ನಿಂತು ಹೋಗುವ ಮಾತು ಕತೆಗಳು – 4
ಅನೇಕ ಕಾರಣಗಳಿಂದ ಹೆತ್ತವರಲ್ಲಿ ಮಕ್ಕಳು ಮಾತನಾಡುವುದನ್ನು ನಿಲ್ಲಿಸಬಹುದು.
ಮನೆಯಲ್ಲಿನ ಆಂತರಿಕ ಜಗಳವೇ ಬಹುಮುಖ್ಯ ಕಾರಣವಾಗುತ್ತದೆ. ತಂದೆಯ ಸ್ವಾಭಿಮಾನ ಮಕ್ಕಳ ಬಿಗುಮಾನದಿಂದ ಮಾತುಗಳು ಕಡಿಮೆಯಾಗಬಹುದು. ಅಥವಾ ಕೆಲವು ಸಂದರ್ಭಗಳಲ್ಲಿ ಮಿತಿ ಮೀರಿ ನಿಂತೇ ಹೋಗಬಹುದು. ತಂದೆಗೆ ತನ್ನ ಮಕ್ಕಳು ತಾನು ಹೇಳಿದಂತೆ ಕೇಳಬೇಕೆಂದು ಕೆಟ್ಟಹಠ ಇರುತ್ತದೆ. ಆದರೆ ಮಕ್ಕಳ ಮನಸ್ಸಿನಲ್ಲಿ ನಾವು ಕೂಡ ದೊಡ್ಡವರಾಗಿದ್ದೇವೆ ಪ್ರತಿಯೊಂದು ವಿಷಯದಲ್ಲೂ ತಂದೆ ಹೇಳಿದಂತೆ ಕೇಳಲು ನಾವೇನು ಚಿಕ್ಕಮಕ್ಕಳಲ್ಲ ನಮಗೂ ಬುದ್ದಿ ಇದೆ ಎಂಬ ಧೋರಣೆ ಬರುವುದರಿಂದ ಸಂಸಾರದಲ್ಲಿ ಏಕ ಮುಖವಾಗಿ ಸಂಚರಿಸುತ್ತಾ ಇದ್ದ ಅಭಿಪ್ರಾಯಗಳು ರೈಲು ಕಂಬಿಯಂತೆ ಸಮಾನಾಂತರ ಮುಖವಾಗಿ ಚಲಿಸಲು ಪ್ರಾರಂಭಿಸುತ್ತದೆ. ತಂದೆಯ ಮನಸ್ಸಿನಲ್ಲಿ ನಾನು ದೊಡ್ಡವನು ನನಗೆ ಅನುಭವ ಇದೆ ನನ್ನ ಮಾತು ಕೇಳಬೇಕು ಎಂಬುವ ಮನೋಭಾವ ಇದ್ದರೆ ಮಕ್ಕಳ ಮನೋಭಾವವೂ ಕೂಡಾ ಸಮಾನಾಂತರವಾಗಿ ನಾವು ಕೂಡ ದೊಡ್ಡವರಾಗಿ ಸಾಕಷ್ಟು ಓದಿದ್ದೇವೆ ಎಲ್ಲಾ ಕಡೆ ಕೆಲಸ ನಿರ್ವಹಿಸಿ ಅನುಭವ ಹೊಂದಿದ್ದೇವೆ. ಪ್ರತಿಯೊಂದು ಮಾತು ಕೇಳಿ ಅದರಂತೆ ಇರಲು ಆಗುವುದಿಲ್ಲ ಎಂಬ ಮನೋಭಾವ ಇರುತ್ತದೆ. ಇದು ಒಂದು ರೀತಿಯಲ್ಲಿ ನಿಜವಾದ ಮಾತು. ತಂದೆಯಾದವನು ತನ್ನ ಮಕ್ಕಳ ಪ್ರತಿಯೊಂದು ವಿಷಯದಲ್ಲೂ ತಲೆ ಹಾಕಬಾರದು. ಹಲವಾರು ವಿಷಯಗಳಲ್ಲಿ ಸ್ವತಂತ್ರವಾಗಿ ಬಿಟ್ಟರೆ ಒಳ್ಳೆಯದು. ಮಕ್ಕಳು ಓದುವವರೆಗೆ ಮಾತ್ರ ಕಠಿಣವಾಗಿದ್ದು ಕೆಲಸಕ್ಕೆ ಸೇರಿ ವಿವಾಹವಾದ ನಂತರವೂ ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ಕೆಲವೊಮ್ಮೆ ಪತ್ನಿಯ ಎದುರಲ್ಲಿ ಮುಜುಗರಕ್ಕೆ ಒಳಗಾಗಬಹುದು.
ಮಕ್ಕಳನ್ನು ಸ್ವತಂತ್ರವಾಗಿ ವ್ಯವಹರಿಸಲು ಬಿಡದೇ ಇದ್ದರೆ ಮುಂದಿನ ದಿನಗಳಲ್ಲಿ ಅಂದರೆ ತಂದೆ ಅಸುನೀಗಿದಾಗ ಸ್ವತಂತ್ರವಾಗಿ ಯಾವ ವ್ಯವಹಾರಗಳಲ್ಲಿಯೂ ನಿರ್ಧಾರವನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಮಕ್ಕಳಿಗೆ ವ್ಯವಹಾರವನ್ನು ನಿಭಾಯಿಸಲು ಅವಕಾಶ ನೀಡಿ ತಂದೆಯಾದವನು ಸ್ವಲ್ಪ ದಿನಗಳ ಕಾಲ ಜೊತೆಯಾಗಿದ್ದು ನಂತರದ ದಿನಗಳಲ್ಲಿ ಬೆಂಬಲಕ್ಕೆ ಮಾತ್ರ ನಿಲ್ಲಬೇಕು. ಆಗ ಮಕ್ಕಳಿಗೆ ಸ್ವತಂತ್ರವಾಗಿ ವ್ಯವಹರಿಸಲು ಅನುಕೂಲವಾಗುವುದರ ಜೊತೆಗೆ ತಂದೆಯ ಬೆಂಬಲ ಇದೆ ಎಂಬ ಧೈರ್ಯವೂ ಇರುತ್ತದೆ. ಇದು ಖಾಸಗಿ ಕಂಪೆನಿಗಳನ್ನು ನಡೆಸುವವರಿಗೆ ಅನ್ವಯವಾಗಬಹುದು.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)