ಗ್ರಾಮೀಣ ಬದುಕಿನ ಕಥೆ ವ್ಯಥೆಯಲ್ಲಿ ಯುವಕರ ಪಾತ್ರ-1

ನಮ್ಮ ದೇಶ ಭಾರತವು ಹಳ್ಳಿಗಳ ದೇಶ. ಈ ಲಕ್ಷಾಂತರ ಹಳ್ಳಿಗಳಲ್ಲಿ ತಮ್ಮ ತಮ್ಮ ಜಮೀನುಗಳಲ್ಲಿ ದುಡಿದು ದೇಶಕ್ಕೆ ಅನ್ನ ನೀಡುತ್ತಿರುವ ರೈತ ಕುಟುಂಬಗಳೇ ದೇಶದ ಬೆನ್ನೆಲುಬಾಗಿದೆ.

ರೈತರುಗಳು ತಮ್ಮ ಜಮೀನುಗಳಲ್ಲಿ ಬೆಳೆಯುವ ಧಾನ್ಯಗಳಲ್ಲಿ ತಮಗೆ ವರ್ಷಕ್ಕೆ ಬೇಕಿರುವಷ್ಟು ಮೀಸಲು ತೆಗೆದಿಟ್ಟು, ಉಳಿದ ಧಾನ್ಯಗಳನ್ನು ಮಾರುಕಟ್ಟೆಗೆ ಹಾಕಿ ಬಂದ ಹಣದಲ್ಲಿ ಜೀವನಕ್ಕೆ ಬೇಕಾಗುವ ಅವಶ್ಯಕತೆಯನ್ನು ಪೂರೈಸಬೇಕಾಗುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ಔಷದೋಪಚಾರಕ್ಕೆ ದಿನ ನಿತ್ಯದ ಖರ್ಚಿಗೆ ಹಣವನ್ನು ಹೊಂದಿಸಿಕೊಳ್ಳಬೇಕಿರುವುದು ಅನಿವಾರ್ಯವಾಗಿದೆ.

ಹತ್ತಾರು ಎಕರೆ ಜಮೀನಿದ್ದು ಇದರಲ್ಲಿ ಕೊಳವೆ ಬಾವಿ ತೋಡಿ, ಮಳೆಯೂ ಸಾಕಷ್ಟು ಬಂದು ಗದ್ದೆ, ತೋಟಗಳನ್ನು ಮಾಡಿ ವಾಣಿಜ್ಯ ದೈನಂದಿನ ಗೃಹೋಪಯೋಗಿ ಬೆಳೆಗಳನ್ನು ಬೆಳೆದು, ಇದರಲ್ಲಿ ಕುಟುಂಬಕ್ಕೆ ಅವಶ್ಯಕತೆಗೆ ನಿರ್ವಹಣೆ ಮಾಡಿಕೊಂಡು ಉಳಿದಿದ್ಧನ್ನು ಮಾರುಕಟ್ಟೆಗೆ ಹಾಕಿ ಬಂದ ಹಣದಲ್ಲಿ ಜೀವನ ನಡೆಸಿಕೊಂಡು ಹೋಗುತ್ತಿದ್ದರೆ ಅದಕ್ಕಿಂತ ಬೇರೆ ಏನೂ ಬೇಕಾಗುವುದಿಲ್ಲ. ಹಿರಿಯರ ಕಾಲದಲ್ಲಿ ಅದೇರೀತಿ ಇರುತ್ತಿತ್ತು. ಆದರೆ ವಂಶ ಬೆಳೆದಂತೆ ಮಕ್ಕಳು ಮೊಮ್ಮಕ್ಕಳು ಹೀಗೆ ಅನೇಕ ಸದಸ್ಯರುಗಳು ಕುಟುಂಬದಲ್ಲಿ ಬಂದು ಹತ್ತು ಎಕರೆ ಭೂಮಿ ದಿನಕ್ರಮೇಣ ಎರೆಡೆರಡು ಎಕರೆಯಾಗಿ ಹಂಚಿ ಹೋಗುತ್ತಾ ಒಂದು ಎಕರೆ ಅದಕ್ಕಿಂತ ಕಡಿಮೆ ವಿಸ್ತೀರ್ಣದ ಜಮೀನು ಕುಟುಂಬ ಸದಸ್ಯರುಗಳಲ್ಲಿ ವಿಭಾಗವಾಗಿದ್ದರೆ ಅಷ್ಟು ಕಡಿಮೆ ವಿಸ್ತೀರ್ಣದ ಜಮೀನಿನಲ್ಲಿ ಏನೂ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಬಂದಿರುತ್ತದೆ. ಒಂದು ಕಾಲದಲ್ಲಿ ಒಬ್ಬ ರೈತನ ಹಿರಿಯರು ಹತ್ತಾರು ಎಕರೆ ಜಮೀನಿನ ಒಡೆಯರಾಗಿದ್ದು ಅವರ ಐದನೇ ಪೀಳಿಗೆಗೆ ಕೇವಲ ಒಂದು ಅಥವಾ ಅರ್ಧ ಎಕರೆ ಜಮೀನು ಬಂದಲ್ಲಿ ಅವರು ವಿಧಿ ಇಲ್ಲದೆ ಬೇರೆಯವರ ಜಮೀನಿನಲ್ಲಿ ದುಡಿಯಬೇಕಾಗುತ್ತದೆ. ಹಿರಿಯರು ಬುದ್ದಿವಂತರಾಗಿದ್ದು ಹತ್ತಾರು ಎಕರೆ ಜೊತೆಗೆ ಬೇರೆ ಜಮೀನುಗಳನ್ನು ಕೊಂಡಿದ್ದರೆ ಅವರ ಮಕ್ಕಳು ಸಹ ಬುದ್ದಿವಂತರಾಗಿದ್ದುಕೊಂಡು ಅವರೂ ಸಹ ಜಮೀನು ಸಂಪಾದಿಸಿದ್ದರೆ ನೆಮ್ಮದಿಯಿಂದ ವ್ಯವಸಾಯ ಮಾಡಿಕೊಂಡು ಹೋಗಬಹುದು. ಆದರೆ ಈ ಮಾತು ಹೇಳುವುದು ಸುಲಭ. ಕಾರ್ಯಗತವಾಗವಾಗಿರುವುದು ಬಹಳ ಅಪರೂಪವೇ ಆಗಿದೆ ಎಂದರೆ ತಪ್ಪಾಗಲಾರದು. ನಾನಾ ಕಾರಣಗಳಿಂದ ಜಮೀನುಗಳನ್ನು ಮಾರಾಟ ಮಾಡಿ ವ್ಯವಸಾಯ ಮಾಡಲು ಜಮೀನು ಇಲ್ಲದೆ ಸರ್ಕಾರಿ ಗೋಮಾಳಗಳಲ್ಲಿ ವ್ಯವಸಾಯ ಮಾಡಿಕೊಂಡು ಆ ಜಮೀನುಗಳೇ ಜೀವನಾಧಾರ ವಾಗಿದ್ದು ಆ ಜಮೀನುಗಳನ್ನು ಸರ್ಕಾರವು ವ್ಯವಸಾಯ ಮಾಡುವವರಿಗೆ ಮಂಜೂರು ಮಾಡಿದೆ. ಇದರಿಂದ ಎಷ್ಟೋ ಕುಟುಂಬಗಳು ಜೀವನ ನಡೆಸಿಕೊಂಡು ಬಂದಿದ್ದಾರೆ.

RELATED ARTICLES  ಮರೆಯಾದ ಮುರುಡೇಶ್ವರದ ಮಾಣಿಕ್ಯ

ಎನ್ ಮುರಳೀಧರ್ ವಕೀಲರು
ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)