ನಿಂತು ಹೋಗುವ ಮಾತು ಕತೆಗಳು-1
ಅನಿವಾರ್ಯ ಕಾರಣಗಳಿಂದ ಲೇಖನ ಮಾಲೆ ಮುಂದುವರೆಸಲಾಗಿರಲಿಲ್ಲ. ಇನ್ನು ಮುಂದೆ ಮುಂದುವರೆಸುತ್ತೇನೆ. ಓದಿ ಅಭಿಪ್ರಾಯ ತಿಳಿಸಲು ಕೋರುತ್ತೇನೆ.
ಪ್ರಪಂಚದಲ್ಲಿ ಲಕ್ಷಾಂತರ ಜೀವಿಗಳಿದ್ದು ಅದರಲ್ಲಿ ಮಾತನಾಡುವ ಜೀವಿ ಎಂದರೆ ಮನುಷ್ಯ ಜೀವಿ ಮಾತ್ರ. ಪ್ರತಿಯೊಂದು ಪ್ರಾಣಿ ಪಕ್ಷಿಗಳು ಅವುಗಳ ಅವಶ್ಯಕತೆಗೆ ತಕ್ಕಂತೆ ಅವುಗಳ ಜೊತೆಗಾರರಿಗೆ ಅರ್ಥವಾಗುವ ರೀತಿಯಲ್ಲಿ ನಾಲಿಗೆಯ ಸಹಾಯವಿಲ್ಲದೆ ಬಾಯಿಯಲ್ಲಿ ಮಾತ್ರ ಕೆಲವು ಶಬ್ದಗಳನ್ನು ಹೊರಡಿಸುತ್ತವೆ. ಸಾಕುಪ್ರಾಣಿಗಳು ಕೂಗುವ ರೀತಿಯಿಂದ ಅವುಗಳ ಮಾಲೀಕರಿಗೆ ಹಸಿವು ಬಾಯಾರಿಕೆ ಅಥವಾ ಬೇರೆ ಯಾವುದೇ ರೀತಿಯ ತೊಂದರೆಯಾದರೂ ತಿಳಿಯುತ್ತದೆ. ಅದರಂತೆ ಆಹಾರ ನೀರು ಏನಾದರೂ ಖಾಯಿಲೆ ಬಂದಿದ್ದರೆ ಅದಕ್ಕೆ ತಕ್ಕಂತೆ ಔಷದಿ ನೀಡಿ ಅವುಗಳ ಮಾಲೀಕನು ಉಪಚರಿಸುತ್ತಾನೆ.
ಜೀವಿಗಳಲ್ಲಿ ವಿಶೇಷವಾಗಿ ಮನುಷ್ಯನಿಗೆ ಮಾತ್ರ ಮಾತನಾಡುವ ಸಾಮರ್ಥ್ಯ ಇದೆ. ಮನುಷ್ಯನು ತಾನಾಡುವ ಮಾತುಗಳಿಂದ ಮಿತ್ರರನ್ನು ಅಥವಾ ಶತೃಗಳನ್ನು ಹೊಂದುತ್ತಾನೆ. ಮಾತೇ ಮಿತ್ರ ಮಾತೇ ಶತ್ರು ಎಂದಾಗುತ್ತದೆ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬಂತೆ ತಾನಾಡಿದ ಕೆಲವು ಮಾತುಗಳು ಬೇರೊಬ್ಬರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ.
ಒಂದು ಪಕ್ಷ ಬೇರೊಬ್ಬರು ಹೊಡೆದು ಶರೀರಕ್ಕೆ ಗಾಯವಾಗಿ ವಾಸಿಯಾಗಬಹುದು. ಏಟು ತಿಂದ ವ್ಯಕ್ತಿ ತನಗೆ ಏಟು ಬಿದ್ದು ಗಾಯವಾದರೂ ಹೊಡೆದವನ ಮೇಲೆ ಅತಿಯಾದ ವಿಶ್ವಾಸವಿದ್ದರೆ ಉದ್ದೇಶ ಪೂರ್ವಕವಾಗಿ ಹೊಡೆಯಲಿಲ್ಲ ಅಕಸ್ಮಾತ್ ಹೊಡೆದಿದ್ದಾನೆ ಎಂದು ಸಮಜಾಯಿಷಿ ಹೇಳಿ ಸ್ನೇಹ ಮುಂದುವರೆಸಿದರೆ ಆಗ ಹೊಡೆದವನಿಗೂ ಬುದ್ದಿ ಬಂದು ಸ್ನೇಹ ಮುಂದುವರೆಯ ಬಹುದು. ಆದರೆ ಆಡಿದ ಮಾತು ಮಾತ್ರ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಮಾತು ಆಡಿದವನು ಯಾರೇ ಆಗಿದ್ದರೂ ಸಹ ಅವನಿಗೇನು ಬುದ್ದಿ ಇಲ್ಲವೇ? ಎಂತಹ ಮಾತು ಆಡಿದ ನನ್ನ ಜೀವ ಇರುವವರೆಗೂ ಮರೆಯುವುದಿಲ್ಲ ಎಂದು ದ್ವೇಷ ಉಂಟಾಗಬಹುದು. ಆ ದ್ವೇಷ ದಿನ ಕಳೆದಂತೆ ಕಡಿಮೆಯಾಗಿ ಪುನಃ ಮಾತನಾಡಲು ಪ್ರಾರಂಭಿಸಿದರೂ ಸಹ ಆಡಿದ ಮಾತು ಮನಸ್ಸಿನಲ್ಲಿ ಕೊರೆಯುತ್ತಾ ಇರುತ್ತದೆ ಮೇಲ್ನೋಟಕ್ಕೆ ಸ್ನೇಹದಿಂದ ಇರಬಹುದಷ್ಟೇ.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ