ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 16
ಹೆತ್ತವರು ಮತ್ತು ಗಂಡು ಮಕ್ಕಳ ನಡುವಿನ ಮಾತುಕತೆಗಳು ಅನೇಕ ಸನ್ನಿವೇಶ ಮತ್ತು ಸಂದರ್ಭಗಳಲ್ಲಿ ನಿಲ್ಲಬಹುದು ಅಥವಾ ಕಡಿಮೆಯಾಗಬಹುದು. ಸಣ್ಣ ಪುಟ್ಟ ಕಾರಣಗಳಿಗೆ ನಿಲ್ಲುವುದಿಲ್ಲ. ಇದಕ್ಕೆ ಯಾವುದಾದರೂ ದೊಡ್ಡ ಕಾರಣವಿರಬೇಕು. ಆದರೆ ಹೆಣ್ಣು ಮಕ್ಕಳೊಂದಗಿನ ಮಾತುಕತೆಗಳು ನಿಲ್ಲಲು ಅಷ್ಟಾಗಿ ಸಾಧ್ಯವಿಲ್ಲ ಬಹುತೇಕವಾಗಿ ನಿಲ್ಲುವುದಿಲ್ಲ ಎಂದೇ ಹೇಳಬಹುದು.
ಹೆಣ್ಣು ಮಕ್ಕಳು ವಿವಾಹವಾಗಿ ಗಂಡನ ಮನೆಗೆ ಹೋದಲ್ಲಿ ಮಾತುಕತೆಗಳು ಕಡಿಮೆಯಾಗಬಹುದು. ಆದರೆ ನಿಲ್ಲುವುದಿಲ್ಲ. ಗಂಡನ ಮನೆಯಿಂದ ಅಪರೂಪಕ್ಕೆ ತವರು ಮನೆಗೆ ಬಂದರೆ, ಮನೆಗೆ ಬಂದಾಗ ಶುರು ಮಾಡಿದ ಅಮ್ಮ ಮಗಳ ಮಾತುಕತೆ ಪುನಃ ಗಂಡನ ಮನೆಗೆ ಹೋಗುವವರೆಗೂ ನಡೆಯಬಹುದು. ದಿನ ಕಳೆದಂತೆ ಸ್ವಲ್ಪ ಕಡಿಮೆಯಾಗಬಹುದು. ತಾಯಿ ಯೊಂದಿಗೆ ದಿನ ರಾತ್ರಿ ಆಡುವ ಮಾತುಕತೆ ತಂದೆಯೊಡನೆ ಅಷ್ಟಾಗಿ ಆಡುವುದಿಲ್ಲ. ಗಂಡನ ಮನೆಯ ವಿಷಯವನ್ನು ತಾಯಿ ಬಳಿಯೇ ಹೇಳುವುದುಂಟು. ಆದರೂ ಕೆಲವು ಮುಖ್ಯ ವಿಚಾರಗಳನ್ನು ತಂದೆಯ ಬಳಿ ಹೇಳಬಹುದು.
ಅಕಸ್ಮಾತ್ ಹೆತ್ತವರ ವಿರೋಧ
ಎದುರಿಸಿ ವಿವಾಹವಾದಾಗ ಹೆತ್ತವರು ಕೋಪಗೊಂಡು ಮಾತನಾಡದೇ ಇರಬಹುದು.
ಕಾಲಕ್ರಮೇಣ ಸರಿಹೋಗುತ್ತಾ ಮೊದಲಿನಂತೆ ವಿಶ್ವಾಸ ಬರಬಹುದು. ವಿಶಾಲ ಹೃದಯ ಇರುವವರು ಮಾತ್ರ ಎಷ್ಟಾದರೂ ತಮ್ಮ ಮಗಳಲ್ಲವೇ ನಮ್ಮನ್ನು ಬಿಟ್ಟರೆ ಬೇರೆ ಯಾರಿದ್ದಾರೆ? ಹೆಣ್ಣು ಮಗಳನ್ನು ವಿರೋಧಿಸಬಾರದೆಂದು ಅರಿತು ಮೊದಲಿನಂತೆ ಪ್ರೀತಿ ತೋರಬಹುದು.
ಆದರೆ ಮಗಳು ತಮ್ಮ ವಿರೋಧವಾಗಿ ವಿವಾಹವಾದರೆ ಇದನ್ನು ಸಹಿಸದೆ ಕಠಿಣ ಮನಸ್ಸು ಹೊಂದಿರುವ ಮನುಷ್ಯತ್ವವೇ ಇಲ್ಲದಂತಹವರು ಮಗಳು ಬೇರೆಯವರನ್ನು ವಿವಾಹವಾಗಿರುವುದನ್ನು ಸಹಿಸದೆ ಮರ್ಯಾದಾ ಹತ್ಯೆ ಮಾಡಿರುವ ಪ್ರಸಂಗಗಳು ನಡೆದಿರುವ ನಿದರ್ಶನಗಳುಂಟು. ಆದರೆ ಇದು ಪೈಶಾಚಿಕ ಕೃತ್ಯವಾಗಿದೆ.
ತಮಗಿಷ್ಟವಿಲ್ಲದಿದ್ದರೆ ಎಲ್ಲೋ ಸುಖವಾಗಿ ಬದುಕಲಿ ಎಂದು ಬಿಡಬೇಕು. ಮಾನವೀಯತೆ ಮರೆತು ಇಂತಹ ಕೃತ್ಯ ಎಸಗಿದರೆ ನೊಂದು ಕೊಳ್ಳುವುದು ಹೆಣ್ಣು ಹೃದಯ ಮಾತ್ರ. ಇವರೂ ಸಹ ನೆಮ್ಮದಿಯಿಂದ ಇರಲು ಆಗುವುದಿಲ್ಲ. ತಪ್ಪೆಸಗಿದರೆ ಕಾನೂನು ರೀತ್ಯಾ ಶಿಕ್ಷೆ ಅನುಭವಿಸುತ್ತಾರೆ. ಇದರಿಂದ ಯಾರೂ ಸುಖವಾಗಿರಲು ಸಾಧ್ಯವಿಲ್ಲ. ಮಗಳು ಸತ್ತರೆ ಇನ್ನೆಲ್ಲಿಯ ಮಾತುಕತೆ ಶಾಶ್ವತವಾಗಿ ನಿಂತು ಹೋಗುತ್ತದೆ.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)