*ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 31*
ಹಣದ ವಿಚಾರಕ್ಕೆ ಮಾತ್ರ ಸ್ನೇಹಿತರ ನಡುವೆ ಮನಸ್ಥಾಪ ಬಂದು ಮಾತುಕತೆ ನಿಲ್ಲುವುದಿಲ್ಲ.
ಅಹಂಕಾರ, ಮೋಸ, ವಂಚನೆ, ಅಸೂಯೆ ಮತ್ತು ಅಸಹಕಾರದಿಂದಲೂ ಸ್ನೇಹಿತರ ನಡುವಿನ ಇದ್ದ ವಿಶ್ವಾಸ ಮನಸ್ಥಾಪಕ್ಕೆ ತಿರುಗಿ ಮಾತುಕತೆ ನಿಲ್ಲಲು ಕಾರಣವಾಗುತ್ತದೆ.
ಯಾರೂ ಸಹ ಸ್ನೇಹದಲ್ಲಿ ಕೃಷ್ಣ ಕುಚೇಲರ ನಿಶ್ಕಲ್ಮಶ ಸ್ನೇಹದಂತೆ ಇರುವುದಿಲ್ಲ ಎನ್ನಬಹುದು. ಅಕಸ್ಮಾತ್ ಇದ್ದರೂ ಬೆರಳೆಣಿಕೆಯಷ್ಟು ಮಾತ್ರ ಇರಬಹುದು ಎನಿಸುತ್ತದೆ. ಒಬ್ಬರಿಗೊಬ್ಬರು ಅಲ್ಪ ಸ್ವಲ್ಪ ಸಹಾಯ ಮಾಡುತ್ತಿರುವುದರಿಂದಲೇ ಎಲ್ಲರಲ್ಲೂ ಸಾಮರಸ್ಯ ಎಂಬುದು ಇನ್ನೂ ಇದೆ ಎನ್ನಬಹುದು.
ಆಸ್ತಿ, ಅಧಿಕಾರ, ಅಂತಸ್ತು, ದುರಾಸೆ ಮತ್ತು ಭ್ರಷ್ಟಾಚಾರವಿದ್ದರೆ ಅಲ್ಲಿ ಯಾವ ಸ್ನೇಹಕ್ಕೂ ಬೆಲೆಯೇ ಇಲ್ಲವೆನ್ನಬಹುದು. ಮನುಷ್ಯ ಕೆಳಮಟ್ಟದಿಂದ ಮೇಲೆ ಮೇಲೆ ಅಭಿವೃದ್ಧಿ ಹೊಂದುತ್ತಿದ್ದಂತೆ ತನಗೆ ಅರಿವಿಲ್ಲದೆ ತನ್ನ ಮನಸ್ಸಿನಲ್ಲಿ ಅಹಂಕಾರ ಮನೆ ಮಾಡಬಹುದು ಅಥವಾ ಬಡತನ ಇರಲಿ ಶ್ರೀಮಂತಿಕೆ ಬರಲಿ ಒಂದೇ ರೀತಿಯಲ್ಲಿ ಸ್ಥಿತಪ್ರಜ್ಞನಂತೆ ಇರಲೂ ಬಹುದು. ಕಷ್ಟದಲ್ಲಿದ್ದು ಹಂತ ಹಂತವಾಗಿ ಜೀವನ ಮಟ್ಟ ಸುಧಾರಿಸಿಕೊಂಡು ಒಬ್ಬ ಉನ್ನತ ಅಧಿಕಾರಿಯಾಗಿ ಅಥವಾ ತನ್ನದೇ ಆದ ಖಾಸಗಿ ವ್ಯವಹಾರದಿಂದ ಮುಂದೆ ಬಂದು ಶ್ರೀಮಂತನಾದರೆ ತಾನು ಹಿಂದೆ ಕಷ್ಟಪಟ್ಟ ದಿನಗಳು ಮನಸ್ಸಿನಲ್ಲಿದ್ದು ಕಷ್ಟದಲ್ಲಿ ರುವ ಸ್ನೇಹಿತರನ್ನು ಕಂಡು ಸಹಾಯಮಾಡಬಹುದು. ತನ್ನ ತಂದೆ ಅಥವಾ ತಾತನ ಆಸ್ತಿಯಿದ್ದು ಚಿಕ್ಕಂದಿನಿಂದಲೂ ಯಾವ ಕಷ್ಟದ ಸೋಂಕಿಲ್ಲದೆ ಬೆಳೆದಿದ್ದರೆ ಐಶ್ವರ್ಯದ ಜೊತೆಗೆ ಅಹಂಕಾರವೂ ಮೈಗೂಡಿಸಿಕೊಂಡಿದ್ದರೆ ಯಾರೊಬ್ಬರೂ ಬೆಲೆ ಇಲ್ಲದಂತಾಗುತ್ತದೆ. ಕೆಲವೊಮ್ಮೆ ಬೇರೊಬ್ಬರ ಕಷ್ಟ ಅರಿವಾಗದೆ ತಿರಸ್ಕಾರ ಭಾವನೆಯಿಂದ ವರ್ತಿಸಬಹುದು. ಇದರಲ್ಲಿ ಮಕ್ಕಳ ತಪ್ಪು ಇರುವುದಿಲ್ಲ. ಮಕ್ಕಳನ್ನು ಬೆಳೆಸುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ.
ಶ್ರೀಮಂತಿಕೆ ಬಂದು ಅಹಂಕಾರ ನೆತ್ತಿಗೇರಿದರೆ ಮುಗಿದೇ ಹೋಯಿತು. ಮುಂದಿರುವವರು ಯಾರೂ ಕಣ್ಣಿಗೆ ಬೀಳುವುದಿಲ್ಲ. ಹಿರಿಯರು, ಗುರುಗಳು, ಸ್ನೇಹಿತರು ಎಲ್ಲರೂ ಒಂದೇ ರೀತಿಯಲ್ಲಿ ಕಾಣುತ್ತಾರೆ. ಏಕೆಂದರೆ ಅವರಲ್ಲಿ ಶ್ರೀಮಂತಿಕೆ ಇರುವುದಿಲ್ಲ. ಆದರೆ ಹೃದಯ ಶ್ರೀಮಂತಿಕೆ ಇದ್ದರೂ ಕಣ್ಣಿಗೆ ಕಾಣುವುದಿಲ್ಲ.
ಇನ್ನೆಲ್ಲಿ ತನ್ನ ಬಳಿ ಬಂದು ಹಣದ ಸಹಾಯ ಕೇಳುವರೋ ಎಂಬ ಅಂಜಿಕೆಯಿಂದ ಅಷ್ಟಾಗಿ ಮಾತನಾಡಿಸುವುದೇ ಇಲ್ಲ. ಒಬ್ಬ ಸ್ನೇಹಿತನು ಶ್ರೀಮಂತನಾದಾಕ್ಷಣ ಬೇರೊಬ್ಬ ಸ್ನೇಹಿತ ಬಡವನಾಗಿದ್ದರೂ ಸಹ ಸ್ವಾಭಿಮಾನ ಎಂಬುದು ಹೋಗಿರುವುದಿಲ್ಲ. ಯಾರೂ ಕೂಡ ಶ್ರೀಮಂತರಲ್ಲಿ ಹಣ ನೀಡಿರೆಂದು ದಿನವೂ ಕ್ಯೂ ನಿಲ್ಲುವುದಿಲ್ಲ. ಶ್ರೀಮಂತಿಕೆ ಇದ್ದರೆ ಅವರ ಮನೆಯಲ್ಲಿ ಇರುತ್ತದೆ ಎಂದು ಸುಮ್ಮನಿರುತ್ತಾರೆ.
ಸತ್ತಾಗ ಯಾರೇನೂ ತೆಗೆದುಕೊಂಡು ಹೋಗುವುದಿಲ್ಲ. ಬದುಕಿದ್ದಾಗ ಒಂದೆರಡು ಒಳ್ಳೆಯ ಕೆಲಸ ಮಾಡಿದ್ದರೆ ಅವರನ್ನು ನೆನೆಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಇಲ್ಲ. ಶ್ರೀಮಂತಿಕೆ ಬಂದಾಕ್ಷಣ ಆಯಸ್ಸು ವೃದ್ದಿಸುವುದಿಲ್ಲ. ಹಣ ಕೊಟ್ಟು ಆಯಸ್ಸು ಕಂಡುಕೊಳ್ಳಲು ಆಗುವುದಿಲ್ಲ. ಇದನ್ನರಿತು ಶ್ರೀಮಂತನಾದರೂ ಎಲ್ಲರ ಬಳಿ ವಿಶ್ವಾಸದಿಂದಿದ್ದು, ತನಗಾದಮಟ್ಟಿಗೆ ಸಹಾಯಮಾಡುತ್ತಾ ಇದ್ದರೆ ಮಾತುಕತೆ ಮುಂದುವರೆಯುತ್ತದೆ. ಇದಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ನಡೆದರೆ ಮಾತುಕತೆಗಳು ನಿಂತು ಹೋಗುತ್ತದೆ.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)