ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು –

ಯಾವುದೇ ಕಾರಣಗಳಿಂದಲೂ ಮಗಳು ತವರು ಮನೆಗೆ ಬಂದರೆ ಅದರಲ್ಲೂ ಮಗಳದ್ದೇ ತಪ್ಪಿದ್ದರೆ ಸಮಾಧಾನದಿಂದ  ಮುಂದಾಗುವ ಕಷ್ಟನಷ್ಟಗಳನ್ನು ವಿವರವಾಗಿ ಹೇಳಿ ಆದಷ್ಟೂ ಗಂಡನ ಮನೆಯಲ್ಲಿ ಹೊಂದಿಕೊಂಡು ಹೋಗುವಂತೆ ತಿಳಿಹೇಳಬೇಕು. ಆದರೂ ಮಗಳು ಹಠಬಿಡದಿದ್ದರೆ ಅವರ ಅತ್ಯಂತ ಸಂಬಂದಿಗಳು  ಹಿರಿಯರು ಹಿತೈಷಿಗಳಿಂದಲೂ ಮಗಳಿಗೆ ಬುದ್ದಿ ಹೇಳಿಸಬೇಕು. ಏನಾದರೂ ಮಗಳಿಗೆ ಬುದ್ದಿ ಬಂದು ಪುನಃ ಹೊಂದಿಕೊಂಡು ಹೋಗುವಂತಾದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಎಲ್ಲರಲ್ಲೂ ವಿಶ್ವಾಸ ಮಾತುಕತೆಗಳು ಮುಂದುವರೆಯುತ್ತಾ ಹೋಗುತ್ತದೆ.

ಹೆತ್ತವರು ಮಗಳ ಮಾತಿಗೆ ಪುಷ್ಟಿ ನೀಡಿ ಬೀಗರ ಮೇಲೆ ಕೋಪಗೊಂಡು ಮಗಳನ್ನು ಗಂಡನ ಮನೆಗೆ ಹೋಗಲೇ ಬೇಡ ಎಂದು ತವರುಮನೆಯಲ್ಲಿಯೇ ಉಳಿಸಿಕೊಂಡರೆ ಸಮಸ್ಯೆ ಕ್ಲಿಷ್ಟಕರವಾಗಿ ವಿಚ್ಛೇದನ ಹಂತಕ್ಕೆ ಹೋಗಿ ಅಂತಿಮವಾಗಿ ವಿಚ್ಛೇದನವಾಗಿ ಮಾತುಕತೆಗಳು ಸಂಪೂರ್ಣವಾಗಿ ನಿಂತು ಹೋಗುತ್ತದೆ. ವಿಚ್ಛೇದನವಾದಲ್ಲಿ ಗಂಡನಾದವನು ಬೇರೆ ವಿವಾಹವಾಗಿರಬಹುದು. ಆದರೆ ವಿಚ್ಛೇದಿತ ಪತ್ನಿಯೂ ವಿವಾಹವಾಗಬಹುದು ಆದರೆ ಅದು ಅಷ್ಟು ಸುಲಭವಲ್ಲ ಎನ್ನಬಹುದು. ಮಕ್ಕಳಿದ್ದರೆ ಅಷ್ಟಾಗಿ ಅದೂ ಸಾಧ್ಯವಿಲ್ಲ ಕಡೇವರೆವಿಗೂ ಒಬ್ಬಂಟಿಯಾಗಿರಬೇಕಾಗಬಹುದು. ಇದರಿಂದ ಹೆತ್ತವರಿಗೆ ಕಡೆಯವರೆಗೂ ತನ್ನ ಮಗಳ ಜೀವನ ಸರಿಹೋಗಲಿಲ್ಲವೆಂಬ ಚಿಂತೆ ಬಾಧಿಸುತ್ತಿರುತ್ತದೆ. ಹೆತ್ತವರು ಇದೇ ಕೊರಗಿನಲ್ಲಿ ಕೊನೆಯುಸಿರೆಳೆದರೆ ಒಬ್ಬಂಟಿಯಾಗುವವಳು ಮಗಳೇ ಆಗಿರುತ್ತಾಳೆ. ಅವಳ ಮಕ್ಕಳು ದೊಡ್ಡವರಾಗುವವರೆಗೆ ಕಷ್ಟವೇ ಆಗಿರುತ್ತದೆ. ದೊಡ್ಡವರಾದ ಮೇಲೆ ಸ್ವಲ್ಪ ನೆಮ್ಮದಿ ಬರಬಹುದಷ್ಟೇ. 

RELATED ARTICLES  “ಏಕೋಹಂ ಬಹುಸ್ಯಾಮ್”( ‘ಶ್ರೀಧರಾಮೃತ ವಚನಮಾಲೆ’).

ಗಂಡನ ಮನೆಯಲ್ಲಿ ಗಂಡನ ಹೆತ್ತವರಿಗೂ ಮನೆಗೆ ಬಂದಿರುವ ಸೊಸೆಗೂ ಮನಸ್ಥಾಪ ಬಂದರೆ ಸ್ವಪ್ರತಿಷ್ಠೆಯೇ ಬಲವಾಗಿ ನಿಲ್ಲುತ್ತದೆ. ಸೊಸೆಯ ಹೆತ್ತವರು ಏನಾದರೂ ಶ್ರೀಮಂತರಾಗಿದ್ದರೆ ಅಥವಾ ಸೊಸೆಯು ದುಡಿಯುತ್ತಿದ್ದರೆ ಅತ್ತೆ ಮಾವನ ಮುಂದೆ ಸೋಲುವುದೇ ಇಲ್ಲ. ಸ್ವಪ್ರತಿಷ್ಠೆ ಮೆರೆದರೆ ತನ್ನ ಜೀವನವೇ ಹಾಳಾಗುತ್ತದೆ ಎಂಬ ಅರಿವೇ ಇಲ್ಲದಂತೆ ವರ್ತಿಸಿ ತಾನು ಕೆಡುವುದಲ್ಲದೆ ಹೆತ್ತವರ ನೆಮ್ಮದಿಯನ್ನು ಹಾಳುಮಾಡಬಹುದು. ಯಾವ ಹೆಣ್ಣು ಮಗಳಿಗೂ ಹೆತ್ತವರು ಬುದ್ದಿ ಹೇಳುವಂತೆ ಅತ್ತೆ ಮಾವನು ಬುದ್ದಿ ಹೇಳಲು ಹೋಗುವುದಿಲ್ಲ. ಗಂಡನಾದವನು ಮಾತ್ರ ತನ್ನ ಪತ್ನಿಗೆ ಬುದ್ದಿ ಹೇಳಲು ಪ್ರಯತ್ನಿಸಬಹುದು. ಆ ಕ್ಷಣದಲ್ಲಿ ಹೆಂಡತಿಯಾದವಳು ಗಂಡನ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿರುವುದಿಲ್ಲ. ಮೊದಲು ನಿಮ್ಮ ಹೆತ್ತವರಿಗೆ ಬುದ್ದಿ ಹೇಳಿ ಎಂದು ವಾದಿಸಬಹುದು. ಮಗನಾದವನು ಸೂಕ್ಷ್ಮವಾಗಿ ತನ್ನ ಹೆತ್ತವರಿಗೆ ಸಮಾಧಾನದಿಂದ ಇರುವಂತೆ ಹೇಳಬಹುದೇ ವಿನಹ ಬುದ್ದಿ ಹೇಳಲು ಆಗುವುದಿಲ್ಲ. ಬುದ್ದಿ ಹೇಳಲು ಹೋದರೆ ಮಗನ ಬುದ್ದಿವಾದ ಕೇಳುವ ಮಟ್ಟದಲ್ಲಿ ಇರುವುದಿಲ್ಲ. ನಿನ್ನೆ ಮೊನ್ನೆ ಬಂದವಳ ಮುಂದೆ ನಾವೇಕೆ ಸೋಲಬೇಕು ಎಂಬ ಭಾವನೆ ಬಂದು ಎಲ್ಲವೂ ಸ್ವಪ್ರತಿಷ್ಠೆಗೆ ಬಲಿಯಾಗುತ್ತದೆ. ಇದರಿಂದ ಮಗನಿಗೂ ಹೆತ್ತವರ ನಡುವೆ ಮಾತು ಕತೆಗಳು ಕಡಿಮೆಯಾಗುತ್ತದೆ. 

RELATED ARTICLES  “ ದೇವರ ಇರುವಿಕೆಗೆ ಶ್ರುತಿ-ಸ್ಮ್ರತಿ ಆಧಾರ”( ಶ್ರೀಧರಾಮೃತ ವಚನಮಾಲೆ’).

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)