ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 40
ಸ್ನೇಹಿತರ ನಡುವೆ ಮಾತು ಕತೆಗಳು ನಿಂತು ಹೋಗಲು ಅಥವಾ ಕಡಿಮೆಯಾಗಲು ಇನ್ನೊಂದು ಕಾರಣ ಅಹಂಕಾರ ಅಥವಾ ಇದಕ್ಕೂ ಹೆಚ್ಚಿಗೆ ದುರಹಂಕಾರ.
ಮನುಷ್ಯನ ಮೇಲಿನ ಹುದ್ದೆಗೆ ಏರುತ್ತಾ ಇದ್ದಂತೆ ಆ ಹುದ್ದೆಗೆ ತಕ್ಕಂತೆ ಅಥವಾ ಹಣದ ಸಂಪಾದನೆ ಹೆಚ್ಚಾದರೆ ಹುದ್ದೆ ಅಂತಸ್ತಿಗೆ ತಕ್ಕಂತೆ ಎಲ್ಲರಿಗೂ ಸ್ವಲ್ಪವಾದರೂ ಗಮ್ಮತ್ತು ಇರುತ್ತದೆ ಎಂದರೆ ತಪ್ಪಾಗಲಾರದು.
ಆದರೆ ಅದು ದುರಹಂಕಾರವಾದರೆ ಯಾರಿಗೂ ಒಳ್ಳೆಯದಲ್ಲ. ಅಧಿಕಾರಿಯಾದವನಿಗೆ ಯಾರಾದರೂ ಆತ್ಮೀಯರಾಗಿದ್ದರೆ ಕೆಲಸದ ಬಗ್ಗೆ ಸಹಾಯ ಕೇಳಿದರೆ ಈಗಿನ ಭ್ರಷ್ಟಾಚಾರ ಸಮಾಜದಲ್ಲಿ ಸಹಾಯ ಮಾಡುವ ಅಧಿಕಾರವಿದ್ದರೂ ಸಹ ಕೆಲಸ ಮಾಡಿಕೊಟ್ಟರೆ ಹಣ ಕೇಳಲು ಆಗುವುದಿಲ್ಲವೆಂದು ಇಂದು ಮಾಡಿ ಕೊಡುತ್ತೇನೆ ನಾಳೆ ಮಾಡಿಕೊಡುತ್ತೇನೆಂದು ಸತಾಯಿಸುತ್ತಾ ಇರಬಹುದು. ಹೇಳಿದಾಗಲೆಲ್ಲಾ ಹೋಗಿ ಹೋಗಿ ಕಡೆಗೆ ಬೇಸರವಾಗಿ ಫೋನ್ ಮೂಲಕ ಸಂಪರ್ಕಿಸಿದಾಗ ಕೆಲವು ಸಲ ಫೋನ್ ನಲ್ಲಿ ಮಾತನಾಡಿ ನಂತರ ಈಗ ಬ್ಯುಸಿ ಇದ್ದೇನೆ ಕಛೇರಿಗೆ ಬಂದು ನೋಡಿ ಎಂದು ಹೇಳಿದಾಗ ಕಛೇರಿಗೆ ಬಂದು ನೋಡಿ ಆ ದಿನ ಸಿಗದಿದ್ದರೆ ತುಂಬಾ ಬೇಸರವಾಗಿ ಕಛೇರಿಯ ಕ್ಲರ್ಕ್ ಕಂಡು ಇದಕ್ಕೆ ಆಗುವ ಖರ್ಚನ್ನು ನೀಡುತ್ತೇನೆಂದು ಹೇಳಿ ಆ ಕ್ಲರ್ಕ್ ಮೂಲಕ ಹಣ ನೀಡಿ ಕೆಲಸ ಮಾಡಿಸಿಕೊಳ್ಳಬಹುದು. ಅಥವಾ ಆ ವೇಳೆಗೆ ಬೇರೆ ಕಡೆ ವರ್ಗಾವಣೆಯಾಗಿ ಹೊರಟು ಹೋಗಬಹುದು. ಏಕೆಂದರೆ ಆ ಅಧಿಕಾರಿಯು ತನಗಿಂತ ಹಿರಿಯ ಅಧಿಕಾರಿಗಳಿಗೆ ಹಾಗೂ ಬೇರೆ ಬೇರೆಯವರಿಗೆ ಮಾಮೂಲು ನೀಡಬೇಕಾದ ಅನಿವಾರ್ಯತೆ ಇರಬಹುದು ಅಥವಾ ಅಧಿಕಾರಿಯಾಗಿ ಆ ಸ್ಥಳಕ್ಕೆ ವರ್ಗಾವಣೆ ಮಾಡಿಕೊಂಡು ಬರಲು ಹಣ ಎಷ್ಟು ವ್ಯಯಿಸಿದ್ದಾರೋ ಅದನ್ನು ಹಿಂಪಡೆಯಲು ಬೇಡವೇ? ಎಲ್ಲರಿಗೂ ಬಿಟ್ಟಿ ಕೆಲಸ ಮಾಡಿ ಕೊಟ್ಟರೆ ಖರ್ಚು ಮಾಡಿಕೊಂಡು ಆ ಹುದ್ದೆಗೆ ಬಂದಿರುವ ನಷ್ಟವನ್ನು ಭರಿಸುವವರಾರು? ಅದೂ ಅಲ್ಲದೆ ಸಂಬಂಧಪಟ್ಟವರಿಗೆ ಮಾಮೂಲಿ ನೀಡದಿದ್ದರೆ ನೀರು ನೆರಳು ಇಲ್ಲದ ಲಾಭವಿಲ್ಲದೆ ಜಾಗಕ್ಕೆ ವರ್ಗಾವಣೆ ಮಾಡಬಹುದೆಂಬ ಭಯವು ಕಾಡುತ್ತಿರುತ್ತದೆ.
ಕೆಲವರಿಗೆ ಅಧಿಕಾರ ಸಿಕ್ಕಿದ ತಕ್ಷಣ ಸ್ನೇಹಿತರಿಗೆ ಹಿತೈಷಿಗಳಿಗೆ ಕೆಲಸ ಮಾಡಿ ಕೊಡಬೇಕೆಂಬ ಒಳ್ಳೆಯ ಮನಸ್ಸು ಇರುತ್ತದೆ.
ಅಂಥವರು ಸ್ನೇಹಿತರ ಮತ್ತು ಹಿತೈಷಿಗಳಿಗೆ ಬೇಗನೇ ಕೆಲಸ ಮಾಡಿ ಕೊಡಬಹುದು.
ಎನ್ ಮುರಳೀಧರ್ ವಕೀಲರು
ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)