*ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 30*

ಸಣ್ಣ ಪುಟ್ಟ ಸಾಲುಗಳನ್ನು ನಿಯತ್ತಿನಿಂದ ಬಹುತೇಕ ಎಲ್ಲರೂ ತೀರಿಸಬಹುದು. ಇದರಲ್ಲೂ ಕೆಲವು ಅಪವಾದ ಇರಬಹುದು. ಸಾಲ ಕೊಟ್ಟವರು ದಿನಕಳೆದಂತೆ ವಾಪಸ್ ಬರದಿದ್ದರೆ, ಹೋದರೆ ಹೋಗಲಿ ಆ ಹಣದಿಂದ ನಾನೇನೂ ಹಾಳಾಗುವುದಿಲ್ಲ ತೆಗೆದುಕೊಂಡವನು ಆ ಹಣದಿಂದ ಉದ್ದಾರವಾಗುವುದಿಲ್ಲ. ಅವನು ನನ್ನ ಋಣದಲ್ಲಿಯೇ ಇರಲಿ ಎಂದು  ದಿನಕಳೆದಂತೆ ಕೇಳುವುದನ್ನೇ ಬಿಟ್ಟು ಬಿಡಬಹುದು ಅಥವಾ ಮರೆತು ಹೋಗಬಹುದು. ಎದುರಿಗೆ ಮುಖಾಮುಖಿಯಾದರೂ ಮಾತುಕತೆ ಆಡಲು ಹೋಗುವುದೇ ಇಲ್ಲ. 

 ಆದರೆ ಸಾಲ ಪಡೆದವರಿಗೆ ಮರೆಯುವುದಿಲ್ಲ ಸಾಲ ಕೊಟ್ಟವರು ಎದುರಿಗೆ ಬಂದಾಗ ಮಾತನಾಡಲು ಮುಜುಗರವಾಗುತ್ತದೆ. ಕೆಲವರಿಗೆ ಕೊಡುವ ಮನಸ್ಸು ಬಂದಿದ್ದರೆ ಸಾಲ ಪಡೆದು ಬಹಳ ದಿನವಾಗಿದೆ ಈಗ ನೀಡಿದರೆ ಏನನ್ನುತ್ತಾರೋ ಎಂಬ ಅಳುಕಿನಿಂದ ಕೊಟ್ಟರೂ ಕೊಡಬಹುದು. ಆಗ ಸಾಲ ಕೊಟ್ಟವರು ಈಗಲಾದರೂ ವಾಪಸ್ ನೀಡುವಂತಾಯಿತೆ ಎಂದು ಹೇಳಿ ಮೊದಲಿನಂತೆ ಮಾತನಾಡದೆ ಮಾತನ್ನು ಕಡಿಮೆ ಮಾಡಿ ಮೊದಲಿನಷ್ಟು ಒಡನಾಟವಿಲ್ಲದೇ ಮಾತು ಮಿತಿಯಾಗಿರುತ್ತದೆ. 

ಸಣ್ಣ ಪುಟ್ಟ ಸಾಲುಗಳು ಒಂದು ರೀತಿಯಾದರೆ ಹೆಚ್ಚಿಗೆ ಅಂದರೆ ಲಕ್ಷಾಂತರ ಅಥವಾ ಕೋಟಿ ರೂಪಾಯಿಗಳನ್ನು ನೀಡುವಾಗ ಸ್ವಲ್ಪ ಯೋಚಿಸಿ ನಿಡುವುದು ಒಳ್ಳೆಯದು. ಸಾಲವನ್ನು ನೀಡಬಾರದು ಎಂದರ್ಥವಲ್ಲ. ಅಪರಿಚಿತರು ಏನಾದರೂ ಹೊಸದಾಗಿ ಸ್ನೇಹಿತರಾಗಿದ್ದರೆ ಅವರ ಹಿನ್ನೆಲೆಯನ್ನು ಅರಿತು ನೀಡಿದರೆ ಒಳ್ಳೆಯದು. ಹಳೆಯ ಸ್ನೇಹಿತರು ಮೊದಲಿನಿಂದಲೂ ವಿಶ್ವಾಸವಿದ್ದವರು ಅಷ್ಟಾಗಿ ಮೋಸ ಮಾಡುವುದಿಲ್ಲ ಎಂದು ಹೇಳಬಹುದು. ನಿಗದಿತ ಸಮಯಕ್ಕೆ ನೀಡಿದ್ದರೂ ಸ್ವಲ್ಪ ತಡವಾಗಿ ನೀಡುವ ಮನಸ್ಸು ಇರುತ್ತದೆ. ಇದಕ್ಕೆ ಅಪವಾದವೆಂಬಂತೆ ಇರಬಹುದು. ಹಣ ನೀಡಿ ಪರಿತಪಿಸಬಾರದು. ಏಕೆಂದರೆ  ಯಾವುದಾದರೂ ತನ್ನ ಮುಖ್ಯವಾದ ಕಾರ್ಯಕ್ಕೆ ಇಟ್ಟುಕೊಂಡಿದ್ದ ಹಣವನ್ನು ತನ್ನ ಸಮಯಕ್ಕೆ ನೀಡುತ್ತಾರೆ ಎಂದು ನಂಬಿ ಸಾಲ ನೀಡಿದ್ದಲ್ಲಿ ಸರಿಯಾದ ಸಮಯಕ್ಕೆ ಪಾವತಿಸಿದರೆ, ಇದರಿಂದ ಯಾರಿಗೂ ತೊಂದರೆಯಾಗದೆ ವಿಶ್ವಾಸ ಹಾಗೆಯೇ ಉಳಿದಿರುತ್ತದೆ. ಒಬ್ಬರಿಗೆ ಸಮಯಕ್ಕೆ ಸಹಾಯ ಮಾಡಿದೆ ಎಂದು ಮನಸ್ಸಿಗೆ ತೃಪ್ತಿ ಇರುತ್ತದೆ.

RELATED ARTICLES  ಮೃತ್ಯುವಿನ ಭಯವೇಕೆ….?

ಇದಕ್ಕೆ ವಿರುದ್ದವಾಗಿ 

ಹಣ ಪಡೆದವರು ಎಷ್ಟು ದಿವಸಗಳಾದರೂ ಪಡೆದ ಸಾಲ ನೀಡದಿದ್ದರೆ ಪಡೆದ ಹಣವನ್ನು ವಾಪಸ್ ನೀಡೆಂದು ಕೇಳಿ ಕೇಳಿ ಸಾಕಾಗಿ ವಿಧಿ ಇಲ್ಲದೆ ಕಡೆಗೆ ಹಣ ನೀಡೆಂದು ಲಾಯರ್ ರಿಂದ ನೋಟಿಸ್ ಕಳುಹಿಸಿದರೂ ಅದಕ್ಕೂ ಮಣೆ ಹಾಕದೆ ಇದ್ದರೆ ವಿಧಿ ಇಲ್ಲದೆ ಕೋರ್ಟ್ ಗೆ ಹೋಗಿ ಪ್ರಕರಣವನ್ನು ದಾಖಲಿಸಬಹುದು. ಆಗ ಕೊಟ್ಟವರೂ ತೆಗೆದುಕೊಂಡವರು ಇಬ್ಬರೂ ಕೋರ್ಟ್ ಗೆ ಹೋಗಬೇಕಾದ ಪ್ರಸಂಗ ಬರುತ್ತದೆ. ಕೋರ್ಟ್ ಗೆ ಕೇಸ್ ಹಾಕಿದ ನಂತರ ಸಾಲ ಪಡೆದವನು ಒಮ್ಮತಕ್ಕೆ ಬಂದು ಸಾಲ ಪಾವತಿಸಿದರೆ ಅಷ್ಟಕ್ಕೇ ಪ್ರಕರಣ ನಿಂತು ಸಾಲ ಕೊಟ್ಟವರು ನಿಟ್ಟುಸಿರು ಬಿಡಬಹುದು. ಇಲ್ಲದಿದ್ದರೆ ಸಾಲವೇ ನೀಡಿಲ್ಲವೆಂದ ಹೇಳಿದರೆ ಪ್ರಕರಣ ಮುಂದುವರೆಯುತ್ತದೆ. ಸಾಲ ಕೊಟ್ಟವರು ಚೆಕ್ ನ ಮುಖಾಂತರ ನೀಡಿದರೆ ದಾಖಲೆ ಇರುತ್ತದೆ. ನಗದು ನೀಡಿದ್ದರೆ ಕಷ್ಟವಾಗಬಹುದು. ಸಾಲ ನೀಡುವ ವೇಳೆಯಲ್ಲಿ ಸಾಲ ನೀಡಿದವರು ತನ್ನ ಬಳಿ ಅಷ್ಟು ಹಣ ಇರುವುದಕ್ಕೆ ಸರಿಯಾದ ದಾಖಲೆ ಹೊಂದಿ ಹಣವನ್ನು ನೀಡಿರುವುದನ್ನು ಸಮರ್ಥಿಸಿಕೊಳ್ಳಬೇಕು. 

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಹಣ ನೀಡಿದ ತಪ್ಪಿಗೆ ಕೋರ್ಟ್ ಗೆ ಅಲೆಯುವಂತಾಗುವ ಸನ್ನಿವೇಶ ಬಂದೊದಗುತ್ತದೆ. ಆಗ ಇಬ್ಬರ ನಡುವೆ ಶಾಶ್ವತವಾಗಿ ಮಾತು ನಿಂತು ಹೋಗಿ ದ್ವೇಷ ಬೆಳೆಯಲು ಪ್ರಾರಂಭವಾಗಬಹುದು. 

ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)