ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 14
ಹೆತ್ತವರಲ್ಲಿ ತಂದೆ ಮಾತ್ರ ಕೆಲಸಕ್ಕೆ ಹೋಗುತ್ತಿದ್ದು ತಾಯಿಯಾದವಳು ಮನೆ ಯಲ್ಲಿದ್ದರೆ. ಅಥವಾ ತಂದೆ ಮನೆಯಲ್ಲಿದ್ದು ತಾಯಿ ಕೆಲಸಕ್ಕೆ ಹೋಗುತ್ತಿದ್ದರೆ (ಈ ಸನ್ನಿವೇಶ ಅಪರೂಪ ಎನ್ನಬಹುದು) ಆದರೂ ಇಂತಹ ಸನ್ನಿವೇಶ ಯಾವಾಗ ಬರುತ್ತದೆ ಎಂದರೆ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದು ಗಂಡನು ನಿವೃತ್ತನಾದನಂತರವೂ ಹೆಂಡತಿಯು ಕೆಲಸಕ್ಕೆ ಹೋಗುತ್ತಿದ್ದರೆ
ಆ ವೇಳೆಗೆ ಹೆಚ್ಚು ಕಡಿಮೆ ಮಕ್ಕಳ ವಿವಾಹವಾಗಿರಬಹುದು
ಅಕಸ್ಮಾತ್ ವಿವಾಹವಾಗದೆ ಮನೆಯಲ್ಲಿದ್ದರೆ ಅವರೂ ಸಹ ಕೆಲಸಗಳಿಗೆ ಹೋಗುವವರಿರಬಹುದು.
ಅವರಿಗೂ ಸಂಚಾರದ ಹಾಗೂ ಕೆಲಸದ ಒತ್ತಡದ ಬಿಸಿ ತಟ್ಟಿ ಮನೆಯಲ್ಲಿ ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಾ ತಮ್ಮ ಕೆಲಸಗಳನ್ನು ಮಾಡಿಕೊಂಡಿರುತ್ತಾರೆ.
ಈಗಿನ ಕಾಲದಲ್ಲಿ ಮೊಬೈಲ್ ಇದ್ದರೆ ಪ್ರಪಂಚವೇ ಕೈಗೆ ಸಿಕ್ಕಿದಂತೆ ಇರುತ್ತದೆ. ಬಿಡುವಿನ ವೇಳೆಯಲ್ಲಿ ಮೊಬೈಲ್ ಚಾಟ್ ಗೇಮ್ ಆಡುವ ಮೂಲಕ ಕಾಲ ಕಳೆಯಬಹುದು. ಸಮಯಕ್ಕೆ ಸರಿಯಾಗಿ ಊಟವಿಲ್ಲದೆ ಯಾರ ಬಳಿಯೂ ಸರಿಯಾಗಿ ಮಾತನಾಡದೆ ತಮ್ಮ ಪಾಡಿಗೆ ತಾವು ಮೊಬೈಲ್ ನಲ್ಲಿ ಮಗ್ನರಾಗಿದ್ದರೆ ಯಾರ ಜೊತೆಗೂ ಮಾತನಾಡುವುದೇ ಬೇಕಿರುವುದಿಲ್ಲ. ಮನೆಯಲ್ಲಿ ಎಲ್ಲರೂ ಇದ್ದರೂ ಸಹ ಯಾರೂ ಇಲ್ಲವೇನೋ ಎಂಬಂತೆ ನಿಶ್ಶಬ್ದವಾಗಿರುತ್ತದೆ. ನಿವೃತ್ತರಾದವರು ಬೇಸರ ಕಳೆಯಲು ಟಿವಿ ಮೊರೆ ಹೋಗಬೇಕಾಗುತ್ತದೆ. ಆಗ ಮನೆಯಲ್ಲಿ ಟಿವಿಯೊಂದೇ ಶಬ್ದ ಮಾಡುತ್ತಿರುತ್ತದೆ.
ಭಾನುವಾರ ಮತ್ತು ರಜಾದಿನಗಳು ಬಂದರೆ ಯಾರೂ ಮನೆಯಲ್ಲೇ ಇರಲು ಅಷ್ಟಾಗಿ ಇಷ್ಟಪಡುವುದಿಲ್ಲ. ದೀರ್ಘಾವಧಿ ರಜೆ ಬಂದರೆ ಮೊದಲೇ ಪ್ರವಾಸದ ಬಗ್ಗೆ ನಿರ್ಧಾರ ಮಾಡಿಕೊಂಡಿರುತ್ತಾರೆ. ಈಗ ವೀಕೆಂಡ್ ಎಂಬ ಹೊಸ ವರಸೆಯೊಂದು ಶುರುವಾಗಿದೆ. ಮೊದಲಿನಿಂದಲೂ ಶನಿವಾರ ಭಾನುವಾರವಿಲ್ಲವೇ? ಅದೇನೋ ಒಂದು ಹೊಸ ಹೆಸರನ್ನು ನೀಡಿ ಮೋಜು ಮಸ್ತಿಗಳಲ್ಲಿ ತೊಡಗಲು ಮಾಡಿಕೊಂಡಿರುವ ವ್ಯವಸ್ಥೆಯಷ್ಟೇ. ಇದಕ್ಕೆ ಆಕ್ಷೇಪವೇನೂ ಇಲ್ಲ ವಾರ ಪೂರ್ತಿ ಸಂಚಾರ ದಟ್ಟಣೆ ಕೆಲಸದ ಒತ್ತಡದಿಂದ ದುಡಿದು ಒಂದು ದಿನ ವಿಶ್ರಾಂತಿ ಪಡೆಯುವುದು ಒಳ್ಳೆಯದು. ಆದರೆ ಮೋಜಿನ ಹೆಸರಲ್ಲಿ ಚೆನ್ನಾಗಿ ಕುಡಿದು ಆರೋಗ್ಯ ಹಾಳುಮಾಡಿಕೊಳ್ಳಬಾರದಷ್ಟೇ.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)