ನಿಂತು ಹೋಗುವ ಮಾತು ಕತೆಗಳು-2
ಮನುಷ್ಯ ತಾನಾಡುವ ಮಾತಿನ ವೈಖರಿಯಿಂದ ಮಿತ್ರತ್ವವನ್ನು ಮತ್ತು ಶತೃತ್ವವನ್ನು ಪಡೆಯುತ್ತಾನೆ. . ಎಷ್ಟೇ ಹಳೆಯದಾದ ಸ್ನೇಹ ವಿಶ್ವಾಸವಿದ್ದರೂ ಒಂದೇ ಒಂದು ಮಾತಿನಿಂದಲೇ ಕೊನೆಗೊಳ್ಳಬಹುದು. ಅಥವಾ ಒಂದು ಸಾಂತ್ವನದ ಮಾತಿನಿಂದಲೇ ಅಪರಿಚಿತರನ್ನು ಮಿತ್ರರಾಗಿ ಪಡೆಯಬಹುದು.
ಮನುಷ್ಯ ಹುಟ್ಟಿದ ಒಂದು ವರ್ಷಗಳೊಳಗೆ ಒಂದೊಂದೇ ಮಾತನಾಡುವುದನ್ನು ಕಲಿಯುತ್ತಾ ಹೋಗುತ್ತಾನೆ. ಕೆಲವು ಮಕ್ಕಳು ಎರಡು ವರ್ಷಗಳಿಗೆ ಬಹಳ ಸ್ಪಷ್ಟವಾಗಿ ಮಾತನಾಡಲು ಕಲಿತಿರುತ್ತವೆ. ತನ್ನ ಹೆತ್ತವರು ಅಥವಾ ಅಕ್ಕಪಕ್ಕದವರು ಹೇಳಿಕೊಟ್ಟ ಮಾತುಗಳನ್ನು ತೊದಲುತ್ತಾ ನುಡಿದು ನಂತರ ಸ್ಪಷ್ಟವಾಗಿ ಮಾತನಾಡಲು ಪ್ರಾರಂಭಿಸುತ್ತವೆ.
ಮಕ್ಕಳು ನಕ್ಕರೆ ಹಾಲಿನೊರೆ ಉಕ್ಕಿದಂತೆ ಮಕ್ಕಳು ನುಡಿದರೆ ಜೇನನ್ನು ಸವಿದಂತೆ ಇರುತ್ತದೆ ಎಂಬ ನಾಣ್ನುಡಿ ಯಂತೆ
ಎಲ್ಲರಿಗೂ ಮಕ್ಕಳನ್ನು ನಗಿಸುವುದು ಮತ್ತು ಮಾತನಾಡಿಸುವುದೆಂದರೆ ಬಹಳವೇ ಇಷ್ಟ. ವೈರಿಗಳ ಮಕ್ಕಳಾಗಿದ್ದರೂ ಆ ಮಕ್ಕಳನ್ನು ಮಾತಾಡಿಸುತ್ತಾರೆ ಅವರನ್ನು ಕೇಳಿದರೆ ಮಗುವನ್ನು ತಾನೇ ಮಾತನಾಡಿಸಿದ್ದು ಮಗು ನಿಮಗೇನು ಮಾಡಿದೆ ಎಂದು ಸಮಜಾಯಿಷಿ ನೀಡಿ ತಮ್ಮ ಒಳ್ಳೆಯ ತನವನ್ನು ಹೇಳುತ್ತಾರೆ ಇದು ಅಕ್ಷರಶಃ ಸತ್ಯ. ಮನುಷ್ಯ ಹುಟ್ಟಿದ ತಕ್ಷಣ ಬೇರೊಬ್ಬರಿಗೆ ಕೆಟ್ಟವನಾಗಿರುವುದಿಲ್ಲ. ಹಲವಾರು ಸಂದರ್ಭ ಸನ್ನಿವೇಶ ಒತ್ತಡ ಸಂಯಮ ಕಳೆದುಕೊಂಡು ಮಾತನಾಡುವ ಮಾತುಗಳಿಂದ ಕೆಟ್ಟವರಾಗುತ್ತಾರೆ.
ಮಕ್ಕಳಿಗೆ ಮಾತನಾಡಲು ಇನ್ನೂ ಬರದಿದ್ದಾಗ ಅವುಗಳನ್ನು ನಗಿಸಿ ಸಂತೋಷಪಡುವುದುಂಟು. ಒಂದೊಂದೇ ಮಾತನ್ನು ಆಡಲು ಕಲಿತಾಗ ಮಗುವಿನ ಹೆತ್ತವರಿಗೆ ಬಹಳವೇ ಸಂತೋಷವಾಗಿರುತ್ತದೆ. ಮನೆಗೆ ಬರುವವರ ಮುಂದೆ ಅಥವಾ ಅಕ್ಕಪಕ್ಕದವರ ಮುಂದೆ ತಮ್ಮ ಮಗು ಎಷ್ಟು ಚೆನ್ನಾಗಿ ಮಾತನಾಡುತ್ತದೆ ಎಂದು ಹೇಳುತ್ತಾ ಅವರುಗಳ ಮುಂದೆ ಮಗು ನುಡಿಯುವ ಪದಗಳನ್ನು ಹೇಳಿಸಿ ಸಂತೋಷಪಡುವುದು ಸಹಜ.
ಮನುಷ್ಯ ಮಾತನ್ನು ಕಲಿತು ಎಲ್ಲರ ಜೊತೆ ವಿಶ್ವಾಸದಿಂದ ಮಾತನಾಡುತ್ತಿದ್ದರೂ ಅನೇಕ ಸಂದರ್ಭಗಳಲ್ಲಿ, ತಂದೆ ತಾಯಿಯ ಬಳಿ, ಗಂಡ ಹೆಂಡತಿಯಲ್ಲಿ, ಸಹೋದರ ಸಹೋದರಿಯರಲ್ಲಿ, ಸಂಬಂಧಗಳಲ್ಲಿ, ಸ್ನೇಹಿತರುಗಳಲ್ಲಿ, ಹಲವಾರು ಸನ್ನಿವೇಶಗಳಲ್ಲಿ ಮಾತುಗಳು ನಿಂತು ಹೋಗಬಹುದು. ಕೆಲವೊಮ್ಮೆ ನೋಡಿದವರು ಆಶ್ಚರ್ಯಪಡುವಂತೆ ಆಗಬಹುದು. ಕೆಲವರು ಹಲವಾರು ಸಂದರ್ಭಗಳಲ್ಲಿ ಅಂದುಕೊಳ್ಳುವಂತೆ ಮೊನ್ನೆ ಮಾತನಾಡುತ್ತಾ ಇದ್ದ ಇಂದೇನಾಯಿತು ಎಂದು ಪ್ರಶ್ನಿಸಬಹುದು. ಒಂದೇ ದಿನದಲ್ಲಿ ಅಥವಾ ಕ್ಷಣಮಾತ್ರದಲ್ಲಿ ಭಿನ್ನಾಭಿಪ್ರಾಯ ಬಂದು ಮಾತನಾಡುವುದನ್ನೇ ಬಿಟ್ಟು ಬಿಡಬಹುದು. ಆದರೆ ಇದು ಕೆಲವರಿಗೆ ಆಶ್ಚರ್ಯದಂತೆ ಕಾಣುತ್ತದೆ. ಆದರೆ ಇದು ವಾಸ್ತವ ಸಂಗತಿಯಾಗಿರುತ್ತದೆ. ಮಾತನಾಡುವುದನ್ನು ನಿಲ್ಲಿಸಿದ್ದರೂ ಒಳ್ಳೆಯ ಭಾವನೆ ಇರುವವರಲ್ಲಿ ಪಶ್ಚಾತ್ತಾಪ ಬರಬಹುದು. ಕೆಲವೊಮ್ಮೆ ಕೆಲವರ ಮನಸಿನಲ್ಲಿ ಆದದ್ದು ಆಗಿಹೋಯಿತು ಮಾತನಾಡುವುದನ್ನು ಏಕೆ ಬಿಡಬೇಕು ಎಂದು ಎಣಿಸಬಹುದು. ಆಗ ಸ್ವಾಭಿಮಾನವೆಂಬುದು ಅಡ್ಡಬರುತ್ತದೆ. ನಾನೇಕೆ ಹೋಗಿ ಮಾತನಾಡಿಸಲಿ ಅವನೇ ಬಂದು ಮಾತನಾಡಲಿ ಎಂಬ ಧೋರಣೆ ಇಬ್ಬರಲ್ಲೂ ಬಂದು ಕೊನೆಗೆ ಇಬ್ಬರೂ ಮಾತನಾಡದಂತಾಗುತ್ತದೆ. ಅಪರೂಪ ಸಂದರ್ಭಗಳಲ್ಲಿ ಕೆಲವರು ಮಾತ್ರ ಅದರಲ್ಲೂ ದೊಡ್ಡವರೇ ಹೋಗಿ ಕಿರಿಯರನ್ನು ಮಾತನಾಡಿಸಲು ಹೋಗುತ್ತಾರೆ. ಆಗ ಕಿರಿಯನಾದವನು ಬೇರೆ ರೀತಿಯಲ್ಲಿ ಅರ್ಥ ಕಲ್ಪಿಸಿಕೊಳ್ಳುತ್ತಾರೆ. ಆಗ ಇವರೇ ದೊಡ್ಡವರಾದಂತೆ, ನೋಡಿದಾ ಅವನೇ ಮಾತನಾಡಿಸಿಕೊಂಡು ಬಂದ ನನ್ನ ಹಠವೇ ಜಯಿಸಿತು ಎಂದು ಹೇಳಬಹುದು ಆ ಸನ್ನಿವೇಶದಲ್ಲಿ ನಿಜವಾಗಿ ಸೋತವರೇ ಕಿರಿಯರು ಅದು ಅವರಿಗೆ ತಿಳಿದಿರುವುದಿಲ್ಲ. ಯಾರು ಬೇರೆಯವರನ್ನು ಕ್ಷಮಿಸಿ ಪುನಃ ಅವರನ್ನು ವಿಶ್ವಾಸದಿಂದ ನೋಡುತ್ತಾರೆಯೋ ಅವರ ಹೃದಯ ವೈಶಾಲ್ಯತೆ ಮೆಚ್ಚಬೇಕಾದದ್ದೇ ಅಲ್ಲವೇ.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ