ಮನುಷ್ಯ ಸ್ವತ್ತು ಸಂಪಾದಿಸಲು ಅನೇಕ ಕಷ್ಟಗಳನ್ನು ಪಡುತ್ತಾನೆ ಅವನು ಹೇಗೆ ಒಬ್ಬರ ಸ್ವಂತ ಆಗಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಬಹುದಲ್ಲವೇ?

ಹೆತ್ತವರಿಗೆ ಅವರ ಮಕ್ಕಳೇ ಸ್ವಂತ ಆಸ್ತಿ ಇದ್ದಂತೆ ಹೆತ್ತವರು ಪ್ರೀತಿ ವಿಶ್ವಾಸದಿಂದ ನೋಡುತ್ತಿರುವಾಗ ಬೇರೊಬ್ಬರು ಪ್ರವೇಶಿಸಲಾಗದು. ಮನುಷ್ಯ ದೊಡ್ಡವನಾದಂತೆಲ್ಲಾ ಅವರ ಕುಟುಂಬದ ಸ್ವಂತ ಸ್ವತ್ತಾದರೆ ಜೀವನ ಸಾರ್ಥಕವಾಗುವುದಿಲ್ಲ.
ಬದುಕಿರುವವರೆಗೊ ಅವನ ಮನೆಯವರು ನೋಡಿಕೊಂಡು ಸತ್ತನಂತರ ಸುಡುತ್ತಾರೆ ಅಥವಾ ಮಣ್ಣು ಮಾಡುತ್ತಾರೆ. ಅಲ್ಲಿಗೆ ಅವನ ಕುರುಹು ಏನೂ ಉಳಿಯುವುದಿಲ್ಲ ಅವನ ಮಕ್ಕಳು ಅಥವಾ ಮೊಮ್ಮಕ್ಕಳು ಕೆಲವು ದಿವಸ ಹೆಸರು ಹೇಳಬಹುದು ಅದರಲ್ಲೂ ಏನಾದರೂ ಆಸ್ತಿ ಮಾಡಿದ್ದರೆ ಮಾತ್ರ ನೆನೆಸಿಕೊಳ್ಳಬಹುದು. ಆಸ್ತಿ ಇಲ್ಲದೆ ಮರಣಹೊಂದಿದರೆ ನಮ್ಮ ತಾತ ಅಪ್ಪನೂ ಇದ್ದರು ಏನೂ ಆಸ್ತಿ ಮಾಡಲಿಲ್ಲ. ಎಂದುಕೊಳ್ಳಬಹುದು. ಅಕಸ್ಮಾತ್ ಸಾಲ ಮಾಡಿ ತೀರಿಹೋಗಿದ್ದರೆ ಇನ್ನೂ ಬೇಸರ ಪಟ್ಟುಕೊಳ್ಳಬಹುದಷ್ಠೇ. ಆದರೆ ಯಾರೂ ಅವರ ಹೆಸರನ್ನು ಹೇಳುವುದಿಲ್ಲ ಸತ್ತವರ ಜೊತೆಗೆ ಅವರ ಹೆಸರು ಹೊರಟು ಹೋಗುತ್ತದೆ.

ಮನುಷ್ಯ ಸತ್ತಮೇಲೂ ಅವನ ಹೆಸರು ಉಳಿಯಬೇಕಾದರೆ ಆ ಮನುಷ್ಯ ಸಾರ್ವಜನಿಕರ ಸ್ವತ್ತಾಗಬೇಕು. ಅಂದರೆ ಸಾರ್ವಜನಿಕರು ಮನುಷ್ಯನನ್ನು ಕಂಡುಕೊಳ್ಳಬೇಕೆ? ಯಾರು ಕೊಂಡುಕೊಳ್ಳುತ್ತಾರೆ ಮನುಷ್ಯನೇನು ಮಾರಾಟ ಮಾಡುವ ವಸ್ತುವೇ ಎನ್ನಬಹುದು.
ಆದರೆ ಮನುಷ್ಯ ಸಾರ್ವಜನಿಕರ ಸ್ವತ್ತಾಗಬೇಕಾದರೆ ಅಂತಹ ಮನುಷ್ಯನು ಬದುಕಿರುವಾಗ ಸದ್ಗುಣಗಳನ್ನು ಹೊಂದಿ ಪರೋಪಕಾರಿಯಾಗಿ ಯಾವುದಾದರೂ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದಾಗ ಮಾತ್ರ ಎಲ್ಲರೂ ಅವನನ್ನು ಪ್ರೀತಿ ವಿಶ್ವಾಸದಿಂದ ನೋಡುತ್ತಾರೆ ಅಂತಹ ಮನುಷ್ಯನು ಸಾರ್ವಜನಿಕರ ಸ್ವತ್ತಾಗಿ ಅವನು ಸತ್ತಮೇಲೂ ಹೆಸರನ್ನು ಹೇಳುತ್ತಾರೆ.

RELATED ARTICLES  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಸ್ಪತ್ರೆಗೆ ದಾಖಲು.

ಮನುಷ್ಯ ಯಾವ ರೀತಿ ಸೇವೆ ಸಲ್ಲಿಸಬಹುದು ಎಂದರೆ ಬದುಕಿದ್ದಾಗ ತನ್ನ ಊರಿನ ಅಭಿವೃದ್ಧಿಗೆ ದುಡಿದಿದ್ದರೆ ಕಲಾವಿದರಾದರೆ ಕ್ರೀಡಾ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದರೆ ಸಂಗೀತ ಸಾಹಿತ್ಯ ಸಿನಿಮಾ ರಂಗಗಳಲ್ಲಿ ತನ್ನ ತಾಯ್ನಾಡಿಗಾಗಿ ಸೈನ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ್ದರೆ ಅಂತಹ ಮನುಷ್ಯನನ್ನು ಎಲ್ಲರೂ ಗೌರವದಿಂದ ನೋಡುವಂತಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಹಾಗೂ ಜೀವನವನ್ನೇ ಬಲಿಕೊಟ್ಟು ಹುತಾತ್ಮರಾಗಿರುವ ಅನೇಕ ಮಹನೀಯರುಗಳನ್ನು ಹಾಗೂ ಪುಣ್ಯ ಪುರುಷರನ್ನು ನೋಡುತ್ತಾ ಬಂದಿದ್ದೇವೆ. ಇವರೆಲ್ಲರೂ ತಮ್ಮ ಮನೆಯವರ ಸ್ವಂತ ಸ್ವತ್ತಾಗದೆ ದೇಶದ ಎಲ್ಲಾ ಜನಗಳ ಅಭಿಮಾನದ ಸ್ವತ್ತಾಗಿ ವಿಧಿವಶರಾದ ನಂತರವೂ ಭಾರತದ ಇತಿಹಾಸದಲ್ಲಿ ಮರೆಯದ ಮಾಣಿಕ್ಯದಂತಾಗಿ ದಂತಕಥೆಗಳಾಗಿರುವರು. ಇಂತಹ ಮಹನೀಯರುಗಳನ್ನು ಪಡೆದ ನಮ್ಮ ಭಾರತ ಭೂಮಿ ಧನ್ಯಳಾಗಿದ್ದಾಳೆ.

ಈ ಎಲ್ಲಾ ಕ್ಷೇತ್ರಗಳಲ್ಲಿ ದುಡಿದಿರುವ ಈಗಲೂ ದುಡಿಯುತ್ತಿರುವವರ ಹೆಸರನ್ನು ಹೇಳುತ್ತಾ ಹೋದರೆ ಅನೇಕ ಪುಣ್ಯಪುರುಷರ ಮಹಿಳೆಯರ ದೊಡ್ಡ ಪಟ್ಟಿಯೇ ಬೆಳೆಯುತ್ತಾ ಹೋಗಿ ಅವರ ರೂಪ ನಮ್ಮ ಕಣ್ಮುಂದೆ ಬಂದು ಅವರ ತ್ಯಾಗ ಬಲಿದಾನ ಸೇವೆಗಳು ಚಿರಸ್ಥಾಯಿಯಾಗಿದೆ. ಈಗಲೂ ದೇಶಕ್ಕಾಗಿ ನಿಸ್ವಾರ್ಥದಿಂದ ದುಡಿಯುತ್ತಿರುವ ಮಹನೀಯರುಗಳು ಇಂದಿಗೂ ಮಾರ್ಗದರ್ಶಕರಾಗಿದ್ದಾರೆ.
ಅದ್ವಿತೀಯ ಸೇವೆ ಮಾಡಿರುವ ಎಲ್ಲರನ್ನೂ ಸರ್ಕಾರ ಗುರ್ತಿಸಿ ಭಾರತರತ್ನ ಪದ್ಮವಿಭೂಷಣ ಪದ್ಮಭೂಷಣ ಪದ್ಮಶ್ರೀ ಹಾಗೂ ಜೀವಮಾನದ ಸಾಧನೆಗಾಗಿ ವಿಶೇಷ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.

RELATED ARTICLES  ನೆನಪಿನ ದೋಣಿಯಲ್ಲಿ ಶ್ರೀ ಚನ್ನಕೇಶವ ಪ್ರೌಢ ಶಾಲೆ ಕರ್ಕಿ

ಪ್ರತಿಯೊಂದು ಕ್ಷೇತ್ರದಲ್ಲೂ ಅಸಾಮಾನ್ಯ ಸಾಧನೆಗೆ ಪ್ರಶಸ್ತಿ ಇದೆ. ಸಾಹಿತ್ಯ ಕ್ಷೇತ್ರಕ್ಕೆ ಜ್ಞಾನಪೀಠ ಪ್ರಶಸ್ತಿ ಸರಸ್ವತಿ ಸಮ್ಮಾನ್ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಅನೇಕ ಪ್ರಶಸ್ತಿ ಗಳು ಇದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಅದರದೇ ಆದ ಪ್ರಶಸ್ತಿ ಸಿನಿಮಾ ರಂಗದಲ್ಲಿ ದುಡಿದವರಿಗೆ ಅನೇಕ ಪ್ರಶಸ್ತಿಗಳು ಅಂತರರಾಷ್ಟ್ರೀಯ ವಾಗಿ ನೋಬೆಲ್ ಬಹುಮಾನ ನೀಡುತ್ತಾ ಬಂದಿದ್ದು ಇಂತಹ ಪ್ರಶಸ್ತಿ ಪಡೆದವರು ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತರಾಗಿ ಜನಪ್ರಿಯ ವ್ಯಕ್ತಿಗಳಾಗಿರುತ್ತಾರೆ. ಇಂಥವರನ್ನು ಸಾರ್ವಜನಿಕರು ತಮ್ಮ ಸ್ವಂತ ಸ್ವತ್ತು ಎಂದು ತಿಳಿದು ಅವರಿಗೆ ರಕ್ಷಕರಾಗಿರುತ್ತಾರೆ. ಅಂತಹವರಿಗೆ ಕಾಯಿಲೆ ಬಂದಲ್ಲಿ ಅವರ ಹೆಸರಿನಲ್ಲಿ ಪೂಜೆ ಹೋಮ ಎಲ್ಲವನ್ನೂ ಮಾಡಿ ಅವರಿಗೆ ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಒಂದು ಮನೆಯ ವ್ಯಕ್ತಿಯಾದರೆ ಅವರ ಸ್ವಂತ ಮನೆಯವರು ಮಾಡಿಸುತ್ತಾರೆ.

ಮುರಳಿಮಂಗಲಧರೆ ನೆಲಮಂಗಲ