ಲೇಖಕರು : ಮಾಲಿನಿ ಹೆಗಡೆ,ಬೆಂಗಳೂರು.
8, 18, 28, 38…… ಇವೆಲ್ಲಾ ಬರೀ ಸಂಖ್ಯೆಗಳಲ್ಲ, ನಾನು ಹೇಳುತ್ತಾ ಇರುವುದು ವಯಸ್ಸು. ಇದೆಲ್ಲಾ ವಯಸ್ಸುಗಳು ಕೂಡ ಹೆಣ್ಣು ಮಕ್ಕಳಿಗೆ ಇಷ್ಟವೆ. ಬಾಲ್ಯದ 8, ಯೌವನದ 18, ಮದುವೆಯ 28, ಮಕ್ಕಳಾದ ನಂತರದ 38 …ಹೀಗೆ ಎಲ್ಲ ಇಷ್ಟವೆ. ಆದರೆ 10 ವರ್ಷ ಕಳೆದು ಬರುವ ಈ ‘48’ ಇದೆಯಲ್ಲ!! ಅಬ್ಬಾ..ನಿಜಕ್ಕೂ ಅದರ ಅನುಭವ ವಿಚಿತ್ರ.
ಆ ಕಡೆ ಯೌವನವು ಅಲ್ಲ, ಈ ಕಡೆ ಮುಪ್ಪು ಅಲ್ಲ, ಆ ಕಡೆ ಆಂಟೀನು ಅಲ್ಲ, ಈ ಕಡೆ ಅಜ್ಜಿನು ಅಲ್ಲ, ಮದ್ಯದಲ್ಲಿ ಅಕ್ಕನು ಅಲ್ಲ,ಅದೇನೋ ತಳಮಳ, ಗೊಂದಲ, ಅನಾವಶ್ಯಕ ಗಾಭರಿ, ಯಾರ ಹತ್ತಿರ ಹೇಳಲು ಆಗುತ್ತಿಲ್ಲ, ಹಾಗಾದರೆ ಆಗಿದ್ದೇನು? ಓನ್ಲೀ ’48’ ಅಸ್ಟೇ.
ಡಾಕ್ಟರ್ ಹತ್ತಿರ ಹೋದರೆ, ಅಯ್ಯೋ ಇದಾ? ಎಲ್ಲಾ ಹೆಂಗಸರಿಗೂ ಈ ವಯಸ್ಸಿನಲ್ಲಿ ಇದೆ ಗೋಳು, ಇದಕ್ಕೆ ಔಷಧಿ ಏನು ಇಲ್ಲ, ಮನಸ್ಸನ್ನು ಸ್ವಲ್ಪ ಕೂಲ್ ಆಗಿ ಇಟ್ಟುಕೊಳ್ಳಿ ಎನ್ನುವ ಬಿಟ್ಟಿ ಸಲಹೆ. ಇನ್ನೂ ಹೆಚ್ಚು ಕೇಳಿದರೆ, ಕ್ಯಾಲ್ಷಿಯಂ ಕೊರತೆ ಅಂತ ನಮ್ಮ ಕೈ ಗೆ ಬರುವ ಕೆಲವು ಟ್ಯಾಬ್ಲೆಟ್ಸ್ ಅಸ್ಟೇ. ಯಾಕೋ ಹೆಂಡತಿ ತುಂಬಾ ಸಿಡಿಮಿಡಿ ಅನ್ನುತಾಳೆ ಅನ್ನುವ ಗಂಡನ ಆರೋಪ, ಅವಳ ಜಾತಕ ತೆಗೆದು ಕೊಂಡು ಜ್ಯೋತಿಷಿ ಹತ್ತಿರ ಹೋದ ಗಂಡನಿಗೆ ಅವರು ಹೇಳುವ ಉತ್ತರ…ನಿನ್ನ ಹೆಂಡತಿಗೆ ಈಗ ‘ರಾಹು ದೆಶೆ’ ಅದಕ್ಕೆ ಅವಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಪ್ಪ ಅಂತ. ಈ ಗಂಡ ಚೆನ್ನಾಗಿ ನೋಡಿಕೊಳ್ಳುವುದಕಿಂತ ರಾಹು ದೇಶೇನೆ ಒಳ್ಳೆದು ಅಂತ ಹೆಂಡತಿಗೆ ಅನ್ನಿಸೋದು ಸಹಜ.
ಇನ್ನೂ ಹೊರಗೆ ದುಡಿಯುವ ಮಹಿಳೆಯರ ಪಾಡು ಆ ದೇವರಿಗೆ ಪ್ರೀತಿ. ಒಂದು ಘಳಿಗೆ ಸೆಕೆ, ಮರು ಘಳಿಗೆ ಚಳಿ, ಆಫೀಸ್ ಅಲ್ಲಿ ಯಾರ ಹತ್ತಿರಾನೂ ಹೇಳುವ ಹಾಗಿಲ್ಲ. ಇನ್ನೂ ಬರೀ ಗಂಡು ಮಕ್ಕಳು ಇರುವ ಆಫೀಸ್ ಆದರಂತು ಮುಗಿಯಿತು, ಯಾರ ಹತ್ತಿರ ಹೇಳೋದು ನಮ್ಮ ಈ ಅವಸ್ಥೇನಾ? ಇದು ಆಫೀಸ್ ಕಥೆ ಆದರೆ, ಇನ್ನೂ ಮನೆಯ ಕಥೆ ಇದಕ್ಕಿಂತ ವಿಭಿನ್ನ.
ಯಾಕೆ ಅಮ್ಮ? ಮಾತು ಮಾತಿಗೆ ಸಿಟ್ಟು ಮಾಡಿ ಕೊಳ್ಳುತ್ತಿಯ? ಕಿರಿಚಾಡುತ್ತಿಯ? ಎನ್ನುವ ಮಕ್ಕಳ ದೂರು, ಅಯ್ಯೋ ಮನಗೆ ಬಂದ ಕೂಡಲೇ ನಿನ್ನ ರಾಮಾಯಣ ಅನ್ನುವ ಪತಿ ಮಹಾಶಯರ ಮಂತ್ರ ವಾಕ್ಯ. ನಮಗೆ ಅನ್ನಿಸಲು ಶುರು
ಆಗುತ್ತೆ, ಹಾಗಾದರೆ ‘ನನಗೆ ಏನಾಗಿದೆ’? ನಿಜಕ್ಕೂ ನನ್ನ ವರ್ತನೆ ಯಲ್ಲಿ ಅಷ್ಟೊಂದು ಬದಲಾವಣೆ ಆಗಿದೆಯಾ? ಯಾರಲ್ಲಿ ಹೇಳಿಕೊಳ್ಳಲಿ? ದೇವರೇ ನನಗೇನಾಗಿದೆ? ಇದು’ 48’ ರ ಹೆಣ್ಣು ಮಕ್ಕಳ ಸ್ಥಿತಿ ಗತಿ.
ಖಂಡಿತ ನಮಗೇನು ಆಗಿಲ್ಲ. ಇದು ಕೇವಲ ಋತು ಚಕ್ರ ನಿಲ್ಲುವ ಸಮಯದಲ್ಲಿ ಆಗುವ ಸಹಜ ಬದಲಾವಣೆ. ಅಂದರೆ ಹಾರ್ಮೊನಿ ನಲ್ಲಿ ಆಗುವ ಬದಲಾವಣೆ ಅಷ್ಟೇ. ಇದು ನಮ್ಮ ಮನಸ್ಸಿನ ಮೇಲೂ ಕೂಡ ತನ್ನ ಪ್ರಭಾವ ಬೀರುತ್ತೆ. ಅದರ ಫಲವಾಗಿಯೇ ಈ ಕೋಪ, ತಾಪ, ಸಿಟ್ಟು ಎಲ್ಲ ಸಹಜವಾಗಿ ಹೊರ ಹೊಮ್ಮುತ್ತದೆ ಹೊರತು ಇದೊಂದು ಕಾಯಿಲೆ ಖಂಡಿತ ಅಲ್ಲ. ನಮಗೆ ಏನೋ ಆಗಿದೆ ಅಂತ ಯಾವ ಹೆಣ್ಣು ಮಕ್ಕಳು ಕೂಡ ಗಾಭರಿ ಆಗುವ ಕಾರಣ ಇಲ್ಲ.
ಈ ಕೆಳಗಿನ ಕೆಲವು ಕ್ರಮಗಳಿಂದ ನಮ್ಮ ‘48’ ನ್ನು ಕೂಡ 28 ಆಗಿ ಪರಿವರ್ತನೆ ಮಾಡ ಬಹುದು.
ಕುಟುಂಬದವರ ಪಾತ್ರ ತುಂಬಾ ಮುಖ್ಯ ವಾದದ್ದು. ಅದರಲ್ಲೂ ಗಂಡನ ಪಾತ್ರ ಬಹಳ ಮಹತ್ವ ಪಡೆಯುತ್ತದೆ. ಇಷ್ಟು ವರ್ಷಗಳ ಕಾಲ ತನ್ನ ಜೊತೆಯಲ್ಲಿ ಇದ್ದು ತನ್ನೆಲ್ಲ ಬೇಕು ಬೇಡಗಳನ್ನು ನೋಡಿ ಕೊಳ್ಳುತಿದ್ದ ಹೆಂಡತಿಯನ್ನು ಈಗ ಚೆನ್ನಾಗಿ ನೋಡಿಕೊಳ್ಳುವುದು ಆತನ ಕರ್ತ್ಯವ್ಯ.
ಇನ್ನೂ ಮಕ್ಕಳು, ತಮಗಾಗಿ, ತಮ್ಮ ಸುಖಕ್ಕಾಗಿ ಯಾವಾಗಲೂ ದುಡಿಯುವ ಅಮ್ಮ ಈಗ ಸ್ವಲ್ಪ ಕಿರಿಚಾಡಿ, ಸಿಟ್ಟು ಮಾಡಿದರು ಕೂಡ ಹೊಂದಿ ಕೊಂಡು, ಅಮ್ಮನ ಮನಸ್ಸನ್ನು ಅರಿತು ನಡೆಯಬೇಕು.
ಹೆಣ್ಣು ಮಕ್ಕಳು ತಾವೇ ಸ್ವತಃ ಕೆಲವು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿ ಕೊಳ್ಳಬೇಕು.
ಮನಸ್ಸಿನಲ್ಲಿ ಯಾವುದೇ ಕಾರಣಕ್ಕೂ ನೆಗೇಟಿವ್ ಚಿಂತನೆಗಳಿಗೆ ಜಾಗ ಕೊಡಬಾರದು.
ಒಳ್ಳೆಯ ಸ್ನೇಹಿತರ ಜೊತೆ ಆಗಾಗ ಹೊರಗಡೆ ಹೋಗಿ , ಸಂತೋಷವಾಗಿ ಸುತ್ತಾಡಿ ಬರಬೇಕು. ಆಗ ಮನಸ್ಸು ಪ್ರಶಾಂತ ವಾಗಿ ಇರುತ್ತದೆ.
ದ್ಯಾನ, ಯೋಗ, ಜಪ (ಚಿಕ್ಕದಾಗಿ ಆದರೂ) ನಿಯಮಿತವಾಗಿ ಮಾಡಬೇಕು. ಆಗ ಮನಸ್ಸಿನಲ್ಲಿ ಪಾಸಿಟಿವ್ ಚಿಂತನೆಗಳು ತಾನಾಗಿ ಬರುತ್ತವೆ.
ಬೇರೆಯವರ ಬಗ್ಗೆ ಜಾಸ್ತಿ ತಲೆ ಕೆಡಿಸಿ ಕೊಳ್ಳದೆ, ತಾವಾಯಿತು, ತಮ್ಮ ಕೆಲಸ ಆಯಿತು ಅನ್ನುವ ಮನೋ ಭಾವನೆಯನ್ನು ಬೆಳಿಸಿ ಕೊಳ್ಳ ಬೇಕು.
ಬೇರೆಯವರ ಜೊತೆ ಯಾವ ಕಾರಣಕ್ಕೂ ಹೋಲಿಕೆ ಬೇಡವೇ ಬೇಡ.ಅದು ನಮ್ಮ ಸಂತೋಷವನ್ನು ಹಾಳು ಮಾಡುತ್ತದೆ.
ಕೊನೆಯದಾಗಿ, ನಾವೇ ಕಟ್ಟಿದ ನಮ್ಮ ಸುಂದರ ಸಂಸಾರ ನಮ್ಮ ‘48’ (forty eight) ಮನಸ್ಸಿನಿಂದ ಹಾಳಾಗಬಾರದು.
ಇದೆಲ್ಲವನ್ನೂ ಅರಿತು ನಡೆದರೆ, ’48’ ಕೂಡ 28 ನಂತೆ ಅನಿಸುವುದರಲ್ಲಿ ಸಂಶಯವೇ ಇಲ್ಲ.
ಆ ಅನಿಸಿಕೆಯೇ ಎಸ್ಟು ಕುಷಿ ಕೊಡುತ್ತೆ ಅಲ್ವಾ?
ಹಾಗಾದರೆ, ಇವತ್ತೇ ತಯಾರಾಗಿ…….ಸ್ವೀಟ್ 48 (Forty eight) ಅನ್ನು ಸ್ವಾಗತಿಸಲು.