ಪ್ರಾಕೃತಿಕವಾಗಿ ಹಾಗು ಭೌಗೋಳಿಕವಾಗಿ ಅತ್ಯಂತ ಸಂಪದ್ಭರಿತವಾದ ಜಿಲ್ಲೆ ನಮ್ಮ ಉತ್ತರಕನ್ನಡ.ಇಲ್ಲಿನ ಕಾಡಿನ ಸೌಂದರ್ಯ, ಜಲಪಾತದ ಸುಂದರತೆ ನೋಡಲು ಎರಡು ಕಣ್ಣುಗಳು ಸಾಲದು.ಮಲೆನಾಡು, ಕರಾವಳಿ ಹಾಗು ಪಶ್ಚಿಮ ಘಟ್ಟಗಳನ್ನು ಮೇಳೈಸಿಕೊಂಡ ಸುಂದರ ಪ್ರದೇಶ. ಆ ಕಾರಣದಿಂದಾಗಿ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುವ ಜಿಲ್ಲೆ ಉತ್ತರ ಕನ್ನಡ. ಒಂದು ಜಿಲ್ಲೆ ಅತ್ಯುತ್ತಮ ಜಿಲ್ಲೆಯೆಂದು ಕರೆಸಿಕೊಳ್ಳಬೇಕು ಅಂದರೆ ಆ ಜಿಲ್ಲೆಯಲ್ಲಿ ಶಿಕ್ಷಣ ಹಾಗೂ ಆರೋಗ್ಯದ ಗುಣಮಟ್ಟ ಅತ್ಯುತ್ತಮವಾಗಿರಬೇಕು. ಶಿಕ್ಷಣ ಮತ್ತು ಆರೋಗ್ಯ ಸಮಂಜಸವಾಗಿದೆ ಎಂದಾದರೆ ಅಲ್ಲಿ ಅಭಿವೃದ್ಧಿ ತಾನಾಗಿಯೇ ಕಂಡುಕೊಳ್ಳುತ್ತದೆ.ಪ್ರಸ್ತುತವಾಗಿ ಉತ್ತರಕನ್ನಡದ ಜಿಲ್ಲೆಯಾದ್ಯಂತ ಕೇಳಿಬರುತ್ತಿರುವ ಅತಿದೊಡ್ಡ ಕೂಗು ಎಂದರೆ ಸುಸಜ್ಜಿತ ತುರ್ತುಚಿಕಿತ್ಸಾ ಆಸ್ಪತ್ರೆ ನಿರ್ಮಾಣ. ಹೌದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಸುಸಜ್ಜಿತ ಆಸ್ಪತ್ರೆಯ ಕೊರತೆ ಎದ್ದು ಕಾಣುತ್ತಿದೆ. ಅದಕ್ಕೆ ಕಾರಣ ಏರುತ್ತಿರುವ ಅಪಘಾತಗಳ ಸಂಖ್ಯೆ.

ಅಪಘಾತದ ಅಂಕಿ-ಅಂಶಗಳು.
ಪೊಲೀಸ್ ಇಲಾಖೆಯ ದತ್ತಾಂಶದ ಪ್ರಕಾರ ಕಳೆದ ಒಂದು ವರ್ಷದಲ್ಲಿ 1600ಕ್ಕಿಂತ ಹೆಚ್ಚು ರಸ್ತೆ ಅಪಘಾತಗಳು ನಮ್ಮ ಜಿಲ್ಲೆಯಲ್ಲಿ ನಡೆದಿದೆ.ಅವುಗಳಲ್ಲಿ 373 ಸಾವು ಹಾಗೂ 2631 ಜನರಿಗೆ ಗಾಯ ಎಂದು ದಾಖಲಾಗಿದೆ. ಅಪಘಾತಗಳ ಸಂಖ್ಯೆ ಶಿರಸಿ, ಕುಮಟಾ, ಹೊನ್ನಾವರ ಈ ಭಾಗದಲ್ಲಿ ಅತಿಯಾಗಿ ಕಂಡುಬರುತ್ತಿದೆ ಎಂದು ಹೇಳಲಾಗಿದೆ.

ಅಪಘಾತಗಳಿಗೆ ಕಾರಣಗಳು
ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು.
ಅತ್ಯಂತ ವೇಗದಲ್ಲಿ, ಅವಸರದಲ್ಲಿ ವಾಹನದ ಚಲಾವಣೆ.
ಮೊಬೈಲ್ ಅಥವಾ ವಿಡಿಯೋಗಳನ್ನು ವೀಕ್ಷಿಸುತ್ತಾ ವಾಹನಗಳ ಚಲಾವಣೆ. ಆಪ್ತರೊಡನೆ ಸಂಬಂಧಿಕರನ್ನು ಮಾತನಾಡುತ್ತ ವಾಹನದ ಚಲಾವಣೆ.
ವಾಹನದ ಸಮರ್ಪಕ ಗುಣಮಟ್ಟ ಕಾಯ್ದುಕೊಳ್ಳದೆ ಇರುವುದು.
ಮದ್ಯಪಾನ ಧೂಮಪಾನ ಸೇವಿಸಿ ವಾಹನನಗಳ ಚಲಾವಣೆ.
ರಸ್ತೆಯಲ್ಲಿ ತೈಲಗಳ ಸೋರುವಿಕೆ ಮತ್ತು ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿ.
ರಸ್ತೆ ತಿರುವಿನಲ್ಲಿ ಸೂಚನಾ ಫಲಕಗಳನ್ನು ನೋಡದೆ ಇರುವುದು ಅಥವಾ ಕಡೆಗಣಿಸುವುದು.


ಅಪಘಾತದಲ್ಲಿ ಪ್ರಥಮ ಚಿಕಿತ್ಸೆ :


ಪ್ರಥಮ ಚಿಕಿತ್ಸೆ ಎಂದರೇನು?
ವ್ಯಕ್ತಿಯ ಜೀವಕ್ಕೇ ಅಪಾಯವೆಂದೆನಿಸುವ ತುರ್ತು ಪರಿಸ್ಥಿತಿಯಲ್ಲಿ, ಮುಂದೆ ಆಗಬಹುದಾದ ಅಪಾಯವನ್ನು ತಪ್ಪಿಸುವ ಹಾಗೂ ಆತನ ಜೀವವನ್ನು ಉಳಿಸಲು ಅನುಸರಿಸುವ ಸರಳ ಪ್ರಕ್ರಿಯೆಯೇ ಪ್ರಥಮ ಚಿಕಿತ್ಸೆ. ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಜನಸಾಮಾನ್ಯರೇ ಮಾಡುವ ಈ ಪ್ರಕ್ರಿಯೆಯಲ್ಲಿ ಯಾವುದೇ ವಿಶೇಷ ಉಪಕರಣಗಳ ಬಳಕೆಯಿರುವುದಿಲ್ಲ.
ಪ್ರಥಮ ಚಿಕಿತ್ಸೆಯಲ್ಲಿ ನಾವು ಮುಖ್ಯವಾಗಿ ಮೂರು ಅಂಶಗಳೆಡೆಗೆ ಗಮನವಿಡಬೇಕಾಗುತ್ತದೆ. ಅವೆಂದರೆ, ವ್ಯಕ್ತಿಯ ಶ್ವಾಸನಾಳ / ಉಸಿರಾಟ, ರಕ್ತಪರಿಚಲನೆ ಹಾಗೂ ಪೆಟ್ಟು ಬಿದ್ದ ದೇಹದ ಭಾಗವನ್ನು ಇರಿಸಬೇಕಾದ ರೀತಿ.
ಜೀವವನ್ನು ಉಳಿಸಲು ನೆರವಾಗುವ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕು. ತುರ್ತುಸ್ಥಿತಿಗಳಲ್ಲಿ, ಗಾಯಾಳುವನ್ನು ಕರೆದೊಯ್ಯಲು ತುರ್ತುವಾಹನವು ಬರುವವರೆಗೆ ನಾವು ಅನುಸರಿಸಬೇಕಾದ ಕೆಲವು ಕ್ರಮಗಳು ಈ ರೀತಿಯಲ್ಲಿವೆ.
ರಸ್ತೆ ಅಪಘಾತಗಳಲ್ಲಿ ಗಾಯಾಳುವಿನ ದೇಹದ ಯಾವ ಭಾಗಕ್ಕೆ ಪೆಟ್ಟಾಗಿದೆ ಎಂಬುದನ್ನು ಗುರುತಿಸಿ ಆ ಭಾಗಕ್ಕೆ ಪ್ರಥಮ ಚಿಕಿತ್ಸಕರು ತಮ್ಮ ಕೈಗಳಿಂದ ಬೆಂಬಲ ಕೊಟ್ಟು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ಒಂದು ವೇಳೆ ಕೈ ಅಥವಾ ಕಾಲಿನ ಭಾಗಕ್ಕೆ ಪೆಟ್ಟಾಗಿದ್ದರೆ, ಪೆಟ್ಟಾದ ಭಾಗಕ್ಕೆ ಎಲ್ಲ ಕಡೆಗಳಿಂದ ಬೆಂಬಲ ಕೊಟ್ಟು ಅದನ್ನು ಸುಸ್ಥಿಯಲ್ಲಿರಿಸಬೇಕು. ಆಸ್ಪತ್ರೆಗೆ ಕರೆದೊಯ್ಯುವಾಗ ಆ ಭಾಗವು ಹೆಚ್ಚು ಅಲುಗಾಡದಂತೆ ಎಚ್ಚರ ವಹಿಸಬೇಕು.
ಅಪಘಾತಕ್ಕೊಳಗಾದ ವ್ಯಕ್ತಿಯ ಉಸಿರಾಟದ ಮೇಲೆ ಗಮನವಿಡಬೇಕು. ಆತನನ್ನು ಸುತ್ತುವರೆದ ಜನಸಂದಣಿಯನ್ನು ದೂರ ಸರಿಸಿ, ಆತನ ಉಡುಪುಗಳನ್ನು ಸಡಿಲಗೊಳಿಸಿ ಆತನಿಗೆ ಉಸಿರಾಡಲು ಉತ್ತಮವಾದ ಗಾಳಿ ದೊರೆಯುವಂತೆ ನೋಡಿಕೊಳ್ಳಬೇಕು.

RELATED ARTICLES  'ಎಲ್ಲದಕ್ಕೂ ಒಂದು ಕಾಲವಿದೆ' ..ಕಾಲ ನೋಡಿ ಕಲಿಕೆ ಸಾಗಲಿ


ತುರ್ತು ಸ್ಥಿತಿಗಳಲ್ಲಿ ಒಂದು ವೇಳೆ ವ್ಯಕ್ತಿಯು ಉಸಿರಾಡುತ್ತಿಲ್ಲ ಎಂದೆನಿಸಿದರೆ, ಮೊದಲು ಆತನನ್ನು ಸಮತಟ್ಟಾದ ನೆಲದ ಮೇಲೆ ಮಲಗಿಸಬೇಕು. ನಂತರ ಆತನ ಎದೆಗೂಡಿನ ಮಧ್ಯಭಾಗದ ಮೂಳೆಯ (ಸ್ಟೆರ್‍ನಮ್) ಕೆಳಭಾಗದ ಮೇಲೆ ಪ್ರಥಮ ಚಿಕಿತ್ಸಕನ ಒಂದು ಕೈಯ ಅಂಗೈಯ ಕೆಳಭಾಗವನ್ನು ಇರಿಸಿ, ಅದರ ಮೇಲೆ ಮತ್ತೊಂದು ಕೈಯ ಅಂಗೈಯನ್ನು ಇಟ್ಟು ತ್ವರಿತವಾಗಿ (ಒಂದು ನಿಮಿಷದಲ್ಲಿ ಸುಮಾರು ನೂರು ಬಾರಿ) ಒತ್ತುತ್ತಾ ಹೋಗಬೇಕು. ಈ ಪ್ರಕ್ರಿಯೆಯಲ್ಲಿ ಪ್ರಥಮ ಚಿಕಿತ್ಸಕನು ವ್ಯಕ್ತಿಯ ಪಕ್ಕದಲ್ಲಿ ತನ್ನ ಮಂಡಿಗಳ ಮೇಲೆ ಕುಳಿತು, ಭುಜ ಹಾಗೂ ಕೈಗಳನ್ನು ನೇರವಾಗಿಸಿರಬೇಕು. ಈ ಪ್ರಕ್ರಿಯೆಯು ವ್ಯಕ್ತಿಯ ಹೃದಯ ಹಾಗೂ ಶ್ವಾಸಕೋಶಗಳಿಗೆ ಪ್ರಚೋದನೆ ನೀಡುತ್ತದೆ. ಇದನ್ನು ಸಿ. ಪಿ. ಆರ್. ( ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್) ಎನ್ನುತ್ತಾರೆ.


ಅಪಘಾತಗಳಲ್ಲಿ ವ್ಯಕ್ತಿಯ ಬೆನ್ನುಹುರಿಗೆ ಪೆಟ್ಟಾದ ಸೂಚನೆಯೇನಾದರೂ ಇದ್ದಲ್ಲಿ, ಆತನ ತಲೆ ಹಾಗೂ ಕುತ್ತಿಗೆಯ ಭಾಗವನ್ನು ಎರಡೂ ಕೈಗಳಿಂದ ಬೆಂಬಲಿಸಿ ಸರಿಯಾದ ಸ್ಥಾನದಲ್ಲಿರಿಸಬೇಕು.
ವ್ಯಕ್ತಿಯು ಪ್ರಜ್ಞಾಹೀನನಾಗಿದ್ದರೆ ಅಥವಾ ಅರೆ ಪ್ರಜ್ಞಾವಸ್ಥೆಯಲ್ಲಿದ್ದರೆ ಆಸ್ಪತ್ರೆಗೆ ಸಾಗಿಸುವವರೆಗೆ ಆತನ ದೇಹ ಸರಿಯಾದ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಆತನನ್ನು ಸಮತಟ್ಟಾದ ನೆಲದ ಮೇಲೆ ಮಲಗಿಸಬೇಕು. ಪ್ರಥಮ ಚಿಕಿತ್ಸಕನು ತನ್ನ ಒಂದು ಕೈಯನ್ನು ವ್ಯಕ್ತಿಯ ಹಣೆಯ ಮೇಲಿರಿಸಿ, ತಲೆಯನ್ನು ಸ್ವಲ್ಪವೇ ಬದಿಗೆ ವಾಲಿಸಿ, ಇನ್ನೊಂದು ಕೈಯಿಂದ ಗದ್ದ/ಗಲ್ಲವನ್ನು ಸ್ವಲ್ಪ ಎತ್ತಿ ಹಿಡಿಯಬೇಕು. ಆತನ ಬಾಯಿಯಲ್ಲಿ ಇರಬಹುದಾದ ಮಣ್ಣು ಅಥವಾ ಇತರ ವಸ್ತುಗಳನ್ನು ಮತ್ತೊಬ್ಬರ ಸಹಾಯದಿಂದ ತೆಗೆಯಬೇಕು. ಆತನ ಶ್ವಾಸನಾಳವು ಸ್ಪಷ್ಟ ಹಾಗೂ ನಿಚ್ಚಳವಾಗಿದೆಯೇ ಎಂದು ಗಮನಿಸಬೇಕು. ಯಾವ ಕಾರಣಕ್ಕೂ ಆತನ ಬಾಯಿಗೆ ನೀರು ಅಥವಾ ಇನ್ಯಾವುದೇ ತಿನಿಸುಗಳನ್ನು ಹಾಕಬಾರದು.


ದೇಹದ ಹೊರ ಭಾಗದಿಂದ ರಕ್ತಸ್ರಾವವಾಗುತ್ತಿದ್ದರೆ, ಸ್ವಚ್ಛವಾದ ಬಟ್ಟೆ/ ಕರವಸ್ತ್ರದ ಸಹಾಯದಿಂದ ಆ ಸ್ಥಳವನ್ನು ಗಟ್ಟಿಯಾಗಿ ಒತ್ತಿ ಹಿಡಿಯಬೇಕು. ಸುಮಾರು ಐದು ನಿಮಿಷದವರೆಗೆ ಆ ರೀತಿ ಹಿಡಿದಾಗ ಅಲ್ಪ ಪ್ರಮಾಣದ ರಕ್ತಸ್ರಾವವು ನಿಲ್ಲುವುದು.
ಈ ಮೇಲೆ ಹೇಳಿದ ಎಲ್ಲ ವಿಧಾನಗಳನ್ನು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಮಾಡಬೇಕಷ್ಟೆ. ಆದರೆ, ಆದಷ್ಟು ಬೇಗನೆ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆಯನ್ನು ಆರಂಭಿಸುವುದೂ ಬಹಳವೇ ಮುಖ್ಯ.


ನೆನಪಿಡಿ, ರಸ್ತೆ ಅಪಘಾತಗಳಲ್ಲಿ ವ್ಯಕ್ತಿಯ ದೇಹದ ಹೊರ ಭಾಗದಲ್ಲಿ ಯಾವುದೇ ಗಾಯಗಳ ಗುರುತಾಗಲೀ ಅಥವಾ ರಕ್ತಸ್ರಾವವಾಗಲೀ ಇಲ್ಲದಿದ್ದರೂ ಒಮ್ಮೆ ಆಸ್ಪತ್ರೆಗೆ ಕರೆದೊಯ್ಯವುದು ಸೂಕ್ತ. ಏಕೆಂದರೆ ಅಪಘಾತಗಳಲ್ಲಿ ಆಗಬಹುದಾದ ವಿವಿಧ ಬಗೆಯ ತೀವ್ರತರವಾದ ಪೆಟ್ಟುಗಳು ಒಮ್ಮೊಮ್ಮೆ ದೇಹದ ಒಳಭಾಗದ ಅಂಗಾಂಗಗಳಿಗೆ ಹಾನಿ ಮಾಡಿರುವ ಅಥವಾ ದೇಹದ ಒಳಭಾಗದಲ್ಲಿ ರಕ್ತಸ್ರಾವವನ್ನು ಉಂಟು ಮಾಡಿರುವ ಸಾಧ್ಯತೆಗಳಿರುತ್ತವೆ. ಅದನ್ನು ಆಸ್ಪತ್ರೆಯಲ್ಲಿ ತಜ್ಞವೈದ್ಯರು ಪರೀಕ್ಷಿಸಿ ಹಾಗೂ ವಿವಿಧ ತಪಾಸಣೆಗಳ ನೆರವಿನಿಂದ ಪತ್ತೆ ಹಚ್ಚುತ್ತಾರೆ.

RELATED ARTICLES  ಕಳೆದುಹೋದ ಎಳೆಯ ದಿನಗಳು ( ಭಾಗ೨)


ಸುವರ್ಣ ಸಮಯ ಎಂದರೇನು ?
ರಸ್ತೆ ಅಪಘಾತಗಳಾದಾಗ ಗಾಯಗೊಂಡವರನ್ನು ನಾವು ಎಷ್ಟು ಬೇಗ ಆಸ್ಪತ್ರೆಗೆ ಸೇರಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಏಕೆಂದರೆ ಆ ಮೊದಲ ಒಂದು ತಾಸಿನಲ್ಲಿ ವ್ಯಕ್ತಿಯ ಉಸಿರಾಟ ಮತ್ತು ರಕ್ತಪರಿಚಲನೆಯನ್ನು ಸ್ಥಿರಗೊಳಿಸುವುದು ಬಹಳವೇ ಮುಖ್ಯ. ಆ ಒಂದು ತಾಸಿನಲ್ಲಿ ವ್ಯಕ್ತಿಗೆ ದೊರಕಬಹುದಾದ ಸೂಕ್ತ ಹಾಗೂ ಸಮರ್ಪಕ ಚಿಕಿತ್ಸೆಯಿಂದ ಆತನ ಜೀವವನ್ನೇ ಉಳಿಸಬಹುದು. ಹಾಗಾಗಿಯೇ ಅಪಘಾತವಾದ ಮೊದಲ ಅರವತ್ತು ನಿಮಿಷಗಳನ್ನು ‘ಸುವರ್ಣ ಸಮಯ’ ಎಂದು ಕರೆಯುತ್ತಾರೆ.


ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಇರಬೇಕಾದುದ್ದೇನು?
ನಂಜುನಿವಾರಕ (ಆ್ಯಂಟಿಸೆಪ್ಟಿಕ್) ದ್ರಾವಣ, ಪ್ರತಿಜೀವಕ (ಆ್ಯಂಟಿಬಯೋಟಿಕ್) ಮುಲಾಮು, ಹತ್ತಿ ಉಂಡೆಗಳು, ವಿವಿಧ ಗಾತ್ರದ ಬ್ಯಾಂಡೇಜು ಬಟ್ಟೆ, ನೋವು ಹಾಗೂ ಜ್ವರಕ್ಕೆ ಔಷಧ, ಕೈಕವಚ ( ಗ್ಲೌಸ್) – ಮುಂತಾದುವು. ನಿಮ್ಮ ಮನೆಯಲ್ಲಿ, ವಾಹನಗಳಲ್ಲಿ, ಕಚೇರಿಗಳಲ್ಲಿ, ಶಾಲಾಕಾಲೇಜುಗಳಲ್ಲಿ ಕಡ್ಡಾಯವಾಗಿ ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ಇದ್ದರೆ ಒಳಿತು.
 
ಸುಸಜ್ಜಿತ ತುರ್ತು ಚಿಕಿತ್ಸಾ ಆಸ್ಪತ್ರೆಯ ಅವಶ್ಯಕತೆ :

ಜಿಲ್ಲೆ ಅಭಿವೃದ್ಧಿಯತ್ತ ಸಾಗಬೇಕಾದರೆ ಅದರ ಸಂಪರ್ಕದ ಸಾಧನೆಗಳು ಅಭಿವೃದ್ದಿ ಆಗಲೇಬೇಕು ಕಾರಣದಿಂದಾಗಿ ರಾಷ್ಟ್ರೀಯ ಹೆದ್ದಾರಿಗಳು ಹೊಸರೂಪಗಳನ್ನು ಕಂಡುಕೊಳ್ಳುತ್ತಿವೆ. ಹೊಸರೂಪ ಪಡೆಯುವಾಗ ಕೆಲವೊಂದು ಕಾರಣಗಳಿಂದಾಗಿ ವಾಹನ ಸಂಚಾರ ಮಾಡುವವರು ಕಷ್ಟ ಎದುರಿಸಲೇಬೇಕಾಗುತ್ತದೆ, ಅದರ ಪರಿಣಾಮಗಳು ಅಪಘಾತ. ಈ ಅಪಘಾತದ ಸಂದರ್ಭದಲ್ಲಿ ಹಲವುಬಾರಿ ಅನಿವಾರ್ಯ ಚಿಕಿತ್ಸೆಗಾಗಿ ಉನ್ನತ ಆಸ್ಪತ್ರೆಗೆ ಕರೆದೊಯ್ಯುವ ಅಗತ್ಯವಿರುತ್ತದೆ.ಆದರೆ ನಮ್ಮ ಉತ್ತರ ಕನ್ನಡದಲ್ಲಿ ಅತ್ಯಂತ ಸುಸಜ್ಜಿತವಾದ ತುರ್ತು ಚಿಕಿತ್ಸೆಯನ್ನು ಸರಿಯಾಗಿ ನಿಭಾಯಿಸಬಲ್ಲ ಆಸ್ಪತ್ರೆಗಳು ಅತ್ಯಂತ ಕಡಿಮೆ ಅಥವಾ ಇಲ್ಲವೆಂದು ಹೇಳಬಹುದು ಆ ಕಾರಣಕ್ಕಾಗಿ ಈ ಜಿಲ್ಲೆಯ ಜನರು ಪಕ್ಕದ ಗೋವಾ ರಾಜ್ಯವನ್ನು, ಹುಬ್ಬಳ್ಳಿ ನಗರವನ್ನು, ಅಥವಾ ಕರಾವಳಿಯ ಉಡುಪಿ-ಮಣಿಪಾಲ, ಮಂಗಳೂರನ್ನು ಅವಲಂಬಿಸಬೇಕಾದ ಅಗತ್ಯತೆ ಇದೆ.ಈ ಸ್ಥಳಗಳನ್ನು ತಲುಪಬೇಕಾದರೆ ಕನಿಷ್ಠ 3 ರಿಂದ 5 ಗಂಟೆಗಳ ಕಾಲ ಸಂಚಾರ ಅಗತ್ಯ ಈ ಸಮಯದಲ್ಲಿ ಅದೆಷ್ಟು ಜನರ ಪ್ರಾಣಪಕ್ಷಿ ಹಾರಿ ಹೋಗುವ ಸಂಭವವಿರುತ್ತದೆ. ಮೂರರಿಂದ ಐದು ಗಂಟೆಗಳ ಕಾಲ ಉಳಿತಾಯವಾದರೆ, ನಮ್ಮಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾದರೆ ಎಷ್ಟೋ ಜೀವಿಗಳ ಪ್ರಾಣವನ್ನು ರಕ್ಷಿಸಬಹುದು. ಆ ಕಾರಣದಿಂದಾಗಿ ಜಿಲ್ಲೆಯ ಕೇಂದ್ರ ಭಾಗದಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಸ್ಥಾಪಿಸುವುದು ಅಥವಾ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕ್ರಮ ಅತ್ಯಗತ್ಯವಾಗಿ ಬೇಕಾಗಿದೆ. ಇದು ಸಂಪೂರ್ಣ ಸರ್ಕಾರಿ ಸ್ವಾಮ್ಯದಲ್ಲಿ ನಡೆಸುವುದು ಕಷ್ಟವಾದರೆ ಖಾಸಗಿ ಸಹಭಾಗಿತ್ವದಲ್ಲಿ ಕೂಡ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬಹುದು. ಇದಕ್ಕೆ ರಾಜ್ಯದ ಇತರ ಕಡೆಗಳಲ್ಲಿ ನಡೆಸುತ್ತಿರುವ ಆಸ್ಪತ್ರೆಗಳ ನಿದರ್ಶನವಿದೆ. ಇದನ್ನು ಸರ್ಕಾರ, ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕ ವಲಯದ ಮುಕ್ತ ಸಮಾಲೋಚನೆಯಿಂದ ಬಗೆಹರಿಸಿಕೊಳ್ಳಬಹುದು ಆದರೆ ಅದನ್ನು ಸಾಧಿಸುವ ಮನಸ್ಸು ಮತ್ತು ನಾಯಕತ್ವ ಬೇಕು. ಇದರ ಹೊರತಾಗಿ ಸ್ವಯಂ ಕಾಳಜಿ ಮತ್ತು ಸಂಚಾರ ನಿಯಮಗಳ ಪಾಲನೆ ಅಪಘಾತಗಳನ್ನು ತಡೆಯುವಲ್ಲಿ ಅಷ್ಟೇ ಸಹಕಾರಿ ಎಂಬುದನ್ನು ಮರೆಯುವಂತಿಲ್ಲ.

-ಡಾ.ನಾಗರಾಜ ಭಟ್,ಕುಮಟಾ