಾ? ಸಮಾಜಕ್ಕೂ ಕನ್ನಡಿಗೂ ಎಲ್ಲಿಯ ಸಂಬಂಧ? ಎಂದು ಕೇಳಬಹುದು ಆದರೆ, ಸಮಾಜವು ಮನುಷ್ಯನ ಪ್ರತಿಬಿಂಬವನ್ನು ತೋರಿಸದೇ ಇದ್ದರೂ ಅವನ ಗುಣ ಅವಗುಣಗಳನ್ನು ಬಿಂಬಿಸುವ ಕನ್ನಡಿಯಾಗಿರುತ್ತದೆ ಎಂದರೆ ಉತ್ಪ್ರೇಕ್ಷೆಯಲ್ಲ. ಜಡವಸ್ತು ಎಂಬ ಕನ್ನಡಿಯು ಮನುಷ್ಯನ ಹೊರಗಿನ ಪ್ರತಿಬಿಂಬ ತೋರಿಸುವಂತೆ, ಸಮಾಜವೆಂಬ ಕನ್ನಡಿಯು ಮನುಷ್ಯನ ಒಳಗಿನ ಗುಣ ಮತ್ತು ಅವಗುಣಗಳನ್ನು ತೋರಿಸುವ ಕನ್ನಡಿಯಾಗಿರುತ್ತದೆ. ಮನುಷ್ಯನು ಒಳ್ಳೆ ಕೆಲಸ ಮಾಡಿದಾಗ ಸಮಾಜವು ಅಂಥವರನ್ನು ಗುರ್ತಿಸಿ ಮಾಡಿದ ಕೆಲಸವು ಎಷ್ಟು ಒಳ್ಳೆಯದು ಎಂದು ಪ್ರತಿಬಿಂಬಿಸುತ್ತದೆ. ಮನುಷ್ಯನು ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿದಾಗಲೂ, ಸಮಾಜವು ನಮ್ಮನ್ನು ಗುರುತಿಸಿ ಗೌರವಿಸುವುದೂ ಉಂಟು. ಅದೇ ರೀತಿ ಕೆಟ್ಟ ಕೆಲಸ ಮಾಡಿದಾಗ ಎಷ್ಟರ ಮಟ್ಟಿಗೆ ಕೆಟ್ಟವರು ಎಂಬುದನ್ನು ಸಹ ಪ್ರತಿಬಿಂಬಿಸುತ್ತದೆ. ಮನುಷ್ಯ ತಪ್ಪು ಮಾಡಿದಾಗ ಸಮಾಜ ಕೆಟ್ಟ ಕೆಲಸ ಮಾಡಿರುವೆ ಎಂದು ಹೇಳದಿದ್ದರೂ ಸಮಾಜವು ಅವನನ್ನು ನೋಡುವ ರೀತಿಯಿಂದ ಅರಿವಾಗುತ್ತದೆ. ಆಗ ಕನ್ನಡಿಯ ಮುಂದೆ ನಿಂತಾಗ ಮುಜುಗರವಾಗುತ್ತದೆ. ಮನುಷ್ಯ ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಶಿಸುವ ಇದೇ ಸಮಾಜ ಕೆಟ್ಟ ಕೆಲಸ ಮಾಡಿದಾಗ ನೇರವಾಗಿ ಅಲ್ಲದಿದ್ದರೂ ಬೆನ್ನಹಿಂದೆ ದೂಷಿಸಬಹುದು. ಆಗ ಯಾರೇ ಆಗಲೀ ಸಮಾಜವನ್ನು ನಿಂದಿಸಲು ಆಗುವುದಿಲ್ಲ. ಸಮಾಜದ ನೀತಿ ನಿಯಮವೇ ಹಾಗೆ. ಒಳ್ಳೆಯದು ಮಾಡಿದಾಗ ಹೊಗಳಿ, ಕೆಟ್ಟದ್ದು ಮಾಡಿದಾಗ ತೆಗಳಿದರೆ ಅದು ಹಂಸ ಕ್ಷೀರ ನ್ಯಾಯ ಎನಿಸುತ್ತದೆ. ಒಳ್ಳೆಯ ಕೆಲಸಮಾಡಿದಾಗಲೂ ಹೊಗಳಿ ಕೆಟ್ಟ ಕೆಲಸ ಮಾಡಿದಾಗ ತೆಗಳದೆ ಇದ್ದರೆ ಅದು ಏಕಪಕ್ಷೀಯವಾಗುತ್ತದೆ. ಸಮಾಜ ಯಾವತ್ತೂ ಮನುಷ್ಯನಲ್ಲಿ ಒಳ್ಳೆಯತನವನ್ನು ಬಯಸುತ್ತದೆ. ಹಣ ಅಧಿಕಾರ ಇದ್ದರೆ ಏನು ಬೇಕಾದರೂ ಮಾಡಬಹುದು ಎಂದು ತಿಳಿಯುವುದು ತಪ್ಪು. ಎಷ್ಟೇ ಹಣ ಇದ್ದರೂ ಅಧಿಕಾರ ಇದ್ದರೂ, ಅದು ಶಾಶ್ವತವಲ್ಲ. ಒಳ್ಳೆಯತನದಿಂದ ಸಮಾಜದಲ್ಲಿ ಗೌರವ ಸಂಪಾದನೆ ಮಾಡುವುದಕ್ಕೂ ಹಣದಿಂದ ಗೌರವ ಸಂಪಾದನೆ ಮಾಡುವುದಕ್ಕೂ ಬಹಳವೇ ವ್ಯತ್ಯಾಸ ಇದೆ. ಒಳ್ಳೆಯ ಕೆಲಸಗಳನ್ನು ಮಾಡಿ ಗೌರವ ಸಂಪಾದನೆ ಮಾಡಿದ್ದರೆ, ಅವನು ಅಮರನಾಗುತ್ತಾನೆ. ಆದರೆ ಅಧಿಕಾರ ಹಣದ ಪ್ರಭಾವದಿಂದ ಕೆಟ್ಟ ಕೆಲಸವನ್ನು ಮಾಡಿ, ಸಮಾಜದಲ್ಲಿ ಭಯವನ್ನು ಮೂಡಿಸಿ ಗೌರವ ಸಂಪಾದಿಸಿದರೆ, ಅದು ಮನುಷ್ಯ ಇರುವ ತನಕ ಮಾತ್ರ ಇರುತ್ತದೆ. ಸತ್ತಮೇಲೆ ಯಾರೂ ಗುರುತಿಸುವುದಿಲ್ಲ. ಅಧಿಕಾರ ಹಣ ಇತ್ತು ಮೆರೆದು ಸತ್ತ ಎಂದು ಹೇಳುತ್ತಾರೆ ವಿನಃ ಒಳ್ಳೆಯ ವ್ಯಕ್ತಿ ಹೋದ ಎಂದು ಹೇಳುವುದೇ ಇಲ್ಲ. ಒಂದು ಸಲ ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಬಂದಲ್ಲಿ ಅದು ಹೋಗುವುದು ತುಂಬಾ ಕಷ್ಟ. ಕೆಲವೊಮ್ಮೆ ತಂದೆಯಿಂದ ಮಕ್ಕಳಿಂದ ಮೊಮ್ಮಕ್ಕಳಿನವರೆಗೂ ಆ ಕೆಟ್ಟ ಹೆಸರು ಹೋಗುವುದಿಲ್ಲ. ಅದನ್ನೇ ಆ ವಂಶಕ್ಕೆ ಅಡ್ಡ ಹೆಸರು ಬೇಕಾದರೂ ಬಂದು ಬಿಡುತ್ತದೆ. ಸಮಾಜದಲ್ಲಿ ಇರುವ ಪ್ರತಿಯೊಬ್ಬರಿಗೂ ಈ ವಿಚಾರ ತಲುಪಿರುತ್ತದೆ. ಆದರೆ ನಿರಪರಾಧಿ ಎಂದು ಮನಗಂಡಾಗ ಅದು ಕೇವಲ ಕೆಲವರಿಗೆ ಮಾತ್ರ ತಿಳಿಯುತ್ತದೆ. ಉಳಿದಂತೆ ಯಾರಿಗೂ ಆ ವಿಷಯ ತಲುಪಿರುವುದಿಲ್ಲ. ಅದು ಹಾಗೇ ಮುಂದುವರೆದಿ ರುತ್ತದೆ. ಇದನ್ನು ಪೂರ್ಣವಾಗಿ ಅಳಿಸಲು ಸಾಧ್ಯವಿಲ್ಲ. ಕಾಡಿನಲ್ಲಿ ಕಾಡ್ಗಿಚ್ಚು ಹರಡಿದರೆ ಅದನ್ನು ಆರಿಸಲು ಎಷ್ಟು ಕಷ್ಟ ಪಡಬೇಕು. ಕಡೆಗಾದರೂ ಕಷ್ಟ ಪಟ್ಟು ಕಾಡ್ಗಿಚ್ಚು ನಂದಿಸಬಹುದು. ಆದರೆ ಅಕಸ್ಮಾತ್ ತಿಳಿದೋ ಅಥವಾ ತಿಳಿದದೆಯೋ ಮಾಡಿರುವ ಕೆಲಸದ ಬಗ್ಗೆ ಕೆಟ್ಟ ಅಭಿಪ್ರಾಯ ಹರಡಿದಾಗ ಅದನ್ನು ಹೋಗಲಾಡಿಸಲು ಖಂಡಿತ ಸಾಧ್ಯವಿಲ್ಲ. ಅಡಿಕೆಯಿಂದ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ ಎನ್ನುವಂತೆ ಒಂದು ಸಲ ಸಮಾಜದಲ್ಲಿ ಕೆಟ್ಟವನು ಎನಿಸಿಕೊಂಡಲ್ಲಿ ಪುನಃ ಒಳ್ಳೆಯವರು ಆಗಬೇಕಾದರೆ ಇನ್ನೊಂದು ಜನ್ಮವನ್ನು ಎತ್ತಿ ಬರಬೇಕು. ಸಮಾಜ ಯಾವುದೇ ಕಾರಣಕ್ಕೂ ಕೆಟ್ಟ ಕೆಲಸವನ್ನು ಒಪ್ಪುವುದಿಲ್ಲ. ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎನ್ನುವಂತೆ ನೋಡುತ್ತದೆ. ಮನುಷ್ಯ ತಪ್ಪು ಮಾಡಿ ಕನ್ನಡಿ ಮುಂದೆ ನಿಲ್ಲಬಹುದು ಆದರೆ ಸಮಾಜವೆಂಬ ಕನ್ನಡಿಯ ಮುಂದೆ ಧೈರ್ಯವಾಗಿ ನಿಲ್ಲಲು ಆಗುವುದಿಲ್ಲ. ಮನುಷ್ಯ ತಪ್ಪು ಮಾಡಿ ಬಟ್ಟೆ ಬದಲಿಸಿ ವೇಷವನ್ನೂ ಸಹ ಬದಲಿಸಿದರೆ ಸಮಾಜ ಒಪ್ಪುವುದಿಲ್ಲ. ಆದರೆ ಕನ್ನಡಿಯಲ್ಲಿ ಯಾವ ರೀತಿ ವೇಷ ಬದಲಿಸಿರುತ್ತಾನೋ ಅದೇರೀತಿ ಪ್ರತಿಬಿಂಬ ಕಾಣುತ್ತದೆ ಆದರೆ ವ್ಯಕ್ತಿತ್ವ ಬದಲಾಗಿರುವುದಿಲ್ಲ. ಮನಸ್ಸಿನಲ್ಲಿ ಸದಾ ತಪ್ಪು ಮಾಡಿರುವ ಬಗ್ಗೆಯೇ ಚಿಂತೆ ಕಾಡುತ್ತಿರುತ್ತದೆ. ಆತ್ಮಸಾಕ್ಷಿ ಒಂದು ಇರುತ್ತದೆಯಲ್ಲವೇ? ಆತ್ಮ ಸಾಕ್ಷಿಗೆ ಯಾವತ್ತೂ ಮೋಸ ಮಾಡಬಾರದು. ತಪ್ಪು ಮಾಡಿ ಬಟ್ಟೆ ಬದಲಿಸಿ ಸಮಾಜದ ಮುಂದೆ ನಿಂತರೆ ಸಮಾಜವು ಉಡುಪನ್ನು ನೋಡುವುದಿಲ್ಲ, ವ್ಯಕ್ತಿತ್ವವನ್ನು ನೋಡುತ್ತದೆ.
ಕೆಟ್ಟ ಕೆಲಸ ಮಾಡಿದಾಗ ಬಂದ ಅಡ್ಡ ಹೆಸರು ತಲೆತಲಾಂತರದವರೆವಿಗೂ ಹಾಗೇ ನಿಲ್ಲುವ ಸಂಭವ ಉಂಟು. ಊರು ಬಿಟ್ಟು ಹೋದರೆ ಅಥವಾ ಅವನ ವಂಶಜರು ಯಾರೂ ಇಲ್ಲದೆ ಹೋದರೆ, ಕಾಲ ಕ್ರಮೇಣ ಮರೆಯಾಗಬಹುದು. ಮನುಷ್ಯ ತಪ್ಪು ಮಾಡಿ ಕನ್ನಡಿಯ ಮುಂದೆ ನಿಂತು ಕ್ಷಮೆ ಕೇಳಲು ಮನಸ್ಸು ಒಪ್ಪುವುದಿಲ್ಲ. ಕ್ಷಮೆ ಕೇಳಿದರೂ ಕ್ಷಮಿಸುವವರು ಯಾರು? ಒಂದು ಪಕ್ಷ ಕ್ಷಮಿಸಲಾರದ ತಪ್ಪಾಗಿದ್ದಲ್ಲಿ ದೇವರೂ ಕೂಡ ಕ್ಷಮಿಸಲಾರ. ಆದರೆ ಸಮಾಜದ ಮುಂದೆ ತಲೆ ತಗ್ಗಿಸಿ ಕ್ಷಮೆಯನ್ನು ಕೇಳುವಷ್ಟು ಹೃದಯ ವೈಶಾಲತೆ ಇರುವುದಿಲ್ಲ ಎನ್ನಬಹುದು. ನಾನೇನು ಮಹಾ ತಪ್ಪು ಮಾಡಿದ್ದೇನೆ? ಯಾರೂ ಮಾಡದ ತಪ್ಪನ್ನು ನಾನೇನು ಮಾಡಿಲ್ಲವಲ್ಲ. ಎಲ್ಲರೂ ಒಂದಲ್ಲ ಒಂದು ತಪ್ಪು ಮಾಡುವವರೇ ಆಗಿರುವಾಗ ನನ್ನ ತಪ್ಪು ಯಾವ ಮಹಾ ಎಂದು ಸಮರ್ಥಿಸಿಕೊಂಡು ಭಂಡತನ ತೋರಿ, ಸಮಾಜದಲ್ಲಿ ತಲೆ ಎತ್ತಿಕೊಂಡೇ ಓಡಾಡುತ್ತಾರೆ. ಸಮಾಜದಲ್ಲಿ ಕ್ಷಮೆ ಕೇಳುವುದು ಎಂದರೆ ಯಾರಲ್ಲಿ ಕೇಳಬೇಕು? ಅದಕ್ಕಾಗಿ ಯಾವ ಮುಖಂಡನನ್ನೂ ನೇಮಿಸಿರುವುದಿಲ್ಲವಲ್ಲ. ಯಾರಾದರೂ ಮುಖಂಡರನ್ನು ನೇಮಿಸಿದ್ದರೆ ಅವರಲ್ಲಿ ಕ್ಷಮೆ ಕೇಳಬಹುದು ಆದರೆ ರಸ್ತೆಯಲ್ಲಿ ನಿಂತು ತಪ್ಪು ಮಾಡಿದ್ದೀನಿ ಕ್ಷಮಿಸಿ ಎಂದು ಹೇಳಲು ಆಗುತ್ತದೆಯೇ? ಖಂಡಿತಾ ಸಾಧ್ಯವಿಲ್ಲ. ಅದಕ್ಕೆ ತಪ್ಪನ್ನು ಅರಿತುಕೊಂಡು, ನಡತೆಯನ್ನು ಬದಲಾಯಿಸಿಕೊಂಡು ಸಮಾಜಕ್ಕೆ ಬದಲಾಗಿರುವುದಾಗಿ ತೋರಿಸಬೇಕು. ಆಗ ತಪ್ಪು ಮಾಡಿದವನು ತನ್ನ ತಪ್ಪನ್ನು ತಿದ್ದಿಕೊಂಡು ಬದಲಾಗಿದ್ದಾನೆ ತನ್ನ ತಪ್ಪನ್ನು ಅರಿತಿದ್ದಾನೆ ಪಶ್ಚಾತ್ತಾಪ ಪಟ್ಟಿದ್ದಾನೆ ಎಂದು ಸಮಾಜವೇ ತೀರ್ಮಾನಿಸುತ್ತದೆ.
ಕನ್ನಡಿಯ ಮುಂದೆ ನಿಂತಾಗ ಮಾತ್ರ ಪ್ರತಿಬಿಂಬವನ್ನು ಕಾಣಬಹುದು. ಆದರೆ ಸಮಾಜವೆಂಬ ಕೈಗನ್ನಡಿಯಲ್ಲಿ ಎಲ್ಲಿದ್ದರೂ ಗುಣ ಅವಗುಣಗಳು ಪ್ರತಿಬಿಂಬಿಸುತ್ತಿರುತ್ತದೆ. ಅಂದರೆ ಯಾರಾದರೂ ಚಲನವಲನಗಳನ್ನು ಗಮನಿಸುತ್ತಲೇ ಇರುತ್ತಾರೆ. ಮನುಷ್ಯ ಏನಾದರೂ ಕೆಟ್ಟ ಕೆಲಸ ಮಾಡಿ ಕನ್ನಡಿ ಮುಂದೆ ನಿಂತಾಗ ಸ್ವಲ್ಪ ಮುಜುಗರ ಆಗಬಹುದು ಅಗ ಕೋಪದಿಂದ ಕನ್ನಡಿಯನ್ನು ಒಡೆದು ಚೂರು ಮಾಡಬಹುದು. ಆದರೆ ವ್ಯಕ್ತಿತ್ವ ಹಾಗೇ ಉಳಿದಿರುತ್ತದೆ. ಆದರೆ ಸಮಾಜಕ್ಕೆ ಕಲ್ಲಿನಿಂದ ಹೊಡೆಯಲು ಸಾಧ್ಯವೇ? ಅಂದರೆ ಕೋಪದಿಂದ ಸಮಾಜವನ್ನು ನಿಂದಿಸಲು ಸಾಧ್ಯವೇ? ನಿಂದಿಸಿದರೆ ಅದು ಪುನಃ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮನುಷ್ಯ ಎಂದ ಮೇಲೆ ಸ್ನೇಹಿತರು ಹಾಗೂ ಶತ್ರುಗಳು ಸಹ ಇದ್ದೇ ಇರುತ್ತಾರೆ. ಯಾರೂ ಶತ್ರುಗಳಿಲ್ಲ ಎಂದು ಅಂದುಕೊಂಡರೂ ಯಾವುದಾದರೂ ರೀತಿಯ ಶತ್ರುತ್ವ ಇದ್ದೇ ಇರುತ್ತದೆ. ಕೆಲವರಿಗೆ ಇರುವ ರೀತಿ ನೋಡಿ ಹೊಟ್ಟೆ ಕಿಚ್ಚು ಬಂದು ನಮ್ಮನ್ನು ದ್ವೇಷಿಸಬಹುದು ಅಥವಾ ರಾಜಕೀಯವಾಗಿ ದ್ವೇಷಿಸಬಹುದು. ಯಾರಿಗಾದರೂ ಸಹಾಯ ಮಾಡಿದರೆ, ಅದು ಕೆಲವರಿಗೆ ಆಗದೇ ಇರಬಹುದು. ಇದರಿಂದ ದ್ವೇಷಿಸಬಹುದು. ಹೀಗೆ ನಾನಾ ಕಾರಣಗಳಿಂದ ದ್ವೇಷಿಗಳು ಹುಟ್ಟಿಕೊಳ್ಳಬಹುದು. ಯಾರೂ ಅಜಾತ ಶತ್ರು ಆಗಲು ಸಾಧ್ಯವಿಲ್ಲ. ಒಳ್ಳೆಯ ಸ್ನೇಹಿತರುಗಳು ಹೋಗಲಿ ಬಿಡಪ್ಪ ಯಾರೂ ಮಾಡದ ತಪ್ಪು ಮಾಡಿಲ್ಲವಲ್ಲ ಎಂದು ಸಮಾಧಾನ ಪಡಿಸಿ ಅಲ್ಲಿಗೆ ಆ ವಿಷಯಕ್ಕೆ ಇತಿ ಶ್ರೀ ಹಾಡಬಹುದು. ಆದರೆ ಶತೃಗಳು ಇದ್ದರೆ ಇದನ್ನೇ ಭ್ರಹ್ಮಾಸ್ತ್ರವನ್ನಾಗಿ ಮಾಡಿಕೊಂಡು ಏನಾದರೂ ಆಗಲಿ ಕೆಟ್ಟ ಹೆಸರು ತರಬೇಕೆಂದು ಇಲ್ಲಸಲ್ಲದ ಆರೋಪವನ್ನು ಮಾಡಿ ಎಲ್ಲರಿಗೂ ಹೇಳಿಕೊಂಡು ಬರುತ್ತಾರೆ. ಇದರಿಂದ ಹೊರಬರಲು ಖಂಡಿತ ಸಾದ್ಯವಿಲ್ಲ.
ಮನುಷ್ಯನು ಏನಾದರೂ ದೊಡ್ಡ ತಪ್ಪು ಮಾಡಿ ಕನ್ನಡಿಯ ಮುಂದೆ ನಿಂತಾಗ ಅವನ ಪ್ರತಿಬಿಂಬ ನೋಡಿ ಮುಜುಗರವಾಗುತ್ತದೆ. ಹುರುಪಿಲ್ಲದ ಮನಸ್ಸು, ಬಾಡಿದ ಮುಖ ಇವುಗಳು ಮಾಡಿರುವ ತಪ್ಪನ್ನು ಹೇಳುತ್ತಿರುವಂತಿರುತ್ತದೆ. ಆದರೆ ಇದನ್ನು ಸಹಿಸದೆ ಕೋಪದಿಂದ ಕನ್ನಡಿಯನ್ನು ಒಡೆದು ಚೂರು ಮಾಡಿದರೆ ಕನ್ನಡಿ ಎಷ್ಟು ಚೂರು ಆಗುವುದೋ ಅಷ್ಟೂ ಕನ್ನಡಿಯ ಚೂರಿನಲ್ಲಿ ಪ್ರತಿಬಿಂಬ ಬಂದು ಅಣಕಿಸಿರುವಂತಿರುತ್ತದೆ. ಅದೇರೀತಿ ತಪ್ಪನ್ನು ಮಾಡಿ ಸಮಾಜದ ಮೇಲೆ ಕಲ್ಲನ್ನು ಎಸೆಯಲು ಸಾಧ್ಯವಿಲ್ಲ. ಅಂದರೆ ಮಾಡಿರುವ ತಪ್ಪನ್ನು ಯಾರಾದರೂ ಹೇಳಿರುವುದು ಕಿವಿಗೆ ಬಿದ್ದಾಗ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ ಅಕಸ್ಮಾತ್ ಏನಾದರೂ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನ ಪಟ್ಟರೆ ಅವರು ಕೋಪ ಗೊಂಡು ಎಲ್ಲರಿಗೂ ಹೇಳಿಕೊಂಡು ಬರುವ ಸಾಧ್ಯತೆ ಇರುತ್ತದೆ. ಕನ್ನಡಿಯ ರೀತಿಯಲ್ಲಿ ಒಂದು ಕನ್ನಡಿ ಒಡೆದಾಗ ನೂರಾರು ಚೂರುಗಳಾಗಿ ಎಲ್ಲದರಲ್ಲೂ ನಮ್ಮ ಬಾಡಿದ ಮುಖ ತೋರುವಂತೆ, ಒಬ್ಬರು ಇದ್ದದ್ದು ನೂರಾರು ಜನಗಳು ಮಾತಾಡಿ ಕೊಳ್ಳುವಂತಾಗುತ್ತದೆ.
ಮನುಷ್ಯ ಮಗುವಾದಾಗಿನಿಂದಲೂ ಕೆಟ್ಟವನಾಗಿರಲಾರ ಮಕ್ಕಳ ಜೀವನವು ಒಂದು ಖಾಲಿ ಹಾಳೆ ಇದ್ದಂತೆ, ಪರಿಸ್ಥಿತಿಯ ಶಿಶುವಾಗಿ ಒತ್ತಡಕ್ಕೆ ಸಿಲುಕಿ ತಪ್ಪನ್ನು ಮಾಡುವಷ್ಟು ಜನ ಬಹಳಷ್ಟು ಇದ್ದಾರೆ.
ಆದ್ದರಿಂದ ಬಹಳ ಜಾಗರೂಕತೆಯಿಂದ ಪ್ರತಿಯೊಂದು ಹೆಜ್ಜೆಯನ್ನು ಇಡಬೇಕು. ಆದಷ್ಟು ತಪ್ಪುಗಳು ಆಗದಂತೆ ನೋಡಿಕೊಳ್ಳುವುದು ಉತ್ತಮ. ಅಕಸ್ಮಾತ್ ಕೈ ಮೀರಿ ತಪ್ಪಾದರೆ, ಅದಕ್ಕೆ ಕ್ಷಮೆ ಇದ್ದೇ ಇರುತ್ತದೆ. ಬೇರೆಯವರು ಕ್ಷಮಿಸದಿದ್ದರೂ ದೇವರು ಖಂಡಿತಾ ಕ್ಷಮಿಸುತ್ತಾನೆ. ನಮ್ಮ ಆತ್ಮ ಸಾಕ್ಷಿಯಂತೆ ಸಮಾಧಾನವಿರುತ್ತದೆ.
ಸಜ್ಜನರ ಸಹವಾಸವನ್ನು ಮಾಡಿ, ಒಳ್ಳೆಯದನ್ನೇ ಕಲಿತು ಅದನ್ನೇ ಮಕ್ಕಳಿಗೂ ತಿಳಿಸಿ ಅವರನ್ನೂ ಸತ್ಪ್ರಜೆಗಳನ್ನಾಗಿ ಮಾಡಿದರೆ, ಅದೇ ಸಮಾಜಕ್ಕೆ ನೀಡುವ ಒಳ್ಳೆಯ ಕೊಡುಗೆಯಾಗುತ್ತದೆ.

RELATED ARTICLES  ಕರಾವಳಿಯ ರವಿ ಗೆ ರಾಜ್ಯ ಮಟ್ಟದ ಗರಿ