ನಾವು ಬ್ರಿಟೀಷರ ಕಾಲದಲ್ಲಿಲ್ಲವಲ್ಲ. ಹೊಸದಾಗಿ ಸೇರಿದ ಸೈನಿಕರಿಗೆ ಹೆಚ್ಚು ಸಂಬಳ…..ಹೆಚ್ಚು ಗೌರವ….. ಸೇವೆಗೆ ಸೇರಿ ಬಹಳ ವರ್ಷವಾದ ಭಾರತೀಯ ಸೈನಿಕರಿಗೆ ಕಡಿಮೆ ಗೌರವ ಕಡಿಮೆ ಸಂಬಳ..ಪ್ರತಿಭಟಿಸಿದವರಿಗೋ ಘೋರ ಶಿಕ್ಷೆ. ನಾವು ಪ್ರಜಾಪ್ರಭುತ್ವದಲ್ಲಿದ್ದೇವೆಯೇ  ಎಂಬ ಸಂಶಯ ಮತ್ತೊಮ್ಮೆ ಕಾಡುವ ಪರಿಸ್ಥಿತಿ ಎದುರಾಗಿದೆ. ಈಗ ಸೈನಿಕರ ಪರಿಸ್ಥಿತಿ ಎದುರಾಗಿರುವುದು ಕರ್ನಾಟಕದ ಲಕ್ಷಾಂತರ ಶಿಕ್ಷಕರಿಗೆ.

         ಆಯಾಯಾ ಕಾಲಕ್ಕೆ ಅವಶ್ಯಕತೆಗೆ ತಕ್ಕಂತೆ ಶಿಕ್ಷಕರ ನೇಮಕವಾಯಿತು. ಎಸ್ ಎಸ್ ಎಲ್ ಸಿ ಯ ಮೇಲೆಯೇ ಶಿಕ್ಷಕರಾದವರಿದ್ದಾರೆ. ಪಿ.ಯು.ಸಿ. ಮೇಲೆ ಶಿಕ್ಷಕರಾದವರೂ ಇದ್ದಾರೆ. ಇದೀಗ ಸರ್ಕಾರ ಪದವಿಯಾದವರನ್ನು ಶಿಕ್ಷಕರಾಗಿ ನೇಮಕಗೊಳಿಸುತ್ತಿದೆ. ವಿದ್ಯಾರ್ಹತೆ ಈಗ ಹೆಚ್ಚಿರಬಹುದು ನಿಜ…ಆದರೆ ಆ ಕಾಲಕ್ಕೆ ಎಸ್ ಎಸ್ ಎಲ್ ಸಿ ಯೂ ಈಗಿನ ಪದವಿಗಿಂತ ಹೆಚ್ಚಾಗಿತ್ತು ಎಂಬುದನ್ನು ನಾವು ಎಷ್ಟು ಬೇಗ ಮರೆತುಬಿಟ್ಟೆವು. ಎಸ್ ಎಸ್ ಎಲ್ ಸಿ ಪರೀಕ್ಷೆ ಪಾಸಾಗುವುದೇ ಒಂದು ಸವಾಲಾಗಿದ್ದ ಕಾಲ ಅದು. ನಂತರ ಪಿ.ಯು.ಸಿ. ಇಂಟರ್ನಶಿಪ್ ಕೋರ್ಸ ಬಂತು. ಆನಂತರದಲ್ಲಿ ಟಿ.ಸಿ.ಹೆಚ್ ಅನ್ನು ಶಿಕ್ಷಕರ ನೇಮಕಾತಿಯ ಮಾನದಂಡವಾಗಿ ಇರಿಸಲಾಯಿತು. ಟಿ.ಸಿ.ಹೆಚ್. ಎನ್ನುವ ಎರಡು ವರ್ಷದ ಕೋರ್ಸ ಡಿ.ಎಡ್ ಆಗಿ ಬದಲಾಯಿತು. ಎಲ್ಲವೂ ಯೋಗ್ಯ ಶಿಕ್ಷಕರನ್ನು ರೂಪುಗೊಳಿಸುವುದಕ್ಕೆಂದೇ ಆದ ಬದಲಾವಣೆಗಳು. ಆಯಾಯಾ ಕಾಲದಲ್ಲಿ ಅವರವರ ವಿದ್ಯಾರ್ಹತೆಯ ಆಧಾರವನ್ನೇ ಮಾನದಂಡವಾಗಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮಾಡಿದ ಸರ್ಕಾರ ಇದೀಗ ಏಕಾಏಕಿ ಆ ಎಲ್ಲಾ ಶಿಕ್ಷಕರಿಗಿಂತ ಈಗ ಹೊಸಬರಾಗಿ ಬರುವ ಪದವೀಧರ ಶಿಕ್ಷಕರೇ ಉತ್ತಮ ಎಂದು ಪರಿಗಣಿಸಿ ಅವರಿಗೆ ಜಿ.ಪಿ.ಟಿ ಎಂಬ ಮರುನಾಮಧೇಯ ಇಟ್ಟು 2014 ನೇ ಇಸವಿಗಿಂತ ಮೊದಲು ನೇಮಕವಾದ ಎಲ್ಲಾ ಶಿಕ್ಷಕರೂ 1-5 ನೇ ತರಗತಿಗೆ ಮೀಸಲು ಎಂಬ C and R ಕಾಯಿದೆಯನ್ನು ಜಾರಿಗೆ ತಂದಿತು.

RELATED ARTICLES  ಕಳೆದುಹೋದ ಎಳೆಯ ದಿನಗಳು ಭಾಗ ೨೦

          ವ್ಯಕ್ತಿಯ ವ್ಯಕ್ತಿತ್ವ, ಬೋಧನಾಕ್ರಮ, ಪ್ರತಿಭೆ, ಪ್ರಜ್ಞೆ, ಕಾಳಜಿ ಇವೆಲ್ಲವೂ ಅವರವರ ಪದವಿಗಳ ಮೇಲೆ ನಿರ್ಧರಿತವಾಗುವುದಲ್ಲ. ಅನುಭವಕ್ಕೂ ಗೌರವವಿದೆ. ಆದರೂ ಈ ಮೊದಲೇ ನೇಮಕಗೊಂಡ ಲಕ್ಷಾಂತರ ಶಿಕ್ಷಕರು ಪದವಿ, ಸ್ನಾತಕೋತ್ತರ ಪದವಿ, ಎಂ.ಫಿಲ್, ಪಿ.ಹೆಚ್.ಡಿ, ಮುಗಿಸಿದವರಿದ್ದರೂ ಅವರನ್ನು ಮೂಲೆಗುಂಪು ಮಾಡಿ ಹೊಸಬರ ಕೈಕೆಳಗೆ ಕೆಲಸ ಮಾಡುವ ಪರಿಸ್ಥಿತಿ ಎದುರಾದದ್ದು ಸತ್ಯ.

         ಈ ಅವೈಜ್ಞಾನಿಕ ಕ್ರಮದಿಂದ ಇಂದು ಲಕ್ಷಾಂತರ ಪ್ರಾಥಮಿಕ ಶಾಲಾ ಶಿಕ್ಷಕರು ಹಿಂಸೆಯನ್ನನುಭವಿಸುತ್ತಿದ್ದಾರೆ. ತಮ್ಮೆದುರಿನ ವಿದ್ಯಾರ್ಥಿಗಳು ತಮಗಿಂತ ದೊಡ್ಡ ಹುದ್ದೆಗೆ ಹೋಗಲಿ ಎಂದು ಅತ್ಯಂತ ಪ್ರೀತಿಯಿಂದ ಕಲಿಸಿದ್ದಕ್ಕೆ ದೊಡ್ಡಹುದ್ದೆಯಲ್ಲಿದ್ದವರು ನೀಡಿದ ಉಡುಗೊರೆಯೇ ಇದು?!

    ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಲಿ. ಅನುಭವಕ್ಕೂ ಗೌರವ ಸಲ್ಲಲಿ. ಹಳೆಯವರಾದರೆಂದು ಮನೆಯಲ್ಲಿದ್ದ  ಅಜ್ಜ ಅಜ್ಜಿಯರನ್ನು ಹೀಯಾಳಿಸಿ ಹೊಸಬರನ್ನಷ್ಟೇ ಹೆಚ್ಚು ಪ್ರೀತಿಸಿದರೆ ಹೇಗೆ?! ಅಷ್ಟಕ್ಕೂ ಆ ಎಲ್ಲಾ ಶಿಕ್ಷಕರೂ ಹೊಸಬರಿಗಿಂತ ಮೊದಲು ಹುಟ್ಟಿದ್ದೇ ತಪ್ಪಾ?! ಹಾಗೆ ನೋಡಿದರೆ 2014 ರ ಮೊದಲು ಸೇರ್ಪಡೆಯಾದವರೂ ಸಿ.ಇ.ಟಿ. ಪರೀಕ್ಷೆ ಎದುರಿಸಿಯೇ ನೇಮಕವಾದವರು.

RELATED ARTICLES  ಸದಾ ಸ್ಮರಿಸು ಅವನ


       ನಾವು ಅತ್ಯಂತ ವಿನಮ್ರತೆಯಿಂದ ಕೇಳಿಕೊಳ್ಳುವುದಿಷ್ಟೇ ಅನ್ಯಾಯವನ್ನು ಮನವರಿಕೆ ಮಾಡಿದ್ದೇವೆ. ತಕ್ಷಣಕ್ಕೆ ತಪ್ಪಾದುದನ್ನು ಸರಿಪಡಿಸಿ ನ್ಯಾಯ ಒದಗಿಸಿ. ಪದವಿಯನ್ನು 2014 ರ ಮೊದಲು ನೀಡಿದ್ದೂ ಯುನಿವರ್ಸಿಟಿಗಳೇ…..ನಂತರ ನೀಡಿದ್ದೂ ಅವೇ…… ಮೊದಲು‌ ಹುಟ್ಟಿದ್ದೇ ಶಿಕ್ಷಕರ ತಪ್ಪಾ? ದಯವಿಟ್ಟು ಶಿಕ್ಷಕರ ಮನನೋಯಿಸಬೇಡಿ. ನಾವು ಯಾರೊಬ್ಬರ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಅನ್ಯಾಯದ ವಿರುದ್ಧವಷ್ಟೇ ನಮ್ಮ ಪ್ರತಿಭಟನೆ. ದಂಪತಿಗಳನ್ನು ಸೇರಿಸಲು ಅನುವು ಮಾಡಿಕೊಡಿ. ನಿವೃತ್ತಿಯ ಅಂಚಿಗೆ ಸಂದರೂ ಒಂದೇ ಒಂದು ಭಡ್ತಿ ನೀಡದೆ ಹಾಗೆಯೇ ದುಡಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ. ಒಂದಿಷ್ಟು ಜನರಿಗೆ ಪೆನ್ಷನ್ ಇನ್ನಷ್ಟು ಜನರಿಗೆ ಇಲ್ಲ ಎಂಬುದು ಸರಿಯೇ?! ದಯವಿಟ್ಟು ಶಿಕ್ಷಕರನ್ನು ಮುಕ್ತ ಚರ್ಚೆಗೆ ಆಹ್ವಾನಿಸಿ. ಸೇವೆಗೆ ತಕ್ಕ ಸಂಬಳ ಸಿಗಲಿ. ನಮ್ಮ ನಮ್ಮಲ್ಲೇ ಒಡಕು ಬರುವ ವ್ಯವಸ್ಥೆ ನಮಗೆ ಬೇಕಾಗಿಲ್ಲ. ಪ್ರತಿ ಇಲಾಖೆಯಲ್ಲೂ ಎರಡು ಮೂರು ಭಡ್ತಿ ಸಿಗುತ್ತದೆ. ಆದರೆ ಪ್ರಾಥಮಿಕ ಶಾಲಾ ಶಿಕ್ಷಕ ಮಾತ್ರ ಅವನಷ್ಟಕ್ಕೆ ಅವನು ಪಾಲಿಗೆ ಬಂದದ್ದೇ ಪಂಚಾಮೃತ ಎಂದು 30-40 ವರ್ಷ ಒಂದೇ ಹುದ್ದೆಯಲ್ಲಿ ದುಡಿಯಬೇಕು. ಬಿ.ಇಡಿ ಪಡೆದು ಅದೆಷ್ಟೋ ವರ್ಷಗಳಾದವು ಹಲವರಿಗೆ ಆದರೆ ಬರೀ ಕೊರಳು ಉದ್ದ ಮಾಡಿದ್ದೇ ಬಂತು. ನಿಷ್ಕ್ರಿಯವಾದ ವ್ಯವಸ್ಥೆ. ಎಷ್ಟು ಬಾರಿ ಕೂಗಿ ಹೇಳಬೇಕು ಅದನ್ನಾದರೂ ಹೇಳಿ.
       ‌
✍ನೊಂದ ಶಿಕ್ಷಕರು