ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 41

ಎಲ್ಲರಿಗೂ ಸ್ವಾಭಿಮಾನ ಮತ್ತು ವೈಯುಕ್ತಿಕವಾಗಿ ತನ್ನ ಹುದ್ದೆಗೆ ತಕ್ಕಂತೆ ಅಭಿಮಾನವಿರುತ್ತದೆ. ಒಬ್ಬ ಮನುಷ್ಯ ಒಂದೇ ರೀತಿ ಇದ್ದರೆ ಸ್ನೇಹ ಸಂಬಂಧ ಅದೂ ಸಹ ಒಂದೇರೀತಿ ಇರುತ್ತದೆ. ಆದರೆ ದೊಡ್ಡ ಹುದ್ದೆ ಸಿಕ್ಕಾಗ ದುರಹಂಕಾರಪಟ್ಠರೆ ಯಾರೊಬ್ಬರೂ ಹತ್ತಿರಕ್ಕೆ ಬರುವುದಿಲ್ಲ. ಏಕೆಂದರೆ ಅವರಲ್ಲಿರುವ ಸ್ವಾಭಿಮಾನ ಮನಸ್ಸನ್ನು ಹಿಂದಕ್ಕೆ ಎಳೆಯುತ್ತದೆ. ದುರಹಂಕಾರ ನಿನ್ನಲ್ಲೇ ಇರಲಿ ನೀನೇ ದೊಡ್ಡಮನುಷ್ಯನಾಗಿರು ಎಂದು ದೂರ ಹೋಗಬಹುದು.

ದೊಡ್ಡ ಹುದ್ದೆಗೆ ಏರಿದಾಕ್ಷಣ ಸ್ನೇಹಿತರಲ್ಲಿ ದುರಹಂಕಾರ ಪಡುವ ಜೊತೆಗೆ ಮನೆಯಲ್ಲೂ ಅದೇರೀತಿ ವರ್ತಿಸಿದರೆ ಹೆತ್ತವರು ವಿಧಿ ಇಲ್ಲದೆ ಅನುಸರಿಸಿಕೊಂಡು ಹೋಗಬೇಕಾಗುತ್ತದೆ.

ಕೆಲವರಿಗೆ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಎಲ್ಲರಲ್ಲೂ ವಿಶ್ವಾಸದಿಂದ ಇದ್ದರೂ ಅವರ ಪತ್ನಿ ಮತ್ತು ಮಕ್ಕಳು ದುರಹಂಕಾರದಿಂದ ವರ್ತಿಸಬಹುದು. ಇದರಿಂದ ಯಾರೊಬ್ಬರೂ ಅವರ ಮನೆಕಡೆ ಸುಳಿಯುವುದಿಲ್ಲ. ಅಕಸ್ಮಾತ್ ಏನಾದರೂ ಮಾತನಾಡಬೇಕಿದ್ದರೆ ಅವರ ಕಛೇರಿಗೆ ಹೋಗಿ ಕೆಲವು ಮುಖ್ಯವಾದ ಮಾತುಗಳನ್ನಾಡಬಹುದು. ಆದರೆ ಮೊದಲಿನಂತೆ ಮಾತನಾಡಲು ಅವಕಾಶವಿರುವುದಿಲ್ಲ. ತನ್ನ ಸ್ನೇಹಿತ ದೊಡ್ಡ ಹುದ್ದೆಗೆ ಹೋದರೂ ಸ್ವಲ್ಪವೂ ಅಹಂಕಾರವಿಲ್ಲದೆ ಇದ್ದಾನೆ. ಆದರೆ ಅವನ ಮನೆಯವರನ್ನು ಮಾತನಾಡಿಸಲು ಆಗುವುದಿಲ್ಲ ಎನ್ನಬಹುದು.

RELATED ARTICLES  ಸ್ವಾನುಭವ

ರಾಜಕೀಯದಲ್ಲಿ ದುರಹಂಕಾರ ಪಡಲು ಅವಕಾಶವಿರುವುದಿಲ್ಲ. ತನ್ನ ಬೆಂಬಲಿಗರನ್ನು ವಿಶ್ವಾಸದಿಂದ ನೋಡಿಕೊಳ್ಳಲೇ ಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ.

ಒಟ್ಟಾರೆ ಹೇಳಬೇಕೆಂದರೆ ಸ್ನೇಹ ಸಂಬಂಧಗಳಲ್ಲಿ ಮಾತುಕತೆ ನಿಲ್ಲಲು ಅಸ್ತಿಯಿಂದ ಹಣದಿಂದ ಹಿಡಿದು ಕೆಲವು ಕ್ಷುಲ್ಲಕ ಘಟನೆ, ಮಾತುಗಳಿಂದ ಎಷ್ಟೇ ಹತ್ತಿರದ ಸಂಬಂಧವಿದ್ದರೂ ಅಥವಾ ಎಷ್ಟೇ ಹಳೆಯ ಸ್ನೇಹವಿದ್ದರೂ ಮಾತುಕತೆಗಳು ನಿಂತುಹೋಗುವ ಸಂದರ್ಭಗಳೇ ಹೆಚ್ಚು.

ಮನುಷ್ಯನ ಜೀವನ ಅಶಾಶ್ವತ ಎಂದು ತಿಳಿದಿದ್ದರೂ ಯಾವುದೋ ಒಂದು ಸ್ವಪ್ರತಿಷ್ಠೆಗೆ ಸ್ವಾರ್ಥಕ್ಕೆ ಜೋತುಬಿದ್ದು ಕೆಲವೊಮ್ಮೆ ತನ್ನವರು ತನ್ನ ಸ್ನೇಹಿತರು ಆತ್ಮೀಯರು ಎಂಬುದನ್ನು ಮರೆತು ವಿಲಾಸ ಜೀವನದಲ್ಲಿ ಮೈ ಮರೆತರೆ, ಸತ್ತಮೇಲೆ ಒಬ್ಬರೂ ಕೂಡ ನೆನೆಸಿಕೊಳ್ಳುವುದಿಲ್ಲ. ಬದುಕಿದ್ದಾಗ ತನಗೆ ಕೈಲಾದಷ್ಟು ಜನಗಳಿಗೆ ಉಪಕಾರ ಮಾಡಿದ್ದಲ್ಲಿ ಮಾತ್ರ ದೇಹ ಸುಟ್ಟು ಬೂದಿಯಾದರೂ ಅಥವಾ ಮಣ್ಣಿಗೆ ಹೋದರೂ ನೆನೆಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಸತ್ತಮೇಲೆ ಎಲ್ಲರೂ ಒಳ್ಳೆಯ ವರೇ ಎನ್ನುವಂತೆ ಮನಸ್ಸಿಲ್ಲದಿದ್ದರೂ ಬಲವಂತದಿಂದ ಗುಣಗಾನ ಮಾಡಬಹುದು. ಆ ಗುಣಗಾನ ಕೇವಲ ದೇಹ ಸುಟ್ಟು ಬೂದಿಯಾಗುವವರೆಗೆ ಅಥವಾ ಭೂಮಿಯ ಒಳಗೆ ಹೋಗುವವರೆಗೆ ಮಾತ್ರ ಇರುತ್ತದೆ. ನಂತರ ಮನುಷ್ಯ ಹುಟ್ಟೇ ಇರಲಿಲ್ಲವೆಂಬಂತಾಗುತ್ತದೆ. ಅವರ ಮನೆಗೆ ಮಾತ್ರ ಸೀಮಿತ ವಾಗಿರುತ್ತಾರೆ.

RELATED ARTICLES  ಸಂಚಿತ, ಪ್ರಾರಬ್ಧ ಮತ್ತು ಆಗಾಮಿ ಹೀಗೆ ಕರ್ಮಗಳ ಮೂರುಪ್ರಕಾರವಿವೆ ಎಂದ ಶ್ರೀಧರರು.

ಎನ್ ಮುರಳೀಧರ್ ವಕೀಲರು
ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)