*ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 23*

ಸಂಸಾರದಲ್ಲಿ ಸಾಮರಸ್ಯ ಮೂಡಿ ಶಾಂತಿ ನೆಲಸಬೇಕಾದರೆ ಕುಟುಂಬದ ಸದಸ್ಯರು ಯಾರೇ ಆಗಿರಲಿ ಸ್ವಪ್ರತಿಷ್ಠೆ ಬಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವ್ಯವಹರಿಸಿದರೆ ಮನೆಗಳಲ್ಲಿ ಮನಸ್ಥಾಪ ಬರುವುದಿಲ್ಲ.

ಹೆತ್ತವರು ತಮ್ಮ ಮಗಳಿಗೆ ವಿವಾಹ ಮಾಡಿ ಗಂಡನ ಮನೆಗೆ ಕಳುಹಿಸಿದ ನಂತರ ಮಗಳು ಅವಳ ಗಂಡ ಮತ್ತು ಅವಳ ಗಂಡನ ಹೆತ್ತವರೊಂದಿಗೆ ಅನ್ಯೋನ್ಯತೆಯಿಂದ ಬಾಳ್ವೆ ನಡೆಸಲು ಅವರನ್ನು ಫ್ರೀಯಾಗಿ ಬಿಡಬೇಕು. ಏನಾದರೂ ಮಗಳ ಮತ್ತು ಅಳಿಯ ಸಂಸಾರದಲ್ಲಿ ತಲೆ ಹಾಕಿ ಅವರಿಗೆ ಸಮಸ್ಯೆ ಬರುವಂತೆ ಮಾಡಬಾರದು. ಅಕಸ್ಮಾತ್ ಸಣ್ಣ ಪುಟ್ಟ ಮನಸ್ಥಾಪ ಬಂದರೆ ಸಣ್ಣದರಲ್ಲೇ ಚಿವುಟುವಂತೆ ಮಾಡಿ ಪುನಃ ಮನೆಯಲ್ಲಿ ಸಾಮರಸ್ಯ ಮೂಡುವಂತೆ ಮಾಡಿದರೆ ಪುನಃ ಅನ್ಯೋನ್ಯತೆ ಬರುತ್ತದೆ. ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದು ಮಾಡಿದರೆ ಹಾಳಾಗುವುದು ಮಗಳ ಜೀವನವೇ ವಿನಹ ಬೇರೆ ಯಾರದ್ದೂ ಅಲ್ಲ. 

RELATED ARTICLES  ಘನ ಸರಕಾರದ ಬಳಿ ಘನತೆ ಕಳೆದುಕೊಂಡ ಬಿಪಿಎಲ್ ಹಾಗೂ ಅದರ ಪರಿವಾರದ ಅಳಲಿನ ಮನವಿ.

ಮಗಳ ಮಾತನ್ನು ಅಳಿಯನಾದವನು ಕೇಳಿ ತನ್ನ ಹೆಂಡತಿಯ ಅಭಿಲಾಷೆಯಂತೆ ಬೇರೆ ಸಂಸಾರ ಹೂಡಿದರೆ ತೊಂದರೆಗೊಳಗಾಗುವವರು ಅಳಿಯನ ಹೆತ್ತವರು. ಅವರುಗಳೇ ಸಂತೋಷದಿಂದ ಮಗ ಸೊಸೆಗೆ ಬೇರೆ ಸಂಸಾರ ಹೂಡಲು ಹೇಳಿದರೆ ಮಾತ್ರ ಕುಟುಂಬದಲ್ಲಿ ವಿಶ್ವಾಸಕ್ಕೆ ಭಂಗ ಉಂಟಾಗುವುದಿಲ್ಲ. ಮನೆಗೆ ಬಂದ ಸೊಸೆ ಗಂಡನ ಹೆತ್ತವರ ಸೇವೆ ಮಾಡಲು ಇಷ್ಟವಿಲ್ಲದೆ ಕುಂಟು ನೆಪ ಹೇಳುತ್ತಾ ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದು ಮಾಡುತ್ತಾ ಹೋದರೆ ತನಗೆ, ತನ್ನ ಗಂಡನಿಗೆ, ಗಂಡನ ಹೆತ್ತವರಿಗೆ ತನ್ನ ಹೆತ್ತವರಿಗೆ ಸಮಸ್ಯೆ ಉಂಟಾಗುತ್ತದೆ. 

ಮಗಳನ್ನು ವಿವಾಹ ಮಾಡಿಕೊಟ್ಟ ನಂತರ ಅವರ ಪಾಡಿಗೆ ಅವರು ಗಂಡನ ಹೆತ್ತವರ ಜೊತೆ ಅನ್ಯೋನ್ಯತೆಯಿಂದ ಬಾಳ್ವೆ ಮಾಡುತ್ತಿದ್ದರೆ ದೂರದಿಂದ ನೋಡಿ ಸಮಾಧಾನದಿಂದ ಇರಬೇಕು. ತಮ್ಮ ಮಗಳ ಮನೆಗೆ ಆಗಾಗ್ಗೆ ಹೋಗಲು ಆಗುವುದಿಲ್ಲವೆಂದು ಮಗಳ ಮನೆಯಲ್ಲಿ ಫ್ರೀಯಾಗಿ ಇರಲು ಆಗುವುದಿಲ್ಲವೆಂದು  ಅಳಿಯ ಮಗಳು ಬೇರೆ ಮನೆ ಮಾಡಿದರೆ ತಮಗೂ ಮಗಳ ಮನೆಯಲ್ಲಿ  ಸ್ವಾತಂತ್ರ್ಯ ಸಿಕ್ಕುವುದೆಂಬ ಕೆಟ್ಟ ಆಲೋಚನೆಯಿಂದ ಮಗಳ ಸಂಸಾರದಲ್ಲಿ ಮೂಗು ತೂರಿಸಿದರೆ ಕಕುಟುಂಬದಲ್ಲಿರುವ ನೆಮ್ಮದಿ ಹಾಳಾಗಿ ಹೋಗುತ್ತದೆ.

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2)

ಅಳಿಯನೇನಾದರೂ ಬೇರೆ ಮನೆ ಮಾಡಿದರೆ ಮಗಳ ಸಂಸಾರ ಸರಿಯಾಗಿರಬಹುದು. ಇಲ್ಲದಿದ್ದರೆ ಮಗಳಿಗೂ ಗಂಡನ ಮನೆಯವರಿಗೂ ಮನಸ್ಥಾಪ ಬಂದು ಮಾತಾಡುವುದು ನಿಂತು ಹೋಗುತ್ತದೆ. ಜೊತೆಗೆ ಮಗಳ ಸಂಸಾರ ಅತಂತ್ರವಾಗಿ ಹೆತ್ತವರಿಗೆ ನೆಮ್ಮದಿ ಕದಡುತ್ತದೆ. ಯಾವುದೇ ಕಾರಣಕ್ಕೂ ಮಗಳ ಸಂಸಾರದಲ್ಲಿ ಹೆತ್ತವರು ತಲೆ ಹಾಕಬಾರದು. ಇನ್ನೂ ಗಂಡನ ಮನೆಯಲ್ಲಿ ಹೊಂದಿಕೊಂಡು ಹೋಗುವಂತೆ ಒಳ್ಳೆಯ ಉಪದೇಶ ನೀಡಲು ಅಡ್ಡಿಯಿಲ್ಲ. 

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)