ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 12
ಪಟ್ಟಣದ ಜನ ಜೀವನ ನೋಡುವುದಾದರೆ ಪಟ್ಟಣದಲ್ಲಿ ಸಾವಿರಾರು ಸರ್ಕಾರಿ ಖಾಸಗಿ ಸಂಸ್ಥೆಗಳು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದೆ.
ಈ ಸಂಸ್ಥೆಗಳಲ್ಲಿ ದುಡಿಯುವ ನೌಕರರಿಗೆ ಸರಿಯಾದ ಸಮಯಕ್ಕೆ ಹೋಗಿ ಬರುವುದೇ ಒಂದು ಸವಾಲಾಗಿಬಿಟ್ಟಿದೆ. ಇವೆಲ್ಲಕ್ಕೂ ಕಾರಣ ಸಂಚಾರ ದಟ್ಟಣೆ.
ಅವರವರಿಗೆ ಅನುಕೂಲಕ್ಕೆ ತಕ್ಕಂತೆ ಪ್ರಯಾಣ ಮಾಡಲು ವಾಹನಗಳನ್ನು ಉಪಯೋಗಿಸುತ್ತಾ ಬಂದಿದ್ದಾರೆ. ಕೆಲವರು ಸ್ವಂತ ವಾಹನ ಇದ್ದರೆ ಸಮಯಕ್ಕೆ ಸರಿಯಾಗಿ ಹೋಗಬಹುದೆಂದು ಸಾಲಗಳನ್ನು ಮಾಡಿ ಅಥವಾ ತಮ್ಮಲ್ಲಿ ಹಣವಿದ್ದರೆ ಸಾಲವಿಲ್ಲದೆ ಎರಡು ಚಕ್ರಗಳ ನಾಲ್ಕು ಚಕ್ರಗಳ ಸ್ವಂತ ವಾಹನಗಳನ್ನು ಹೊಂದಿ ಅದರಲ್ಲಿಯೇ ಉದ್ಯೋಗದ ಸ್ಥಳಗಳಿಗೆ ಹೋಗುತ್ತಾರೆ. ಇನ್ನು ಕೆಲವರು ಸ್ವಂತ ವಾಹನವನ್ನು ಸಂಚಾರ ದಟ್ಟಣೆಯಲ್ಲಿ ಚಾಲನೆ ಮಾಡಿಕೊಂಡು ಹೋಗಲು ಮನಸ್ಸಿಲ್ಲದೆ ಸಾರ್ವಜನಿಕ ವಾಹನಗಳಲ್ಲಿ ಹೋಗುತ್ತಿರುತ್ತಾರೆ. ಯಾವ ವಾಹನಗಳಲ್ಲಿ ಹೋದರೂ ಕಛೇರಿಗೆ ಸರಿಯಾದ ಸಮಯಕ್ಕೆ ಹೋಗಲೇ ಬೇಕು. ಇಲ್ಲದಿದ್ದರೆ ವೇತನ ಕಡಿತವಾಗಬಹುದೆಂಬ ಭಯ ಇರುತ್ತದೆ.
. ಇದು ಒಂದು ದಿವಸದ ಬವಣೆಯಲ್ಲ ಸೇವೆಯಲ್ಲಿರುವವರೆಗೂ ಹೋಗಲೇ ಬೇಕಲ್ಲವೇ? ಅದಕ್ಕಾಗಿಯೇ ಬೇಗನೆ ಎದ್ದು ನಿತ್ಯ ಕರ್ಮ ಮುಗಿಸಿ ಹೊಟ್ಟೆಗೆ ಸ್ವಲ್ಪ ಹಾಕಿಕೊಂಡು ಅದನ್ನೇ ಸ್ವಲ್ಪ ಡಬ್ಬಿಗೂ ಹಾಕಿಕೊಂಡು ಬಸ್ಟಾಂಡ್ ಗೆ ಹೋಗುವ ವೇಳೆಗೆ ಅಕಸ್ಮಾತ್ ಸರಿಯಾದ ಸಮಯಕ್ಕೆ ಹೋಗಿದ್ದರೆ ಬಸ್ ಸಿಗಬಹುದು. ಇಲ್ಲದಿದ್ದರೆ ಇನ್ನೊಂದು ಬಸ್ ಬರುವುದನ್ನು ಕಾಯಬೇಕು. ಆಗಲೇ ಮನದಲ್ಲಿ ಒತ್ತಡ ಶುರುವಾಗುತ್ತದೆ. ಬೇರೆ ಬಸ್ ಬಂದು ಹತ್ತಿದ ತಕ್ಷಣ ಸುತ್ತಲೂ ಕಣ್ಣು ಹಾಯಿಸಿದಾಗ ಖಾಲಿ ಸೀಟು ಇದ್ದರೆ ಆಗುವ ಸಂತೋಷಕ್ಕೆ ಪಾರವೇ ಇಲ್ಲ. ತಕ್ಷಣ ಕುಳಿತುಕೊಂಡು ಮನೆಯಿಂದ ಕಛೇರಿಗೆ ಬರಲು ಪಟ್ಟ ಶ್ರಮಕ್ಕೆ ಸುಧಾರಿಸಿಕೊಂಡಂತೆ ಆಗುತ್ತದೆ. ಇಲ್ಲದಿದ್ದರೆ ಇಳಿಯುವವರೆಗೂ ಎಲ್ಲಾದರು ಸೀಟು ಸಿಗಬಹುದೆಂದು ನೋಡುವ ವೇಳೆಗೆ ಕಛೇರಿ ಬಂದಿರುತ್ತದೆ. ಕಛೇರಿಯಲ್ಲಿ ಕೆಲಸ ಮಾಡಿ ಪುನಃ ಬಸ್ಸನ್ನು ಹಿಡಿದು ಮನೆಗೆ ಬರುವ ವೇಳೆಗೆ ರಾತ್ರಿಯಾಗಿರುತ್ತದೆ. ಕೆಲಸಕ್ಕೆ ಹೋಗಿ ಬಂದ ಆಯಾಸದಿಂದ ಸುಧಾರಿಸಿಕೊಂಡರೆ ಸಾಕೆಂದು ಬೇಗ ಊಟ ಮಾಡಿ ಮಲಗಬಹುದು. ಅದರಲ್ಲೂ ಮನೆಯಲ್ಲಿ ಯಾರಾದರೂ ಇದ್ದು ಅಡುಗೆ ಮಾಡಿದ್ದರೆ ಪರವಾಗಿಲ್ಲ ಇಲ್ಲದಿದ್ದರೆ ಇವರೇ ಅಡುಗೆ ಮಾಡಿಕೊಂಡು ತಿನ್ನಬೇಕಾದಾಗ ಇನ್ನೂ ದಣಿಯಬಹುದು. ನಂತರ ಈಗಿನ ಕಾಲದಲ್ಲಿ ಟಿವಿ ಇರುವುದರಿಂದ ನಿದ್ದೆ ಬರುವವರೆಗೂ ನೋಡಿ ನಂತರ ಮಲಗಬಹುದು. ಈ ಮದ್ಯೆ ಯಾರ ಬಳಿಯೂ ಮಾತನಾಡಲು ಸಮಯವೇ ಇರುವುದಿಲ್ಲ. ನೂರು ಮಾತನಾಡುವ ನಡುವೆ ಹತ್ತು ಮಾತನಾಡಬಹುದು.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)