ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 37
ಯಾವುದೇ ಸ್ನೇಹ ಮತ್ತು ಸಂಬಂಧಗಳಲ್ಲಿ ಅನುಮಾನ ಬಂದರೆ ಆ ಸ್ನೇಹ ಸಂಬಂಧ ಮೊದಲಿನಂತೆ ಉಳಿಯುವುದಿಲ್ಲ ಮಾತುಕತೆಗಳು ಮುಂದುವರೆಯುವುದಿಲ್ಲ.
ನಂಬಿಕೆ ಎಂಬುವುದು ಬಹಳ ಮುಖ್ಯ. ಇದರಲ್ಲಿ ಸ್ವತಹ ನಂಬಿಕೆ ಅಥವಾ ಆತ್ಮ ನಂಬಿಕೆ (Self confidence)ಇದ್ದರೆ ಮಾತ್ರ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯ. ತನ್ನ ಮೇಲೆ ತನಗೇ ನಂಬಿಕೆ ಇಲ್ಲದಿದ್ದರೆ ಏನೂ ಸಾಧಿಸಲು ಆಗುವುದಿಲ್ಲ
ಯಾವುದರಲ್ಲೂ ಯಾರ ಮೇಲೂ ದುಡುಕಿನ ನಿರ್ಧಾರದಿಂದ ನಂಬಿಕೆಯನ್ನು ಕಳೆದುಕೊಳ್ಳಬಾರದು. ಯಾರ ಮೇಲಾದರೂ ಅನುಮಾನ ಬಂದರೆ ಪರೀಕ್ಷಿಸಿ ದೃಢಪಡಿಸಿಕೊಂಡರೆ ಒಳ್ಳೆಯದು.
ದೇವರ ಮೇಲಿನ ನಂಬಿಕೆ, ತಂದೆ – ತಾಯಿ, ಹೆತ್ತವರು-ಮಕ್ಕಳು, ಪತಿ-ಪತ್ನಿ, ಸ್ನೇಹಿತರಳೊಗಿನ ನಂಬಿಕೆ ಕಳೆದುಕೊಳ್ಳಬಾರದು. ಆದರೆ ಕಳ್ಳರು ಸುಳ್ಳರು ಕಣ್ಣೆದುರಿಗೆ ಮೋಸ ಮಾಡುತ್ತಿದ್ದರೂ ಅಂಥಹವರನ್ನು ನಂಬಿ ಎಂದು ಯಾರೂ ಹೇಳುವುದಿಲ್ಲ.
ಯಾರಾದರೂ ಬೇರೆಯವರನ್ನು ನಂಬಿ ಮೋಸ ಹೋದೆ ಎನ್ನಬಹುದು. ಆದರೆ ವ್ಯಾಪಾರ ವ್ಯವಹಾರದ ನಂಬಿಕೆಯೇ ಬೇರೆ, ವೈಯುಕ್ತಿಕವಾಗಿ ಮಾನಸಿಕವಾಗಿ ನಂಬುವುದೇ ಬೇರೆ. ಎಲ್ಲರನ್ನೂ ಕುರುಡುತನದಿಂದ ನಂಬಿ ಮೋಸ ಹೋಗಿ ಎಂದು ಯಾರೂ ಹೇಳುವುದಿಲ್ಲ. ಶಾಂತಿಯುತ ಜೀವನ ನಡೆಸಲು ನಂಬಿಕೆ ಎನ್ನುವುದು ಒಂದು ರೀತಿಯ ಟಾನಿಕ್ ಇದ್ದಂತೆ.
ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ಮಾನಸಿಕವಾಗಿ ನಂಬಿದರೆ ನೆಮ್ಮದಿ ಇರುತ್ತದೆ.
ಮೊದಲಿಗೆ ದೇವರನ್ನು ನಂಬಿದರೆ ಮನಸ್ಸಿಗೆ ಧೈರ್ಯ ಬರುತ್ತದೆ. ಶಾಂತಿಯೂ ಮನಸ್ಸಿನಲ್ಲಿ ಬರುತ್ತದೆ. ದೇವರು ಪ್ರತಿಯೊಬ್ಬರ ಜೀವನದಲ್ಲಿ ನೇರವಾಗಿ ಬಂದು ಸಹಾಯ ಮಾಡುವುದಿಲ್ಲ. ಬೇರೆಯವರ ರೂಪದಲ್ಲಿ ಬಂದು ಸಹಾಯ ಮಾಡಿರುವುದು ಎಲ್ಲರ ಜೀವನದಲ್ಲಿಯೂ ನಡೆದಿರುತ್ತದೆ. ದೈವ ಸಹಾಯವಿಲ್ಲದೆ ಯಾರೊಬ್ಬರೂ ದೊಡ್ಡ ಮನುಷ್ಯರಾಗಿ ಪ್ರಸಿದ್ದ ವ್ಯಕ್ತಿಗಳಾಗುವುದಿಲ್ಲ. ಅವರ ಹೆತ್ತವರಿಗೆ ಸಹಾಯವಾಗಿ ಅವರ ಮಕ್ಕಳು ದೊಡ್ಡವರಾಗಿರಬಹುದು. ದೊಡ್ಡವರಾದ ಮೇಲೆ ನನಗೆ ದೇವರ ಮೇಲೆ ನಂಬಿಕೆಯೇ ಇಲ್ಲ ಎನ್ನಬಹುದು. ಕೆಲವು ಸಲ ವೈಯುಕ್ತಿಕವಾಗಿ ಕಷ್ಟ ಪಟ್ಟು ಕೆಲಸ ಸಾಧಿಸಿರಬಹುದು. ಆದರೆ ಕೆಲವೊಮ್ಮೆ ನಮಗೇ ತಿಳಿಯದಂತೆ ಬೇರೆಯವರೂ ಸಹ ದೇವರಂತೆ ಬಂದು ಸಹಾಯ ಮಾಡಿರಬಹುದು. ಇದು ಕೆಲವರಿಗೆ ಕಣ್ಣಿಗೆ ಬೀಳುವುದಿಲ್ಲ. ಕೆಲವೊಮ್ಮೆ ನಗಣ್ಯ ಎನಿಸುತ್ತದೆ.
ದೇವರು ದೇವಸ್ಥಾನಗಳಿರುವುದರಿಂದ ದೇಶದಲ್ಲಿ ಮುವ್ವತ್ತರಿಂದ ನಲವತ್ತು ಕೋಟಿ ಜನಗಳು ಅದರಲ್ಲೂ ಹೆಚ್ಚಾಗಿ ರೈತರು ಕಾರ್ಮಿಕರು ವ್ಯಾಪಾರಿಗಳು ವಾಹನ ಮಾಲೀಕರು ಹೀಗೆ ಅನೇಕರು ಉದ್ಯೋಗ ಕಲ್ಪಿಸಿಕೊಂಡಿದ್ದಾರೆ.
ಮನುಷ್ಯನ ಪ್ರತಿಯೊಂದು ಜೀವನದ ಚಟುವಟಿಕೆಗಳಲ್ಲಿ ದೇವರು ಬಂದು ಸಹಾಯ ಮಾಡುವುದಿಲ್ಲ. ಅದಕ್ಕೆಂದೇ ದೇವರು ಮನುಷ್ಯನಿಗೆ ಬುದ್ದಿ ಎನ್ನುವುದನ್ನು ನೀಡಿರುವುದು. ತನ್ನ ಬುದ್ದಿಯನ್ನು ಸಮಯಕ್ಕೆ ತಕ್ಕಂತೆ ಉಪಯೋಗಿಸಿಕೊಂಡು ಕ್ಷೇಮವಾಗಿ ಜೀವನ ನಡೆಸಬೇಕು. ಯಾವುದೇ ಘಟನೆ ನಡೆಯುವ ಮೊದಲು ಸೂಕ್ಷ್ಮವಾಗಿ ಮನಸ್ಸಿನಲ್ಲಿ ಎಚ್ಚರಿಕೆ ಸಂದೇಶ ಬಂದಿರುತ್ತದೆ. ಇದನ್ನು ನಿರ್ಲಕ್ಷ್ಯಿಸಿ ಮೂಢನಂಬಿಕೆ ಎಂದು ಉದಾಸೀನ ಮಾಡಿ ಮುಂದುವರೆದು ಕೆಟ್ಟ ಘಟನೆ ನಡೆದ ನಂತರ ಪಶ್ಘಾತ್ತಾಪ ಪಡಬಹುದು. ಯಾರಾದರೂ ಯಾವುದಾದರೊಂದು ಘಟನೆಯಿಂದ ಸಂಕಷ್ಟದಲ್ಲಿದ್ದರೆ ಅವರು ಹೇಳುವ ಮೊದಲ ಮಾತೇ ಹೋಗಬಾರದು ಎಂದು ಮನಸ್ಸಿಗೆ ಬಂದಿತ್ತು ಏನಾಗುತ್ತೆ ನೋಡೋಣ ಎಂದು ಅದೂ ಅಲ್ಲದೆ ತುರ್ತಾಗಿ ಹೋಗಬೇಕಿತ್ತು ಅದಕ್ಕೆ ನಾನೇ ಹೋದೆ ಎಂದು ಅಥವಾ ಅವರ ಹಿರಿಯರು ಎಚ್ಚರ ನೀಡಿದ್ದರು ಆದರೂ ತುರ್ತು ಕೆಲಸವಿದೆ ಎಂದು ಹೋದೆ ಎಂದು ಹೇಳಬಹುದು
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)