ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 36
ಹಿಂದಿನ ಕಾಲದಲ್ಲಿ ಊರಿನಲ್ಲಿ ಯಾರಿಗಾದರೂ ಮನಸ್ಥಾಪ ಬಂದಿದ್ದರೆ ಪಂಚಾಯಿತಿ ಸೇರಿಸಿ ಊರಿನ ಯಜಮಾನ ಎನಿಸಿಕೊಂಡವನು ವ್ಯಾಜ್ಯವನ್ನು ಇತ್ಯರ್ಥ ಪಡಿಸುತ್ತಿದ್ದಾಗ ಯಾರೊಬ್ಬರೂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಅಕಸ್ಮಾತ್ ಅಸಮಾಧಾನವಾದರೂ ಊರ ಯಜಮಾನನ್ನು ಎದುರು ಹಾಕಿಕೊಳ್ಳದೆ ಊರಿನಲ್ಲಿ ಶಾಂತಿ ನೆಲೆಸಲು ಸಹಕರಿಸುತ್ತಿದ್ದರು.
ಈಗಿನ ಕಾಲದಲ್ಲಿ ಅಂತಹ ವಾತಾವರಣ ಯಾವ ಹಳ್ಳಿಯಲ್ಲೂ ಇಲ್ಲ ಎನ್ನಬಹುದು. ಅಥವಾ ಇದ್ದರೂ ಅತೀ ಹಿಂದುಳಿದ ಗ್ರಾಮಗಳಲ್ಲಿರಬಹುದು. ಪಟ್ಟಣಕ್ಕ ಸಂಪರ್ಕವಿದ್ದು ರಾಜಕೀಯ ಹಳ್ಳಿಯ ಒಳಹೊಕ್ಕಿದ್ದರೆ ಅಂತಹ ವಾತಾವರಣ ಸಿಗುವುದಿಲ್ಲ. ಈಗಿನ ಕಾಲದಲ್ಲಿರುವ ಹಳ್ಳಿ ಹಳ್ಳಿಗಳಲ್ಲಿರುವ ರಾಜಕೀಯ ಹಲವಾರು ಪಕ್ಷಗಳ ಬೆಂಬಲಿಗರು ಯಾರೊಬ್ಬರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ಊರಿನ ಯಜಮಾನ ಯಾವುದಾದರೂ ರಾಜಕೀಯ ಪಕ್ಷದ ಬೆಂಬಲಿಗನಾಗಿದ್ದರೆ ಅವನ ಮಾತನ್ನು ಬೇರೆ ಪಕ್ಷಗಳ ನಾಯಕರಿಗೆ ಕೇಳುವ ಮನಸ್ಥಿತಿ ಇರುವುದಿಲ್ಲ. ಇದರಿಂದ ಒಂದು ಸಣ್ಣ ವ್ಯಾಜ್ಯಕ್ಕೂ ಕಾನೂನಿನ ಮೊರೆಹೋಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಇದರಿಂದ ಹಳ್ಳಿಗಳಲ್ಲಿ ಪರಸ್ಪರ ಮನಸ್ಥಾಪ ಬಂದು ಎದುರಿಗೆ ಸಿಕ್ಕಿದ್ದರೂ ಮಾತನಾಡುವ ಗೋಜಿಗೆ ಹೋಗುವುದಿಲ್ಲ
ಕೆಲವು ಹಳ್ಳಿಗಳಲ್ಲಿ ಊರಿನ ಮರ್ಯಾದೆಗೆ ಹೆದರಿ ಪೋಲೀಸ್ ಸ್ಟೇಷನ್ ಕೋರ್ಟ್ ಗೆ ಹೋಗುವುದನ್ನು ಊರಿನ ಹಿರಿಯರು ತಡೆಯಬಹುದು. ಆದರೆ ಮನಸ್ಸಿನಲ್ಲಿ ಒಂದು ರೀತಿಯ ಒಳಗೊಳಗೆ ಮನಸ್ಥಾಪವಿದ್ದು ಹೆಚ್ಚಿಗೆ ಮಾತನಾಡಲು ಹೋಗುವುದಿಲ್ಲ ಊರಿನ ಹಬ್ಬದ ಸಮಯದಲ್ಲಿ ಒಂದಾಗಿ ಆಚರಿಸಬಹುದಷ್ಟೇ.
ಈಗಿನ ಕಾಲದಲ್ಲಿ ಮದ್ಯ ಕುಡಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು ಒಂದು ಅಂದಾಜಿನ ಪ್ರಕಾರ ಸುಮಾರು ಹದಿಮೂರು ಕೋಟಿ ಜನಗಳು ಮದ್ಯ ವ್ಯಸನಿಗಳಾಗಿದ್ದಾರೆಂದು ವಾರ್ತಾ ಪತ್ರಿಕೆಯಲ್ಲಿ ವರದಿಯಾಗಿತ್ತು.
ಮೊದಲಿಗೆ ಪಂಚಾಯಿತಿಯನ್ನು ಊರಿನ ದೇವಸ್ಥಾನಗಳಲ್ಲಿ ಅಥವಾ ಊರ ಹಿರಿಯರ ಮುಂದೆ ದೇವರ ಮೇಲೆ ಪ್ರಮಾಣ ಮಾಡಿಸಿ ವ್ಯಾಜ್ಯ ಅಥವಾ ವ್ಯವಹಾರಗಳನ್ನು ತೀರ್ಮಾನಿಸುತ್ತಿದ್ದರು. ದೇವರ ಮೇಲೆ ಆಣೆ ಮಾಡಿರುವುದರಿಂದ ಪುನಃ ಯಾರೂ ಬದಲಿ ಮಾತನಾಡುತ್ತಿರಲಿಲ್ಲ.
ಈಗಿನ ಕಾಲದಲ್ಲಿ ಒಂದು ವಿಚಿತ್ರ ಸಂಗತಿ ಏನಾಗಿದೆ ಎಂದರೆ ಸ್ನೇಹಿತರ ನಡುವೆ ಮನಸ್ಥಾಪ ಬಂದರೆ ಅದು ತೀರ್ಮಾನ ವಾಗುವುದೇ ಬಾರ್ ಗಳಲ್ಲಿ. ಆ ಗುಂಪಿನ ಯಜಮಾನ ಮತ್ತು ಅವನ ಸಹಚರರು ಬಾರ್ ನಲ್ಲಿ ಚೆನ್ನಾಗಿ ಕುಡಿದು ಕುಡಿಯುತ್ತಿರುವ ಬಾಟಲ್ ಅಥವಾ ಲೋಟದ ಮೇಲೆ ಕೈ ಯಿಟ್ಟು ನೋಡಿ ನಾನು ಅಮೃತದ ಮೇಲೆ ಕೈಯಿಟ್ಟು ಹೇಳುತ್ತಿದ್ದೇನೆ ಎಂದು ತನ್ನ ನಿರ್ಧಾರವನ್ನು ಹೇಳಿ ನಂತರ ಬೆಳಿಗ್ಗೆ ಯಾರಾದರೂ ಏಕಯ್ಯಾ ನಿನ್ನೆ ಆ ನಿರ್ಧಾರವನ್ನು ಮಾಡಿದೆ ಎಂದರೆ ಆಶ್ಚರ್ಯದಿಂದ ನಾನು ಹಾಗೆ ಹೇಳಿದೆನಾ? ಏನೋ ಕುಡಿದಿದ್ದು ಜಾಸ್ತಿ ಯಾಗಿ ಹಾಗೆ ಹೇಳಿರಬಹುದು. ಇಂದು ಪುನಃ ಎಲ್ಲರನ್ನೂ ಸೇರಿಸು ಇಂದು ಸರಿಯಾಗಿ ತೀರ್ಮಾನ ಮಾಡೋಣ ಎಂದು ಹೇಳಬಹುದು. ಇದನ್ನು ಕಂಡು ಪುನಃ ಯಾರು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆಂದು ಸುಮ್ಮನಾದರೂ ಬೇರೆಯವರು ಬಿಡದೆ ಜಗಳವು ತಾರಕಕ್ಕೆ ಹೋಗಬಹುದು.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)