ನಿಂತು ಹೋಗುವ ಮಾತು ಕತೆಗಳು-3
ಮಾತು ಕಲಿತ ಮನುಷ್ಯ ತನ್ನ ಜೀವಿತಾವಧಿ ಪೂರ್ತಿ ಮಾತನಾಡುತ್ತಲೇ ಇರುತ್ತಾನೆ ಎಂದರೆ ತಪ್ಪಾಗಲಾರದು.
ಮಾತನಾಡುವುದು ಯಾವಾಗ ನಿಲ್ಲುತ್ತದೆ ಎಂದರೆ ಸ್ವತಃ ಮಾತನಾಡಲು ಆಗದೇ ಇರುವ ಪರಿಸ್ಥಿತಿ ಬಂದಾಗ.
ಬೇರೆಯವರೊಡನೆ ಅಂದರೆ ತನ್ನ ಹೆತ್ತವರೊಂದಿಗೆ, ಒಡಹುಟ್ಟಿದವರೊಂದಿಗೆ, ಬಂದು ಗಳೊಂದಿಗೆ, ಸ್ನೇಹಿತರೊಂದಿಗೆ ಮಾತನಾಡುವುದು ನಿಲ್ಲಲು ಅನೇಕ ಕಾರಣ ಸಂದರ್ಭಗಳು ಬರಬಹುದು. ನಿಸ್ವಾರ್ಥತೆ, ಉದಾರತೆ, ಸೋತು ಗೆಲ್ಲುವ ಮನೋಭಾವ, ಕ್ಷಮಾಗುಣ, ನಿರಹಂಕಾರ, ತಿರಸ್ಕಾರ ಭಾವನೆ ಇಲ್ಲದಿರುವುದು ಸ್ನೇಹಜೀವಿಯಾದರೆ ಮಾತ್ರ ತನ್ನ ಜೀವಿತಾವಧಿಯಲ್ಲಿ ಮಾತನಾಡಲು ಶಕ್ಯನಾಗಿರುವವರೆಗೂ ಮಾತನಾಡಬಹುದು. ಇಲ್ಲದಿದ್ದಲ್ಲಿ ಒಂದೊಂದಾಗಿ ಸಂಬಂಧಿಗಳಲ್ಲಿ, ಸ್ನೇಹಿತರಲ್ಲಿ ವಿಶ್ವಾಸ ಕಳೆದುಕೊಂಡು ಎಂದಿಗೆ ಈ ಮನುಷ್ಯ ಹೋಗುತ್ತಾನೋ ಎಂಬ ಭಾವನೆ ಎಲ್ಲರಲ್ಲೂ ಬರುವಂತಾಗುತ್ತದೆ. ಈ ರೀತಿ ಇರಲು ಯಾರಿಂದಲೂ ಸಾಧ್ಯವಿಲ್ಲವೆಂದೇ ಹೇಳಬಹುದು. ತಾನು ವಿಶ್ವಾಸದಿಂದ ಇದ್ದರೂ ಬೇರೆಯವರು ಯಾವುದಾದರೂ ನೆಪವೊಡ್ಡಿ ದ್ವೇಷಿಸುವಂತಾಗಬಹುದು.
ಮೊದಲಿಗೆ ಹೆತ್ತವರಲ್ಲಿ ಮಾತುಕತೆ ನಿಲ್ಲುವುದು ಯಾವಾಗೆಂದರೆ ತನ್ನ ಇಚ್ಛೆಯನ್ನು ಪೂರೈಸಲು ಹೆತ್ತವರು ಪ್ರತಿರೋಧ ಒಡ್ಡಿದಾಗ ಹೆತ್ತವರ ಮೇಲೆ ಮುನಿಸಿಕೊಂಡು ಮಾತನ್ನು ನಿಲ್ಲಿಸಬಹುದು. ಒಂದು ವೇಳೆ ತಂದೆಯ ಬಳಿ ಮಾತನ್ನು ನಿಲ್ಲಿಸಿದಾಗ ತಾಯಿಯ ಬಳಿ ಮಾತನಾಡುವುದನ್ನು ಅಷ್ಟು ಸುಲಭವಾಗಿ ನಿಲ್ಲಿಸಲಾಗುವುದೇ ಇಲ್ಲ. ಮಾತೃ ವಾತ್ಸಲ್ಯ ಎಳೆಯುತ್ತದೆ. ಹಾಗೆಯೇ ತಾಯಿಗೂ ಅಷ್ಟು ಸುಲಭವಾಗಿ ಕರುಳಕುಡಿಯನ್ನು ಕಡಿದುಕೊಳ್ಳಲಾಗುವುದಿಲ್ಲ. ತನ್ನ ಗಂಡ ಏನಾದರೂ ಮಕ್ಕಳೊಂದಿಗೆ ಮಾತನಾಡಬಾರದೆಂದು ಕಟ್ಠಪ್ಪಣೆ ಮಾಡಿದರೆ ಮಾತ್ರ ನಿಲ್ಲಬಹುದು. ಆದರೂ ಕದ್ದು ಮುಚ್ಚಿ ಫೋನ್ ಮುಖಾಂತರ ಮಾತನಾಡುತ್ತಲೇ ಇರುತ್ತಾರೆ ಎಂದರೆ ತಪ್ಪಾಗಲಾರದು.
ಮಕ್ಕಳು ತಮ್ಮ ಹೆತ್ತವರೊಂದಿಗೆ ಮಾತು ನಿಲ್ಲಿಸುವುದು ಪ್ರಮುಖ ಕಾರಣ ತಾವು ಇಷ್ಟಪಟ್ಟವರೊಂದಿಗೆ ವಿವಾಹಕ್ಕೆ ಒಪ್ಪದೇ ಇರುವುದು., ಆಸ್ತಿ ವಿಚಾರವಾಗಿ ಮತ್ತು ತನ್ನ ಪತ್ನಿ ಮತ್ತು ಹೆತ್ತವರೊಡನೆ ಅನ್ಯೋನ್ಯತೆ ಬರದೇ ಇದ್ದಾಗ ಮಾತ್ರ ಮಾತು ಕಡಿಮೆಯಾಗಬಹುದು. ಅಥವಾ ಹೆತ್ತವರೊಂದಿಗೆ ಪತ್ನಿಯು ಜಗಳವಾಡುತ್ತಾ ಇದ್ದರೆ ಬೇಸತ್ತು ಬೇರೆ ಸಂಸಾರ ಮಾಡಿದಾಗಲೂ ಮಾತು ನಿಲ್ಲಬಹುದು. ಹೆತ್ತವರನ್ನು ನೋಡಿಕೊಳ್ಳಲಾಗದೆ ಅಕಸ್ಮಾತ್ ವೃದ್ಧಾಶ್ರಮಕ್ಕೆ ಸೇರಿಸಿದಾಗಲೂ ಮಾತು ಕಡಿಮೆಯಾಗಬಹುದು.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ