(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಹೊರಗಿನಿಂದ ಅನುಭವಿಸುವ ಸುಖವೆಲ್ಲವೂ ವಿಷಯಸುಖವೇ. ‘ನನ್ನಿಂದ’ ಹೊರಗಿದ್ದುದೆಲ್ಲವೂ ವಿಷಯವೇ. ಈ ಸುಖ ದೇಶ-ಕಾಲ ಭೇದದಿಂದ ಹರಿದು ಭಂಗವಾಗುವ ಸುಖ. ಇದು ಸಂಕುಚಿತ ಸುಖ. ಇದು ತ್ರಿಕಾಲದಲ್ಲಿಯೂ ದುಃಖ ಕೊಡುವ ಬ್ರಮಾತ್ಮಕ ಸುಖ!
ಮೊದಲು ಆ ವಿಷಯಸುಖದ ಪ್ರಾಪ್ತಿಗಾಗಿ ಕಷ್ಟ; ಬಳಿಕ ಅದರ ಬಳಸಿ-ಉಳಿಸುಕೊಳ್ಳುವಲ್ಲಿ ಕಷ್ಟ; ಮುಂದೆ ತನ್ನ ಸ್ವಭಾವಾನುಸಾರ ತೊಲಗಿದಾಗ ಸಹಿಸಲಾಗದ ಕಷ್ಟ!
ವಿಷಯಸುಖಗಳನ್ನು ಸಂಗ್ರಹಿಸುವದರಿಂದ ಮಾನವ ಜೀವನಕ್ಕೆ ಯಾವ ಧನ್ಯತೆಯೂ ಲಭಿಸುವದಿಲ್ಲ. ಯಾವ ತೃಪ್ತಿಯೂ ಲಭಿಸುವದಿಲ್ಲ.

RELATED ARTICLES  ದೀಪ ಹಚ್ಚುವ ಮಹತ್ವ


ಇಷ್ಟೇ ಅಲ್ಲ, ವಿಷಯಗಳ ಆಧೀನ್ಯತೆ ಅಲ್ಪಕಾಲ ಮಾತ್ರ. ಅಲ್ಲದೇ ವಿಷಯಗಳ ಪರಿವರ್ತನಶೀಲತೆ ಮತ್ತು ವಿನಾಶತ್ವದೋಷದಿಂದ ಈ ಸುಖ ಅಲ್ಪ ಮತು್ತ ಅಸ್ಥಿರ. ಈ ಎಲ್ಲ ಕಾರಣಗಳಿಂದಾಗಿ ವಿಷಯಸುಖದಿಂದ ಅತೃಪ್ತ, ಅಧನ್ಯತೆಗಳೇ ಹೆಚ್ಚುತ್ತ ಹೋಗಿ ಹೃದಯವು ಹೊತ್ತಿ ಉರಿಯಹತ್ತುವದು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -


ಮನುಷ್ಯಜೀವನದ ನಿಜವಾದ ಹಾರೈಕೆಯು ಅಲ್ಪಸುಖವಲ್ಲ. ಅನಂತಸುಖ!
ವಿಷಯಗಳಿಂದಾದರೆ ಅಲ್ಪಸುಖ, ಅಪಾರದುಃಖ! ಇವೆರಡರ ಹೊರತು ಬೇರೆ ಇದರಲ್ಲಿ ದೊರೆಯುವದೇ ಇಲ್ಲ. ವಿಷಯ ಸುಖಗಳ ಅನುಭವದಿಂದ ವಿಷಯಾಶೆಯು ಬೆಳೆಯುವದೇ ಹೊರತು ನಮ್ಮ ಜೀವನದ ನಿಜ ಬೇಡಿಕೆಯು ಪೂರ್ಣವಾಗುವದಿಲ್ಲ.
ಮಾನವನಿಗೆ ವಿವೇಕವು ಜನ್ಮಸಿದ್ಧ! ಎಲ್ಲಿ ವಿವೇಕವೂ, ಸಂಯಮವೂ ತುಸುವಾದರೂ ಉಂಟೋ-ಅದೇ ನರಜನ್ಮ- ಅಲ್ಲಿ ವಿಷಯಗಳ ಬಲೆಯನ್ನು ಹರಿದುಹಾಕುವ ಯೋಗ್ಯತೆಯೂ ಉಂಟೇ ಉಂಟು!