ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 18
ಹೆತ್ತವರು ಹೆಣ್ಣು ಮಕ್ಕಳಿಗೆ ಆಸ್ತಿ ಕೊಡಬಾರದು ಎಂಬ ಮನೋಭಾವ ಇರುವುದಿಲ್ಲ. ಹೇಗಿದ್ದರೂ ಒಳ್ಳೆಯ ಸಂಬಂಧ ನೋಡಿ ವಿವಾಹ ಮಾಡಿರುವುದರಿಂದ ಮಗಳು ಚೆನ್ನಾಗಿರುತ್ತಾಳೆ ಎಂಬ ಸಮಾಧಾನ ಇರಬಹುದು. ಕೆಲವೊಮ್ಮೆ ಹೆಣ್ಣು ಮಕ್ಕಳಿಗೆ ಅರಿಶಿನಕುಂಕುಮಕ್ಕೆಂದು ಆಸ್ತಿಯಲ್ಲಿ ಸ್ವಲ್ಪ ಭಾಗವನ್ನು ದಾನ ನೀಡಬಹುದು.
ಮಗಳಿಗೆ ಆಸ್ತಿ ನೀಡದಿದ್ದರೆ ಅಥವಾ ದಾನವಾಗಿ ನೀಡಿದ್ದು ಸಾಲದು ಎಂದೆನಿಸಿದರೆ ಸಮಭಾಗ ನೀಡಬೇಕೆಂದು ಒತ್ತಾಯಿಸಿ ಕೊಡದಿದ್ದಾಗ ಬಲವಂತದಿಂದ ಗಂಡನ ಮನೆಯವರ ಕುಮ್ಮಕ್ಕಿನಿಂದ ಕೋರ್ಟ್ ಮೆಟ್ಟಿಲೇರಿದಾಗಲೂ ಹೆತ್ತವರ ಮತ್ತು ಹೆಣ್ಣು ಮಕ್ಕಳ ನಡುವೆ ಮನಸ್ಥಾಪ ಬರದೇ ಇರಬಹುದು. ಆದರೆ ದಿನಕ್ರಮೇಣ ಹೆತ್ತವರಿಗೂ ಮಾನಸಿಕ ಸಮತೋಲನ ತಪ್ಪಿ ಮಾತನಾಡದೇ ಇರಬಹುದು.
ಅಕಸ್ಮಾತ್ ಹೆಣ್ಣು ಮಗಳೇ ಸ್ವತಹ ಆಸ್ತಿಯಲ್ಲಿ ಪಾಲು ನೀಡಲಿಲ್ಲವೆಂದು ಕೋರ್ಟ್ ಮೆಟ್ಟಿಲೇರಿದಾಗ ಮಾತ್ರ ಮನಸ್ಥಾಪ ಬಂದು ಮಾತನಾಡದೇ ಇರಬಹುದು. ಇದು ಬಹಳವೇ ಅಪರೂಪದ ಸನ್ನಿವೇಶ ಎನಿಸುತ್ತದೆ.
ಇದೇರೀತಿ ಗಂಡು ಮಕ್ಕಳು ಒಳ್ಳೆಯ ಕೆಲಸದಲ್ಲಿದ್ದು ಹೆತ್ತವರಿಗೆ ಸ್ವಲ್ಪ ಆಸ್ತಿ ಇದ್ದರೆ ಹೆತ್ತವರೇ ಅನುಭವಿಸಿಕೊಳ್ಳಲಿ ಎಂದು ಉದಾರ ಮನಸ್ಸಿನಿಂದ ಬಿಡಬಹುದು. ಆದರೆ ಮನೆಗೆ ಬಂದ ಹೆಂಡತಿಗೆ ಇದು ಇಷ್ಟವಿಲ್ಲದಿದ್ದರೆ ಪುನಃ ಕೇಳಬಹುದು. ಆಗ ಮೊದಲು ಬೇಡವೆಂದು ನಂತರ ಕೇಳುತ್ತೀಯಲ್ಲಾ ಎಂದು ಹೆತ್ತವರು ಪ್ರಶ್ನಿಸಬಹುದು. ಆಗ ಯಾವುದಾದರೂ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳಬಹುದು. ಈ ಸನ್ನಿವೇಶ ಯಾವಾಗ ಬರುತ್ತದೆ ಎಂದರೆ ಇಬ್ಬರು ಮಕ್ಕಳಿದ್ದಾಗ ಬರಬಹುದು. ಒಬ್ಬ ಮಗನು ಒಳ್ಳೆಯ ಕೆಲಸದಲ್ಲಿದ್ದು ಇನ್ನೊಬ್ಬ ಮಗನಿಗೆ ಸರಿಯಾದ ಕೆಲಸವಿಲ್ಲದಿದ್ದರೆ ಒಬ್ಬ ಮಗನಿಗೆ ಒಳ್ಳೆಯ ಕೆಲಸವಿದೆ ಇನ್ನೊಬ್ಬನಿಗೆ ಸರಿಯಾದ ಕೆಲಸವಿಲ್ಲ ಅವನ ಜೀವನೋಪಾಯಕ್ಕೆ ಇರುವ ಆಸ್ತಿ ನೀಡಿದಾಗ ಮನೆಗೆ ಬಂದ ಸೊಸೆ ಏನಾದರೂ ಆಕ್ಷೇಪಣೆ ಮಾಡಿ ಹೆಸರಿಗೇಂತ ತಂದೆಯ ಆಸ್ತಿ ಇರಲೆಂದು ಪಾಲು ಕೇಳಲು ಗಂಡನಿಗೆ ಕುಮ್ಮಕ್ಕು ನೀಡಿದರೆ ಆಗ ಎಲ್ಲರಿಗೂ ಮನಸ್ಥಾಪ ಬರಬಹುದು.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)