ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 34

ಸ್ನೇಹ ಸಂಬಂಧಗಳಲ್ಲಿ ಹಲವಾರು ಕಾರಣಗಳಿಂದ ಮಾತುಕತೆ ನಿಲ್ಲಬಹುದು. ದೊಡ್ಡ ಹುದ್ದೆಯಲ್ಲಿದ್ದು ರಾಜಕೀಯದಲ್ಲಿ ಒಳ್ಳೆಯ ಪ್ರಭಾವವಿದ್ದರೂ ಸಹ ತನ್ನ ಆತ್ಮೀಯ ಸ್ನೇಹಿತರಿಗೆ ಸಹಾಯ ಮಾಡದೇ ಹೋದರೆ ಒಂದು ರೀತಿಯ ತಿರಸ್ಕಾರ ಭಾವನೆ ಬರಬಹುದು. ಸ್ನೇಹಿತರಲ್ಲಿ ಮಾತು ನಿಲ್ಲಲು ಯಾವುದೇ ನಿರ್ದಿಷ್ಟ ಕಾರಣವನ್ನು ಹೇಳಲು ಆಗುವುದಿಲ್ಲ. ಕೆಲವೊಮ್ಮೆ ಸಣ್ಣ ಪುಟ್ಟ ಕಾರಣಕ್ಕೂ ಮಾತುಕತೆ ನಿಲ್ಲಬಹುದು ಇನ್ನೊಮ್ಮೆ ದೊಡ್ಡದಾದ ಕಾರಣವಿದ್ದರೂ ಮಾತುಕತೆಗಳು ನಿಲ್ಲದೇ ಇರಬಹುದು. ದೊಡ್ಡದಾದ ಕಾರಣವಿದ್ದರೂ ಮಾತುಕತೆಗಳು ಮೊದಲಿನಂತೆ ಇದೆ ಎಂದರೆ ಅದಕ್ಕೆ ಬಹುಮುಖ್ಯವಾದ ಕಾರಣ ಸ್ವಾರ್ಥ ತನ್ನ ಕೆಲಸವಾಗುವವರೆಗೂ ಮೊದಲಿನಂತೆ ಇದ್ದು ಕೆಲಸವಾದ ನಂತರ ಕಡೆಗಣಿಸಬಹುದು. ಆಗ ಕಡೆಗಣಿಸಲ್ಪಟ್ಟ ಸ್ನೇಹಿತನು ಮೊದಲೇ ತಿಳಿದಿದ್ದರೆ ಮಾತನಾಡಿಸುತ್ತಲೇ ಇರಲಿಲ್ಲ ಎಂದು ಹಲುಬಬಹುದು. ಈ ಸನ್ನಿವೇಶ ರಾಜಕಾರಣಕ್ಕೆ ಅನ್ವಯವಾಗುತ್ತದೆ. ಯಾರಾದರೂ ರಾಜಕಾರಣಿ ತನ್ನ ಸ್ನೇಹಿತನಿಂದ ನಷ್ಟ ಅನುಭವಿಸಿದ್ದರೆ ಅವನನ್ನು ನಿಷ್ಠೂರ ಮಾಡಿಕೊಳ್ಳುವುದಿಲ್ಲ. ಯಾವುದಾದರೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಮೋಸ ಮಾಡಿದ್ದರೂ ಜಾಣ ಮರೆವು ತೋರಿಸಿ ಅಥವಾ ಕಣ್ಣೊರೆಸುವ ಮಾತನಾಡಿ ಚುನಾವಣೆಯಲ್ಲಿ ಗೆದ್ದ ನಂತರ ಮಾತನಾಡುವುದನ್ನು ಬಿಟ್ಟು ದೂರ ಇಟ್ಟಿರಬಹುದು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -

ಮನುಷ್ಯ ಎಷ್ಟೇ ಕೆಟ್ಟವನಾಗಿದ್ದರೂ ಅವನ ಬಳಿ ನಿಷ್ಠೂರವಾಗಿರಬಾರದು. ಎಷ್ಟು ಬೇಕೋ ಅಷ್ಟು ಮಾತನಾಡುತ್ತಾ ಇರಬೇಕು ಯಾವುದೇ ಕಾರಣಕ್ಕೂ ದ್ವೇಷವನ್ನು ತೋರಕೂಡದು. ಯಾವ ರೀತಿ ವಿಷಜಂತುಗಳನ್ನು ಹತ್ತಿರ ಇಟ್ಟುಕೊಳ್ಳುವುದಿಲ್ಲವೋ ಅಥವಾ ಕಾಡುಪ್ರಾಣಿಗಳನ್ನು ಬೋನಿಗೆ ಹಾಕಿ ಇಟ್ಟಿರುವಂತೆ ಇಟ್ಟಿರಬೇಕು. ವಿಷಜಂತುಗಳು ಕಾಡುಪ್ರಾಣಿಗಳ ಹತ್ತಿರ ಇದ್ದರೆ ಯಾವ ಸಮಯದಲ್ಲಾದರೂ ಕಚ್ಚಬಹುದು ಅಥವಾ ಮೇಲೆ ಬೀಳಬಹುದು. ಅದರಂತೆ ಮನುಷ್ಯ ಕೆಟ್ಟವನೆಂದು ತಿಳಿದ ಮೇಲೆ ಮಾತನಾಡಿಸದೆ ದೂರ ಉಳಿಯಬಾರದು. ಹತ್ತರಲ್ಲಿ ಒಂದು ಮಾತು ಅಥವಾ ಎದುರಿಗೆ ಸಿಕ್ಕಾಗ ಹಲೋ ಹಲೋ ಎಂದಷ್ಟೇ ಮಾತನಾಡಿಸಿ ಅವನ ಮೇಲೆ ವಿಶ್ವಾಸವಿಲ್ಲದಿದ್ದರೂ ತನಗೇನೋ ವಿಶ್ವಾಸವಿರುವಂತೆ ನಡೆದುಕೊಂಡರೆ ಎಷ್ಟೇ ಕೆಟ್ಟ ಮನುಷ್ಯನಾದರೂ ಸುಮ್ಮನಿರುತ್ತಾರೆ. ಅಕಸ್ಮಾತ್ ಕಾಡುಪ್ರಾಣಿಗಳನ್ನು ಮನೆಯಲ್ಲಿ ಸಾಕಿದ್ದರೆ ಅವುಗಳಿಗೆ ಕೋಪ ಬರದಂತೆ ಅದರ ಮೈಯನ್ನು ಸವರುತ್ತಾ ಸಮಾಧಾನ ಪಡಿಸುತ್ತಿರುವಂತೆ ಕೆಟ್ಟ ಮನುಷ್ಯನಾದವನಿಗೂ ಯಾವಾಗಲೂ ಸಮಾಧಾನದ ಮಾತುಗಳನ್ನಾಡುತ್ತಿದ್ದು ಸಮಯ ಬಂದಾಗ ಮಟ್ಟ ಹಾಕಬೇಕು. ಇಲ್ಲದಿದ್ದರೆ ಯಾವ ಸಮಯದಲ್ಲಿ ಬೇಕಾದರೂ ಕೆಡುಕನ್ನು ಮಾಡಲು ಹವಣಿಸಬಹುದು.

RELATED ARTICLES  ಶ್ರೀಧರರು ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ನಾಲ್ಕನೆಯ ಭಾಗ

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)