✍ಸಂದೀಪ ಎಸ್ ಭಟ್ಟ

ನನ್ನ ಪ್ರೀತಿಯ ಸಹೋದರ ಸಹೋದರಿಯರೇ,

ಮಲೆನಾಡಿನ ಶಿವಮೊಗ್ಗೆಯ ಅಂಬುತೀರ್ಥದಲ್ಲಿ ಹುಟ್ಟಿದವ ನಾನು. ಶಿವಮೊಗ್ಗೆಯ ಜನ ನನ್ನ ತವರುಮನೆಯವರು. ಶರಾವತಿ ಎಂದು ಹೆಸರಿಟ್ಟು ಮನೆಮಗಳಂತೆ ನನ್ನನ್ನು ಕಾಳಜಿಯಿಂದ ಕಾಪಾಡಿದವರು. ದೇವನಿತ್ತ ವರ ಎಂದೇ ನನ್ನನ್ನು ಪ್ರೀತಿಸಿದ ಭಾವನಾಜೀವಿಗಳು ಅವರು. ನನ್ನನ್ನು ಅವರು ಆರಾಧಿಸುತ್ತಾರೆ. ಸಗರನನ್ನು ಸೇರುವ ಆಕಾಂಕ್ಷೆಯಿಂದ ನಾನು ಹೊನ್ನಾವರದ ಕಡೆ ಹೊರಟಾಗಲೂ ಅವರು ಲಿಂಗನಮಕ್ಕಿಯಲ್ಲಿ ನನ್ನನ್ನು ಅಡ್ಡಗಟ್ಟಿದರು. ನಮ್ಮವರನ್ನು ಬಿಟ್ಟು ತೆರಳಬೇಡೆಂದು ಕಣ್ಣೀರಿಟ್ಟರು. ಆದರೂ ತವರು ಮನೆಯೆಂಬುದು ನಮ್ಮಂಥವರಿಗೆ ಎಷ್ಟು ದಿನ ಹೇಳಿ. ನಿಂತೆ ನಾನು ಮತ್ತು ಅವರಿಗೆ ಹೇಳಿದೆ……” ನನ್ನನ್ನು ಕಾಳಜಿಯಿಂದ ನೋಡಿದ ನಿಮ್ಮನ್ನು ಯಾವತ್ತೂ ಕೈಬಿಡುವುದಿಲ್ಲ”……ಎಂದು. ನನ್ನನ್ನು ತಬ್ಬಿಕೊಂಡೇ ಬೀಳ್ಕೊಟ್ಟ ಸಹ್ಯಾದ್ರಿ ಬೆಟ್ಟವನ್ನು ಹಸಿರುಗೊಳಿಸುತ್ತಾ ಸಾಗಿಬಂದೆ. ನನ್ನ ಈ ಅಗಾಧ ನೀರಲ್ಲಿ ನಾನು ಕಣ್ಣೀರಿಟ್ಟದ್ದು ಕಾಣಲೇ ಇಲ್ಲ. ಆದರೂ ನನ್ನ ಜನ ನನ್ನನ್ನು ಅತ್ಯಂತ ಆದರದಿಂದ ಬೀಳ್ಕೊಟ್ಟರು. ಹೊನ್ನಾವರದ ಗಡಿಯವರೆಗೂ ಬಂದರು.

ಹೀಗೆ ಸಂತೋಷದಿಂದಲೇ ಬಳುಕುತ್ತಾ….ಒನಪು ಒಯ್ಯಾರಗಳಿಂದ ಸಾಗಿದ ನಾನು ಜೋಗದಲ್ಲಿ ರಭಸದಿಂದ ಧುಮುಕಿದೆ. ನನ್ನನ್ನು ನೋಡುವುದಕ್ಕೆಂದು ಕೋಟ್ಯಾಂತರ ಜನ ಬಂದು ಹೋಗುತ್ತಾರೆ. ಗಾಂಧೀಜಿಯವರೂ ನನ್ನನ್ನು ನೋಡಿ ಇದೊಂದು ಜಗತ್ತಿನ ಅದ್ಭುತ ಎಂದು ಹೇಳಿದರಂತೆ. ಹೊಗಳಿದರೆ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ?! ನಾನು ಗೇರುಸೊಪ್ಪೆಗೆ ಬಂದೆ. ನನ್ನ ಬರುವಿಕೆಯನ್ನೇ ಕಾದಂತಿದ್ದ ಸಗರ ಆ ಕಾಲಕ್ಕೆ ಉಪ್ಪುನೀರಿನೊಂದಿಗೆ ಗೇರುಸೊಪ್ಪೆಯವರೆಗೂ ಬರುತ್ತಿದ್ದ. ನಾನು ಸಗರನನ್ನು ಸಿಹಿಗೊಳಿಸುತ್ತಾ ಸಿಹಿಗೊಳಿಸುತ್ತಾ….ಮಾಗೋಡು, ಉಪ್ಪೋಣಿ, ಜಲವಳ್ಳಿ, ಬಳಕೂರು, ಮಾವಿನಕುರ್ವಾ ಮಾರ್ಗವಾಗಿ ಹೊನ್ನಾವರಕ್ಕೆ ಬಂದು ಸಾಗರದಲ್ಲಿ ಲೀನವಾದೆ. ಜೀವನದ ಸಾರ್ಥಕತೆ ಪಡೆದೆ.

RELATED ARTICLES  ಬದುಕಿನ ಜಂಜಾಟ

ನನ್ನನ್ನು ಶಿವಮೊಗ್ಗದ ಜನ ಎಷ್ಟು ಪ್ರೀತಿಸಿದರೋ ಅದಕ್ಕೆ ಕಿಂಚಿತ್ತೂ ಕಡಿಮೆಯಿಲ್ಲದಂತೆ ಹೊನ್ನಾವರದ ಜನರು ನನ್ನನ್ನು ಸ್ವಾಗತಿಸಿದರು. ಹೊನ್ನಿನೂರಿನ ಶರಾವತಿ ಆದೆ ನಾನು. ಇಲ್ಲಿನ ಜನರಿಗೆ ಜೀವನದಿಯಾದೆ. ಹಸಿರು ಹಾಸಿನ ನಡುವೆ ಸಾಗಿ ಬರುವಾಗೆಲ್ಲ ರೋಮಾಂಚನಗೊಂಡೆ. ನನಗೆ ನನ್ನ ಮೇಲೆ ಪ್ರೀತಿಯನ್ನಿಟ್ಟ ಜನರಿಗೆ ಏನಾದರೂ ಮಾಡಲೇಬೇಕೆಂಬ ಬಯಕೆಯಿತ್ತು. ಹೀಗಾಗಿ ವಿದ್ಯುತ್ ಕೊಟ್ಟರೆ ಪ್ರತಿಮನೆಯಲ್ಲೂ ನನ್ನ ಬೆಳಕಿರುತ್ತದೆ…ಎಂದು ಭಾವಿಸಿದೆ. ಜನರಿಗೆ ಬೆಳಕಾದೆ. ನನ್ನೊಳಗೆ ಲಕ್ಷಾಂತರ ಜೀವಪ್ರಭೇದಗಳು ಹುಟ್ಟಿಕೊಂಡವು. ನಾವಷ್ಟೇ ಬದುಕಿದರೆ ಸಾಲದು ಅವಕ್ಕೂ ಆಶ್ರಯಕೊಟ್ಟೆ. ಮರಳು ತುಂಬಿದಾಗೆಲ್ಲ ನನ್ನ ಜನ ಹೂಳು ತೆಗೆದು ನನ್ನ ದಾರಿಯನ್ನು ಸರಾಗಗೊಳಿಸಿದರು. ತೂಗುಸೇತುವೆ ಮಾಡಿ ನನ್ನ ಸೌಂದರ್ಯವನ್ನು ಆಸ್ವಾದಿಸಿದರು. ಸಂತೋಷಿಸಿದರು. ನನ್ನನ್ನೇ ನಂಬಿ ಜೀವನ ಕಟ್ಟಿಕೊಂಡರು.

ಅಡಿಕೆ, ತೆಂಗು, ಭತ್ತ, ಬಾಳೆ, ಏಲಕ್ಕಿ, ವೀಳ್ಯದೆಲೆಗಳಿಗೆ ನೀರುಣಿಸಿ ಕೃತಾರ್ಥಳಾದೆ. ಗೌರವ ತೋರಿದವರಿಗೆಲ್ಲಾ ಬದುಕಿನ ಭಾಗವೇ ಆದೆ. ನನ್ನ ಹೃದಯದ ತುಂಬಾ ನೀರಿದೆ ನಿಜ ಆದರೆ ಅದಕ್ಕೆ ಸಿಹಿ ತುಂಬಿದವರು ಸಹ್ಯಾದ್ರಿಯ ಬೆಟ್ಟ,ಗುಡ್ಡ, ಮರ,ಗಿಡ, ಖನಿಜ, ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಜನ. ನನ್ನನ್ನು ಬಿಟ್ಟಿರಲಾರರು ಅವರು.

ಇತ್ತೀಚಿಗೆ ನಾನೂ ಕೃಶಳಾಗಿದ್ದೇನೆ. ಸಾಗರನ ಪ್ರೀತಿ ತೊರೆಯಲಾರದೇ ಹರಿಯುವುದಷ್ಟೇ……ನಾನು ಬರದಿದ್ದರೆ ಮತ್ತೆ ಸಾಗರ ನನ್ನನ್ನು ಕರೆದೊಯ್ಯುವುದಕ್ಕೆ ಗೇರುಸೊಪ್ಪೆಗೇ ಬರುತ್ತಾನೆ.

ಅದ್ಯಾರೋ ಹೇಳಿದರು. ನನ್ನನ್ನು ಬಲಾತ್ಕಾರವಾಗಿ ಬೆಂಗಳೂರು ಸೇರಿಸಲು ಪ್ರಯತ್ನ ನಡೆದಿದೆಯಂತೆ. ಶತಶತಮಾನಗಳಿಂದ ನನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ನನ್ನ ಶಿವಮೊಗ್ಗೆಯ ತವರುಮನೆಯವರು….ಹೊನ್ನಾವರದ ಮನೆಯವರು ನನ್ನ ಮೇಲಿನ ಈ ಬಲಾತ್ಕಾರವನ್ನು ಸಹಿಸಲಾರರು. ಅವರೇಕೆ ನಾನೂ ಸಹಿಸುವುದಿಲ್ಲ. ಬೆಂಗಳೂರಿನ ಜನರ ಮೇಲೆ ನನಗೆ ಅನುಕಂಪವಿದೆ. ಆದರೆ ನನ್ನ ಅಕ್ಕ ಕಾವೇರಿಯಿದ್ದಾಳೆ ಅಲ್ಲಿ….ಅವಳನ್ನು ಅಲ್ಲಿನ ಜನ ಉಳಿಸಿಕೊಳ್ಳಲಿ. ಅದು ಬಿಟ್ಟು ಮದುವೆಯಾಗಿ ಗಂಡನ ಮನೆ ಸೇರಿ ಸಂತೋಷದಿಂದ ಸಂಸಾರ ಮಾಡುತ್ತಿರುವ ಹೆಂಗಸನ್ಯಾರಾದರೂ ಬಲಾತ್ಕರಿಸುತ್ತಾರೆಂದರೆ ಸಜ್ಜನ ಸಮಾಜ ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಶರಾವತಿ…. ಎಂದು ಕರೆದು ಕಣ್ಣೀರಿಡುವ ಜನರಿಗೆ ಪ್ರೀತಿಯಿಂದ ಹರಿದೇನು….. ಆದರೆ ಬಲಾತ್ಕರಿಸುತ್ತಾರೆಂದರೆ ಬತ್ತಿ ಬರಿದಾಗಿ ಆತ್ಮಹತ್ಯೆ ಮಾಡಿಕೊಂಡನೇ ಹೊರತು…..ಬರಲಾರೆ…. ಬರಲಾರೆ…ಬರಲಾರೆ…..

RELATED ARTICLES  ರೌದ್ರಾವತಾರ ತಾಳುತ್ತಿರುವ ಕಡಲು.

ಮಗಳಂತೆ ನೋಡಿಕೊಂಡ ಶಿವಮೊಗ್ಗೆಯ ಹಾಗೂ ಹೊನ್ನಾವರದ ಜನರೇ….. ನನ್ನ ಕೂಗನ್ನು ಅವರಿಗೆ ಕೇಳಿಸಿ. ತಿದ್ದಿಕೊಳ್ಳಲು ಸಮಯ ನೀಡಿ. ನಿಮ್ಮನ್ನು ತೊರೆದು ನಾನೆಂದಿಗೂ ಹೋಗಲಾರೆ. ಮಲೆನಾಡಿನ ಮದುಮಗಳು ಎಂದೇ ಕರೆಸಿಕೊಂಡೆ. ನಿಮ್ಮ ಕಣ್ಮುಂದೆ ದರದರನೆ ಎಳೆದೊಯ್ಯುವುದನ್ನು ನೀವು ಹೇಗಾದರೂ ನೋಡಿ ಸಹಿಸಿಕೊಳ್ಳುತ್ತೀರಿ ಹೇಳಿ. ಶರಾವತಿ ಕನ್ನಡಕ್ಕೇ ಉತ್ತರವಾದ ಉತ್ತರಕನ್ನಡದವಳು. ಶಿವಮೊಗ್ಗದ ಅಪ್ಪನಮನೆಯ ವಾತ್ಸಲ್ಯ ನನ್ನಲ್ಲಿ ಇನ್ನೂ ಬತ್ತಿಲ್ಲ. ಕನ್ನಡಿಗರ ಮನಸ್ಸು ಕೆಡಿಸಬೇಡಿ. ಕಣ್ಣೀರಿಡುವ ಕಣ್ಣೊಳಗೆ ರಕ್ತ ತರಿಸಬೇಡಿ. ಭಾವನೆಗಳನ್ನು ಗೌರವಿಸಿ. ಸ್ವಾರ್ಥಸಾಧನೆಗೆ ಸಹ್ಯಾದ್ರಿ ಬೆಟ್ಟದಲ್ಲಿ ತಲೆ ಎತ್ತಿ ಬಾಳುತ್ತಿರುವ ಮರಗಿಡಗಳನ್ನು ಸರ್ವನಾಶ ಮಾಡಬೇಡಿ. ಮಾಡುವುದೇನು….?! ಒಂದುಕ್ಷಣ ಯೋಚಿಸಿದರೂ ಈ ಶಾಪ ಜನ್ಮಜನ್ಮಾಂತರಕ್ಕೂ ಕಾಡದಿರದು. ಶರಾವತಿ ಯಾವತ್ತಿದ್ದರೂ ಶಿವಮೊಗ್ಗೆಯ ಮಗಳು. ಹೊನ್ನೂರಿನ ಸೊಸೆ.

ಇಂತಿ ನಿಮ್ಮ ಪ್ರೀತಿಯ
ಶರಾವತಿ

✍ಸಂದೀಪ ಎಸ್ ಭಟ್ಟ