ಗ್ರಾಮೀಣ ಬದುಕಿನ ಕಥೆ ವ್ಯಥೆಯಲ್ಲಿ ಯುವಕರ ಪಾತ್ರ – 9

ಗ್ರಾಮೀಣ ವಿದ್ಯಾರ್ಥಿಗಳು ಹಿಂದುಳಿಯಲು ಅನೇಕ ಕಾರಣಗಳಿವೆ

ಮೊದಲನೆಯದಾಗಿ ವಿದ್ಯಾರ್ಥಿಗಳು ಓದುವುದಕ್ಕೆ ಮನೆಯ ಪರಿಸರ ವಾತಾವರಣ
ಬಹಳ ಮುಖ್ಯವಾದ ಸಂಗತಿ. ಹೆತ್ತವರು ಮಕ್ಕಳಿಗೆ ಓದಲು ಉತ್ತೇಜನ ನೀಡಿದರೆ ಮಕ್ಕಳು ಓದಿ ಬುದ್ದಿವಂತರಾಗುತ್ತಾರೆ. ಅಕಸ್ಮಾತ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಓದಿದ್ದು ಸಾಕು ಹೊಲದ ಕೆಲಸ ಮಾಡಿಕೊಂಡಿರು ಎಂದು ನಿರುತ್ಸಾಹ ಮೂಡಿಸಬಾರದು. ಮಕ್ಕಳು ಅನುತ್ತೀರ್ಣರಾಗುವುದಕ್ಕೆ ಕಾರಣ ತಿಳಿದುಕೊಂಡು ಸಮಸ್ಯೆ ಬಗೆಹರಿಸಿದರೆ ಮಕ್ಕಳು ಮುಂದುವರೆಯಲು ಅನುಕೂಲವಾಗುತ್ತದೆ. ಕೆಲವು ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆ ಇರಬಹುದು. ಅಥವಾ ಶಿಕ್ಷಕರು ಹೇಳುವುದು ಅರ್ಥವಾಗದೇ ಇರಬಹುದು. ಹಳ್ಳಿಗಳಲ್ಲಿ ಮನೆ ಪಾಠ ಹೇಳಿಕೊಡುವವರು ಅಷ್ಟಾಗಿ ಇರುವುದಿಲ್ಲ. ಬೆಳಿಗ್ಗೆ ಶಾಲೆಗಳಲ್ಲಿ ಪಾಠ ಹೇಳಿಕೊಡುವ ಶಿಕ್ಷಕರು ಬೇರೆ ಊರುಗಳಿಂದ ಬಂದು ಪಾಠ ಮುಗಿಸಿ ಸಂಜೆಯಾಗುತ್ತಲೇ ಅವರವರ ಊರುಗಳಿಗೆ ತೆರಳಬಹುದು. ಒಂದೇ ಊರಿನಲ್ಲಿದ್ದು ಶಾಲೆಗಳಲ್ಲಿ ಪಾಠ ಹೇಳಿಕೊಡುವ ಶಿಕ್ಷಕರು ಇರುವುದು ಬಹಳ ಅಪರೂಪವೇ ಆಗಿರುತ್ತದೆ. ಕೆಲವು ಶಿಕ್ಷಕರು ಒಂದೇ ಊರಿನಲ್ಲಿದ್ದು ವಿದ್ಯಾರ್ಥಿಗಳಿಗೆ ಒಳ್ಳೆಯ ಮಾರ್ಗದರ್ಶನ ನೀಡುವ ಹೃದಯವಂತ ಉಪಾದ್ಯಾಯರುಗಳಿಗೇನೂ ಕಡಿಮೆ ಇಲ್ಲ. ಬೇರೆ ಊರಿನಲ್ಲಿ ಪಾಠ ಮಾಡಿಬಂದು ತಮ್ಮ ಊರಿನಲ್ಲಿರುವ ವಿದ್ಯಾರ್ಥಿಗಳಿಗೆ ಸಂಜೆಯಾದೊಡನೆ ಯಾವುದೇ ಶುಲ್ಕ ಪಡೆಯದೆ ಟ್ಯೂಶನ್ ಹೇಳಿಕೊಡುವವರೂ ಸಹ ಇದ್ದಾರೆ. ನಾವು ಹೇಗೆ ಪಾಠ ಮಾಡಿದರೂ ಸರ್ಕಾರ ವೇತನ ನೀಡುತ್ತದೆ ಎಂದು ಕೇವಲ ಉದ್ಯೋಗ ಮಾಡುವಂತಹ ಶಿಕ್ಷಕರಾಗಬಾರದು. ಶಿಕ್ಷಕರ ಕೈಯಲ್ಲಿ ಹಲವಾರು ವಿದ್ಯಾರ್ಥಿಗಳ ಭವಿಷ್ಯವೇ ಅಡಗಿರುತ್ತದೆ. ಎಲ್ಲಾ ವಿದ್ಯಾರ್ಥಿಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವು ಹುಡುಗರು ಒಂದು ಸಲ ಹೇಳಿದರೆ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಎರಡು ಸಲ ಕೇಳಿದರೂ ಅರ್ಥವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಕರನ್ನು ಪುನಃ ಕೇಳಿದರೆ ಇನ್ನೆಲ್ಲಿ ಕೋಪಿಸಿಕೊಳ್ಳುತ್ತಾರೋ ಎಂಬ ಆತಂಕದಿಂದ ಸುಮ್ಮನಾಗುತ್ತಾರೆ. ಪರೀಕ್ಷೆಯಲ್ಲಿ ಆ ಪ್ರಶ್ನೆಗಳಿಗೆ ಉತ್ತರಿಸದೆ ಕಡಿಮೆ ಅಂಕ ಪಡೆಯಬಹುದು. ಆಗ ವಿದ್ಯಾರ್ಥಿಗಳು ಆ ಪಾಠವೇ ಅರ್ಥವಾಗಲಿಲ್ಲ. ಪುನಃ ಉಪಾದ್ಯಾಯರನ್ನು ಕೇಳಲಾಗಲಿಲ್ಲ ಎಂದು ಹೇಳಿದರೆ ಶಿಕ್ಷಕರು ಮತ್ತು ಹೆತ್ತವರು ಪಶ್ಘಾತ್ತಾಪ ಪಡುವಂತಾಗುತ್ತದೆ. ವಿದ್ಯಾರ್ಥಿಗಳು ತಮಗೆ ಆರ್ಥವಾಗದೇ ಇರುವ ವಿಷಯಗಳನ್ನು ಉಪಾದ್ಯಾಯರುಗಳಲ್ಲಿ ಕೇಳಿ ತಿಳಿದುಕೊಳ್ಳಬೇಕು. ಅರ್ಥವಾಗದಿದ್ದರೆ ಕಂಠಪಾಠ ಮಾಡಿಕೊಂಡು ಪರೀಕ್ಷೆಯಲ್ಲಿ ಬರೆಯಬಹುದು ಆದರೆ ಜ್ಞಾನ ವಧ್ದಿಸುವುದಿಲ್ಲ. ಅನುಕೂಲ ವಿರುವ ವಿದ್ಯಾರ್ಥಿಗಳು ಮನೆ ಪಾಠಕ್ಕೆ ಹೋಗಿ ಶಾಲೆಯಲ್ಲಿ ಅರ್ಥವಾಗದೇ ಇರುವ ಪಾಠವನ್ನು ಪುನಃ ಕೇಳಿ ಅರ್ಥೈಸಿಕೊಂಡು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು. ಈಗಿನ ಕಾಲದಲ್ಲಿ ಶಿಕ್ಷಕರಿಗೆ ಪಾಠ ಹೇಳಿಕೊಡುವುದಕ್ಕಿಂತ ಹೆಚ್ಚಾಗಿ ಪಠ್ಯೇತರ ಕೆಲಸಗಳೇ ಜಾಸ್ತಿ ಎಂದು ಕೇಳಿದ್ದೇವೆ. ಹೊರ ಊರುಗಳಿಂದ ಬರುವ ಶಿಕ್ಷಕರುಗಳು ಬಸ್ಸುಗಳನ್ನು ಹಿಡಿದು ಶಾಲೆಗಳಿಗೆ ಬಂದು ಪುನಃ ಸಂಜೆ ವಾಪಸ್ ಹೋಗುವವರಿರುತ್ತಾರೆ. ಅಷ್ಟಾಗಿ ವಾಹನ ಸೌಲಭ್ಯವಿಲ್ಲದಿದ್ದರೆ ವಾಹನ ಹಿಡಿದು ಬರುವುದೇ ಸಾಹಸವಾಗಿರುತ್ತದೆ. ಈಗಿನ ಕಾಲದಲ್ಲಿ ಬಸ್ ಸೌಲಭ್ಯ ಹೆಚ್ಚು ಕಡಿಮೆ ಎಲ್ಲಾ ಕಡೆಗೂ ಇರಬಹುದು. ಕಿರಿದಾದ ರಸ್ತೆಗಳು ಇರುವ ಕಡೆ ಹಾಗೂ ರಸ್ತೆಗಳಿಂದ ದೂರ ಇರುವ ಹಳ್ಳಿಗಳಿಗೆ (Interior) ಸ್ವಲ್ಪ ದೂರ ನಡೆದುಕೊಂಡು ಹೋಗಬೇಕಾಗುತ್ತದೆ. ಕೆಲವು ಉಪಾದ್ಯಾಯರುಗಳು ಸ್ವಂತ ವಾಹನಗಳಲ್ಲಿ ಬಂದು ಹೋಗುವುದರಿಂದ ಸ್ವಲ್ಪ ತಡವಾದರೂ ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಪರಿಹರಿಸಹಬಹುದು.

RELATED ARTICLES  ಈತನ‌ ಮೂಗಿನ ಉದ್ದದ ಬಗ್ಗೆ ಕೇಳಿದ್ರೆ ನೀವು ಒಮ್ಮೆ ಅಬ್ಬಾ ಅಂತೀರಿ...!

ಮುರಳಿಮಂಗಲಧರೆ