*ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 26*

 ಸಂಸಾರಗಳಲ್ಲಿ ಮನಸ್ಥಾಪ ಬರುವುದೇ ಹೆಚ್ಚಾಗಿ  ಆಸ್ತಿಪಾಸ್ತಿಗಳ ವಿಚಾರಗಳಲ್ಲಿ. ಆದರೆ ನೆಂಟರುಗಳಲ್ಲಿ ಅಂದರೆ ದೊಡ್ಡಪ್ಪ ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ ಸೋದರಮಾವ ಸೋದರತ್ತೆ ಹೀಗೆ ಅನೇಕ ಹತ್ತಿರದ ಸಂಬಂಧಗಳಲ್ಲಿ ಮಾತುಕತೆಗಳು ಅಷ್ಟಾಗಿ ಇರುವುದೇ ಇಲ್ಲ ಎನ್ನಬಹುದು. ಒಬ್ಬೊಬ್ಬರು ಒಂದೊಂದು ಊರಿನಲ್ಲಿರುವುದರಿಂದ ವಿಶೇಷ ಸಂದರ್ಭಗಳಲ್ಲಿ ಮಾತನಾಡಲು ಅವಕಾಶ ಇರುತ್ತದೆ. ಜೊತೆಗೆ ಯಾವುದಾದರೂ ಸಮಾರಂಭ ನಡೆದಾಗ ಅಲ್ಲಿ ಭೇಟಿಯಾದರೆ ಎಲ್ಲಾ ವಿಚಾರಗಳನ್ನು ಮಾತನಾಡುತ್ತಾರೆ. ಸಮಾರಂಭ ಮುಗಿದ ಮೇಲೆ ಅವರವರ ಮನೆಗಳಿಗೆ ಹೋದರೆ ಪುನಃ ಭೇಟಿಯಾದಾಗಲೇ ಮಾತನಾಡಬಹುದು.

ಈಗಿನ ಕಾಲದಲ್ಲಿ ಒಂದು ಅಥವಾ ಎರಡು ಮಕ್ಕಳಿರುವುದರಿಂದ ಮುಂದಿನ ದಿನಗಳಲ್ಲಿ ಅವರ ಮುಂದಿನ ಪೀಳಿಗೆಗಳಿಗೆ ದೊಡ್ಡಪ್ಪ ದೊಡ್ಡಮ್ಮ ಚಿಕ್ಕಪ್ಪ ಚಿಕ್ಕಮ್ಮ ಸೋದರಮಾವ ಸೋದರತ್ತೆ ಅತ್ತಿಗೆ ನಾದಿನಿ ಭಾವ ಭಾಮೈದ ಎಂಬ ಯಾವುದೇ ಸಂಬಂಧಗಳು ಕಾಣಸಿಗುವುದಿಲ್ಲ. ಅವೆಲ್ಲವೂ ನಿಘಂಟಿನಲ್ಲಿ ಹುಡುಕಬೇಕಾಗುತ್ತದೆ. ಅಕ್ಕ ತಮ್ಮ ಅಥವಾ ಅಣ್ಣ ತಂಗಿ ಇದ್ದರೆ ಮಾತ್ರ ಕೆಲವು ಸಂಬಂಧಗಳು ಉಳಿಯಬಹುದಷ್ಟೇ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ -

ಸಂಬಂಧಗಳಲ್ಲಿ ಎಲ್ಲರೂ ಒಟ್ಟಾಗಿ ಇದ್ದಾಗ ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಹಾಗೆಯೇ ಕೆಲವು ಕ್ಷುಲ್ಲಕ ಕಾರಣಕ್ಕೆ ಮನಸ್ಥಾಪ ಬಂದು ಜಗಳವಾಗಿ ಮಾತುಕತೆಗಳು ನಿಲ್ಲುವಂತೆ ಸ್ನೇಹಿತರ ನಡುವೆಯೂ ಅದೆಷ್ಟೋ ವರ್ಷಗಳಿಂದ  ಸ್ನೇಹ ಮತ್ತು ವಿಶ್ವಾಸವಿದ್ದು  ಎಡೆಬಿಡದೆ ಮಾತುಕತೆಯಾಡುತ್ತಿದ್ದರೂ ಸಹ ಕೇವಲ ಒಂದೇ ಒಂದು ಮಾತು, ಸಣ್ಣ ಘಟನೆಯಿಂದ ಅಥವಾ ವಿನಾಕಾರಣ ಮನಸ್ಥಾಪ ಬಂದು ಸ್ನೇಹವೇ ಕೊನೆಗೊಂಡು ಮಾತುಕತೆಗಳು ನಿಂತು ಹೋಗಬಹುದು. ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡಿದ್ದರೆ ಸ್ವಲ್ಪ ದಿವಸ ನೆನಪುಮಾಡಿಕೊಳ್ಳಬಹುದು. ಇಲ್ಲದಿದ್ದಲ್ಲಿ ಅವನಿಂದೇನೂ ಆಗಬೇಕಿಲ್ಲ ಮಾತನಾಡದಿದ್ದರೆ ಏನೂ ನಷ್ಟವಿಲ್ಲವೆಂದು ಸುಮ್ಮನಾಗಬಹುದು.

RELATED ARTICLES  'ಸಂಸಾರದಲ್ಲಿ ಸಮಾಧಾನ ಶ್ರೇಷ್ಟ ಕೀಲಿಕೈ' ಎಂದರು ಶ್ರೀಧರರು.

 ಕೆಲವೊಮ್ಮೆ ಹಲವಾರು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷವಿಲ್ಲದೆ ನಡೆದುಕೊಂಡು ಬಂದಿದ್ದ ಸ್ನೇಹ ಮತ್ತು ಮಾತುಕತೆಗಳು ಕೇವಲ ಒಂದೇ ಒಂದು ಸಣ್ಣ ಬೇಡಿಕೆಯಿಂದ ಕೊನೆಗೊಳ್ಳಬಹುದು. ಸಂಬಂಧಗಳಲ್ಲಿ ಆಸ್ತಿ ವಿಚಾರವಾಗಿ ಮಾತುಕತೆಗಳು ಕೊನೆಗೊಂಡರೆ, ಸ್ನೇಹ ಸಂಬಂಧವೂ ಸಹ ಹಣಕಾಸು ವ್ಯವಹಾರದಲ್ಲಿಯೇ ಕೊನೆಗೊಳ್ಳುತ್ತವೆ ಎಂದರೆ ತಪ್ಪಾಗಲಾರದು. ಯಾವ ಅಪೇಕ್ಷೆ ವ್ಯವಹಾರಗಳಿಲ್ಲದಿದ್ದರೆ ಎಷ್ಟು ವರ್ಷಗಳೂ ಸಹ ಸ್ನೇಹಗಳು ಮುಂದುವರೆಯುತ್ತವೆಯಲ್ಲವೇ?

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)